ಸಾರಾಂಶ
ಕನ್ನಡಪ್ರಭ ವಾರ್ತೆ ಯಾದಗಿರಿ
ಸದಾ ಹೋರಾಟಗಳ ಮೂಲಕ ಸಾಮಾಜಿಕ, ಶೈಕ್ಷಣಿಕವಾಗಿ ಯಾದಗಿರಿ ಜಿಲ್ಲೆ ಅಭಿವೃದ್ಧಿಗೆ ಹೊಸ ಕಾಯಕಲ್ಪ ನೀಡಿ, ರಾಜಕೀಯವಾಗಿ ಅಪಾರ ಸೇವೆ ಮಾಡಿದ್ದ ಮಾಜಿ ಶಾಸಕ ದಿ. ವೆಂಕಟರೆಡ್ಡಿ ಮುದ್ನಾಳರ ಪುತ್ರ ಮಹೇಶರಡ್ಡಿ ಮುದ್ನಾಳ್ ಅವರೊಂದಿಗೆ ಮುಂಬರುವ ದಿನಗಳಲ್ಲಿ ನಾವೂ-ನೀವೂ ಜೊತೆಗೂಡಿ ಶಕ್ತಿ ತುಂಬಿ, ಅವರ ಮನೆತನ ರಾಜಕೀಯ, ಸಾಮಾಜಿಕ ಸೇವೆ ಮಾಡಲು ಅವಕಾಶ ಕಲ್ಪಿಸಿ ಕೊಡುವುದು ಅವಶ್ಯಕವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಅಭಿಮತ ವ್ಯಕ್ತಪಡಿಸಿದರು.ಮಾಜಿ ಶಾಸಕ ದಿ. ವೆಂಕಟರೆಡ್ಡಿ ಮುದ್ನಾಳ್ ಅವರ ಪ್ರಥಮ ಪುಣ್ಯಸ್ಮರಣೆ ಅಂಗವಾಗಿ, ಬುಧವಾರ ನಗರದ ಮುದ್ನಾಳ್ ಲೇ-ಔಟ್‌ನಲ್ಲಿ ಲಿಂಗೈಕ್ಯ ವೆಂಕಟರಡ್ಡಿ ಮುದ್ನಾಳ್ ಕುಟಂಬ ಹಾಗೂ ಅಭಿಮಾನಿಗಳು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ದೇಶದ ಸ್ವಾತಂತ್ರ್ಯ ಹೋರಾಟದ ಹಿನ್ನೆಲೆಯ ಕುಟುಂಬದಲ್ಲಿ ಜನಿಸಿದ ಮಾಜಿ ಶಾಸಕ ಲಿಂ. ವೆಂಕಟರಡ್ಡಿ ಮುದ್ನಾಳ ಅವರು ತಮ್ಮ ಜೀವಿತಾವಧಿಯಲ್ಲಿ ಸದಾ ಹೋರಾಟ, ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಅಪಾರ ಸೇವೆ ಮಾಡುವ ಮೂಲಕ ಗಿರಿ ಜಿಲ್ಲೆಗೆ ಹೊಸ ಕಾಯಕಲ್ಪ ನೀಡಿ, ಎಲ್ಲರ ಮನಸ್ಸಿನಲ್ಲಿ ಉಳಿದಿದ್ದಾರೆ ಎಂದರು.
2018ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಯಾದಗಿರಿ ಕ್ಷೇತ್ರದಿಂದ ಸ್ಪರ್ಧಿಸಿ ಎಂದು ನಮ್ಮ ತಂದೆ ಮುದ್ನಾಳರಿಗೆ ಸಲಹೆ ನೀಡಿದ್ದರು. ಆಗ, ತಾವು ಎಲ್ಲೆಂದರಲ್ಲಿ ನಾನು ಸ್ಪರ್ಧೆ ಮಾಡುವುದಾಗಿ ಹೇಳಿದ್ದ ವೆಂಕಟರೆಡ್ಡಿ ಅವರು, ಚುನಾವಣೆಯಲ್ಲಿ ಆಕಸ್ಮಿಕವಾಗಿ ಸೋತರೂ ಸಹ ನೀವು ಮಾತ್ರ ಮುಖ್ಯಮಂತ್ರಿ ಆಗಬೇಕು ಎಂದಿದ್ದನ್ನು ಹತ್ತಿರದಿಂದ ಗಮನಿಸಿದ್ದೇನೆ ಎಂದರು.ರಾಯಚೂರು ಮಾಜಿ ಸಂಸದ ರಾಜಾ ಅಮರೇಶ್ವರ ನಾಯಕ ಮಾತನಾಡಿ, ಮುದ್ನಾಳರು ನೇರ ನುಡಿ ರಾಜಕಾರಣಿಯಾಗಿದ್ದರು, ಸದಾ ತಮ್ಮ ಮತಕ್ಷೇತ್ರ ಹಾಗೂ ಜಿಲ್ಲೆಯ ಅಭಿವೃದ್ಧಿ ಬಗ್ಗೆ ಚಿಂತನೆ ಹೊಂದಿದ್ದರು ಎಂದರು.
ಮಾಜಿ ಸಚಿವ ರಾಜೂಗೌಡ ಮಾತನಾಡಿ, ಬೇರೆ ರಾಜಕಾರಣಿಗಳಂತೆ ಮುದ್ನಾಳರಿಗೆ ಅಧಿಕಾರ ವ್ಯಾಮೋಹ ಇರಲಿಲ್ಲ ಎಂದು ಅವರ ವ್ಯಕ್ತಿತ್ವ ಕೊಂಡಾಡಿದರು. ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಮುದ್ನಾಳರ ಆಶಯದಂತೆ ನಿಮ್ಮೆಲ್ಲರ ಸೇವೆ ಮಾಡುತ್ತಿದ್ದೇನೆ ಎಂದರು.ಬಿಜೆಪಿ ಯುವ ಮುಖಂಡ ಹಾಗೂ ದಿ. ವೆಂಕಟರೆಡ್ಡಿ ಅವರ ಪುತ್ರ ಮಹೇಶರಡ್ಡಿ ಮುದ್ನಾಳ್ ಮಾತನಾಡಿ, ನಮ್ಮ ಪರಿವಾರ ಸದಾ ಜನರ ಮಧ್ಯೆ ಇದೆ. ನಾವೆಲ್ಲರೂ ಹಿರಿಯರ ಮಾರ್ಗದರ್ಶನದಲ್ಲಿ ಜನರ ಸೇವೆಯಲ್ಲಿ ತೊಡಗಿದ್ದೇವೆ. ಲಿಂ. ವೆಂಕಟರಡ್ಡಿ ಮುದ್ನಾಳ ಅವರ ಮೇಲೆ ಅಭಿಮಾನವಿಟ್ಟು ಕಾರ್ಯಕ್ರಮಕ್ಕೆ ಸಾವಿರಾರು ಜನರು ಆಗಮಿಸಿರುವ ಸನ್ನಿವೇಶವನ್ನು ನಾನು ಯಾವತ್ತೂ ಮರೆಯುವದಿಲ್ಲ ಎಂದರು. ಅಧ್ಯಕ್ಷತೆಯನ್ನು ಹಣಮಂತರಡ್ಡಿ ಮುದ್ನಾಳ ವಹಿಸಿದ್ದರು.
ವೇದಿಕೆ ಮೇಲೆ ಅಬ್ಬೆತುಮಕೂರಿನ ಡಾ. ಗಂಗಾಧರ ಮಹಾಸ್ವಾಮೀಜಿ, ಹೆಡಗಿಮದ್ರಾದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಗುರುಮಠಕಲ್ ಖಾಸಾ ಮಠದ ಶಾಂತವೀರ ಮಹಾಸ್ವಾಮೀಜಿ, ನೇರಡಗುಂಬದ ಪಂಚಮಸಿದ್ದಲಿಂಗ ಸ್ವಾಮೀಜಿ, ಚಟ್ನಳ್ಳಿ ವಿಶ್ವರಾಧ್ಯಶ್ರೀ ಸೇರಿದಂತೆ ಅನೇಕ ಶ್ರೀಗಳು ಹಾಗೂ ಮಾಜಿ ಸಚಿವ ಡಾ. ಎ. ಬಿ. ಮಾಲಕರಡ್ಡಿ, ಶಾಸಕರಾದ ಬಿ.ಜಿ ಪಾಟೀಲ್, ಬಸವರಾಜ ಮತ್ತಿಮೂಡ್, ಅವಿನಾಶ ಜಾಧವ್, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಬೋಳ, ನಿತಿನ್ ಗುತ್ತೆದಾರ, ಅಮರನಾಥ ಪಾಟೀಲ್, ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ, ಲಿಂಗಾರಡ್ಡಿ ಬಾಸರಡ್ಡಿ ನಾಲವಾರ, ಅಂಬರೀಶಗೌಡ ದರ್ಶನಾಪೂರ, ರಾಜಶೇಖರ ಪಾಟೀಲ್ ವಜ್ಜಲ್, ಬಸವರಾಜ ವಿಭೂತಿಹಳ್ಳಿ, ಅಮೀನರಡ್ಡಿ ಯಾಳಗಿ, ಹೆಚ್.ಸಿ ಪಾಟೀಲ್ ರಾಜನಕೋಳುರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ರಾಚನಗೌಡ ಮುದ್ನಾಳ ಸ್ವಾಗತಿ, ಪ್ರಕಾಶ ಅಂಗಡಿ ನಿರೂಪಿಸಿ, ವಂದಿಸಿದರು.