ಸಾರಾಂಶ
ಹಾಸನದಲ್ಲಿ ಸಿದ್ದರಾಮಯ್ಯ ಪರ್ವ ಮಾಡ್ತಾರಂತೆ. ಅಹಿಂದ ಸಮಾವೇಶ ಯಾವ ಕಾರಣಕ್ಕೆ ಮಾಡುತ್ತಿದ್ದಾರೆ. ಎಲ್ಲಾ ಸಮುದಾಯದ ಹಣವನ್ನು ನುಂಗುತ್ತಿದ್ದು, ಜನಾತದಳ ಮುಗಿಸಲು ಸಮಾವೇಶ ಮಾಡ್ತಾ ಇದ್ದೀರ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು.
ಚನ್ನಪಟ್ಟಣ: ಕಾಂಗ್ರೆಸ್ ನಡೆದುಕೊಳ್ಳುವ ರೀತಿಯಿಂದ ರಾಜ್ಯಕ್ಕೆ ನಷ್ಟ ಆಗುತ್ತಿದೆ. ಹಾಸನದಲ್ಲಿ ಸಿದ್ದರಾಮಯ್ಯ ಪರ್ವ ಮಾಡ್ತಾರಂತೆ. ಅಹಿಂದ ಸಮಾವೇಶ ಯಾವ ಕಾರಣಕ್ಕೆ ಮಾಡುತ್ತಿದ್ದಾರೆ. ಎಲ್ಲಾ ಸಮುದಾಯದ ಹಣವನ್ನು ನುಂಗುತ್ತಿದ್ದು, ಜನಾತದಳ ಮುಗಿಸಲು ಸಮಾವೇಶ ಮಾಡ್ತಾ ಇದ್ದೀರ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು.
ತಾಲೂಕು ಕೂಡ್ಲೂರು ಗ್ರಾಮದ ಬಳಿಯ ಖಾಸಗಿ ರೆಸಾರ್ಟ್‌ನಲ್ಲಿ ಹಮ್ಮಿಕೊಂಡಿದ್ದ ಚನ್ನಪಟ್ಟಣ ಕ್ಷೇತ್ರದ ಮತದಾರರಿಗೆ ಕೃತಜ್ಞತಾ ಸಮಾವೇಶದಲ್ಲಿ ಮಾತನಾಡಿದ ಅವರು, ಅವರಿಗೆ ಜಿಲ್ಲಾ ಪಂಚಾಯಿತಿ ತಾಲೂಕು ಪಂಚಾಯತಿ ಚುನಾವಣೆ ನಡೆಸಲು ಯೋಗ್ಯತೆ ಇಲ್ಲಾ. ರಾಜ್ಯದಲ್ಲಿ ಕುಮಾರಸ್ವಾಮಿ ದೇವೇಗೌಡರನ್ನು ಮುಗಿಸಲು ಕುತಂತ್ರದಿಂದ ಹೊರಟಿದ್ದೀರಾ ಎಂದು ಕಿಡಿಕಾರಿದರು.
ದೇವೇಗೌಡರ ಕೋಟೆಗೆ ಬಂದು ಅಹಿಂದ ಸಮಾವೇಶ ಮಾಡ್ತೀರಾ, ಮಾಡಿ ನಿಮ್ಮ ಯೋಗ್ಯತೆಗೆ ಅಭಿವೃದ್ಧಿ ಮಾಡಿಲ್ಲ, ಸಮಾವೇಶ ಮಾಡ್ತೀರಾ ಮಾಡಿ. ಸಿದ್ದರಾಮಯ್ಯನವರೇ ಮುಂದಿನ ಚುನಾವಣೆಯಲ್ಲಿ 38 ಸೀಟು ಗೆಲ್ಲಿ ನೋಡೋಣ ಎಂದು ಸವಾಲು ಹಾಕಿದರು.
ಸಿದ್ದರಾಮಯ್ಯನವರು ಈಗ ಮತಯಂತ್ರ ಬೇಡ ಈಗ ಪೇವರ್ ಓಟಿಂಗ್ ಬೇಕೆನ್ನುತ್ತಾರೆ. ಹಾಗಿದ್ದರೆ, ಚನ್ನಪಟ್ಟಣ ಚುನಾವಣೆ ಹೇಗೆ ಗೆದ್ರಪ್ಪ ಹಾಗಾದ್ರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ 138 ಸೀಟ್ ಹೇಗೆ ಗೆದ್ದಿರಿ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ 26 ಅಥವಾ 28 ಸೀಟು ಬರುತ್ತೋ ನೋಡೋಣ ಎಂದರು.
ದೆಹಲಿಯಲ್ಲಿ ಕುಮಾರಸ್ವಾಮಿ, ದೇವೇಗೌಡರು ಮಾತನಾಡಿಲ್ಲ ಅಂತೀರ. ಯಾವ ನೈತಿಕತೆಯಿಂದ ಹೇಳ್ತೀರ. ಕೆ.ಸಿ. ಜನರಲ್ ಆಸ್ಪತ್ರೆಗೆ ಹೋದ ಅಧಿಕಾರಿಗಳು ಇದು ಆಸ್ಪತ್ರೆಯ ಅಥವಾ ಭೂತ ಬಂಗಲೆಯ ಅಂತಾರೆ. ಸಿದ್ದರಾಮಯ್ಯನವರೇ ನಿಮಗೆ ನಿಮ್ಮ ಮಂತ್ರಿಗಳಿಗೆ ಏನಾದ್ರು ಮಾನ ಮರ್ಯಾದೆ ಇದ್ಯಾ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸೋಲು ನಾನೇ ಹೊರುತ್ತೇನೆ:
ಚನ್ನಪಟ್ಟಣ ಉಪಚುನಾವಣೆಯ ಸೋಲನ್ನು ನಾನೇ ತೆಗೆದುಕೊಳ್ಳುತ್ತೇನೆ. ನಾನು ಕಳೆದ ನಾಲ್ಕು ತಿಂಗಳ ಹಿಂದೇನೆ ಅಭ್ಯರ್ಥಿ ಘೋಷಣೆ ಮಾಡಿದ್ದರೆ ಈ ಸೋಲಾಗುತ್ತಿರಲಿಲ್ಲ. ನಮಗೆ ಅಭ್ಯರ್ಥಿ ಕೊರತೆ ಆಯ್ತು. ಈ ಹಿನ್ನೆಲೆಯಲ್ಲಿ ಸೋಲುವಂತಾಯಿತು. ದೇವೇಗೌಡರ ಕುಟುಂಬ ರಣಹೇಡಿ ಕುಟುಂಬ ಅಲ್ಲಾ ರಣಧೀರ ಕುಟುಂಬ. ನಿಖಿಲ್ ಕುಮಾರಸ್ವಾಮಿ ಕಾರ್ಯಕರ್ತರ ಒತ್ತಡಕ್ಕೆ ಮಣಿದು ಸ್ಪರ್ಧೆ ಮಾಡಿದರು. ಕಾರ್ಯಕರ್ತರಿಗಾಗಿ ತಲೆ ಕೊಟ್ಟರು. ನಿಖಿಲ್ ರಣಧೀರನಾಗಿ ಕಣಕ್ಕೆ ಇಳಿದರು ಎಂದು ಯೋಗೇಶ್ವರ್‌ಗೆ ಪರೋಕ್ಷವಾಗಿ ಟಾಂಗ್ ನೀಡಿದರು.
ನಾವು ಈ ಮಟ್ಟಕ್ಕೆ ಬೆಳೆಯಲು ಒಕ್ಕಲಿಗರೇ ಕಾರಣ. ಒಕ್ಕಲಿಗರು ಯಾವತ್ತೂ ನಮ್ಮನ್ನು ಕೈ ಬಿಡಲ್ಲ, ಪಕ್ಷವನ್ನು ಕಟ್ಟಿದ್ದು ಒಕ್ಕಲಿಗ ಸಮಾಜವೇ. ದೇವೇಗೌಡರು ಪ್ರಧಾನಿ, ಮುಖ್ಯಮಂತ್ರಿಯಾಗಿದ್ದರೆ ಅದಕ್ಕೆ ಈ ಸಮಾಜವೇ ಕಾರಣ. ಆದರೆ ನಾವು ಯಾವತ್ತು ಜಾತಿ ರಾಜಕಾರಣ ಮಾಡಿಲ್ಲ. ರಾಮನಗರ ಯಾವ ರೀತಿ ಇತ್ತು. ನಾನು ಬಂದ ಮೇಲೆ ಏನಾಗಿದೆ. ನಾವು ಏನು ಅನ್ಯಾಯ ಮಾಡಿದ್ದೇವೆ. ನನ್ನ ಬಗ್ಗೆ ವರ್ಣ ನಿಂದನೆ ಮಾಡಿದವರ ವಿರುದ್ಧ ಕ್ರಮ ಕೈಗೊಂಡರಾ. ನಾನಾಗಲಿ ನಿಖಿಲ್ ಆಗಲಿ ಚನ್ನಪಟ್ಟಣ ಜನರನ್ನು ಕೈಬಿಡುವುದಿಲ್ಲ. ಇನ್ನು ವಾರದಲ್ಲಿ ಒಂದು ದಿನ ನಿಖಿಲ್ ಚನ್ನಪಟ್ಟಣಕ್ಕೆ ಬರಲಿದ್ದಾರೆ ಎಂದರು.
ಉಪಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಸೋತಿದ್ದಾರೆ. ಆದರೆ, ಅವರು ಇವತ್ತು ಎಲ್ಲರ ಮನಸ್ಸಿನಲ್ಲಿ ಮನೆ ಮಾಡಿದ್ದಾರೆ. ನಿಖಿಲ್ ಕುಮಾರಸ್ವಾಮಿ ಇಡೀ ರಾಜ್ಯದಲ್ಲಿ ಪಕ್ಷ ಸಂಘಟನೆ ಮಾಡಬೇಕು ಎಂಬುದು ಕಾರ್ಯಕರ್ತರ ಒತ್ತಾಯ. ನಿಖಿಲ್ ಕುಮಾರಸ್ವಾಮಿ ಒಬ್ಬರೇ ಇವತ್ತು ಈ ಪಕ್ಷದ ಜೀವಾಳ. ನನ್ನನ್ನು ಪಕ್ಷ ಕಟ್ಟಲು ಬಿಟ್ಟ ರೀತಿಯಲ್ಲಿ ಅವರಿಗೆ ನೀವು ಅವಕಾಶ ನೀಡಿ ಎಂದರು.
ನಾಲ್ಕು ಕ್ಷೇತ್ರ ಗೆಲ್ಲುವ ಶಪಥ
ಇವತ್ತು ಇಲ್ಲಿನ ಕಾಂಗ್ರೆಸ್ ನಾಯಕರು ಜೆಡಿಎಸ್ ಅನ್ನು ಜಿಲ್ಲೆಯಿಂದ ಖಾಲಿ ಮಾಡಿಸಿದ್ದೇವೆ ಎನ್ನುತ್ತಿದ್ದಾರೆ. ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಜಿಲ್ಲೆಯ 4 ಸ್ಥಾನಗಳನ್ನು ನಾವು ಗೆಲ್ಲುತ್ತೇವೆ ಎಂದು ಕುಮಾರಸ್ವಾಮಿ ಶಪಥ ಮಾಡಿದರು.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿ 180-190 ಸೀಟ್ ಗೆಲ್ಲಬೇಕು. ಅದೇ ರೀತಿ ರಾಮನಗರದ ನಾಲ್ಕು ಕ್ಷೇತ್ರವನ್ನು ಗೆಲ್ಲಬೇಕು. ಜೆಡಿಎಸ್ ಅನ್ನು ಮುಗಿಸಲು ಹೊರಟಿದ್ದೀರಾ. ಆದರೆ, ಜಿಲ್ಲೆಯಿಂದ ನಮ್ಮನ್ನು ಖಾಲಿ ಮಾಡಿಸುವುದು ಸುಲಭವಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ಗೆ ಪರೋಕ್ಷ ಟಾಂಗ್ ನೀಡಿದರು.
ಸೋಲಿನ ಜವಾಬ್ದಾರಿ ಹೊರುತ್ತೇನೆ: ಎಚ್‌ಡಿಕೆ
ಚನ್ನಪಟ್ಟಣ ಉಪಚುನಾವಣೆಯಲ್ಲಿ ಆದ ಸೋಲು ಪಕ್ಷದ ಮುಖಂಡರು ಕಾರ್ಯಕರ್ತರಿಂದ ಆದ ಸೋಲಲ್ಲ. ಈ ಸೋಲಿನ ಜವಾಬ್ದಾರಿ ನಾನು ತೆಗೆದುಕೊಳ್ಳುತ್ತೇನೆ. ನಾನು ತೆಗೆದುಕೊಂಡ ತೀರ್ಮಾನ, ನಿಧಾನವಾಗಿ ತೆಗೆದುಕೊಂಡ ನಿರ್ಧಾರದಿಂದ ಸೋಲಾಗಿದೆ ಎಂದು ಕುಮಾರಸ್ವಾಮಿ ತಿಳಿಸಿದರು.
ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ನಿಖಿಲ್ ನಿಲ್ಲಿಸಬೇಕು ಅಂತಾ ಸಾರಾ ಮಹೇಶ್ ಹೇಳಿದರು. ಆದರೆ, ನಿಖಿಲ್ ಕುಮಾರಸ್ವಾಮಿ ನಾನು ಒಂದು ಬಾರಿ ಮಂಡ್ಯದಲ್ಲಿ ಸೋತಿದ್ದೇನೆ, ಒಂದು ಬಾರಿ ರಾಮನಗರದಲ್ಲಿ ಸೋತಿದ್ದೇನೆ, ಮತ್ತೆ ಮಂಡ್ಯಕ್ಕೆ ಹೋಗುವುದು ಸೂಕ್ತವಲ್ಲ. ನಾನು ರಾಮನಗರ ಜಿಲ್ಲೆಯಲ್ಲಿ ಇರ್ತೇನೆ ಅಂದರು. ಗಾಗಾಗಿ ನಾನು ಮಂಡ್ಯದಲ್ಲಿ ಸ್ಪರ್ಧೆ ಮಾಡಿದೆ ಎಂದರು.
ನಿಖಿಲ್ ಕುಮಾರಸ್ವಾಮಿ ಅವರು ರಾಜ್ಯದಲ್ಲಿ ಪಕ್ಷ ಸಂಘಟನೆ ಮಾಡಬೇಕು ಎಂಬ ಮನಸ್ಸಿದೆ. ದೇವೇಗೌಡರು ರಾಜಕಾರಣ, ಅವರ ಕುಟುಂಬ ಉಳಿದಿದ್ರೆ, ಅದು ದೇವರ ಆಶೀರ್ವಾದ. 2018ರ ಚುನಾವಣೆಯಲ್ಲಿ ಎರಡು ಕಡೆ ನಿಲ್ಲಬೇಕಾಯಿತು ಎಂದರು.
ವಿರೋಧ ಪಕ್ಷದವರು ನನ್ನನ್ನು ಟೂರಿಂಗ್ ಟಾಕೀಸ್ ಅನ್ನುತ್ತಾರೆ. ಇವತ್ತು ರಾಜ್ಯದಲ್ಲಿ ಒಂದು ಕ್ಷೇತ್ರ ಬಿಟ್ಟು ಮತ್ತೊಂದು ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವವವರು ಯಾರಾದರೂ ಇದ್ದರೆ ಅದು ದೇವೇಗೌಡರ ಕುಟುಂಬ ಮಾತ್ರ. ಕಾಂಗ್ರೆಸ್ ನವರಿಗೆ ದೇವೇಗೌಡರು, ಕುಮಾರಸ್ವಾಮಿ ಅವರ ಬಗ್ಗೆ ಮನಸ್ಸಿನಲ್ಲೂ ಭಯ ಇದೆ. ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಅವರ ವಿಚಾರ ರಾಜ್ಯದ ಜನ ತೀರ್ಮಾನ ಮಾಡುತ್ತಾರೆ ಎಂದರು.
ಈ ಕಾರ್ಯಕ್ರಮಕ್ಕೆ ಇಷ್ಟು ಜನ ಬರುವ ನಿರೀಕ್ಷೆ ಇರಲಿಲ್ಲ. ಸೋತರು ಇಷ್ಟು ಜನ ಬರುತ್ತಾರೆ ಎಂದುಕೊಂಡಿರಲಿಲ್ಲ. ಈ ಸಭೆಯ ಮೂಲಕ ಕಾಂಗ್ರೆಸ್ ನಾಯಕರಿಗೆ ಚನ್ನಪ್ಟಣದ ಕಾರ್ಯಕರ್ತರು ನಾವು ಇನ್ನು ಬದುಕಿದ್ದೇವೆ. ಪಕ್ಷ ಕಟ್ಟಲು ಸಿದ್ಧರಿದ್ದೇವೆ ಎಂಬ ಸಂದೇಶ ನೀಡಿದ್ದಾರೆ ಎಂದರು.