ಹೊಸಪೇಟೆ: ನಮ್ಮ ನದಿಗಳನ್ನು ಉಳಿಸುವ ಜವಾಬ್ದಾರಿ ನಮ್ಮದು. ಹಲವಾರು ನದಿಗಳು ಇಂದು ಬತ್ತಿ ಹೋಗುತ್ತಿವೆ. ಇನ್ನುಳಿದ ನದಿಗಳು ಮಾನವನ ಕೈಗಾರಿಕರಣ, ಕಾರ್ಖಾನೆಗಳಿಗೆ ಸಿಲುಕಿ ಕಲುಷಿತವಾಗುತ್ತಿರುವ ಈ ದಿನಗಳಲ್ಲಿ. ಪರಿಶುದ್ಧವಾಗಿ ಹರಿಯುವ ಅಘನಾಶಿನಿಯನ್ನು ಉಳಿಸೋಣ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಾಹಿತ್ಯ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ. ವೆಂಕಟಗಿರಿ ದಳವಾಯಿ ಹೇಳಿದರು.

ಹಂಪಿ ಕನ್ನಡ ವಿಶ್ವವಿದ್ಯಾಲಯದ ಅಲ್ಲಮ ಸಭಾಂಗಣದಲ್ಲಿ ಅಘನಾಶಿನಿ ನದಿಯ ಕುರಿತು ಸಾಕ್ಷ್ಯಚಿತ್ರ ಪ್ರದರ್ಶನದಲ್ಲಿ ಅವರು ಮಾತನಾಡಿದರು.ಮನುಷ್ಯನ ಅವನತಿಗೆ ಕಾರಣ, ನಾವು ಪರಿಸರ, ನದಿಯನ್ನು ನಾಶ ಮಾಡುತ್ತಿರುವುದು. ಅಭಿವೃದ್ಧಿಯ ಕಲ್ಪನೆ ವಿನಾಶದ ದಾರಿ ಮಾಡಿಕೊಟ್ಟಿದೆ. ಅಭಿವೃದ್ಧಿಯ ನೆಪದಲ್ಲಿ ಪರಿಸರವನ್ನು ಹಾಳು ಮಾಡದೆ, ಪರಿಸರವೆ ನಮ್ಮ ಅಭಿವೃದ್ದಿ ಎಂದು ತಿಳಿಯೋಣ ಎಂದರು.

ಭೂಮಿಯಲ್ಲಿ ಬಹುಪಾಲು ನೀರಿದ್ದರೂ, ಬಳಕೆಗೆ ಯೋಗ್ಯ ಇರುವ ನೀರು ಬಹಳ ಕಡಿಮೆ ಪ್ರಮಾಣದಲ್ಲಿದೆ, ಈ ನೀರನ್ನು ಕೂಡ ನಾವು ಕಲುಷಿತಗೊಳಿಸುತ್ತಿದ್ದೇವೆ. ಬರುಡು ಗಲ್ಫ್ ರಾಷ್ಟ್ರಗಳಿಗೆ ಹೋಲಿಸಿದರೆ ನಾವಿರುವ ಪರಿಸರ ನಮಗೆ ಬಹಳಷ್ಟು ನೀಡಿದೆ ಎಂದರು.

ಕಾರ್ಯಕ್ರಮದಲ್ಲಿ ಸಾಕ್ಷ್ಯಚಿತ್ರದ ಕುರಿತು ವಿಶ್ಲೇಷಣಾತ್ಮಕ ಟಿಪ್ಪಣಿಯನ್ನು ಮಂಡಿಸಿದ ಸಂಶೋಧನಾರ್ಥಿ ರವೀಂದ್ರ ಅವರು

ಅಘನಾಶಿನಿ ನದಿಯ ಐತಿಹಾಸಿಕ ಹಿನ್ನೆಲೆ, ಜೀವ ವೈವಿಧ್ಯತೆ, ಪರಿಸರ ಸಂರಕ್ಷಣೆಯ ಮಹತ್ವ ಹಾಗೂ ಸಾಕ್ಷ್ಯಚಿತ್ರದ ವೈಶಿಷ್ಟ್ಯಗಳನ್ನು ವಿವರಿಸಿದರು.


ಸಂಶೋಧನಾರ್ಥಿ ಖಾಜಾಸಾಹೇಬ್ ಕಾರ್ಯಕ್ರಮದ ಸಂಚಾಲನೆ ನಡೆಸಿದರು. ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಅಧ್ಯಾಪಕರು, ಸಂಶೋಧನಾರ್ಥಿಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಹಂಪಿ ಕನ್ನಡ ವಿಶ್ವವಿದ್ಯಾಲಯದ ಅಲ್ಲಮ ಸಭಾಂಗಣದಲ್ಲಿ ಅಘನಾಶಿನಿ ನದಿಯ ಕುರಿತು ಸಾಕ್ಷ್ಯಚಿತ್ರ ಪ್ರದರ್ಶನದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಾಹಿತ್ಯ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ. ವೆಂಕಟಗಿರಿ ದಳವಾಯಿ ಮಾತನಾಡಿದರು.