ಸಾರಾಂಶ
ಚನ್ನಪಟ್ಟಣ: ತಾಲೂಕಿನ ಅಭಿವೃದ್ಧಿಗೆ ಸಂಬಂಧಿಸಿದಂತೆ ಸರ್ಕಾರದ ಹಂತದಲ್ಲಿ ಯಾವುದೇ ಕೆಲಸ ಅಗಬೇಕಿದ್ದರೂ, ಅದನ್ನು ನನ್ನ ಗಮನಕ್ಕೆ ತನ್ನಿ. ಎಲ್ಲರೂ ಒಗ್ಗೂಡಿ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿ ಜತೆಗೆ ಜನಸ್ನೇಹಿ ಆಡಳಿತ ನೀಡೋಣ. ಎಲ್ಲ ಇಲಾಖೆಗಳ ಕೆಲಸಗಳು ಪಾರದರ್ಶಕವಾಗಿರಬೇಕು. ಕಳಪೆ ಕಾಮಗಾರಿಗಳು ನಡೆದರೆ ಅಧಿಕಾರಿಗಳೇ ಜವಾಬ್ದಾರಿ ಹೊರಬೇಕಾಗುತ್ತದೆ ಎಂದು ಶಾಸಕ ಸಿ.ಪಿ.ಯೋಗೇಶ್ವರ್ ಎಚ್ಚರಿಕೆ ನೀಡಿದರು.
ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ತಾಲೂಕು ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅನುದಾನದ ಕೊರತೆ ಸೇರಿದಂತೆ ಏನೇ ಸಮಸ್ಯೆ ಇದ್ದರೂ, ಇಲಾಖೆ ಮುಖ್ಯಸ್ಥರು ಮಾಹಿತಿ ನೀಡಿ. ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಸಿ ಅದನ್ನು ಸರಿಪಡಿಸುತ್ತೇನೆ ಎಂದು ಭರವಸೆ ನೀಡಿದರು.ಪೋಡಿ ಮುಕ್ತವಾಗಲು ಎಷ್ಟು ಸಮಯ ಬೇಕು?:
ತಾಲೂಕಿನಲ್ಲಿ ಎಷ್ಟು ಗ್ರಾಮಗಳು ಪೋಡಿ ಮುಕ್ತವಾಗಿದೆ, ಇನ್ನು ಎಷ್ಟು ಬಾಕಿ ಉಳಿದಿದೆ. ಇನ್ನು ಎಷ್ಟು ದಿನಗಳಲ್ಲಿ ಪೋಡಿ ಮುಕ್ತವಾಗುವುದು ಎಂದು ಪ್ರಶ್ನಿಸಿದ ಶಾಸಕರು, ಮುಂದಿನ ವರ್ಷದೊಳಗೆ ತಾಲೂಕಿನ ಎಲ್ಲ ಗ್ರಾಮಗಳನ್ನು ಪೋಡಿ ಮುಕ್ತಗೊಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವಂತೆ ಸೂಚನೆ ನೀಡಿದರು. ಚನ್ನಪಟ್ಟಣದ ಪಿಡಬ್ಲ್ಯೂಡಿ ರಸ್ತೆಗಳಲ್ಲಿ ಓಡಾಡುವುದೇ ದುಸ್ತರವಾಗಿದೆ. ಬಹುತೇಕ ರಸ್ತೆಗಳು ಗುಂಡಿಮಯವಾಗಿದೆ. ರಸ್ತೆಗಳನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ರಸ್ತೆ ಪಕ್ಕದಲ್ಲಿ ಬೇಲಿಗಳು ಆಳೆತ್ತರ ಬೆಳೆದು ನಿಂತಿವೆ. ಇವುಗಳನ್ನು ತೆರವುಗೊಳಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.ಸೇತುವೆಗಳ ಗುಣಮಟ್ಟ ಕಾಯ್ದುಕೊಳ್ಳಿ:
ತಾಲೂಕಿನ ಕೆಲ ಕೆರೆಗಳಲ್ಲಿ ನೀರಿಲ್ಲದಂತಾಗಿದೆ. ಕೆರೆಗಳಿಗೆ ನೀರು ತುಂಬುವುದು ಅರ್ಧಂಬರ್ಧ ಆಗಿದೆ. ಯಾವ ಕೆರೆಗಳಿಗೆ ನೀರು ಹೋಗಿಲ್ಲವೋ ಆ ಕೆರೆಗಳಿಗೆ ನೀರು ತುಂಬುವ ಕೆಲಸ ಮಾಡಿ. ಈ ಹಿಂದೆ ತಾಲೂಕಿನಲ್ಲಿ ನಿರ್ಮಿಸಿದ ಕೆಲ ಸೇತುವೆಗಳು ಮಳೆಯಲ್ಲಿ ಕೊಚ್ಚಿ ಹೋಗಿವೆ. ಈ ಬಾರಿ ನಡೆಸುತ್ತಿರುವ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರುವಂತೆ ನೋಡಿಕೊಳ್ಳಿ, ನೀರಾವರಿಗೆ ಸಂಬಂಧಿಸಿದಂತೆ ಸಾಕಷ್ಟು ವಿಷಯಗಳಿದ್ದು, ಪ್ರತ್ಯೇಕ ಸಭೆ ಮಾಡಿ ಚರ್ಚಿಸೋಣ ಎಂದರು.ಸಣ್ಣ ನೀರಾವರಿ ಇಲಾಖೆಗೆ ಸಂಬಂಧಿಸಿದಂತೆ ಕಾಮಗಾರಿಗಳಲ್ಲಿ ಗುಣಮಟ್ಟ ಕಾಯ್ದುಕೊಳ್ಳಿ. ನಡೆದಿರುವ ಎಲ್ಲ ಕಾಮಗಾರಿಗಳ ಪರಿಶೀಲನೆ ನಡೆಸುವುದು ಕಡ್ಡಾಯ. ಸರಿಯಾಗಿ ಪರಿಶೀಲನೆ ನಡೆಸದೇ ಯಾವುದೇ ಬಿಲ್ ಅನ್ನು ಪಾಸ್ ಮಾಡಬೇಡಿ ಎಂದು ತಾಕೀತು ಮಾಡಿದರು.
ಮದ್ಯದಂಗಡಿ ಹೆಚ್ಚಳಕ್ಕೆ ಕಳವಳ:ತಾಲೂಕು ವ್ಯಾಪ್ತಿಯಲ್ಲಿ ಮದ್ಯದಂಗಡಿಗಳು ಹೆಚ್ಚಳವಾಗುತ್ತಿದೆ. ಕೆಲವು ಕಡೆ ವಸತಿ ಪ್ರದೇಶದಲ್ಲೇ ಬಾರ್‌ಗಳು ತಲೆ ಎತ್ತಿ ನಿಂತಿವೆ. ಮದ್ಯದ ಉದ್ಯಮ ಲಕ್ಷುರಿ ಬಿಸಿನೆಸ್ ಆಗಿದೆ. ಹಾಲಿನ ಉತ್ಪಾದನೆಯಲ್ಲಿ ಮೊದಲ ಸ್ಥಾನದಲ್ಲಿರುವ ಚನ್ನಪಟ್ಟಣದಲ್ಲಿ ಇದೀಗ ಮದ್ಯದ ಮಾರಾಟ ಹೆಚ್ಚಳವಾಗುತ್ತಿದೆ. ಸರಿಯಾದ ರೀತಿಯಲ್ಲಿ ಮಾನದಂಡಗಳನ್ನು ಪಾಲಿಸಿ, ಮದ್ಯದಂಗಡಿಗಳ ಪರವಾನಗಿಗೆ ಕಡಿವಾಣ ಹಾಕಿ ಎಂದು ಅಬಕಾರಿ ಇಲಾಖೆಗೆ ತಾಕೀತು ಮಾಡಿದರು.ತಾಲೂಕಿನಲ್ಲಿ ನಡೆದಿರುವ ಜಲಜೀವನ್ ಮಿಷನ್ ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿದ. ಕೆಲವು ಕಡೆ ಓವರ್‌ಹೆಡ್ ಟ್ಯಾಂಕ್‌ಗಳು ಸೋರುತ್ತಿವೆ. ರಸ್ತೆಗಳನ್ನು ಬೇಕಾಬಿಟ್ಟಿ ಅಗೆಯಲಾಗಿದೆ. ಆಗಿರುವ ಲೋಪ ಸರಿಪಡಿಸಿ, ಇಲ್ಲದಿದ್ದಲ್ಲಿ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕಾಡಾನೆಗಳು ತಾಲೂಕನ್ನು ತಮ್ಮ ಅವಾಸನಾ ಸ್ಥಾನವಾಗಿ ಮಾಡಿಕೊಂಡಿವೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಕ್ರಮ ಕೈಗೊಳ್ಳಿ ಎಂದು ಆರ್‌ಎಫ್‌ಓಗೆ ತಾಕೀತು ಮಾಡಿದ ಶಾಸಕರು, ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಯಾವ ಹಂತದಲ್ಲಿದೆ ಎಂಬ ಮಾಹಿತಿ ಪಡೆದುಕೊಂಡರು.ಎಸ್ಸೆಸ್ಸೆಲ್ಸಿ ಫಲಿತಾಂಶ ಕುಸಿವ ಆತಂಕ:
ತಾಲೂಕಿನಲ್ಲಿ ಪ್ರೌಢಶಾಲೆಗಳಲ್ಲಿ ಸಾಕಷ್ಟು ಶಿಕ್ಷಕರು ಕೊರತೆ ಇದ್ದು, ಈ ಬಾರಿಯ ಎಸ್ಸೆಸ್ಸೆಲ್ಸಿ ಫಲಿತಾಂಶ ಕುಸಿಯುವ ಆತಂಕವಿದೆ. ಗೌರವ ಧನ ಕಡಿಮೆ ಇರುವ ಕಾರಣ ಅತಿಥಿ ಶಿಕ್ಷಕರು ಲಭ್ಯವಾಗುತ್ತಿಲ್ಲ. ಇದರಿಂದ ಬೋಧನೆಗೆ ತೊಂದರೆಯಾಗುತ್ತಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರಾಮಲಿಂಗಯ್ಯ ತಮ್ಮ ಇಲಾಖೆಯ ಸಮಸ್ಯೆಯನ್ನು ಶಾಸಕರ ಬಳಿ ತೋಡಿಕೊಂಡರು. ಇದಕ್ಕೆ ಸ್ಪಂದಿಸಿದ ಶಾಸಕರು ಶಿಕ್ಷಕರ ಕೊರತೆಯ ಮಾಹಿತಿ ನೀಡುವಂತೆ ಸೂಚಿಸಿದರು.ಸಭೆಯಲ್ಲಿ ತಾಪಂ ಆಡಳಿತಾಧಿಕಾರಿ ಮಹೇಶ್, ಇಒ ಸಂದೀಪ್, ಗ್ರೇಡ್-೨ ತಹಸೀಲ್ದಾರ್ ಲಕ್ಷ್ಮೀದೇವಮ್ಮ, ಪೌರಾಯುಕ್ತ ಮಹೇಂದ್ರ, ನಗರ ವೃತ್ತ ನಿರೀಕ್ಷಕ ರವಿಕಿರಣ್ ಉಪಸ್ಥಿತರಿದ್ದರು.
ಬಾಕ್ಸ್.............ಮುಂದೆ ಇಲಾಖಾವಾರು ಸಭೆ: ಸಿಪಿವೈ
ಇಂದು ನಡೆಸಿರುವುದು ಪ್ರಾರಂಭಿಕ ಸಭೆ ಮಾತ್ರ. ಮುಂದಿನ ದಿನಗಳಲ್ಲಿ ಪ್ರತ್ಯೇಕವಾಗಿ ಇಲಾಖಾವಾರು ಸಭೆ ನಡೆಸಿ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದು ಶಾಸಕ ಸಿ.ಪಿ.ಯೋಗೇಶ್ವರ್ ತಿಳಿಸಿದರು.ಪ್ರಗತಿ ಪರಿಶೀಲನಾ ಸಭೆಯಲ್ಲಿ ತಾಲೂಕು ಮಟ್ಟದ ಎಲ್ಲ ಇಲಾಖೆಗಳ ಅಧಿಕಾರಿಗಳಿಂದ ಆಯಾ ಇಲಾಖೆಯಲ್ಲಿ ಲಭ್ಯವಿರುವ ಯೋಜನೆಗಳು, ಅನುದಾನ, ಸಮಸ್ಯೆಗಳ ಕುರಿತು ಮಾಹಿತಿ ಪಡೆದುಕೊಂಡ ಶಾಸಕರು, ಮುಂದಿನ ದಿನಗಳಲ್ಲಿ ಎಲ್ಲ ಇಲಾಖೆಗಳ ಮಟ್ಟದಲ್ಲಿ ಪ್ರತ್ಯೇಕ ಸಭೆಗಳನ್ನು ನಡೆಸಿ ಇಲಾಖೆಯಲ್ಲಿನ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಲೀಡ್ ಬಾಕ್ಸ್.............ಸಚಿವ ಸ್ಥಾನಕ್ಕೆ ಒತ್ತಾಯ ಮಾಡಲ್ಲ: ಸಿಪಿವೈ
ಚನ್ನಪಟ್ಟಣ: ನಾನು ಸಚಿವ ಸ್ಥಾನಕ್ಕೆ ಒತ್ತಾಯ ಮಾಡಲ್ಲ. ನಾನು ಆಕಾಂಕ್ಷಿ, ಸಚಿವ ಸ್ಥಾನ ನೀಡಲೇಬೇಕು ಎನ್ನುವುದಿಲ್ಲ. ಪಕ್ಷ ಯಾವುದೇ ತೀರ್ಮಾನ ತೆಗೆದುಕೊಂಡರೂ, ಅದನ್ನು ಸ್ವಾಗತಿಸುತ್ತೇನೆ, ಅದಕ್ಕೆ ನಾನು ಬದ್ಧ ಎಂದು ಶಾಸಕ ಸಿ.ಪಿ.ಯೋಗೇಶ್ವರ್ ತಿಳಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆಯಲ್ಲಿ ಸ್ಥಾನ ಸಿಗುವ ವಿಚಾರಕ್ಕೆ ಪ್ರತಿಕ್ರಿಯಿಸಿ, ನಮ್ಮ ಜಿಲ್ಲೆಯಲ್ಲಿ ಮಾಗಡಿ ಶಾಸಕ ಬಾಲಕೃಷ್ಣ ಸೀನಿಯರ್ ಇದ್ದಾರೆ. ಯಾರಿಗೆ ಕೊಟ್ರೂ ಕೆಲಸ ಮಾಡ್ತೇವೆ. ನನ್ನ ಮೂಲ ಉದ್ದೇಶ ತಾಲೂಕಿನ ಅಭಿವೃದ್ಧಿ ಮಾಡೋದು. ಇನ್ನೂ ಮೂರುವರೆ ವರ್ಷ ನನಗೆ ಅಧಿಕಾರ ಇದೆ. ಈ ಸಮಯದಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಒತ್ತು ಕೊಡ್ತೇನೆ. ಪಕ್ಷ ಯಾವ ಜವಾಬ್ದಾರಿ ಕೊಟ್ರೂ ನಿರ್ವಹಿಸುತ್ತೇನೆ. ನಮ್ಮ ಜಿಲ್ಲೆಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಕೂಡಾ ಇದ್ದಾರೆ. ಹಾಗಾಗಿ ಅಭಿವೃದ್ಧಿಗೆ ಯಾವುದೇ ಕೊರತೆ ಆಗದಂತೆ ಕೆಲಸ ಮಾಡುತ್ತೇವೆ ಎಂದರು.
ನಗರದಲ್ಲಿ ಕಸದ ಸಮಸ್ಯೆ ಹೆಚ್ಚಾಗಿದೆ. ಈಗಾಗಲೇ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ. ಒಂದು ಕಡೆ ಜಾಗ ಗುರುತು ಮಾಡಿ ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡಲು ಸೂಚಿಸಿದ್ದೇನೆ. ಯುಜಿಡಿ ಸೇರಿದಂತೆ ಎಲ್ಲ ಸಮಸ್ಯೆಗಳಿಗೆ ವೈಜ್ಞಾನಿಕವಾಗಿ ಪರಿಹಾರ ಕಂಡುಕೊಳ್ಳಬೇಕಿದೆ. ಆದಷ್ಟು ಬೇಗ ಕಸದ ಸಮಸ್ಯೆಗೆ ಮುಕ್ತಿ ನೀಡ್ತೇವೆ ಎಂದರು.ಡಿ.೧೪ ಅಥವಾ ೧೫ರಂದು ಕ್ಷೇತ್ರದ ಮತದಾರರಿಗೆ ಕೃತಜ್ಞತೆ ಸಲ್ಲಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಸಿಎಂ, ಡಿಸಿಎಂ ಸೇರಿ ಹಲವು ಸಚಿವರು ಕ್ಷೇತ್ರಕ್ಕೆ ಬರಲಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಕುರಿತು ಮನವಿ ಮಾಡ್ತೇವೆ ಎಂದರು. ತಾಲೂಕಿನಲ್ಲಿ ಅತಿ ಹೆಚ್ಚು ಹಾಲು ಉತ್ಪಾದನೆ ಆಗ್ತಿದೆ. ಹಾಲು ಉತ್ಪಾದಕರಿಗೆ ಹೆಚ್ಚಿನ ಬೆಲೆ ಸಿಗಬೇಕು. ಈ ವಿಚಾರವಾಗಿ ಬೆಳಗಾವಿ ಅಧಿವೇಶನದಲ್ಲೂ ಚರ್ಚೆ ಮಾಡ್ತೇನೆ. ಪಶುಸಂಗೋಪನಾ ಹಾಗೂ ಸಹಕಾರ ಸಚಿವರಿಗೆ ಮನವಿ ಕೊಡುತ್ತೇನೆ ಎಂದು ತಿಳಿಸಿದರು.
ಪೊಟೋ೨೯ಸಿಪಿಟಿ೧:ಚನ್ನಪಟ್ಟಣ ತಾಪಂ ಕಚೇರಿ ಸಭಾಂಗಣದಲ್ಲಿ ಶಾಸಕ ಯೋಗೇಶ್ವರ್ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಯಿತು.