ಕನ್ನಡಪ್ರಭ ವಾರ್ತೆ ಸವದತ್ತಿ ಭಾರತದ ಉತ್ಸವಗಳು ವೈಶಿಷ್ಟ್ಯ ಮತ್ತು ವೈಜ್ಞಾನಿಕತೆಯಿಂದ ಕೂಡಿದ್ದು, ಸಮಾಜದಲ್ಲಿ ನಡೆಯುವ ಧಾರ್ಮಿಕ ಆಚರಣೆಗಳು ನಮ್ಮ ಬದುಕಿನ ಸುಗಮ ಮಾರ್ಗಕ್ಕೆ ದಾರಿದೀಪವಾಗಿವೆ ಎಂದು ಶಿಂದೋಗಿಯ ನಿತ್ಯಾನಂದ ಸತ್ಸಂಗ ಆಶ್ರಮದ ಮುಕ್ತಾನಂದ ಸ್ವಾಮೀಜಿ ಹೇಳಿದರು.
ಕನ್ನಡಪ್ರಭ ವಾರ್ತೆ ಸವದತ್ತಿ
ಭಾರತದ ಉತ್ಸವಗಳು ವೈಶಿಷ್ಟ್ಯ ಮತ್ತು ವೈಜ್ಞಾನಿಕತೆಯಿಂದ ಕೂಡಿದ್ದು, ಸಮಾಜದಲ್ಲಿ ನಡೆಯುವ ಧಾರ್ಮಿಕ ಆಚರಣೆಗಳು ನಮ್ಮ ಬದುಕಿನ ಸುಗಮ ಮಾರ್ಗಕ್ಕೆ ದಾರಿದೀಪವಾಗಿವೆ ಎಂದು ಶಿಂದೋಗಿಯ ನಿತ್ಯಾನಂದ ಸತ್ಸಂಗ ಆಶ್ರಮದ ಮುಕ್ತಾನಂದ ಸ್ವಾಮೀಜಿ ಹೇಳಿದರು.ಪಟ್ಟಣದ ಹಳೇ ಬಸ್ ನಿಲ್ದಾಣದ ಬಳಿಯ ಕೊತ್ತಲ ಕರಿಯಮ್ಮಾದೇವಿಯ ಭಂಡಾರ ಜಾತ್ರಾ ಮಹೋತ್ಸವ ಮತ್ತು ನೂತನ ದೇವಸ್ಥಾನದ ಉದ್ಘಾಟನೆ ಹಾಗೂ ಶ್ರೀದೇವಿಯ ಮೂರ್ತಿ ಪ್ರತಿಷ್ಠಾಪನೆಯ ಅಂಗವಾಗಿ ಹಮ್ಮಿಕೊಂಡ ಧರ್ಮಸಭೆಯ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು. ಧಾರ್ಮಿಕ ಆಚರಣೆಗಳ ಹಿನ್ನೆಲೆಯಲ್ಲಿ ಹಿಂದೂಗಳು ಜಾಗೃತರಾಗಬೇಕಿದ್ದು, ನಮ್ಮ ಮೂಲ ಪರಂಪರೆಯ ಆರಾಧನೆಯೊಂದಿಗೆ ಸಂಸ್ಕೃತಿಯ ಉಳಿವಿನ ಕಡೆಗೆ ಪ್ರತಿಯೊಬ್ಬರು ಗಮನ ಹರಿಸಬೇಕಿದೆ. ಅಂತಕರಣದ ಶುದ್ದಿಯೊಂದಿಗೆ ಭಕ್ತಿಯಿಂದ ಕಾಯಕ ಮಾಡಿದಲ್ಲಿ ಪ್ರತಿಯೊಬ್ಬರ ಬದುಕು ನೆಮ್ಮದಿಯತ್ತ ಸಾಗಲು ಸಾಧ್ಯವಾಗಲಿದೆ ಎಂದರು.ಮುಖಂಡ ಅಶ್ವತ್ಥ ವೈದ್ಯ ಮಾತನಾಡಿ, ಹಳೆಯ ಬಸ್ ನಿಲ್ದಾಣದ ಯುವಕರೆಲ್ಲಾ ಕೂಡಿಕೊಂಡು ಇಂದು ಕೊತ್ತಲ ಕರಿಯಮ್ಮಾ ದೇವಸ್ಥಾನದ ಅಭಿವೃದ್ಧಿ ಮಾಡಿದ್ದು ಧಾರ್ಮಿಕ ಆಚರಣೆಗಳಿಗೆ ಪ್ರೇರಕರಾಗಿದೆ. ಅವರ ಧಾರ್ಮಿಕ ಕಾರ್ಯಗಳಿಗೆ ಸಂಪೂರ್ಣ ಸಹಕಾರ ನೀಡುವದಾಗಿ ಭರವಸೆ ನೀಡಿದರು.ಹೆಬ್ಬಳ್ಳಿಯ ಚೈತನ್ಯ ಆಶ್ರಮದ ದತ್ತದೂತ ಸ್ವಾಮೀಜಿ ಮಾತನಾಡಿ, ವಿಶ್ವದಲ್ಲಿ ಮಾನವ ಜೀವಿಯು ಅನೇಕ ರೀತಿಯ ಲಕ್ಷಣಗಳನ್ನು ಹೊಂದಿದ್ದರೂ ಸಹಿತ ಸಮಾಧಾನ ಮತ್ತು ಶಾಂತಿಯ ಕೊರತೆಯಿಂದ ಬಳಲುತ್ತಿದ್ದೇವೆ. ಮಾನವನು ಹೊಸ ಹೊಸ ಅವಿಷ್ಕಾರಗಳತ್ತ ಬೆನ್ನತ್ತಿ ನೆಮ್ಮದಿಯಿಂದ ದೂರ ಸಾಗುತ್ತಿದ್ದಾನೆ. ಆದ್ಧರಿಂದ ಧಾರ್ಮಿಕ ಆಚರಣೆಗಳು ಮಾನವನಲ್ಲಿ ಚೈತನ್ಯವನ್ನು ಮೂಡಿಸಿ ಮಾನವನಲ್ಲಿ ಶಾಂತಿಯ ಸನ್ಮಾರ್ಗವನ್ನು ಮೂಡಿಸುತ್ತವೆ ಎಂದು ತಿಳಿಸಿದರು.ಚಿಕ್ಕುಂಬಿಯ ಅಭಿನವ ಅಜಾತ ನಾಗಲಿಂಗಸ್ವಾಮೀಜಿ ಮಾತನಾಡಿ, ಜಗತ್ತಿನಲ್ಲಿನ ಪ್ರತಿಯೊಂದು ಧಾರ್ಮಿಕ ಆಚರಣೆಗಳು ವೈಜ್ಞಾನಿಕವಾಗಿದ್ದು, ಅವುಗಳ ಅರಿವು ಮತ್ತು ಮಹತ್ವವನ್ನು ನಮ್ಮ ಮಕ್ಕಳಿಗೂ ಪ್ರತಿಯೊಬ್ಬರು ತಿಳಿಸುವ ಕಾರ್ಯ ಮಾಡುವಂತೆ ಸಲಹೆ ನೀಡಿದರು.ಇನಾಮಹೊಂಗಲ ವಿರಕ್ತಮಠದ ಅಭಿನವ ಸಿದ್ದಲಿಂಗ ಮಹಾಸ್ವಾಮೀಜಿ, ಉಗರಗೋಳದ ಮಹಾಂತ ಸ್ವಾಮೀಜಿ, ಬ್ರಹ್ಮಾನಂದ ಆಶ್ರಮದ ಶಿವಾನಂದ ಸ್ವಾಮೀಜಿ, ದಂಡಪಾಣಿ ದೀಕ್ಷಿತರು, ಗಂಗಾಧರ ದೀಕ್ಷಿತರು, ಸಂಗಮೇಶ ಅಜ್ಜನವರು ಸಾನ್ನಿಧ್ಯವಹಿಸಿದ್ದರು. ಪುರಸಭೆ ಮಾಜಿ ಅಧ್ಯಕ್ಷ ಶಿವಾನಂದ ಹೂಗಾರ, ಶ್ರೇಯಸ್ಸ ಮಾಮನಿ, ಬಿ.ಎನ್.ಪ್ರಭುನವರ, ಚಂದ್ರಣ್ಣ ಶಾಮರಾಯನವರ, ಅಲ್ಲಮಪ್ರಭು ಪ್ರಭುನವರ, ಶಿವಪುತ್ರಪ್ಪ ಹೂಗಾರ, ಉದಯ ಹೂಗಾರ, ಕಲ್ಲಯ್ಯ ಕಳ್ಳಿಮಠ, ಅಣ್ಣಪ್ಪ ಪವಾರ, ಪುಂಡಲೀಕ ಭೀ.ಬಾಳೋಜಿ, ಗಿರೀಶ ರಂಗಣ್ಣವರ, ಮಲ್ಲಿಕಾರ್ಜುನ ಬೀಳಗಿ, ಅಜ್ಜಪ್ಪ ಸುಣಗಾರ, ಕರಿಯಮ್ಮಾದೇವಿ ಅಭಿವೃದ್ಧಿ ಸೇವಾ ಸಂಘದ ಅಧ್ಯಕ್ಷ ಬಸವರಾಜ ಸುಣಗಾರ, ಅಕ್ಷಯ ಜಾನ್ವೇಕರ, ಚರಂತಯ್ಯ ಹಿರೇಮಠ, ಮಲ್ಲಿಕಾರ್ಜುನ ಕಳ್ಳಿಮಠ, ಪ್ರಶಾಂತ ಪವಾರ, ಅಕ್ಷಯ ಜಡಿ, ಗಣೇಶ ಲದವಾ, ಬಸವರಾಜ ಬೆಟಗೇರಿ, ಕಿರಣ ತಿಗಡಿ, ನಾಗೇಶ ಕಳ್ಳಿಮನಿ, ಸಂತೋಷ ಬೀಳಗಿ, ಗಣೇಶ ಹೊಂಗಲ ಇತರರು ಉಪಸ್ಥಿತರಿದ್ದರು.ಸರಿಗಮಪ ವಿಜೇತೆ ಶಿವಾನಿಯವರಿಂದ ಭಕ್ತಿಗಾಯನದ ಸಂಗೀತ ಸಂಜೆ ಕಾರ್ಯಕ್ರಮ ನೆರವೇರಿತು.