ರಾಜ್ಯದ ಜಾತಿಗಣತಿ ಕಾಲಂನಲ್ಲಿ ಏನು ಬರೆಸಬೇಕೆಂಬ ಬಗ್ಗೆ ಗುರು-ವಿರಕ್ತರು, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಏನು ತೀರ್ಮಾನ ಕೈಗೊಳ್ಳುತ್ತದೋ ಕಾದು ನೋಡೋಣ ಎಂದು ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಹೇಳಿದ್ದಾರೆ.

- ಗುರು-ವಿರಕ್ತರು, ಅಭಾವೀಮ ತೀರ್ಮಾನವಾಗಲಿ ಎಂದ ವೈದ್ಯಕೀಯ ಶಿಕ್ಷಣ ಸಚಿವ - ಮುಖ್ಯಮಂತ್ರಿ ಬದಲಾವಣೆ ಏನೂ ಇಲ್ಲ, ಇದೆಲ್ಲಾ ಕೇವಲ ಮಾಧ್ಯಮಗಳ ಸೃಷ್ಟಿ

- ಮೈಸೂರಿನಲ್ಲಿ ಸಾಧನಾ ಸಮಾವೇಶ ಯಾರದೇ ಶಕ್ತಿ ಪ್ರದರ್ಶನಕ್ಕಾಗಿ ನಡೆದಿದ್ದಲ್ಲ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ರಾಜ್ಯದ ಜಾತಿಗಣತಿ ಕಾಲಂನಲ್ಲಿ ಏನು ಬರೆಸಬೇಕೆಂಬ ಬಗ್ಗೆ ಗುರು-ವಿರಕ್ತರು, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಏನು ತೀರ್ಮಾನ ಕೈಗೊಳ್ಳುತ್ತದೋ ಕಾದು ನೋಡೋಣ ಎಂದು ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಂಚ ಪೀಠಾಧೀಶರೆಲ್ಲಾ ದಾವಣಗೆರೆಯಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದು ಒಳ್ಳೆಯ ಬೆಳವಣಿಗೆಯಾಗಿದೆ. ಮುಂದಿನ ದಿನಗಳಲ್ಲಿ ಮಹಾಸಭಾ ಏನು ತೀರ್ಮಾನ ಮಾಡುತ್ತದೋ ಕಾದು ನೋಡೋಣ ಎಂದರು.

ರಾಜ್ಯದ ಜಾತಿ ಗಣತಿ ಕಾ‌ಲಂನಲ್ಲಿ ಬರೆಸಲು ಏನು ಅವಕಾಶ ಇದೆ ನೋಡೋಣ. ರಾಜ್ಯದಲ್ಲಿ ವೀರಶೈವ ಲಿಂಗಾಯತ ಸಂಖ್ಯೆ ಕಡಿಮೆ ಬರಲು ಕಾರಣ ಏನು ಅಂತಾ ನಿನ್ನೆ ಇಲ್ಲಿಯೇ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ. ರಾಜ್ಯ ಹಿಂದೆ ಜಾತಿಗಣತಿ ಮಾಡಿಲ್ಲ. ಜಾತಿಗಣತಿ ಮಾಡಿದರೆ ತಪ್ಪೇನು ಎಂದು ಅವರು ಪ್ರಶ್ನಿಸಿದರು.

ಅನುದಾನ ತಾರತಮ್ಯ ಮಾಡಿದ್ದೇ ಬಿಜೆಪಿ:

ಸರ್ಕಾರದ ಅನುದಾನ ಹಂಚಿಕೆಯಲ್ಲಿ ತಾರತಮ್ಯವಾಗಿದೆ ಎಂದು ಹೇಳುತ್ತಿರುವ ಬಿಜೆಪಿಯವರು, ತಮ್ಮ ಸರ್ಕಾರವಿದ್ದಾಗ ಏನು ಮಾಡಿದ್ದಾರೆಂದು ಒಮ್ಮೆ ಕೇಳಿ. ಬಿಜೆಪಿ ಸರ್ಕಾರವಿದ್ದಾಗ ಬಿತ್ತಿದ್ದ ಬೀಜ ಈಗ ಫಲವಾಗಿದೆ. ಇಂತಹ ಪದ್ಧತಿಯನ್ನು ಹುಟ್ಟು ಹಾಕಿದ್ದೇ ಬಿಜೆಪಿಯವರು. ಅಭಿವೃದ್ಧಿ ಬಗ್ಗೆ ಬಿಜೆಪಿಯವರಿಗೇ ಗೊತ್ತಿಲ್ಲ. ವಿಷಬೀಜ ಬಿತ್ತುವುದು, ತಾರತಮ್ಯ ಮಾಡುವುದಷ್ಟೇ ಬಿಜೆಪಿಯವರಿಗೆ ಗೊತ್ತು ಎಂದು ಸಚಿವರು ಹೇಳಿದರು.

ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಏನೂ ಇಲ್ಲ. ಇದೆಲ್ಲಾ ಕೇವಲ ಮಾಧ್ಯಮಗಳ ಸೃಷ್ಟಿ. ಮೈಸೂರಿನಲ್ಲಿ ಸಾಧನಾ ಸಮಾವೇಶ ಮಾಡಿದ್ದು ರಾಜ್ಯ ಸರ್ಕಾರದ ಕೆಲಸ, ಕಾರ್ಯಗಳು ಜನರಿಗೆ ಗೊತ್ತಾಗಲಿಕ್ಕೆಂದು ಮಾತ್ರ. ಅದು ಯಾರದೇ ಶಕ್ತಿ ಪ್ರದರ್ಶನಕ್ಕಾಗಿ ನಡೆದ ಸಮಾವೇಶ ಅಲ್ಲ ಎಂದು ಡಾ.ಶರಣಪ್ರಕಾಶ ಪಾಟೀಲ ಅಭಿಪ್ರಾಯಪಟ್ಟರು.

- - -

(-ಫೋಟೋ: ಡಾ.ಶರಣಪ್ರಕಾಶ ಪಾಟೀಲ)