ಬದುಕಿನಲ್ಲಿ ಸದಾ ಪುಣ್ಯದ ಕಾರ್ಯಗಳಿಗೆ, ಸತ್ಕಾರ್ಯಗಳಿಗೆ ಮೊದಲ ಸ್ಥಾನ ನೀಡೋಣ, ನಮ್ಮ ಹೃದಯಪಾತ್ರೆಯು ದೊಡ್ಡದಾಗಿರಲಿ, ನಮ್ಮ ಮನಸ್ಸುಗಳು ಉದಾರವಾಗಿರಲಿ, ನಮ್ಮ ಜೀವನ ಇನ್ನೊಬ್ಬರಿಗೆ ಬೆಳಕು ನೀಡುವಂತಾಗಲಿ.
ವಿರೂಪಾಕ್ಷೇಶ್ವರ ಸಭಾ ಭವನ, ಹಾನಗಲ್ಲ ಕುಮಾರೇಶ್ವರ ದಾಸೋಹ ನಿಲಯ ಲೋಕಾರ್ಪಣೆ
ಕನ್ನಡಪ್ರಭ ವಾರ್ತೆ ಹಳಿಯಾಳಪುಣ್ಯವೂ ಸದಾ ಚಲಾವಣೆಯಲ್ಲಿರುವ ನಾಣ್ಯದಂತೆ. ಅದರ ಮೌಲ್ಯವನ್ನು ಯಾರೂ ಕಸಿಯಲಾರರು. ಅದಕ್ಕಾಗಿ ಬದುಕಿನಲ್ಲಿ ಸದಾ ಪುಣ್ಯದ ಕಾರ್ಯಗಳಿಗೆ, ಸತ್ಕಾರ್ಯಗಳಿಗೆ ಮೊದಲ ಸ್ಥಾನ ನೀಡೋಣ, ನಮ್ಮ ಹೃದಯಪಾತ್ರೆಯು ದೊಡ್ಡದಾಗಿರಲಿ, ನಮ್ಮ ಮನಸ್ಸುಗಳು ಉದಾರವಾಗಿರಲಿ, ನಮ್ಮ ಜೀವನ ಇನ್ನೊಬ್ಬರಿಗೆ ಬೆಳಕು ನೀಡುವಂತಾಗಲಿ ಎಂದು ಕೊಪ್ಪಳದ ಶ್ರೀ ಗವಿಸಿದ್ಧೇಶ್ವರ ಸಂಸ್ಥಾನಮಠದ ಶ್ರೀ ಮ.ನಿ.ಪ ಜಗದ್ಗುರು ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಹೇಳಿದರು.ಶನಿವಾರ ಸಂಜೆ ಪಟ್ಟಣದ ಶೆಟ್ಟಿಗಲ್ಲಿಯಲ್ಲಿನ ಉಪ್ಪಿನಬೆಟಗೇರಿ ಶಾಖಾ ವಿರಕ್ತಮಠದಿಂದ ನೂತನವಾಗಿ ನಿರ್ಮಿಸಿದ ಶ್ರೀ ಗುರು ವಿರೂಪಾಕ್ಷೇಶ್ವರ ಸಭಾ ಭವನ ಹಾಗೂ ಶ್ರೀ ಹಾನಗಲ್ಲ ಕುಮಾರೇಶ್ವರ ದಾಸೋಹ ನಿಲಯ ಲೋಕಾರ್ಪಣೆ ಮಾಡಿ ಅವರು ನೆರೆದ ಸದ್ಭಕ್ತರಿಗೆ ಆಶೀರ್ವಚನ ನೀಡಿದರು.
ದೇವರು ನಮ್ಮ ಮೇಲೆ ಅಪಾರ ಭರವಸೆಯನ್ನಿಟ್ಟು, ನಮ್ಮನ್ನು ಈ ಭೂಮಿಗೆ ಕಳಿಸಿದ್ದಾರೆ, ಅದರೊಂದಿಗೆ ಆಯುಷ್ಯವನ್ನು ನೀಡಿದ್ದಾರೆ. ಅದಕ್ಕಾಗಿ ನಮ್ಮ ಜೀವನವು ಅರ್ಥಪೂರ್ಣವಾಗಿರಬೇಕು ಹಾಗೂ ಬದುಕಿಗೆ ಶಾಸ್ವತ ಬೆಲೆ ಇರಬೇಕು ಎಂದರು.ನಮ್ಮ ಹುಟ್ಟಿನೊಂದಿಗೆಯೇ ಮರಣದ ಮುಹೂರ್ತವೂ ನಿರ್ಧರಿಸಲ್ಪಟ್ಟಿರುತ್ತದೆ. ಸಾವು ಮನುಷ್ಯನನ್ನು ನೆರಳಿನಂತೆ ಹಿಂಬಾಲಿಸುತ್ತಿರುತ್ತದೆ. ಹುಟ್ಟು-ಸಾವು ಎರಡೂ ಅವಿನಾಶಿ ಸತ್ಯಗಳು, ಅವುಗಳನ್ನು ಬೇರ್ಪಡಿಸಲು ಆಗುವುದಿಲ್ಲ ಎಂದರು. ನಾವು ಜನ್ಮದಿನವನ್ನು ಸಂಭ್ರಮಿಸುತ್ತೇವೆ, ಆದರೆ ಮರಣವನ್ನು ಕಂಡಾಗ ಏಕೆ ರೋಧಿಸುತ್ತೇವೆ? ಮನುಷ್ಯನಿಗೆ ಸಾವು ದುಃಖವನ್ನು ಏಕೆ ತರುತ್ತದೆ ಎಂದು ಪ್ರಶ್ನಿಸಿದ ಅವರು, ಇದು ನನ್ನದು, ಇದು ನಾನು ಸಂಪಾದಿಸಿದ್ದು, ಇದು ನನ್ನ ಧನ-ಸಂಪತ್ತು, ಐಶ್ವರ್ಯ ಎಂಬ ಅಹಂಕಾರದ ಮೂಡತೆಗೆ ನಾವು ಬಂಧಿತರಾಗಿರುತ್ತೆವೆ. ಆ ಕಾರಣದಿಂದಲೇ ಸಾವು ಈ ನಶ್ವರಗಳನ್ನು ಕಿತ್ತುಕೊಂಡಾಗ ದುಃಖ ಉಂಟಾಗುತ್ತದೆ ಎಂದರು. ಪಟ್ಟಾಧಿಕಾರದ ರಜತಮಹೋತ್ಸವ ಸಂಭ್ರಮಾಚರಣೆಯಲ್ಲಿರುವ ಶ್ರೀ ಜಗದ್ಗುರು ಮೂರುಸಾವಿರ ವಿರಕ್ತಮಠ-ಉಪ್ಪಿಣಬೆಟಗೇರಿ-ಹಳಿಯಾಳ ಮಠದ ಶ್ರೀ ಕುಮಾರ ವಿರೂಪಾಕ್ಷ ಮಹಾಸ್ವಾಮಿಗಳು ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಭಾ ಭವನದ ನಿರ್ಮಾಣಕ್ಕೆ ಆರ್ಥಿಕ ಸಹಕಾರ ನೀಡಿದ ಹಿರಿಯ ವೈದ್ಯ ಡಾ. ಬಿ.ಬಿ. ಮೂಡಬಾಗಿಲ ಹಾಗೂ ಭವನ ನಿರ್ಮಾಣದ ನಿರ್ವಹಣೆ ಮಾಡಿದ ಬಸವರಾಜ ಬೆಂಡಿಗೇರಿಮಠ ಅವರನ್ನು ಸನ್ಮಾನಿಸಲಾಯಿತು. ಸಮಾಜದ ಪ್ರಮುಖರಾದ ಉಚ್ಛ ನ್ಯಾಯಾಲಯದ ವಕೀಲರಾದ ಪಿ.ಎಚ್. ನೀರಲಕೇರಿ, ಬಸವರಾಜ ಸುಳ್ಳದ, ಬಸವರಾಜ ಓಶೀಮಠ, ಲಿಂಗಾಯ ವೀರಶೈವ ಸಮಾಜದ ಜಿಲ್ಲಾಧ್ಯಕ್ಷ ಶಿವಲಿಂಗಯ್ಯ ಅಲ್ಲಯ್ಯನವರಮಠ ಮೊದಲಾದವರನ್ನು ಸನ್ಮಾನಿಸಲಾಯಿತು.ಭಕ್ತಾದಿಗಳ ಸಾಗರ: ಕೊಪ್ಪಳದ ಶ್ರೀ ಗವಿಸಿದ್ಧೇಶ್ವರ ಸಂಸ್ಥಾನಮಠದ ಶ್ರೀ ಜಗದ್ಗುರು ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಮೊದಲ ಬಾರಿಗೆ ಪಟ್ಟಣಕ್ಕೆ ಆಗಮಿಸುತ್ತಿರುವುದರಿಂದ ತಾಲೂಕಿನಲ್ಲಿರುವ ಅವರ ಅಪಾರ ಸಂಖ್ಯೆಯಲ್ಲಿ ಅಭಿಮಾನಿ ಹಾಗೂ ಭಕ್ತರ ಬಳಗವೇ ಆಗಮಿಸಿತ್ತು. ಬೆಳಗಾವಿ ಕಾರಂಜಿಮಠದ ಶ್ರೀ ಗುರು ಸಿದ್ಧೇಶ್ವರ ಮಹಾಸ್ವಾಮಿ ಸಾನಿಧ್ಯ ವಹಿಸಿದ್ದರು. ಮುನವಳ್ಳಿ ಸೋಮಶೇಖರ ಮಠದ ಮುರುಘೇಂದ್ರ ಮಹಾಸ್ವಾಮಿಗಳು, ಅಮೀನಗಡ ಪ್ರಭು ಶಂಕರೇಶ್ವರ ಮಠದ ಶಂಕರರಾಜೇಂದ್ರ ಮಹಾಸ್ವಾಮಿಗಳು ಆಗಮಿಸಿದ್ದರು. ಹಳಿಯಾಳ ತಾಲೂಕು ಸೇರಿದಂತೆ ಅಕ್ಕಪಕ್ಕ ತಾಲೂಕು ಹಾಗೂ ಉಪ್ಪಿನಬೆಟಗೇರಿಯಿಂದ ಭಕ್ತಾಧಿಗಳು ಆಗಮಿಸಿದ್ದರು. ವಚನ ಗಾಯನ ನಡೆಯಿತು. ಅಕ್ಕನಾಗಮ್ಮ, ಮುಕ್ತಾಯಕ್ಕನ ಬಳಗ, ಕದಳಿ ವೇದಿಕೆಯ ಸದಸ್ಯೆಯರು ಇದ್ದರು. ಶಿಕ್ಷಕ ಎಸ್.ಮಠಪತಿ ಕಾರ್ಯಕ್ರಮ ನಿರ್ವಹಿಸಿದರು.