ಬೆಳ್ತಂಗಡಿ: ರೋಟರಿಯಂತಹ ಅಂತಾರಾಷ್ಟ್ರೀಯ ಛತ್ರದಡಿಯಲ್ಲಿ ಕನ್ನಡ ಸಾಹಿತ್ಯ ಸಂಭ್ರಮ ಆಚರಿಸುತ್ತಿರುವುದು ಸಂತಸದಾಯಕ. ನಾವೆಲ್ಲ ಭ್ರಮೆಗಳಿಂದ ಹೊರ ಬಂದು ಪ್ರಾದೇಶಿಕ ಭಾಷೆಯನ್ನು ಅವಲಂಭಿಸಿ ಸ್ವದೇಶಿ ಪರಿಮಳ ಪಸರಿಸುವ ಕೆಲಸ ಆಗಬೇಕಿದೆ. ಮಕ್ಕಳಿಗೆ ಸಂಸ್ಕೃತಿಯ ಚಿಂತನೆ ಹಾಗೂ ರಾಷ್ಟ್ರೀಯತೆ ಕಲಿಸುವುದು ಅಗತ್ಯ ಕೆಲಸ. ಓದುವ ಹವ್ಯಾಸದಿಂದ ದೂರವಾಗುತ್ತಿದ್ದೇವೆ. ಆದ್ದರಿಂದ ಮಾತೃ ಸಂಸ್ಕೃತಿಯನ್ನು ಬೆಳೆಸಿಕೊಳ್ಳೋಣ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಜಿಲ್ಲಾಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ ಹೇಳಿದರು.

ರೋಟರಿ ಕ್ಲಬ್ ಬೆಳ್ತಂಗಡಿ ನೇತೃತ್ವದಲ್ಲಿ ಇದೇ ಮೊದಲ ಬಾರಿಗೆ ಮೇ 17ರಂದು ಅರಳಿಯ ರೋಟರಿ ಸೇವಾ ಭವನದಲ್ಲಿ ಹಮ್ಮಿಕೊಂಡಿದ್ದ ಕನ್ನಡ ಸಾಹಿತ್ಯ ಸಂಭ್ರಮ ಮತ್ತು ಬಹು ಭಾಷಾ ಕವಿಗೋಷ್ಠಿ -2026 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಮ್ಮೇಳನದ ಅಧ್ಯಕ್ಷರಾಗಿದ್ದ ಕಸಾಪ ತಾಲೂಕು ಅಧ್ಯಕ್ಷ ಡಿ‌. ಯದುಪತಿ ಗೌಡ ಮಾತನಾಡಿ, ದೇಶದಲ್ಲಿ ಒಂದು ಭಾಷೆಯನ್ನು ತೆಗೆದುಕೊಂಡಾಗ ಕನ್ನಡಕ್ಕೆ ಸಿಕ್ಕಷ್ಟು ಗೌರವ ಯಾವ ಭಾಷೆಗೂ ಸಿಕ್ಕಿಲ್ಲ. ಕನ್ನಡ ಸಾಹಿತ್ಯವನ್ನು ಸಮೃದ್ದಗೊಳಿಸಿದ ಎಲ್ಲ ಕವಿ ಪರಂಪರೆಯನ್ನು ನಾವು ಇಂದು ನೆನಪಿಸಿಕೊಳ್ಳುವಂತಾಗಿದೆ.

8 ಭಾಷೆಗಳಲ್ಲಿ 17 ಮಂದಿ ಕವಿಗೋಷ್ಠಿಯಲ್ಲಿ ಭಾಗಿಯಾಗಿರುವುದು ಸಂತಸದಾಯಕ. ನಾವು ಹೆಚ್ಚು ಓದಿದರೆ ಬರೆಯಲು ಸಾಧ್ಯ. ಓದು, ಅಧ್ಯಯನ, ಶಿಕ್ಷಣದಿಂದ ಅನುಭವ ಮತ್ತು ಜ್ಞಾನ ಪ್ರಾಪ್ತಿಯಾಗುತ್ತದೆ. ಭಾಷೆ ಸತ್ತರೆ ಸಂಸ್ಕೃತಿ ನಾಶವಾಗುತ್ತದೆ ಎಂದರು.

ಮುಖ್ಯ ಅತಿಥಿಯಾಗಿದ್ದ ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್ ಮಾತನಾಡಿ, ವ್ಯಾವಹಾರಿಕವಾಗಿ ಪ್ರಾದೇಶಿಕ ಭಾಷೆ ಬಳಸದಿದ್ದರೆ ಭಾಷೆ ಉಳಿಯಲು ಕಷ್ಟವಾಗಬಹುದು.ರಾಷ್ಟ್ರೀಯ ಶಿಕ್ಷಣ‌ ನೀತಿಯಲ್ಲಿ ಪ್ರಾದೇಶಿಕ ಭಾಷೆಯಲ್ಲೇ ಉನ್ನತ ವಿದ್ಯಾಭ್ಯಾಸ ಮಾಡುವ ಅವಕಾಶವಿದೆ ಎಂದರು.


ಎಕ್ಸೆಲ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್, ಸಂಧ್ಯಾ ಟ್ರೇಡರ್ಸ್ ಮಾಲೀಕ ರಾಜೇಶ್ ಪೈ ಶುಭ ಕೋರಿದರು.ರೋಟರಿ‌‌ಕ್ಲಬ್ ಅಧ್ಯಕ್ಷ ಪ್ರಕಾಶ್‌ ಪ್ರಭು ಅವರ ಹಳೆ ಕತೆ ಹೊಸ ರೀತಿ ಕೃತಿಯನ್ನು ಬಿಡುಗಡೆಗೊಳಿಸಿದ ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಎಂ.ಪಿ‌ ಶ್ರೀನಾಥ್ ಮಾತನಾಡಿ, ಹಳೆ ಕತೆಗಳಿಗೆ ಹೊಸ ರೂಪ ನೀಡಿದ್ದಾರೆ. ಅವರ 4 ಕತೆಗಳು ಸ್ತ್ರೀ ಕೇಂದ್ರಿತವಾಗಿದೆ. ಇದು ಹೊಸ ಕತೆಗಾರರಿಗೆ ಆಕರ ಗ್ರಂಥದಂತಿದೆ. ಬರೆಯುವುದು ನನ್ನ ಆತ್ಮತೃಪ್ತಿಗಾಗಿ ಎಂಬುದು ಅವರ ದೊಡ್ಡ ಗುಣ. ಈ ಕಾರ್ಯಕ್ರಮದ ಮೂಲಕ ತಾನೂ ಸಾಹಿತಿ ಅಂತ ಸಮಾಜ ಒಪ್ಪಿಕೊಳ್ಳುವಂತೆ ಮಾಡಿದ್ದಾರೆ ಎಂದರು.ರಾಜೀವ ಗಾಂಧಿ ಸದ್ಭಾವನಾ ಪ್ರಶಸ್ತಿ ಪಡೆದ ರಾಜೇಶ್ ಪೈ ಅವರನ್ನು ಸನ್ಮಾನಿಸಲಾಯಿತು. ಉಜಿರೆ ರಬ್ಬರ್ ಸೊಸೈಟಿ ಅಧ್ಯಕ್ಷ ಶ್ರೀಧರ ಜಿ. ಭಿಡೆ ಇದ್ದರು. ಮನೋರಮಾ ಉದಯಚಂದ್ರ, ಸೋಮಶೇಖರ ಶೆಟ್ಟಿ ಕಾರ್ಯಕ್ರಮ‌ ನಿರೂಪಿಸಿದರು. ಪ್ರಕಾಶ ಪ್ರಭು ಸ್ವಾಗತಿಸಿದರು. ರೋಟರಿ ಕಾರ್ಯದರ್ಶಿ ಡಾ. ಎಂ.ಎಂ. ದಯಾಕರ್ ವಂದಿಸಿದರು.ಪ್ರಸ್ತಾವನೆಗೈದ ರೋಟರಿ ಕ್ಲಬ್ ಅಧ್ಯಕ್ಷ ಪ್ರಕಾಶ ಪ್ರಭು ಮಾತನಾಡಿ, ಅಂತಾರಾಷ್ಟ್ರೀಯ ಸೇವಾ ಸಂಸ್ಥೆಯಾದ ರೋಟರಿ ಕ್ಲಬ್ ಈ ಅವಧಿಯಲ್ಲಿ ಎಲ್ಲರ ಸಹಕಾರದೊಂದಿಗೆ 3 ಕೋಟಿ 7 ಲಕ್ಷ ರು. ಮೊತ್ತದ ಸೇವಾ ಚಟುವಟಿಕೆ ಅನುಷ್ಠಾನ ಮಾಡಿದೆ. ರೋಟರಿಗೂ ಸಾಹಿತ್ಯಕ್ಕೂ ಸಂಬಂಧ ಇದೆ. ನಾನು ಕೂಡ ಸಾಹಿತ್ಯ ಕ್ಷೇತ್ರದಲ್ಲಿ ಕೆಲಸ ಮಾಡಿದ್ದು, 7 ಕೊಂಕಣಿ ನಾಟಕಗಳನ್ನು ಬರೆದಿದ್ದೇನೆ‌. ಕವನಗಳನ್ನು ರಾಗ ಸಂಯೋಜಿಸಿ ಹಾಡುವ ರೀತಿಯ ಕವನಗಳನ್ನೇ ರಚಿಸಿದ್ದೇನೆ. ಕಳೆದ 36 ವರ್ಷಗಳಿಂದ ಕನ್ನಡ ನಾಡಿನ ವಿವಿಧ ಕಾರ್ಯಕ್ರಮಗಳಲ್ಲಿ ನಾಡಗೀತೆಯನ್ನು ಪ್ರಸ್ತುತಪಡಿಸಿದ ಕೀರ್ತಿ ಉಳಿಸಿಕೊಂಡಿದ್ದೇನೆ ಎಂದರು.3 ಸಾಹಿತ್ಯ ಪ್ರಬುದ್ಧ ಗೋಷ್ಠಿಗಳು; ಹೊಸ ತಲೆಮಾರು ಮತ್ತು‌ ಓದಿನ ಅಭಿರುಚಿ ವಿಷಯದಲ್ಲಿ ಎಸ್ ಡಿಎಂ ಕಾಲೇಜಿನ ಪ್ರಾಧ್ಯಾಪಕ ಡಾ. ಹಳೆಮನೆ ರಾಜಶೇಖರ, ಮನುಜ ಮತ ವಿಶ್ವ ಪಥ ವಿಷಯದಲ್ಲಿ ಮತ್ತೊಬ್ಬ ಪ್ರಾಧ್ಯಾಪಕ ಡಾ.‌ ದಿವ ಕೊಕ್ಕಡ, ತುಳುನಾಡಿನ ದೈವಾರಾಧನೆ ವಿಷಯದ ಮೇಲೆ ಜಾನಪದ‌ ವಿದ್ವಾಂಸ ಡಾ. ರವೀಶ ಪಡುಮಲೆ ಪ್ರಬುದ್ಧ ಗೋಷ್ಠಿ ನಡೆಸಿಕೊಟ್ಟರು.

ಸಾಹಿತ್ಯಾಸಕ್ತರೊಡನೆ ಸಂವಹನ ವಿಚಾರ ಗೋಷ್ಠಿಯಲ್ಲಿ ಡಾ. ಪ್ರದೀಪ ಕುಮಾರ್ ಆಟಿಕುಕ್ಕೆ ನಾವೂರು ಇವರು ಪುತ್ರಿ ಮನಶ್ವಿನಿ ಜೊತೆಗೂಡಿ ಮಂಕು ತಿಮ್ಮನ ಕಗ್ಗ ಉಪನ್ಯಾಸ ನಡೆಸಿಕೊಟ್ಟರು.