ಸಾರಾಂಶ
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಕನ್ನಡ ಸಾಹಿತ್ಯ ಪರಂಪರೆ ಅತ್ಯಂತ ಪ್ರಾಚೀನವಾಗಿದೆ. ಸಾಹಿತಿಗಳು ಸಾಹಿತ್ಯ ರಚಿಸಿದ್ದರಿಂದ ಕನ್ನಡ ಸಾಹಿತ್ಯ ಕ್ಷೇತ್ರ ವಿಶೇಷ ಸ್ಥಾನಮಾನ ಪಡೆದಿದೆ. ಕನ್ನಡ ಉಳಿಸಿ ಬೆಳೆಸಬೇಕಾದರೆ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಕಾಮರಾಜ ಬಿರಾದಾರ ಅವರ ನೇತೃತ್ವದಲ್ಲಿ ತಾಲೂಕಿನ ಕಸಾಪವನ್ನು ಎಲ್ಲರೂ ಒಗ್ಗಟ್ಟಾಗಿ ಜಾತ್ಯತೀತವಾಗಿ ಮುನ್ನಡೆಸಿಕೊಂಡು ಹೋಗೋಣ ಎಂದು ಹಿರಿಯ ಸಾಹಿತಿ ಅಶೋಕ ಮಣಿ ಸಲಹೆ ನೀಡಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕನ್ನಡ ಸಾಹಿತ್ಯ ಪರಿಷತ್ ನೂತನ ತಾಲೂಕು ಅಧ್ಯಕ್ಷ ಕಾಮರಾಜ ಬಿರಾದಾರ ಅವರ ನೇತೃತ್ವದಲ್ಲಿ ಶನಿವಾರ ನಡೆದ ಕಸಾಪ ಚಟುವಟಿಕೆಗಳ ಕುರಿತು ತಾಲೂಕಿನ ಹಿರಿಯ ಹಾಗೂ ಕಿರಿಯ ಸಾಹಿತಿಗಳ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಮುದ್ದೇಬಿಹಾಳ ತಾಲೂಕು ಅನೇಕ ಶರಣರು, ಸಂತರ, ದಾರ್ಶನಿಕರು ಜನಿಸಿದ ಸಾಂಸ್ಕೃತಿಕ ನೆಲೆಗಟ್ಟನ್ನು ಹೊಂದಿದೆ ಎಂದರು.
ಈ ಹಿಂದೆ ಎಸ್.ಜಿ.ಪಾಟೀಲ(ಶೃಂಗಾರಗೌಡ) ಹಾಗೂ ಅಡಿವೆಪ್ಪ ಕಡಿ, ಮಹಾಂತಪ್ಪ ನಾವದಗಿ ಅವರ ನೇತೃತ್ವದಲ್ಲಿ ಹಿರಿಯ ಸಾಹಿತಿ ಬರಗೂರ ರಾಮಚಂದ್ರಪ್ಪನವರಂತಹ ಅನೇಕ ಹೆಸರಾಂತ ಸಾಹಿತಿಗಳ ಮಾರ್ಗದರ್ಶನದಲ್ಲಿ ಜಿಲ್ಲಾ ಹಾಗೂ ತಾಲೂಕು ಸಮ್ಮೇಳನಗಳು ಸೇರಿ ಹಲವಾರು ದತ್ತಿ ಕಾರ್ಯಕ್ರಮ ನಡೆಸಿ ರಾಜ್ಯಕ್ಕೆ ಮಾದರಿಯಾಗಿದೆ. ಸದ್ಯ ಕಾಮರಾಜ ಬಿರಾದಾರ ಅವರು ಅಪಾರ ಸ್ನೇಹಿತ ಬಳಗದೊಂದಿಗೆ ಯುವಕರಾಗಿ ಸದಾ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದು, ಈಗ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಸಂತಸ ತಂದಿದೆ. ತಾಲೂಕಿನ ಎಲ್ಲ ಹಿರಿಯ ಹಾಗೂ ಕಿರಿಯ ಸಾಹಿತಿಗಳು ಅವರಿಗೆ ಬೆಂಬಲ ನೀಡುವ ಮೂಲಕ ಕಾರ್ಯಕ್ಕೆ ಕೈಜೋಡಿಸೋಣ ಎಂದು ಸಲಹೆ ನೀಡಿದರು.ಈ ವೇಳೆ ಹಿರಿಯ ಸಾಹಿತಿ ಪ್ರಕಾಶ ನರಗುಂದ ಅವರು ಮಾತನಾಡಿ, ಸಾಹಿತ್ಯಾತ್ಮಕ ಚಟುವಟಿಕೆಗಳನ್ನು ನಡೆಸಲು ತಾಲೂಕಿನಲ್ಲಿ ಕನ್ನಡ ಭವನದ ಅವಶ್ಯಕತೆಯಿದೆ. ಈ ಬಾರಿ ಪಟ್ಟಣದಲ್ಲಿ ಒಂದು ಕನ್ನಡ ಭವನ ನಿರ್ಮಿಸಬೇಕು. ಎಲೆಮರಿ ಕಾಯಿಯಂತಿರುವ ಪ್ರಚಾರವಿಲ್ಲದೇ ಬರವಣಿಗೆಯೇ ಕನ್ನಡ ತಾಯಿಯ ಸೇವೆ ಎಂದು ಭಾವಿಸಿ ಕನ್ನಡಕ್ಕೆ ಗೌರವಿಸುತ್ತಿರುವ ಪ್ರತಿಭಾನ್ವಿತ ಯುವ ಸಾಹಿತಿಗಳನ್ನು ಗುರ್ತಿಸಿ ಅವರ ಸಾಹಿತ್ಯ ಪುಸ್ತಕಗಳು ಲೋಕಾರ್ಪಣೆಗೊಳ್ಳುವಂತೆ ಮಾಡಿ ಸ್ಫೂರ್ತಿ ತುಂಬಬೇಕಿದೆ ಎಂಬ ಅಭಿಪ್ರಾಯಪಟ್ಟರು.
ಹಿರಿಯ ಸಾಹಿತಿ ಶಿವಪುತ್ರ ಅಜಮನಿ, ಸಾಹಿತಿ ಎಂ.ಎಂ.ಬೆಳಗಲ್ಲ, ಎಸ್.ಎಸ್.ಹೂಗಾರ, ರುದ್ರೇಶ ಕಿತ್ತೂರ, ಸಿದ್ದನಗೌಡ ಬಿಜ್ಜೂರ ಅವರು ಮಾತನಾಡಿ ಹಲವು ವರ್ಷಗಳಿಂದ ತಾಲೂಕಿನಲ್ಲಿ ಯಾವುದೇ ಕನ್ನಡ ಸಾಹಿತ್ಯಾತ್ಮಕ ಚಟುವಟಿಕೆಗಳು ನಡೆಸದೇ ತುಕ್ಕು ಹಿಡಿದಂತಾಗಿತ್ತು. ಸದ್ಯ ಕ್ರೀಯಾಶಿಲ ಚಿಂತಕ ನೂತನ ಅಧ್ಯಕ್ಷರಾಗಿದ್ದು, ಕನ್ನಡ ಕಾರ್ಯಕ್ರಮಗಳು ಗರಿಗೆದರಿವೆ. ಕನ್ನಡ ಸಾಹಿತ್ಯ ಪರಿಷತ್ ಯಾವುದೇ ಜಾತಿ ಮಥ ಪಂಥಗಳಿಗೆ ಸೀಮಿತವಾಗದೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕನ್ನಡ ಸಾಹಿತ್ಯದ ಹಿರಿಮೆಯನ್ನು ಎತ್ತಿಹಿಡಿಯಬೇಕು. ಅಲ್ಲದೇ, ತಾಲೂಕಲ್ಲ್ಲಿ ಸದಸ್ಯತ್ವ ಹೆಚ್ಚಿಸಬೇಕು ಎಂಬ ಸಲಹೆ ನೀಡಿದರು.ಈ ವೇಳೆ ಕಸಾಪದ ನೂತನ ತಾಲೂಕು ಅಧ್ಯಕ್ಷ ಕಾಮರಾಜ ಬಿರಾದಾರ ಅವರು ಮಾತನಾಡಿದರು. ಈ ವೇಳೆ ಸಾಹಿತಿಗಳಾದ ಎ.ಆರ್.ಮುಲ್ಲಾ, ಪ್ರಭುಗೌಡ ರಾರಡ್ಡಿ, ವೈ.ಎಚ್.ವಿಜಯಕರ, ಎಸ್.ಎಸ್.ಹುನಗುಂದ, ಬಸವರಾಜ ನಾಗೂರ, ಸಿದ್ದಣ್ಣ ಹಡಲಗೇರಿ, ಐ.ಬಿ.ಹಿರೇಮಠ, ಮುಕ್ತಮಸಾಬ ಹಾಲ್ಯಾಳ ಸೇರಿದಂತೆ ಅನೇಕರು ಇದ್ದರು.
-----------------------------------------ಕೋಟ್.........ಎಲ್ಲ ಹಿರಿಯ ಕಿರಿಯ ಸಾಹಿತಿಗಳ ಆಸೆ ಮತ್ತು ಸಲಹೆಯಂತೆ ಕನ್ನಡ ಸ್ವಾಭಿಮಾನಿಗಳ ಮನಸ್ಸುಗಳ ಹೃದಯಕ್ಕೆ ಧಕ್ಕೆ ಆಗದಂತೆ ತಾಯಿ ಭುವನೇಶ್ವರಿಯ ಸೇವೆ ಮಾಡುತ್ತೇನೆ. ನಿರ್ಲಕ್ಷಕ್ಕೊಳಗಾದ ಯುವ ಹಿರಿಯ ಸಾಹಿತಿಗಳನ್ನು ಗುರ್ತಿಸಬೇಕೆನ್ನುವ ಹಾಗೂ ಅಧಿಕಾರದ ದುರುಪಯೋಗ ಸೇರಿದಂತೆ ಅನೇಕ ಸಾಹಿತ್ಯ ವಿರೋಧಿ ಚಟುವಟಿಕೆಗಳನ್ನು ಕಿತ್ತು ಹಾಕುವ ಉದ್ದೇಶ ಹೊಂದಿದ್ದೇನೆ. ಈ ನಿಟ್ಟಿನಲ್ಲಿ ಕೆಟ್ಟ ಪರಿಸ್ಥಿತಿಗಳು ಎದುರಾಗದಂತೆ ನೋಡಿಕೊಳ್ಳುವುದು ನನ್ನ ಜವಾಬ್ದಾರಿ. ಅದಕ್ಕೆ ಎಲ್ಲರೂ ಪ್ರೀತಿ ಆಶೀರ್ವಾದ ಮಾರ್ಗದರ್ಶನ ನೀಡಿ.
- ಕಾಮರಾಜ ಬಿರಾದಾರ, ಕಸಾಪ ನೂತನ ತಾಲೂಕಾಧ್ಯಕ್ಷ----------