ಶನಿವಾರ ಉಡುಪಿ ಧರ್ಮಪ್ರಾಂತ್ಯದ ವತಿಯಿಂದ ಮಾಧ್ಯಮ ಮಿತ್ರರೊಂದಿಗೆ ಕ್ರಿಸ್ಮಸ್ ಸ್ನೇಹ ಕೂಟ ಕಾರ್ಯಕ್ರಮ ಸಂಪನ್ನಗೊಂಡಿತು.
ಉಡುಪಿ: ನಮ್ಮ ಧರ್ಮಗ್ರಂಥಗಳ ಜೊತೆ ಇತರ ಧರ್ಮಗ್ರಂಥಗಳನ್ನು ಓದಿ ಅರಿತುಕೊಂಡರೆ ಆಗ ನಮ್ಮ ಧರ್ಮ ಸರಿಯಾಗಿ ಪಾಲಿಸಲು ಸಾಧ್ಯ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಹೇಳಿದ್ದಾರೆ.ಶನಿವಾರ ಉಡುಪಿ ಧರ್ಮಪ್ರಾಂತ್ಯದ ವತಿಯಿಂದ ಮಾಧ್ಯಮ ಮಿತ್ರರೊಂದಿಗೆ ಆಯೋಜಿಸಿದ್ದ ಕ್ರಿಸ್ಮಸ್ ಸ್ನೇಹ ಕೂಟ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಎಲ್ಲಾ ಸಮುದಾಯದವರೂ ಜೊತೆಯಾಗಿ ಸೇರಿಕೊಂಡು ಆಚರಿಸುವ ಹಬ್ಬ ಕ್ರಿಸ್ಮಸ್ ಆಗಿದೆ ಎಂದ ಎಸ್ಪಿ, ಕೇರಳದಲ್ಲಿ ತಮ್ಮ ಬಾಲ್ಯದ ಕ್ರಿಸ್ಮಸ್ ಹಬ್ಬದ ನೆನಪುಗಳನ್ನು ಹಂಚಿಕೊಡರು. ಸಮಾಜದ ಏಕತೆಯನ್ನು ಗಟ್ಟಿಗೊಳಿಸುವುದು ವಿಶ್ವದ ಎಲ್ಲಾ ಧರ್ಮಗಳ ಮೂಲ ಉದ್ದೇಶವಾಗಿದೆ. ಸಮಾಜವನ್ನು ಒಗ್ಗೂಡಿಸುವಲ್ಲಿ ಧರ್ಮಕ್ಕೆ ಮಹತ್ವದ ಪಾತ್ರವಿದೆ ಎಂದು ಶುಭ ಹಾರೈಸಿದರು.
ಉಡುಪಿ ಧರ್ಮಪ್ರಾಂತ್ಯದ ಅಧ್ಯಕ್ಷ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಭು ಯೇಸು ತಮ್ಮ ಸ್ವರ್ಗದ ಸಾಮ್ರಾಜ್ಯವನ್ನು ಬಿಟ್ಟು ಗೋದಲಿಯಲ್ಲಿ ಜನಿಸಿದರು. ಮಾನವ ದೇವರಿಂದ ದೂರ ಸರಿದಾಗ, ಪಾಪಕೂಪದಿಂದ ತೊಳಲಾಡಿದಾಗ ಅವರು ಆಗಮಿಸಿ, ಮತ್ತೆ ಮಾನವರನ್ನು ದೇವರನ್ನಾಗಿಸಲು ಪ್ರಯತ್ನಿಸಿದರು. ಭೂಲೋಕದಲ್ಲಿ ಶಾಂತಿಗಾಗಿ ಶ್ರಮಿಸಿದವರು ಭಾಗ್ಯವಂತರು ಎಂದು ಯೇಸು ಸ್ವಾಮಿ ಸಾರಿದ್ದರು ಅವರ ಸಂದೇಶದಂತೆ ಬದುಕಿ ಬಾಳೋಣ ಎಂದರು.ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳನ್ನು ಧರ್ಮಪ್ರಾಂತ್ಯದ ವತಿಯಿಂದ ಗೌರವಿಸಲಾಯಿತು.
ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಸುಜಿ ಕುರ್ಯ ಶುಭ ಹಾರೈಸಿದರು.ಉಡುಪಿ ಧರ್ಮಪ್ರಾಂತ್ಯದ ಶ್ರೇಷ್ಠಗುರು ಮೊನ್ಸಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್, ಕುಲಪತಿ ವಂ.ಸ್ಟೀವನ್ ಡಿಸೋಜಾ ಉಪಸ್ಥಿತರಿದ್ದರು.ಉಡುಪಿ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ವಂ.ಡೆನಿಸ್ ಡೆಸಾ ಸ್ವಾಗತಿಸಿದರು. ಮಾಧ್ಯಮ ಸಂಚಾಲಕ ಮೈಕಲ್ ರೊಡ್ರಿಗಸ್ ವಂದಿಸಿದರು. ಲೆಸ್ಲಿ ಆರೋಝಾ ಕಾರ್ಯಕ್ರಮ ನಿರೂಪಿಸಿದರು.