ಮಾಗಡಿ: ಹೇಮಾವತಿ ನದಿ ನೀರು ಹಂಚಿಕೆ ವಿಚಾರದಲ್ಲಿ ಮಾಗಡಿ ಮತ್ತು ಕುಣಿಗಲ್ ತಾಲೂಕುಗಳ ನಡುವೆ ಅನಗತ್ಯ ಗೊಂದಲ ಸೃಷ್ಠಿಸಬಾರದು ಎಂದು ಮಾಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪೂಜಾರಿಪಾಳ್ಯ ಕೃಷ್ಣಮೂರ್ತಿ ಮನವಿ ಮಾಡಿದರು
ಮಾಗಡಿ: ಹೇಮಾವತಿ ನದಿ ನೀರು ಹಂಚಿಕೆ ವಿಚಾರದಲ್ಲಿ ಮಾಗಡಿ ಮತ್ತು ಕುಣಿಗಲ್ ತಾಲೂಕುಗಳ ನಡುವೆ ಅನಗತ್ಯ ಗೊಂದಲ ಸೃಷ್ಠಿಸಬಾರದು ಎಂದು ಮಾಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪೂಜಾರಿಪಾಳ್ಯ ಕೃಷ್ಣಮೂರ್ತಿ ಮನವಿ ಮಾಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಣಿಗಲ್ ಕ್ಷೇತ್ರದ ಬಿಜೆಪಿ ಮುಖಂಡ ಡಿ.ಕೃಷ್ಣಕುಮಾರ್ ಅವರು ಇತ್ತೀಚೆಗೆ ಸಭೆಯೊಂದರಲ್ಲಿ ಮಾಗಡಿ ತಾಲೂಕಿಗೆ ಅಕ್ರಮವಾಗಿ ಹೇಮಾವತಿ ನೀರು ಹರಿಸಲಾಗುತ್ತಿದೆ ಎಂದು ಹೇಳಿಕೆ ನೀಡಿರುವುದು ಸರಿಯಲ್ಲ. ಮಾಗಡಿ ಮತ್ತು ಕುಣಿಗಲ್ ತಾಲೂಕಿನ ಜನ ಅಣ್ಣ-ತಮ್ಮಂದಿರಂತೆ ಪರಸ್ಪರ ಸೌಹಾರ್ದತೆಯಿಂದ ಬೆಸೆದುಕೊಂಡಿದ್ದು, ಅದನ್ನು ಕಾಪಾಡುವುದು ನಮ್ಮೆಲ್ಲರ ಹೊಣೆ. ರಾಜಕೀಯ ಲಾಭಕ್ಕಾಗಿ ಜನರ ನಡುವೆ ವಿಷಬೀಜ ಬಿತ್ತುವುದು ಬೇಡ ಎಂದು ಎಚ್ಚರಿಸಿದರು.ಅಕ್ರಮ ನೀರಾವರಿ ಇಲ್ಲ: ಮಾಗಡಿಗೆ ಇನ್ನೂ ನಿಗದಿತ ಪ್ರಮಾಣದ ನೀರು ಹರಿದು ಬಂದಿಲ್ಲ. ಕೇವಲ ಪ್ರಾಯೋಗಿಕವಾಗಿ ಒಂದೆರಡು ಕೆರೆಗಳಿಗೆ ನೀರು ಹರಿಸಲಾಗಿದೆಯೇ ಹೊರತು, ಕುಣಿಗಲ್ ಪಾಲಿನ ನೀರನ್ನು ಕಸಿದುಕೊಳ್ಳುತ್ತಿಲ್ಲ. ತಾಲೂಕಿಗೆ ಹೇಮಾವತಿ ನೀರು ಬರಲು ಮಾಜಿ ಸಚಿವ ಎಚ್.ಎಂ.ರೇವಣ್ಣ ಅವರ ದೂರದೃಷ್ಟಿ ಮತ್ತು ಶ್ರಮ ಅಪಾರವಾಗಿದೆ ಶಾಸಕ ಬಾಲಕೃಷ್ಣ ಅಧಿಕಾರಿಗಳ ನಿರಂತರ ಸಭೆಯ ಫಲವಾಗಿ ಇಂದು ಕೆರೆಗಳಿಗೆ ನೀರು ತುಂಬಿಸುವ ಹಂತಕ್ಕೆ ಬಂದಿದೆ. ಈ ಸಮಯದಲ್ಲಿ ಬಿಜೆಪಿ ಮುಖಂಡರು ಇಂತಹ ಹೇಳಿಕೆ ನೀಡುವುದು ಖಂಡನೀಯ ಎಂದು ಕೃಷ್ಣಮೂರ್ತಿ ಬೇರಸ ವ್ಯಕ್ತಪಡಿಸಿದರು.
ಕುದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ.ಜಿ. ವೆಂಕಟೇಶ್ ಮಾತನಾಡಿ, ತುಮಕೂರು ಜಿಲ್ಲೆಗೆ ಒಟ್ಟು 24.5 ಟಿಎಂಸಿ ನೀರು ಹಂಚಿಕೆಯಾಗಿದ್ದರೆ, ಮಾಗಡಿ ತಾಲೂಕಿಗೆ ಕೇವಲ 0.676 ಟಿಎಂಸಿ ನೀರು ಮಾತ್ರ ಹಂಚಿಕೆಯಾಗಿದೆ. ಲಿಂಕ್ ಕೆನಾಲ್ ಯೋಜನೆಯನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಸಂಸದ ಡಿ.ಕೆ.ಸುರೇಶ್ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಯೋಜನೆಗೆ ವೇಗ ನೀಡಲಾಗಿದೆ. ಇದರಿಂದ ನೀರು ಪೋಲಾಗುವುದು ಮತ್ತು ಕಳ್ಳತನವಾಗುವುದು ತಪ್ಪುತ್ತದೆ. ಎರಡು ವರ್ಷದಲ್ಲಿ ಎತ್ತಿನಹೊಳೆ ಮತ್ತು ಹೇಮಾವತಿ ಯೋಜನೆಗಳ ಕಾಮಗಾರಿಗಳ ಪೂರ್ಣಗೊಂಡು ಮಾಗಡಿ ತಾಲೂಕಿನ ಅಂತರ್ಜಲ ಮಟ್ಟ ಸುಧಾರಿಸಲಿದೆ ಕುಣಿಗಲ್ ಮುಖಂಡರು ಸಹಕಾರ ನೀಡಬೇಕೆಂದು ಮನವಿ ಮಾಡಿದರು.ನೀರು ಎಲ್ಲರ ಸೊತ್ತು:
ನಾವು ನಮ್ಮ ಪಾಲಿನ ನೀರನ್ನು ಕೇಳುತ್ತಿದ್ದೇವೆಯೇ ಹೊರತು ಬೇರೆಯವರಿಗೆ ಅನ್ಯಾಯ ಮಾಡುತ್ತಿಲ್ಲ. ರಾಜಕೀಯ ಮುಖಂಡರು ಸುಳ್ಳು ವದಂತಿಗಳು ಹಬ್ಬಿಸುವುದನ್ನು ನಿಲ್ಲಿಸಲಿ ಎಂದು ಹೇಳಿದರು.ಇದೇ ವೇಳೆ ಯುವ ಕಾಂಗ್ರೆಸ್ ಅಧ್ಯಕ್ಷ ಕುದೂರು ವಿನಯ್, ಆಗ್ರೋ ಪುರುಷೋತ್ತಮ್, ಪ್ರವೀಣ್, ಕಾಂಗ್ರೆಸ್ ಎಸ್‌ಸಿ/ಎಸ್ಟಿ ಘಟಕದ ಅಧ್ಯಕ್ಷ ಬ್ಯಾಲಕೆರೆ ಚಿಕ್ಕರಾಜು, ಜುಟ್ಟನಹಳ್ಳಿ ದಿನೇಶ್, ಟಿಎಪಿಸಿಎಂಎಸ್ ನಿರ್ದೇಶ ರಮೇಶ್, ಸಂಕೀಘಟ್ಟ ಚಂದ್ರಣ್ಣ, ರೆಹಮಾನ್, ಪರ್ವೀಜ್ ಇತರರು ಭಾಗವಹಿಸಿದ್ದರು.
(ಫೋಟೋ ಕ್ಯಾಪ್ಷನ್)ಮಾಗಡಿ ಕಾಂಗ್ರೆಸ್ ಕಚೇರಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪೂಜಾರಿಪಾಳ್ಯ ಕೃಷ್ಣಮೂರ್ತಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಯುವ ಕಾಂಗ್ರೆಸ್ ಅಧ್ಯಕ್ಷ ಕುದೂರು ವಿನಯ್, ಆಗ್ರೋ ಪುರುಷೋತ್ತಮ್ ಇತರರಿದ್ದರು.