ಅಬಲೆಯರನ್ನು ಗೌರವಿಸೋಣ, ಅತ್ಯಾಚಾರಿಗೆ ತಕ್ಕ ಶಾಸ್ತಿ ಮಾಡೋಣ: ಉಮೇಶ್‌

| Published : May 12 2024, 01:22 AM IST

ಅಬಲೆಯರನ್ನು ಗೌರವಿಸೋಣ, ಅತ್ಯಾಚಾರಿಗೆ ತಕ್ಕ ಶಾಸ್ತಿ ಮಾಡೋಣ: ಉಮೇಶ್‌
Share this Article
  • FB
  • TW
  • Linkdin
  • Email

ಸಾರಾಂಶ

ಅಬಲೆಯರನ್ನು ಗೌರವಿಸೋಣ, ಅತ್ಯಾಚಾರಿಗೆ ತಕ್ಕ ಶಾಸ್ತಿ ಮಾಡೋಣ ಎನ್ನುವ ಘೋಷಣೆಯೊಂದಿಗೆ ಹಾಸನ ಚಲೋ ಕಾರ್ಯಕ್ರಮವನ್ನು ಮೇ 13ರ ರಂದು ಸೋಮವಾರ ಹಾಸನ ನಗರದಲ್ಲಿ ಹಮ್ಮಿಕೊಂಡಿರುವುದಾಗಿ ಕೆಆರ್‌ಎಸ್‌ ಪಕ್ಷದ ಜಿಲ್ಲಾಧ್ಯಕ್ಷ ಉಮೇಶ್ ಬೆಳಗುಂಬ ತಿಳಿಸಿದರು.

ಕನ್ನಡ ಪ್ರಭ ವಾರ್ತೆ ಹಾಸನ

ಅಬಲೆಯರನ್ನು ಗೌರವಿಸೋಣ, ಅತ್ಯಾಚಾರಿಗೆ ತಕ್ಕ ಶಾಸ್ತಿ ಮಾಡೋಣ ಎನ್ನುವ ಘೋಷಣೆಯೊಂದಿಗೆ ಹಾಸನ ಚಲೋ ಕಾರ್ಯಕ್ರಮವನ್ನು ಮೇ 13ರ ರಂದು ಸೋಮವಾರ ಹಾಸನ ನಗರದಲ್ಲಿ ಹಮ್ಮಿಕೊಂಡಿರುವುದಾಗಿ ಕೆಆರ್‌ಎಸ್‌ ಪಕ್ಷದ ಜಿಲ್ಲಾಧ್ಯಕ್ಷ ಉಮೇಶ್ ಬೆಳಗುಂಬ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿ,ಮೇ.13ರ ಸೋಮವಾರ ಬೆಳಿಗ್ಗೆ 11 ಗಂಟೆಗೆ ಕೆಆರ್ ಎಸ್ ಪಕ್ಷವು ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಎನ್.ಆರ್. ವೃತ್ತದ ಮೂಲಕ ಜಿಲ್ಲಾಧಿಕಾರಿ ಕಛೇರಿ ಆವರಣಕ್ಕೆ ಅಗಮಿಸಲಾಗುವುದು ಎಂದರು.

ಈ ಪ್ರಕರಣದಲ್ಲಿ ಜವಾಬ್ದಾರಿಯುತ ಸಂಸದ ಸ್ಥಾನದಲ್ಲಿರುವ ಪ್ರಜ್ವಲ್ ಸಹಾಯ ಕೋರಿ ಬಂದವರನ್ನು ಶೋಷಣೆ ಮಾಡಿರುವುದರಿಂದಾಗಿ ಶೋಷಣೆಗೊಳಗಾದ ಹೆಣ್ಣು ಮಕ್ಕಳು ಇಲ್ಲಿ ಬಲಿಪಶುಗಳಾಗಿದ್ದು, ಅವರದು ಯಾವುದೇ ತಪ್ಪಿರುವುದಿಲ್ಲ. ಇದನ್ನು ನಾಗರೀಕ ಸಮಾಜ ಸೂಕ್ಷ್ಮವಾಗಿ ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ವಿಕೃತಿ ಮೆರೆದಿರುವ ಪ್ರಜ್ವಲ್ ರೇವಣ್ಣರನ್ನು ಕಠಿಣ ಶಿಕ್ಷೆಗೆ ಒಳಪಡಿಸುವುದರ ಮೂಲಕ ಯಾವುದೇ ಜವಾಬ್ದಾರಿಯುತ ಜನಪ್ರತಿನಿಧಿಯಾಗಲಿ, ಇತರರೇ ಆಗಲಿ ಇಂತಹ ಕೃತ್ಯಗಳನ್ನು ಎಸಗದಂತೆ ತಡೆಯೊಡ್ಡಬೇಕಾಗಿದೆ ಎಂದು ಆಗ್ರಹಿಸಿದರು.

ರಾಜಕೀಯವಾಗಿ ಗೊತ್ತು ಗುರಿಯಿಲ್ಲದ ವ್ಯಕ್ತಿಗಳನ್ನು ರಾಜಕೀಯ ಪಕ್ಷಗಳು ಚುನಾವಣೆಗೆ ನಿಲ್ಲಿಸಿ, ವಾಮಮಾರ್ಗದಲ್ಲಿ, ಚುನಾವಣೆ ಗೆಲ್ಲುವ ಕಾರಣಗಳಿಂದಾಗಿಯೇ ನಡೆಯುತ್ತಿರುವುದನ್ನು ನಾವು ಗಮನಿಸಬೇಕು. ಪ್ರಜಾತಂತ್ರಕ್ಕೆ ಬಂದೆರಗಿರುವ ಈ ಘೋರ ಕಾಯಿಲೆಯನ್ನು ನಿರ್ಮೂಲನೆ ಮಾಡುವ ಸಂಕಲ್ಪಕ್ಕೆ ಮುಂದಾಗಬೇಕಿದೆ ಎಂದು ಹೇಳಿದರು.ಪೆನ್ ಡ್ರೈವ್ ಪ್ರಕರಣವು ಪಾರದರ್ಶಕವಾಗಿ ತನಿಖೆ ಆಗುವಂತೆ ನಾವು ಸರ್ಕಾರವನ್ನು ಆಗ್ರಹಿಸಬೇಕು. ಪಾರದರ್ಶಕ, ನಿಷ್ಪಕ್ಷಪಾತವಾಗಿ ತನಿಖೆಯಾಗಬೇಕಾದರೆ ಪ್ರಜ್ವಲ್ ರೇವಣ್ಣ ಕುಟುಂಬದ ಕೃಪಾಕಟಾಕ್ಷದಿಂದ ಹಾಸನ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆ ಕುಟುಂಬದ ಋಣದಲ್ಲಿದ್ದೇವೆಂದು ಭಾವಿಸಿರುವ ಹಲವಾರು ನೌಕರರು ಹಾಗೂ ಅಧಿಕಾರಿಗಳನ್ನು ಈ ಪ್ರಕರಣದ ತನಿಖೆ ಮುಗಿಯುವವರೆಗೆ ಬೇರೆ ಜಿಲ್ಲೆಗೆ ವರ್ಗಾಯಿಸಿ ಪ್ರಕರಣದ ಸಾಕ್ಷಗಳನ್ನು ತಿರುಚುವ, ಬೆದರಿಸುವುದನ್ನು ತಪ್ಪಿಸಬೇಕೆಂದು ಆಗ್ರಹಿಸಿದರು.

ಸಂತ್ರಸ್ತ ಮಹಿಳೆಯೋರ್ವರು ಪ್ರಜ್ವಲ್ ಮತ್ತು ರೇವಣ್ಣ ಮೇಲೆ ಹೊಳೆನರಸೀಪುರ ಠಾಣೆಯಲ್ಲಿ ದೂರು ನೀಡಿ, ಮೊಕದ್ದಮೆ ದಾಖಲಾದ ಹತ್ತಾರು ಗಂಟೆಗಳ ನಂತರ ಆತ ವಿದೇಶಕ್ಕೆ ಪರಾರಿಯಾಗಿರುವುದನ್ನು ತಪ್ಪಿಸಬಹುದಾಗಿದ್ದ ಅವಕಾಶವನ್ನು ಪೊಲೀಸ್ ಇಲಾಖೆಯ ಅಧಿಕಾರಿಗಳು ಬಳಸದೇ ಇರುವುದನ್ನು ಗಮನಿಸಿದರೆ ಕೆಳಹಂತದ ಸಿಬ್ಬಂದಿಯಿಂದ ಹಿಡಿದು ಉನ್ನತ ಅಧಿಕಾರಿಗಳವರೆಗೆ ಇದರಲ್ಲಿ ಶಾಮೀಲಾಗಿರಬಹುದೆಂದು ಅನುಮಾನಿಸಬಹುದಾಗಿದೆ.

ರಾಜ್ಯದ ಹಾಲಿ ಮತ್ತು ಮಾಜಿ ಪ್ರಭಾವಿ ಜನಪ್ರತಿನಿಧಿಗಳು ತಮ್ಮ ಇಂತಹದೇ ವಿಡಿಯೋಗಳು ಹೊರಬರಬಹುದು ಎಂಬ ಆತಂಕದಲ್ಲಿ, ನ್ಯಾಯಾಲಯಗಳಿಂದ ಪ್ರತಿಬಂಧಕ ಆಜ್ಞೆ ಪಡೆದಿದ್ದಾರೆ. ಇಂತಹ ಜನಪ್ರತಿನಿಧಿಗಳ ಹೆಸರುಗಳನ್ನು ಪಟ್ಟಿ ಮಾಡಿದರೆ ಅದು 50 ಜನರ ಹತ್ತಿರ ಇದೆ. ಈ ಪ್ರಮಾಣದಲ್ಲಿ ಜನಪ್ರತಿನಿಧಿಗಳು ತಮ್ಮ ಅಧಿಕಾರ ದುರುಪಯೋಗ, ಲೈಂಗಿಕ ಶೋಷಣೆ ಮಾಡಿ ಈಗ ಬ್ಲಾಕ್‌ಮೇಲ್‌ಗೆ ಒಳಗಾಗುತ್ತಾರೆ ಎಂದರೆ ಅವರು ಯಾವ ರೀತಿಯಲ್ಲಿ ಜನರ ಪರವಾಗಿ ನಿರ್ಭೀತಿಯಿಂದ ಕಾರ್ಯನಿರ್ವಹಿಸಬಲ್ಲರು ಎಂದರು. ಇದು ಕೇವಲ ರಾಜಕಾರಿಣಿಗಳು ಮಾತ್ರ ಒಳಗೊಂಡಿರುವ ವಿಚಾರ ಮಾತ್ರವಲ್ಲ, ಅಧಿಕಾರಿಗಳು ಮತ್ತು ಖಾಸಗಿ ವಲಯದಲ್ಲಿ ಉನ್ನತ ಸ್ಥಾನದಲ್ಲಿ ರುವವರು ಕೂಡ ಇದೇ ರೀತಿ ಮಹಿಳೆಯರ ಮೇಲೆ ಶೋಷಣೆ ನಡೆಸುತ್ತಿದ್ದಾರೆ, ಇಂತಹ ಪ್ರಕರಣಗಳು ಮುಂದಿನ ದಿನಗಳಲ್ಲಿ ನಡೆಯಬಾರದು ಮತ್ತು ನಾಡಿನ ಮಹಿಳೆಯರ ಸುರಕ್ಷತೆಯಿಂದ ಇರಬೇಕೆಂದರೆ ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ, ಅತ್ಯಾಚಾರಿ ಮತ್ತು ಈ ಕೃತ್ಯಗಳಲ್ಲಿ ಸಹಕರಿಸಿದವರಿಗೆ ಹಾಗು ಈ ವಿಡಿಯೋಗಳನ್ನು ಹರಿಬಿಟ್ಟಿರುವರು ಸೇರಿ ತನಿಖೆಗೆ ಒಳಪಡಬೇಕು ಎಂದು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕೆ.ಆರ್.ಎಸ್. ಪಕ್ಷದ ಬೂವನಹಳ್ಳಿ ವಿ. ರಮೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಿಟ್ಟನಹಳ್ಳಿ ಮಧು, ನಾಸೀರ್ ಮತ್ತಿತರರು ಉಪಸ್ಥಿತರಿದ್ದರು.