ಕೂಡ್ಲಿಗಿ: ಈ ನಾಡಿನ ಐತಿಹಾಸಿಕ ಪರಂಪರೆಯ ಪ್ರತಿಬಿಂಬವಾಗಿರುವ ಕಲೆ ಮತ್ತು ಸಂಸ್ಕೃತಿ ಆಧುನಿಕ ಭರಾಟೆಯಲ್ಲಿ ಅಳಿವಿನಂಚಿನಲ್ಲಿ ಸಾಗುತ್ತಿವೆ. ನಾವೆಲ್ಲರೂ ಅದನ್ನು ಉಳಿಸಿ ಬೆಳೆಸುವ ಮೂಲಕ ಮುಂದಿನ ಪೀಳಿಗೆಗೂ ಅದರ ಪರಿಚಯ ಮಾಡಿಕೊಡುವ ಅಗತ್ಯತೆ ಇದೆ ಎಂದು ಜ್ಞಾನಮಂಟಪ ಶಿಕ್ಷಣ ಮಹಾವಿದ್ಯಾಲಯದ ಸಂಸ್ಥಾಪಕ ಅಧ್ಯಕ್ಷ ಜಿ. ಉಮೇಶ್ ಹೇಳಿದರು.
ಕಲ್ಯಾಣ ಕರ್ನಾಟಕ ಸಾಂಸ್ಕೃತಿಕ ಕಲಾ ಸಂಘ ತಿಮ್ಮನಹಳ್ಳಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಸಂಯುಕ್ತಾಶ್ರಯದಲ್ಲಿ ತಾಲೂಕಿನ ಗುಂಡಿನಹೊಳೆ ಸಮೀಪದ ಜ್ಞಾನ ಮಂಟಪ ಬಿಇಡಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ನಡೆದ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಜಾನಪದ ಕಲೆ, ಲಾವಣಿ ಪದಗಳು, ಸೋಬಾನೆ ಪದಗಳು, ಡೊಳ್ಳು ಕುಣಿತ, ಗೊರವರ ಕುಣಿತ, ವೀರಗಾಸೆ, ತಮಟೆ ವಾದನ, ಕಹಳೆ ಮುಂತಾದ ಜನಪದ ಕಲೆಗಳು ನಮ್ಮ ಸಂಸ್ಕೃತಿಯ ಪ್ರತೀಕವಾಗಿವೆ. ಇಂತಹ ಕಲೆಗಳನ್ನು ಆಸ್ವಾದಿಸಿ ಗೌರವಿಸಬೇಕು. ನಮ್ಮ ನಾಡಿನ ಸಂಸ್ಕೃತಿ ಹಾಗೂ ತಲೆಮಾರುಗಳಿಂದ ಹರಿದು ಬಂದಿರುವ ಕಲೆಯ ಜ್ಞಾನ ಭಂಡಾರವನ್ನು ಮತ್ತಷ್ಟು ಜೀವಂತಗೊಳಿಸಬೇಕು ಎಂದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಾಸಾಶನ ಸಮಿತಿ ಮಾಜಿ ಸದಸ್ಯ ಡಿ.ಒ. ಮೊರಾರ್ಜಿ ಮಾತನಾಡಿದರು.
ಕಾಲೇಜಿನ ಪ್ರಾಚಾರ್ಯ ಡಾ. ಎಸ್. ಚಾರೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಕಲಾ ತಂಡಗಳ ಕಲಾವಿದರು ಗೊರವರ ಕುಣಿತ, ಸೋಬಾನೆ ಪದಗಳು, ವಚನ ಸಂಗೀತ, ಸುಗಮ ಸಂಗೀತ, ಜಾನಪದ ಗೀತೆ, ತತ್ವಪದ, ರಂಗಗೀತೆಗಳ ಗಾಯನ, ಕನ್ನಡ ಗೀತಗಾಯನ ಪ್ರಸ್ತುತಪಡಿಸಿದರು. ಕಲಾ ಸಂಸ್ಥೆಯ ಕಾರ್ಯದರ್ಶಿ, ಗಾಯಕ ಡಿ.ಬಿ. ಲಿಂಗರಾಜ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕೂಡ್ಲಿಗಿ ತಾಲೂಕು ಅಧ್ಯಕ್ಷ ಹುಡೇಂ ಕೃಷ್ಣಮೂರ್ತಿ, ಜಾನಪದ ಕಲಾವಿದೆ ಶಾಂತಮ್ಮ, ಗಾಯಕರಾದ ನಾಗರಹುಣಸೆ ದುರುಗೇಶ್, ಓಬಳಶೆಟ್ಟಿಹಳ್ಳಿ ನುಂಕೇಶ್, ಸಿದ್ದಯ್ಯನಕೋಟೆ ನುಂಕೇಶ್, ಕೋನಸಾಗರ ಶಿವಣ್ಣ, ಸಕಲಾಪುರದ ಯಲ್ಲಪ್ಪ, ಕುರಿಹಟ್ಟಿ ರಾಜು,ತಬಲ ಸೂಲದಹಳ್ಳಿ ನರಸಿಂಹಮೂರ್ತಿ,ಕೆಂಚಮ್ಮಲ್ಲನಹಳ್ಳಿ ಸುರೇಶ್, ಕಾಲೇಜಿನ ಪ್ರಶಿಕ್ಷಕರು, ಪ್ರಶಿಕ್ಷಣಾರ್ಥಿಗಳು ಸೇರಿದಂತೆ ಹಲವರು ಹಾಜರಿದ್ದರು. ಪ್ರಶಿಕ್ಷಣಾರ್ಥಿ ಹುಲುಗೇಶ್ ಪ್ರಾರ್ಥಿಸಿದರು ,ಗಾಯಕ ಅಮಕುಂದಿ ಗಂಗಾಧರ ನಿರೂಪಿಸಿ ವಂದಿಸಿದರು.