ಬದುಕಿನಲ್ಲಿ ಹೊಸ ಒಳಿತಿಗೆ ಹೆಜ್ಜೆ ಹಾಕೋಣ

| Published : Jan 03 2024, 01:45 AM IST

ಸಾರಾಂಶ

ಬದುಕಿನಲ್ಲಿ ಹತ್ತು ಹಲವು ತಪ್ಪು, ಆತಂಕಗಳನ್ನು ದಾಟಿ ತಿದ್ದಿ, ತೀಡಿಕೊಂಡು ಹೊಸ ಒಳಿತಿನತ್ತ ಹೆಜ್ಜೆ ಹಾಕಬೇಕಾಗುತ್ತದೆ

ಕನ್ನಡಪ್ರಭ ವಾರ್ತೆ ಹಾನಗಲ್ಲ

ಬದುಕಿನಲ್ಲಿ ಹತ್ತು ಹಲವು ತಪ್ಪು, ಆತಂಕಗಳನ್ನು ದಾಟಿ ತಿದ್ದಿ, ತೀಡಿಕೊಂಡು ಹೊಸ ಒಳಿತಿನತ್ತ ಹೆಜ್ಜೆ ಹಾಕಬೇಕಾಗುತ್ತದೆ ಎಂದು ಶಸಾಪ ಕದಳಿ ಮಹಿಳಾ ವೇದಿಕೆ ನಗರ ಘಟಕದ ಗೌರವಾಧ್ಯಕ್ಷೆ ಅಕ್ಕಮ್ಮ ಶೆಟ್ಟರ ತಿಳಿಸಿದರು.

ಇಲ್ಲಿನ ಶ್ರೀ ಕುಮಾರೇಶ್ವರ ವಿರಕ್ತಮಠದದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ ಆಯೋಜಿಸಿದ ಶರಣ ಸಂಗಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶರಣರ ತತ್ವಗಳು ಬದುಕನ್ನು ಹಸನಗೊಳಿಸುವ ಶುದ್ಧ ಸಿದ್ಧೌಷದಿ. ಶತ ಶತಮಾನಗಳಿಂದ ನಿತ್ಯ ಹೊಸತನ್ನು ಹೇಳುವ ಶಕ್ತ ಸಾಹಿತ್ಯ ವಚನಗಳು. ಶರಣರು ಯಾರನ್ನೂ ತಿರಸ್ಕರಿಸಲಿಲ್ಲ. ಆದರೆ ತಪ್ಪ ತಡೆಗಳನ್ನು ತಿದ್ದಿ ಬುದ್ಧಿ ಹೇಳಿ ಒಳಿತಿನ ದಾರಿಯನ್ನು ತೋರಿದರು. ಎಲ್ಲಾ ಕಾಲಕ್ಕೂ ಸಲ್ಲುವ ವಚನಗಳು ನಮ್ಮ ಮನೆ ಮನೆಯಲ್ಲಿ ನಿತ್ಯ ಪಠಣದ ಕಾರ್ಯ ನಡೆಯಬೇಕು ಎಂದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ನಗರ ಘಟಕದ ಉಪಾಧ್ಯಕ್ಷ ವಿ.ವಿ. ದಾಸರ, ಜೀವನ ಎಂದರೆ ನಿತ್ಯ ನಿರಂತರ ಪರಿವರ್ತನಶೀಲವಾದದು. ಸಮಸ್ಯೆಗಳು ಬಂದಾಗ ಎದುರಿಸಿ ಪರಿಹರಿಸಿಕೊಂಡು ಹೊಸ ಜೀವನ ಸಿದ್ಧಾಂತಕ್ಕೆ ಒಡ್ಡಿಕೊಂಡು, ಸಮಾಜಕ್ಕೆ ಒಳಿತಾಗಿ ಬದುಕುವುದೇ ಜೀವನ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕದಳಿ ಮಹಿಳಾ ವೇದಿಕೆ ನಗರ ಘಟಕದ ಅಧ್ಯಕ್ಷೆ ಶಿವಗಂಗಕ್ಕ ಪಟ್ಟಣದ, ಶರಣ ಸಾಹಿತ್ಯ ಪರಿಷತ್ತು ಹಲವು ವರ್ಷಗಳಿಂದ ಶ್ರೀ ಕುಮಾರೇಶ್ವರ ವಿರಕ್ತಮಠದಲ್ಲಿ ಶರಣ ಸಂಗಮ ನಡೆಸುತ್ತಿದೆ. ಮನೆಯಲ್ಲಿ ಮಹಾಮನೆ, ಶಾಲೆ ಕಾಲೇಜುಗಳಲ್ಲಿ ಕಾರ್ಯಕ್ರಮಗಳನ್ನು ಸಂಯೋಜಿಸುವ ಮೂಲಕ ವಚನ ಸಾಹಿತ್ಯದ ಪ್ರಚಾರಕ್ಕೆ ಮುಂದಾಗಿದೆ. ಇದು ಬದ್ಧತೆಯ ಕಾರ್ಯವಾಗಿದ್ದು ವಚನ ಪ್ರಚಾರದಿಂದ ಸಮಾಜದ ವೈಕಲ್ಯಗಳನ್ನು ತಿದ್ದಲು ಸಾಧ್ಯ ಎಂದರು.

ಸುನೀತಾ ಸೌದತ್ತಿ, ರೂಪಾ ಸೌದತ್ತಿ, ರೇಖಾ ಶೆಟ್ಟರ, ವಿಜಯ ಕಬ್ಬೂರ ವಚನಗಳನ್ನು ಹಾಡಿದರು. ತಾಲೂಕು ಅಧ್ಯಕ್ಷ ಎಸ್.ಸಿ. ಕಲ್ಲನಗೌಡರ, ವೀರಣ್ಣ ಮಡಿವಾಳರ, ಎಸ್.ವಿ. ಹೊಸಮನಿ, ಅಕ್ಕಮ್ಮ ಕುಂಬಾರಿ, ಶಾಂತಕ್ಕ ಹೊಳಲದ, ರೂಪಾ ಹೊಳಲದ, ಮಂಗಳಾ ಹೊಳಲದ, ಶೀಲಾವತಿ ಕುಲಕರ್ಣಿ, ನೀಲಮ್ಮ ಆಲದಕಟ್ಟಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಸಂಗೀತ ಶಿಕ್ಷಕಿ ಎಚ್. ಸುಧಾ ಪ್ರಾರ್ಥನೆ ಹಾಡಿದರು. ಪುರಸಭೆ ಸದಸ್ಯೆ ವೀಣಾ ಗುಡಿ ಸ್ವಾಗತಿಸಿದರು. ಎಂ.ಎಸ್. ಅಮರದ ಪ್ರಾಸ್ತಾವಿಕ ಮಾತನಾಡಿದರು. ಶಿಲ್ಪಾ ಹಿರೇಮಠ ವಂದಿಸಿದರು. ವಿಜಯಲಕ್ಷ್ಮೀ ಹಳ್ಳೀಕೇರಿ ಕಾರ್ಯಕ್ರಮ ನಿರೂಪಿಸಿದರು.