ಹೊಸಕೋಟೆ ನಗರಸಭೆಗೆ ಗ್ರೇಡ್ 1 ಸ್ಥಾನಕ್ಕೆ ಪ್ರಯತ್ನಿಸೋಣ

| Published : Sep 24 2025, 01:00 AM IST

ಹೊಸಕೋಟೆ ನಗರಸಭೆಗೆ ಗ್ರೇಡ್ 1 ಸ್ಥಾನಕ್ಕೆ ಪ್ರಯತ್ನಿಸೋಣ
Share this Article
  • FB
  • TW
  • Linkdin
  • Email

ಸಾರಾಂಶ

ಹೊಸಕೋಟೆ: ಬೆಂಗಳೂರು ನಗರಕ್ಕೆ ಸಮೀಪವಿರುವ ಹೊಸಕೋಟೆ ನಗರ ಜಿಲ್ಲೆಯಲ್ಲಿ ಸಾಕಷ್ಟು ವೇಗವಾಗಿ ಬೆಳೆಯುತ್ತಿರುವ ತಾಲೂಕು ಕೇಂದ್ರವಾಗಿದೆ. ಈ ನಿಟ್ಟಿನಲ್ಲಿ ಹೊಸಕೋಟೆ ನಗರಸಭೆಗೆ ಗ್ರೇಡ್ 1 ಸ್ಥಾನ ಕೊಡಿಸಲು ಸರ್ಕಾರದ ಮಟ್ಟದಲ್ಲಿ ಪ್ರಯತ್ನ ಮಾಡಲಾಗುವುದು ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.

ಹೊಸಕೋಟೆ: ಬೆಂಗಳೂರು ನಗರಕ್ಕೆ ಸಮೀಪವಿರುವ ಹೊಸಕೋಟೆ ನಗರ ಜಿಲ್ಲೆಯಲ್ಲಿ ಸಾಕಷ್ಟು ವೇಗವಾಗಿ ಬೆಳೆಯುತ್ತಿರುವ ತಾಲೂಕು ಕೇಂದ್ರವಾಗಿದೆ. ಈ ನಿಟ್ಟಿನಲ್ಲಿ ಹೊಸಕೋಟೆ ನಗರಸಭೆಗೆ ಗ್ರೇಡ್ 1 ಸ್ಥಾನ ಕೊಡಿಸಲು ಸರ್ಕಾರದ ಮಟ್ಟದಲ್ಲಿ ಪ್ರಯತ್ನ ಮಾಡಲಾಗುವುದು ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.

ನಗರದಲ್ಲಿ ನಗರಸಭೆಯ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಗರ ಸ್ವಚ್ಛತೆ ದೃಷ್ಟಿಯಿಂದ ನಾಗರಿಕರು ಕೇವಲ ಪೌರಕಾರ್ಮಿಕರನ್ನು ಅವಲಂಬಿಸದೆ ವಾರಕ್ಕೆ ಒಮ್ಮೆಯಾದರೂ ಪೌರಕಾರ್ಮಿಕರ ಜೊತೆಗೂಡಿ ನಗರದ ಸ್ವಚ್ಛತೆಗೆ ಸಹಕರಿಸಬೇಕು. ನಾನು ಕೂಡ ನಿಮ್ಮೊಂದಿಗೆ ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾಗುತ್ತೇನೆ. ನಗರದ ಅಭಿವೃದ್ಧಿ ದೃಷ್ಟಿಯಿಂದ ಎಲ್ಲಾ ರೀತಿಯಲ್ಲೂ ಶ್ರಮಿಸುತ್ತಿದ್ದು ಹೊಸಕೋಟೆ ನಗರವನ್ನು ಮಾದರಿಯಾಗಿ ನಿರ್ಮಾಣ ಮಾಡುವುದೇ ಗುರಿಯಾಗಿದೆ ಎಂದು ಹೇಳಿದರು.

ನಗರಾಭಿವೃದ್ಧಿಗಾಗಿ ನಗರೋತ್ಥಾನ ಯೋಜನೆಯಡಿ 60 ಕೋಟಿ ಕಾಮಗಾರಿ, ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ 15 ಕೋಟಿ, ಎತ್ತಿನಹೊಳೆ ಯೋಜನೆ ಅಡಿಯಲ್ಲಿ 8 ಕೋಟಿ, ಬಿಎಂಆರ್‌ಡಿಎ ಅನುದಾನದಲ್ಲಿ 19 ಕೋಟಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಹಂತ ಹಂತವಾಗಿ ನಗರಾಭಿವೃದ್ಧಿ ಕಾಣಲಿದೆ. ಅಲ್ಲದೆ ಹಲವಾರು ವರ್ಷಗಳಿಂದ ಬಾಕಿ ಉಳಿದಿದ್ದ ಒಳಚರಂಡಿ ಕಾಮಗಾರಿಗು ಸಹ 30 ಕೋಟಿ ಅನುದಾನ ತಂದಿದ್ದು ಕಾಮಗಾರಿಗೆ ವೇಗ ನೀಡಲಾಗುವುದು. ಶಾಶ್ವತ ನೀರಾವರಿ ಯೋಜನೆ ಕಲ್ಪಿಸುವ ದೃಷ್ಟಿಯಿಂದ ಎತ್ತಿನಹೊಳೆ ನೀರನ್ನು ಹೊಸಕೋಟೆ ದೊಡ್ಡ ಕೆರೆಗೆ ತಂದು ಸಮರ್ಪಕ ನೀರು ಸರಬರಾಜಿಗೆ ಆದ್ಯತೆ ನೀಡಲಾಗುವುದು. ಉಳಿದಂತೆ ಕಾವೇರಿ ನೀರನ್ನು ಹೊಸಕೋಟೆ ನಗರಕ್ಕೆ ಬಂದರೆ ಪ್ರತಿ ದಿನ ನೀರು ಸರಬರಾಜು ಮಾಡಲು ಅನುಕೂಲವಾಗುತ್ತದೆ ಎಂದು ಹೇಳಿದರು.

ಪೌರಾಯುಕ್ತ ನೀಲಲೋಚನಪ್ರಭು ಮಾತನಾಡಿ, ಪೌರಕಾರ್ಮಿಕರ ಸೇವೆಯನ್ನು ಸ್ಮರಿಸುವ ಉದ್ದೇಶದಿಂದ ಸರ್ಕಾರ 2007ರಲ್ಲಿ ಪೌರಕಾರ್ಮಿಕರ ದಿನಾಚರಣೆ ಪ್ರಾರಂಭ ಮಾಡಿತು. ಅದರಂತೆ ಪೌರ ಕಾರ್ಮಿಕರಿಗೆ ರಜೆ ನೀಡಿ ಸಂಭ್ರಮಿಸಲಾಗುತ್ತಿದೆ. ಪೌರ ಕಾಮಿಕರ ಅಭಿವೃದ್ಧಿಗೆ ಶಾಸಕರು ಸರ್ವೇ ನಂ.158ರಲ್ಲಿ 20 ಗುಂಟೆ ಜಾಗ ಮೀಸಲಿಟ್ಟು ಮನೆ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಅದರಂತೆ ಸರ್ವೆ ನಂ 104 ರಲ್ಲಿ 8 ಎಕರೆ ಜಾಗ ಇದ್ದು ಆಶ್ರಯ ನಿವೇಶನಕ್ಕೆ ಕಾಯ್ದಿರಿಸಿ ಪೌರಾ ಕಾರ್ಮಿಕರಿಗೆ ಮನೆ ನಿರ್ಮಾಣ ಮಾಡಿಕೊಟ್ಟರೆ ಸೂಕ್ತ. ಅಲ್ಲದೆ ನಗರಸಭೆಯಲ್ಲಿ ಲೋಡರ್ಸ್‌, ಡ್ರೈವರ್, ಕ್ಲೇನರ್‌ಗಳು ಕೆಲಸ ಮಾಡುತ್ತಿದ್ದು ಅವರನ್ನು ಪೌರ ಕಾರ್ಮಿಕರಂತೆ ಪರಿಗಣಿಸಿ ನೇರ ಪಾವತಿ ಮಾಡಲು ಅನುವು ಮಾಡಿಕೊಡಬೇಕು ಎಂದು ತಿಳಿಸಿದರು.

ನಗರಸಭೆ ಅಧ್ಯಕ್ಷೆ ಆಶಾರಾಜಶೇಖರ್ ಮಾತನಾಡಿ, ಪೌರಕಾರ್ಮಿಕರು ಪ್ರತಿ ದಿನ ಅವರ ಆರೋಗ್ಯವನ್ನು ಲೆಕ್ಕಿಸದೆ ನಗರದ ಸ್ವಚ್ಛತೆಗೆ ಅವಿರತ ಶ್ರಮಿಸುತ್ತಿದ್ದಾರೆ. ಅವರ ಸೇವೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದರು.

ಬಿಎಂಆರ್‌ಡಿಎ ಅಧ್ಯಕ್ಷ ಕೇಶವಮೂರ್ತಿ ಮಾತನಾಡಿ, ಚುನಾಯಿತರಾಗಿ ನಗರಸಭೆಗೆ ಬರುವ ಪ್ರತಿನಿಧಿಗಳು 5 ವರ್ಷ ಇರಬಹುದು. ಆದರೆ ಇಡೀ ಜೀವನವನ್ನು ನಗರದ ಸ್ವಚ್ಛತೆಗೆ ಮೀಸಲಿಡುವ ಪೌರಕಾರ್ಮಿಕರ ಜೀವನ ಇತರರಿಗೆ ಸ್ಫೂರ್ತಿ ಎಂದು ಹೇಳಿದರು.

ನಗರಸಭೆ ಸದಸ್ಯ ಸೋಮಶೇಖರ್ ಮಾತನಾಡಿ, ನಗರದಲ್ಲಿ ಪ್ರತಿದಿನ ಮನೆ ಬಾಗಿಲಿಗೆ ಕಸದ ವಾಹನ ಬಾರದ ಕಾರಣ ಜನ ರಸ್ತೆ ಬದಿ ಕಸ ಬಿಸಾಡಿ ಹೋಗುತ್ತಿದ್ದು ನಗರ ಅಸ್ವಚ್ಛತೆಯಿಂದ ಕೂಡಿದೆ. ಆದರೆ ಕಸ ವಿಲೇವಾರಿ ಘಟಕ ಕಲ್ಲಹಳ್ಳಿ ಬಳಿ ಆಗಿದ್ದು ಅದನ್ನು ಉದ್ಘಾಟನೆ ಮಾಡುವ ಕೆಲಸ ತ್ವರಿತವಾಗಿ ಆಗಬೇಕಿದ್ದು ಶಾಸಕ ಶರತ್ ಬಚ್ಚೇಗೌಡರು ಗಮನ ಹರಿಸಬೇಕು ಎಂದು ತಿಳಿಸಿದರು.

ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ದೇವರಾಜ್, ಸದಸ್ಯರಾದ ಗೌತಮ್, ರೋಷನ್, ಸೋಮಶೇಖರ್, ವೆಂಕಟೇಶ್, ನಗರಸಭೆ ನಾಮ ನಿರ್ದೇಶಿತ ಸದಸ್ಯರಾದ ನಾಗರಾಜ್, ಗಣೇಶ್, ರಮಾದೇವಿ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಬಿವಿ ರಾಜಶೇಖರ್ ಗೌಡ, ಬಿಎಂಆರ್‌ಡಿಎ ಸದಸ್ಯ ಡಾ.ಎಚ್.ಎಂ.ಸುಬ್ಬರಾಜ್, ಮುಖಂಡರಾದ ಶಿವಾನಂದ್, ಡಾ.ಸಿ.ಜಯರಾಜ್, ವೆಂಕಟೇಶ್, ವರದಾಪುರ ಆನಂದ್, ಗಂಗಾರಾಜು, ಕೊಳಿ ರಾಜಣ್ಣ, ಜಿಟಿ ಕೇಬಲ್ ಮೋಹನ್, ಬಚ್ಚಣ್ಣ ಹಾಜರಿದ್ದರು.

ಫೋಟೋ : 23 ಹೆಚ್‌ಎಸ್‌ಕೆ 1

ಹೊಸಕೋಟೆಯಲ್ಲಿ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮವನ್ನು ಶಾಸಕ ಶರತ್ ಬಚ್ಚೇಗೌಡ, ಪೌರಾಯುಕ್ತ ನಿಲಲೋಚನ ಪ್ರಭು ಉದ್ಘಾಟಿಸಿದರು. ನಗರಸಭೆ ಅಧ್ಯಕ್ಷೆ ಆಶಾರಾಜಶೇಖರ್, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ದೇವರಾಜ್, ಬಿಎಂಆರ್‌ಡಿಎ ಸದಸ್ಯ ಡಾ.ಎಚ್.ಎಂ.ಸುಬ್ಬರಾಜ್, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಬಿವಿ ರಾಜಶೇಖರ್ ಗೌಡ ಇತರರಿದ್ದರು.