ಸಮಷ್ಟಿ ಪ್ರಯತ್ನದಿಂದ ದಸರಾ ಯಶಸ್ವಿಗೊಳಿಸೋಣ: ಶಾಸಕ ಚನ್ನಬಸಪ್ಪ

| Published : Sep 07 2024, 01:42 AM IST

ಸಾರಾಂಶ

ಮೈಸೂರು ಹೊರತುಪಡಿಸಿದರೆ, ಶಿವಮೊಗ್ಗಯಲ್ಲಿ ವೈವಿಧ್ಯಮಯ ದಸರಾ ಸಂಘಟಿಸ ಲಾಗುತ್ತಿದೆ. ಈ ಬಾರಿ ವಿಶೇಷವಾಗಿ ಹದಿನಾಲ್ಕು ಉತ್ಸವಗಳ ಜೊತೆಗೆ ಸಮಾಜಮುಖಿಯಾದ ಇನ್ನೂ ಮೂರು ಉತ್ಸವ ಗಳನ್ನು ನಡೆಸಲು ಚಿಂತನೆ ನಡೆದಿದೆ ಎಂದು ಶಾಸಕ ಚನ್ನಬಸಪ್ಪ ಹೇಳಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ ಆಯೋಜಿಸಲಾಗುತ್ತಿರುವ ಶಿವಮೊಗ್ಗ ದಸರಾ ಉತ್ಸವವನ್ನು ಅದ್ಧೂರಿಯ ಜೊತೆಗೆ ಅರ್ಥಪೂರ್ಣವಾಗಿ ಆಚರಿಸಲು ಸಿದ್ಧತೆ ಮಾಡಿಕೊಳ್ಳುವಂತೆ ಶಾಸಕ ಎಸ್.ಎನ್.ಚನ್ನಬಸಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಗುರುವಾರ ನಡೆದ ವಿವಿಧ ಸಮಿತಿಗಳ ಕಾರ್ಯದರ್ಶಿಗಳ ಮಟ್ಟದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮೈಸೂರು ಹೊರತುಪಡಿಸಿದರೆ, ಶಿವಮೊಗ್ಗಯಲ್ಲಿ ವೈವಿಧ್ಯಮಯ ದಸರಾ ಸಂಘಟಿಸ ಲಾಗುತ್ತಿದೆ. ಈ ಬಾರಿ ವಿಶೇಷವಾಗಿ ಹದಿನಾಲ್ಕು ಉತ್ಸವಗಳ ಜೊತೆಗೆ ಸಮಾಜಮುಖಿಯಾದ ಇನ್ನೂ ಮೂರು ಉತ್ಸವ ಗಳನ್ನು ನಡೆಸಲು ಚಿಂತನೆ ನಡೆದಿದೆ ಎಂದರು.

ಈ ಬಾರಿ ಚುನಾಯಿತ ಪಾಲಿಕೆಯಲ್ಲಿ ಪ್ರತಿನಿಧಿಗಳಿಲ್ಲ. ಆದರೆ, ಈ ಹಿಂದಿನ ಪಾಲಿಕೆ ಸದಸ್ಯರು ಮೇಯರ್, ಉಪ ಮೇಯರ್ ಸೇರಿದಂತೆ ಎಲ್ಲರನ್ನೂ ಒಳಗೊಂಡು, ಅವರ ಸಲಹೆ ಸೂಚನೆ ಮೇರೆಗೆ ಕಾರ್ಯಪ್ರವೃತ್ತರಾಗಬೇಕಿದೆ. ಇದು ಯಾರಿಗೋ ಒಬ್ಬರಿಗೆ ಜವಾಬ್ದಾರಿ ಕೊಟ್ಟು, ಈವೆಂಟ್ ಮ್ಯಾನೇಜ್‍ಮೆಂಟ್ ಮಾಡುವ ಕೆಲಸ ಅಲ್ಲ. ಅದು ನಾಡಹಬ್ಬ, ಜನರ ಹಬ್ಬ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸೇರಿದಂತೆ ಎಲ್ಲರನ್ನೂ ಒಳಗೊಂಡು ಕಾರ್ಯನಿರ್ವಹಿಸಿ. ಇದಕ್ಕಾಗಿ ಪ್ರತ್ಯೇಕ ಸಲಹಾ ಸಮಿತಿಯನ್ನು ರಚಿಸಿ ಎಂದು ಸಲಹೆ ನೀಡಿದರು.

ವಿಶೇಷವಾಗಿ ಅಲಂಕಾರ ಸಮಿತಿ, ಸ್ವಾಗತ ಸಮಿತಿಯ ಜವಾಬ್ದಾರಿ ಹೆಚ್ಚಿದೆ. ಯಾವುದೇ ಕಾರಣಕ್ಕೂ ಎಲ್ಲಿಯೂ ಕೊರತೆ ಯಾಗದಂತೆ ಎಚ್ಚರಿಕೆಯಿಂದ ಗಮನಿಸಿ, ಸಮಷ್ಟಿ ಪ್ರಯತ್ನದಿಂದ ದಸರಾವನ್ನು ಯಶಸ್ವಿಗೊಳಿಸೋಣ ಎಂದು ಆಶಿಸಿದ ಅವರು, ಪ್ರಸ್ತುತ ರಾಜ್ಯ ಸರ್ಕಾರದಿಂದ 1.50 ಕೋಟಿ ಹಣ ನಿಗ„ಯಾಗಿದೆ. ಇದನ್ನು ಹೆಚ್ಚಿಸಲು ಸಂಬಂ„ಸಿದ ಅ„ಕಾರಿಗಳು ಹಾಗೂ ಸಚಿವರನ್ನು ಭೇಟಿ ಮಾಡಿ ಪ್ರಯತ್ನ ಮಾಡಲಾಗುವುದು. ಹಣಕಾಸಿನ ತೊಂದರೆಯಾಗದಂತೆ ನೋಡಿಕೊಳ್ಳಲಾಗವುದು ಎಂದು ಭರವಸೆ ನೀಡಿದರು.

ಹದಿನಾಲ್ಕು ವಿಭಾಗ:

ಅಲಂಕಾರ ದಸರಾ, ಕಲಾ ದಸರಾ, ಚಲನಚಿತ್ರ ದಸರಾ, ರಂಗ ದಸರಾ, ಸಾಂಸ್ಕೃತಿಕ ದಸರಾ, ಮಹಿಳಾ ದಸರಾ, ಯೋಗ ದಸರಾ, ರೈತ ದಸರಾ ಸೇರಿದಂತೆ ವಿವಿಧ ಹದಿನಾಲ್ಕು ವಿಭಾಗಗಳಲ್ಲಿ ನಡೆಯುವ ದಸರಾವನ್ನು ಎಲ್ಲರೂ ಸೇರಿ ಅಚ್ಚುಕಟ್ಟಾಗಿ ನಿರ್ವಹಿಸೋಣ ಎಂದ ಅವರು, ಈ ಬಾರಿಯೂ ಸಹ ಅಂಬಾರಿ ಉತ್ಸವ ನಡೆಯಲಿದೆ. ಇದಕ್ಕಾಗಿ ಪ್ರಯತ್ನ ನಡೆದಿದೆ ಎಂದು ತಿಳಿಸಿದರು.

ಈ ಎಲ್ಲಾ ಸಮಿತಿಗಳ ಸಭೆಗಳು ಈಗಾಗಲೇ ಮೊದಲ ಹಂತದಲ್ಲಿ ನಡೆದಿದ್ದು, ಗಣಪತಿ ಹಬ್ಬ ಕಳೆದ ನಂತರ ಸ್ಪಷ್ಟ ಚಿತ್ರಣ ಲಭ್ಯವಾಗಲಿದೆ ಎಂದ ಅವರು, ಪ್ರಸ್ತುತ ಅ„ಕಾರಿಗಳು ನಿರಂತರ ಸಭೆ ನಡೆಸಿ, ಸಕಾಲದಲ್ಲಿ ಆಹ್ವಾನ ಪತ್ರಿಕೆ ಕೈಗೆ ಸಿಗುವಂತೆ ಮಾಡಿ ಎಂದು ಮನವಿ ಮಾಡಿದರು.

ಗೊಂದಲಕ್ಕೆ ಅವಕಾಶ ಬೇಡ:

ಟೆಂಡರ್ ಪ್ರಕ್ರಿಯೆಯಲ್ಲಿ ಅತೀ ಎಚ್ಚರಿಕೆ ವಹಿಸುವುದು ಅಗತ್ಯ. ಸ್ಥಳೀಯರನ್ನು ಹೊರಗಿಟ್ಟು ಈ ಉತ್ಸವ ನಡೆಸಲು ಸಾಧ್ಯವಿಲ್ಲ. ಹೀಗಾಗಿ ಈ ವಿಷಯದಲ್ಲಿ ಗೊಂದಲ ಆಗದಂತೆ ನೋಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಎಸ್.ಎನ್. ಚನ್ನಬಸಪ್ಪ ಸೂಚನೆ ನೀಡಿದರು.

ಗಮಕಕಲೆ, ಪೌರಕಾರ್ಮಿಕ, ಪತ್ರಕರ್ತರ ದಸರಾಚರಣೆ

ನಗರದ ಸ್ವಚ್ಛತೆಗಾಗಿ ಹಗಲಿರುಳು ಶ್ರಮಿಸುತ್ತಿರುವ ಪೌರ ಕಾರ್ಮಿಕರನ್ನು ಒಳಗೊಂಡ ಪೌರ ಕಾರ್ಮಿಕರ ದಸರಾ ನಡೆಸಲು ಯೋಜಿಸಲಾಗಿದೆ ಎಂದು ಹೇಳಿದರು. ಸದಾ ಸುದ್ದಿಯ ಹಿಂದೆ ಬಿದ್ದು, ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರನ್ನು ಒಳಗೊಂಡ ಪತ್ರಕರ್ತರ ದಸರಾ ಹಾಗೂ ನಮ್ಮ ಶ್ರೇಷ್ಠ ಪರಂಪರೆಯ ಗಮಕ ಕಲೆಯನ್ನು ಪ್ರೋತ್ಸಾಹಿಸುವ ಸಲುವಾಗಿ ಗಮಕ ದಸರಾ ಆಚರಿಸಲು ಚಿಂತನೆ ನಡೆದಿದೆ. ಈ ಮೂರೂ ದಸರಾವನ್ನು ಅರ್ಥಪೂರ್ಣವಾಗಿ ಆಚರಿಸಲು ಸಂಬಂಧಪಟ್ಟವರೊಂದಿಗೆ ಚರ್ಚಿಸಿ, ಅಂತಿಮ ರೂಪ ನೀಡಲು ಯೋಜಿಸಲಾಗಿದೆ ಎಂದು ಚನ್ನಬಸಪ್ಪ ಹೇಳಿದರು.

ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್.ಅರುಣ್, ಬಲ್ಕಿಶ್ ಭಾನು, ಡಾ.ಧನಂಜಯ್‌ ಸರ್ಜಿ, ಪಾಲಿಕೆ ಆಯುಕ್ತೆ ಡಾ. ಕವಿತಾ ಯೋಗಪ್ಪನವರ್‌ ಹಾಗೂ ವಿವಿಧ ಸಮಿತಿಗಳ ಕಾರ್ಯದರ್ಶಿಗಳು, ಸದಸ್ಯರು ಉಪಸ್ಥಿತರಿದ್ದರು.

.