ಭ್ರಷ್ಟಾಚಾರ ಬೇರು ಸಮೇತ ಕಿತ್ತು ಹಾಕೋಣ

| Published : Oct 25 2024, 12:50 AM IST

ಸಾರಾಂಶ

ಕಾನೂನು ಬಾಹಿರವಾಗಿ ಪಡೆಯುವ ಸಂಪಾದನೆ ಭ್ರಷ್ಟಾಚಾರಕ್ಕೆ ತಳಪಾಯ ಎಂದು ಲೋಕಾಯುಕ್ತ ಪೋಲಿಸ್‌ ಇನ್ಸ್‌ಪೆಕ್ಟರ್‌ ಮಹಮದ್‌ ಸಲೀಂ ತಿಳಿಸಿದರು.

ಕನ್ನಡಪ್ರಭ ವಾರ್ತೆ ಮಧುಗಿರಿ

ಕಾನೂನು ಬಾಹಿರವಾಗಿ ಪಡೆಯುವ ಸಂಪಾದನೆ ಭ್ರಷ್ಟಾಚಾರಕ್ಕೆ ತಳಪಾಯ ಎಂದು ಲೋಕಾಯುಕ್ತ ಪೋಲಿಸ್‌ ಇನ್ಸ್‌ಪೆಕ್ಟರ್‌ ಮಹಮದ್‌ ಸಲೀಂ ತಿಳಿಸಿದರು.

ಪಟ್ಟಣದ ಟಿ.ವಿ. ವೆಂಕಟಸ್ವಾಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಕುರಿತು ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸುವ ಸಲುವಾಗಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಹಣವಿಲ್ಲದೇ ಬೇರೆ ಯಾವುದೇ ಸಂಪತ್ತನ್ನು ಸಾರ್ವಜನಿಕರಿಂದ ಪಡೆಯುವುದು ಸಮಾಜ ಮತ್ತು ಕಾನೂನಿಗೆ ವಿರೋಧವಾಗಲಿದೆ. ಆದ್ದರಿಂದ ಭ್ರಷ್ಟಾಚಾರವನ್ನು ಬೇರು ಸಮೇತ ನಿರ್ಮೂಲನೆ ಮಾಡುವುದು ಎಲ್ಲರ ಕರ್ತವ್ಯ, ಪ್ರತಿಯೊಬ್ಬ ನಾಗರಿಕರು ಜಾಗೃತರಾಗಿ ಸದಾ ಉತ್ತಮ ಗುಣಮಟ್ಟದ ಪ್ರಾಮಾಣಿಕತೆ ಮತ್ತು ನಿಷ್ಠೆಗೆ ಬದ್ಧರಾಗಿರಬೇಕು. ಭ್ರಷ್ಟಾಚಾರದ ವಿರುದ್ಧ ಹೋರಾಟವನ್ನು ಬೆಂಬಲಿಸಬೇಕು. ಜೀವನದ ಎಲ್ಲ ರಂಗಗಳಲ್ಲೂ ಪ್ರಾಮಾಣಿಕತೆ ಮತ್ತು ಕಾನೂನಿನ ನಿಯಮಗಳನ್ನು ಅನುಸರಿಸಿ ಜನರ ಹಿತ ಕಾಪಾಡಲು ಮುಂದಾಗಬೇಕು ಎಂದರು.

ಹಿರಿಯ ಸಾಹಿತಿ ಪ್ರೊ.ಮ.ಲ.ನ.ಮೂರ್ತಿ ಮಾತನಾಡಿ, ಎಲ್ಲರಿಗಾಗಿ ನಾನು ಎಂಬ ಹೃದಯ ವೈಶಾಲ್ಯತೆ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬಲ್ಲ ಶಕ್ತಿ, ಆತ್ಮ ಶೋಧನೆಯೇ ಪರಿಶುದ್ಧ ಸಮಾಜದ ರಚನೆಗೆ ಸಾಧ್ಯ, ಶ್ರಮವಿಲ್ಲದ ದುಡಿಮೆ, ಶಾಸನ ಬಾಹಿರವಾಗಿ ಅನ್ಯರ ಸಂಪತ್ತಿಗೆ ಕನ್ನ ಹಾಕುವುದು ಕಾನೂನು ವಿರೋಧಿ. ಆದ್ದರಿಂದ ಉತ್ತಮ ಸಮಾಜ ರೂಪಿಸಲು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವುದು ಎಲ್ಲರ ಜವಾಬ್ದಾರಿ ಎಂದರು.

ಕಾಲೇಜು ಪ್ರಾಂಶುಪಾಲ ಎಂ.ವೈ. ಹೊಸಮನಿ ಮಾತನಾಡಿ, ಭ್ರಷ್ಟಾಚಾರದ ಬೇರು ಬೆಳೆದು ಹೆಮ್ಮರವಾಗುವ ಮುನ್ನ ಎಲ್ಲರೂ ಎಚ್ಚರ ವಹಿಸಬೇಕು. ಇಲ್ಲದಿದ್ದರೆ ಅಸಮಾನತೆಯ ಸಮಾಜ ಸೃಷ್ಟಿಯಾಗುವ ಅಪಾಯ ಕಾದಿದೆ ಎಂದರು.

ಮುಖ್ಯ ಪೇದೆ ಆಲಂಪಾಷ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಪೇದೆ ಸಂತೋಷ್, ಉಪನ್ಯಾಸಕರಾದ ರಂಗಸ್ವಾಮಿ ಉಪಸ್ಥಿತರಿದ್ದರು.