ಸಾರಾಂಶ
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಸಂಸದ ಗೋವಿಂದ ಕಾರಜೋಳ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಚಿತ್ರದುರ್ಗಆಡಳಿತದ ಬಂಡಿ ಎಳೆಯಲು ಜನಪ್ರತಿನಿಧಿಗಳು ಹಾಗೂ ಅಧಿಕಾರಿಳು ಒಟ್ಟಿಗೆ ಕೈ ಜೋಡಿಸೋಣ ಎಂದು ನೂತನ ಸಂಸದ ಗೋವಿಂದ ಕಾರಜೋಳ ಹೇಳಿದರು.
ಸಂಸದರಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ವಿವಿಧ ಇಲಾಖಾ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಚುನಾಯಿತ ಪ್ರತಿನಿಧಿಗಳು ಹಾಗೂ ಸರ್ಕಾರಿ ಅಧಿಕಾರಿಗಳು ಆಡಳಿತ ಎಂಬ ಎತ್ತಿನ ಬಂಡಿ ಎರಡು ಗಾಲಿಗಳಿದ್ದಂತೆ, ಎರಡೂ ಚಕ್ರಗಳು ಸಮನಾಗಿ ಸಾಗಿದಾಗ ಮಾತ್ರ ಬಂಡಿ ಸುಗಮವಾಗಿ ಸಾಗಲು ಸಾಧ್ಯ. ಅದೇ ರೀತಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಮನ್ವಯತೆಯಿಂದ ಕೆಲಸ ಮಾಡಿದಾಗ ಮಾತ್ರ ಆಡಳಿತ ಸುಗಮ ಹಾಗೂ ಉತ್ತಮವಾಗಿ ನಡೆಸಲು ಸಾಧ್ಯವಾಗುತ್ತದೆ. ಸರ್ಕಾರಿ ನೌಕರರು ಬಹಳಷ್ಟು ಸಂಖ್ಯೆಯಲ್ಲಿ ನಮಗೆ ಮತ ಚಲಾಯಿಸಿದ್ದು, ಇದಕ್ಕಾಗಿ ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸುವುದಾಗಿ ಹೇಳಿದರು.ಜಿಲ್ಲೆಯಲ್ಲಿ 3.21 ಲಕ್ಷ ಹೆಕ್ಟರ್ ಪ್ರದೇಶದಲ್ಲಿ ಮುಂಗಾರು ಬಿತ್ತನೆಯಾಗುವ ಗುರಿ ಇದ್ದು, ಈ ಬಾರಿ ಉತ್ತಮವಾಗಿ ಮಳೆಯಾಗಿದೆ. 143 ಮಿಮೀ ವಾಡಿಕೆ ಮಳೆಯ ಬದಲಿಗೆ 214 ಮಿಮೀ ಮಳೆಯಾಗಿ, ಶೇ.51ರಷ್ಟು ಹೆಚ್ಚು ಮಳೆಯಾದಂತಾಗಿದೆ. ಹೊಳಲ್ಕೆರೆ ತಾಲೂಕಿನ ಎರಡು ಗ್ರಾಮಗಳಲ್ಲಿ ಮಾತ್ರ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಬಿತ್ತನೆ ಬೀಜ ಹಾಗೂ ಗೊಬ್ಬರದ ಯಾವುದೇ ಕೊರತೆ ಇಲ್ಲ. ಸದ್ಯ18 ಸಾವಿರ ಮೆಟ್ರಿಕ್ ಟನ್ ಗೊಬ್ಬರ ದಾಸ್ತಾನು ಇದೆ. ಡಿಎಪಿ ಗೊಬ್ಬರಕ್ಕೆ ಬೇಡಿಕೆ ಬರುತ್ತಿದ್ದು, 3500 ಟನ್ ಗೊಬ್ಬರ ಪೂರೈಕೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸಬ್ಸಿಡಿಯಲ್ಲಿ ಕೃಷಿ ಉಪಕರಣಗಳ ಖರೀದಿಗೆ ಸುಮಾರು 25 ಕೋಟಿ ರು. ಅನುದಾನ ಬೇಕಾಗುತ್ತದೆ ಎಂದು ಜಂಟಿಕೃಷಿ ನಿರ್ದೇಶಕ ಮಂಜುನಾಥ್ ಹೇಳಿದರು.ಇದಕ್ಕೆ ಪ್ರತಿಕ್ರಿಯಿಸಿದ ಸಂಸದರು, ಎಸ್‍ಪಿ, ಟಿಎಸ್‌ಪಿ ಯೋಜನೆಯಡಿ ಹೆಚ್ಚಿನ ಅನುದಾನ ತರಿಸಬೇಕು. ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಎಸ್‍ಸಿ, ಎಸ್‍ಟಿ ರೈತರಿದ್ದಾರೆ. ಹೀಗಾಗಿ ಬೇಡಿಕೆ ಪಟ್ಟಿ ತಯಾರಿಸಿ ಸಲ್ಲಿಸಿದಲ್ಲಿ, ಜಿಲ್ಲೆಗೆ ಹೆಚ್ಚಿನ ಅನುದಾನ ಕೊಡಿಸಲು ಯತ್ನಿಸುತ್ತೇನೆ. ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಬಿತ್ತನೆ ಬೀಜ ಹಾಗೂ ಗೊಬ್ಬರದ ಕೊರತೆ ಆಗದಂತೆ ನೋಡಿಕೊಳ್ಳಬೇಕು, ಕಳಪೆ ಬಿತ್ತನೆ ಬೀಜ ಮಾರಾಟ ಆಗದಂತೆ ಎಚ್ಚರ ವಹಿಸಬೇಕು. ಕೃಷಿ ಉತ್ಪನ್ನಗಳ ಮಾರಾಟ ದರದಲ್ಲಿ ರೈತರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದರು. ಹಲಗಲಿಗೆ ಹೆಣ್ಣು ಕೊಡ್ತಿರಲಿಲ್ಲ: ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಹಲಗಲಿಯಲ್ಲಿ ಕುಡಿವ ನೀರಿನ ಸಮಸ್ಯೆ ಇತ್ತು. ಈ ಊರಿನ ಯುವಕರಿಗೆ ಯಾರೂ ಕೂಡ ಹೆಣ್ಣು ಕೊಡಲು ಮನಸ್ಸು ಮಾಡುತ್ತಿರಲಿಲ್ಲ. ಅಷ್ಟೊಂದು ಕಠಿಣ ಪರಿಸ್ಥಿತಿ ನಿರ್ಮಾಣವಾಗಿತ್ತು. ಬಹುಗ್ರಾಮ ಕುಡಿವ ನೀರು ಯೋಜನೆ ಜಾರಿಗೊಳಿಸಿ, ಮನೆಗಳಿಗೆ ನಲ್ಲಿ ಸಂಪರ್ಕ ಕಲ್ಪಿಸಿ ಪ್ರತಿ ಮನೆಗಳಿಗೆ ಶುದ್ಧ ಕುಡಿವ ನೀರು ಪೂರೈಸಲಾಗಿದೆ. ನಳ ಸಂಪರ್ಕಕ್ಕೆ ಮೀಟರ್ ಅಳವಡಿಸಿದ್ದರಿಂದ ಶೇ.70ರಷ್ಟು ನೀರು ವ್ಯರ್ಥವಾಗಿ ಹರಿದು ಹೋಗುವುದನ್ನು ತಡೆಗಟ್ಟಿದಂತಾಯಿತು. ಈ ಯೋಜನೆ ಕುರಿತು ಕೇಂದ್ರ ಸರ್ಕಾರದ ತಂಡ ಆಗಮಿಸಿ, ವೀಕ್ಷಿಸಿ, ಯೋಜನೆ ಯಶಸ್ವಿಯಾಗಿದ್ದನ್ನು ಕಂಡುಕೊಂಡಿತು. ತಂಡದಿಂದ ವರದಿ ಪಡೆದ ಕೇಂದ್ರ ಸರ್ಕಾರ ಬಳಿಕ ಈ ಯೋಜನೆಯಿಂದ ಸ್ಫೂರ್ತಿ ಪಡೆದು, ಜಲಜೀವನ್ ಮಿಷನ್ ನಂತಹ ಬೃಹತ್ ಯೋಜನೆ ಜಾರಿಗೊಳಿಸಲು ಕಾರಣವಾಯಿತು ಎಂದರು. ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ ಕಳೆದ ಬಜೆಟ್‍ನಲ್ಲಿ ಘೋಷಿಸಿರುವ 5300 ಕೋಟಿ ರು. ಅನುದಾನ ಪಡೆಯುವ ಕುರಿತು ಸೂಕ್ತ ಕ್ರಮ ವಹಿಸಲಾಗುವುದು. ರಸ್ತೆ ಬದಿಗಳಲ್ಲಿ ನೆಡುವ ಗಿಡಗಳ ಪೈಕಿ ಶೇ. 90 ರಷ್ಟು ವಿಫಲವಾಗುತ್ತಿರುವುದು ಕಂಡುಬಂದಿದ್ದು, ಇದರ ಜೊತೆಗೆ ಜಿಲ್ಲೆಯ ಸರ್ಕಾರಿ ಜಾಗ, ಕಚೇರಿ, ಹಾಸ್ಟೆಲ್, ಶಾಲೆ, ಕಾಲೇಜು ಆವರಣದಲ್ಲಿ ಅರಣ್ಯ ಇಲಾಖೆಯವರು ಹೆಚ್ಚಿನ ಗಿಡಗಳನ್ನು ನೆಡಬೇಕು ಎಂದು ಸೂಚನೆ ನೀಡಿದರು. ಪಿಎಂ ವಿಶ್ವಕರ್ಮ ಯೋಜನೆಯಡಿ ಹೆಚ್ಚಿನ ಸಂಖ್ಯೆಯಲ್ಲಿ ಫಲಾನುಭವಿಗಳನ್ನು ನೊಂದಾಯಿಸಲು ಅಧಿಕಾರಿಗಳು ಅಸಂಘಟಿತ ಕಾರ್ಮಿಕ ವಲಯದ ಸಂಘ ಸಂಸ್ಥೆಗಳ ನೆರವು ಪಡೆಯಬೇಕು. ಗ್ರಾಮೀಣ ಜನರು ಕೆಲಸ ಅರಸಿಕೊಂಡು ನಗರ ಪ್ರದೇಶಗಳಿಗೆ ವಲಸೆ ಹೋಗುವುದನ್ನು ತಡೆಯಲು ನರೇಗಾ ಯೋಜನೆಯಡಿ ಸ್ಥಳೀಯವಾಗಿಯೇ ಹೆಚ್ಚಿನ ಉದ್ಯೋಗವನ್ನು ಸೃಷ್ಟಿಸಿ, ಕೆಲಸ ಕೊಡಬೇಕು ಎಂದು ತಿಳಿಸಿದರು.ಈ ವೇಳೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಜಿಪಂ ಸಿಇಒ ಎಸ್.ಜೆ ಸೋಮಶೇಖರ್, ಎಸ್‍ಪಿ ಧರ್ಮೇಂದ್ರ ಕುಮಾರ್ ಮೀನಾ, ಉಪವಿಭಾಗಾಧಿಕಾರಿ ಕಾರ್ತಿಕ್, ಜಿಪಂ ಯೋಜನಾ ನಿರ್ದೇಶಕ ಡಾ.ರಂಗಸ್ವಾಮಿ, ಜಿಪಂ ಮುಖ್ಯ ಯೋಜನಾಧಿಕಾರಿ ಸತೀಶ್ ರೆಡ್ಡಿ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.