ಹಬ್ಬದ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸುವ ಪ್ರಯತ್ನವನ್ನು ಶಾಲೆ ವತಿಯಿಂದ ಮಾಡಲಾಗಿದ್ದು ಅರ್ಥಪೂರ್ಣವಾಗಿ ಸಂಕ್ರಾಂತಿ ಆಚರಣೆ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಶಾಲೆಯಲ್ಲಿ ಮಕ್ಕಳಿಗೆ ಸಂಸ್ಕೃತಿ, ಪರಂಪರೆ ಬಿಂಬಿಸುವ ಕಾರ್ಯಕ್ರಮಗಳನ್ನು ನಿರಂತರವಾಗಿ ರೂಪಿಸುತ್ತೇವೆ
ಕನ್ನಡಪ್ರಭ ವಾರ್ತೆ ಹೊಸಕೋಟೆ
ಗ್ರಾಮೀಣ ಭಾಗಗಳಲ್ಲಿ ಪರಂಪರೆ ಸಾರುವ ಹಬ್ಬಗಳನ್ನು ನಿರಂತರವಾಗಿ ಆಚರಿಸುವ ಮೂಲಕ ಗ್ರಾಮೀಣ ಸಂಸ್ಕೃತಿ, ಪರಂಪರೆಯನ್ನು ಉಳಿಸುವ ಕೆಲಸ ಆಗಬೇಕು ಎಂದು ಮಹಾದೇವ ಸಮೂಹ ವಿದ್ಯಾಸಂಸ್ಥೆಗಳ ಕಾರ್ಯದರ್ಶಿ ರಾಮನಾಥ್ ತಿಳಿಸಿದರು.ನಗರದ ಮಹಾದೇವ ಸಮೂಹ ವಿದ್ಯಾಸಂಸ್ಥೆಗಳ ಆವರಣದಲ್ಲಿ ನಡೆದ ‘ಮಹಾದೇವ ಸಂಕ್ರಾಂತಿ ಸಂಭ್ರಮ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಗರ ಪ್ರದೇಶಗಳ ಶಾಲಾ ಮಕ್ಕಳಿಗೆ ಗ್ರಾಮೀಣ ಭಾಗಗಳಲ್ಲಿ ಆಚರಿಸುವಂಥ ಮಕರ ಸಂಕ್ರಾಂತಿ ಹಬ್ಬದ ಸೊಗಡಿನ ಬಗ್ಗೆ ತಿಳಿವಳಿಕೆ ಇರುವುದಿಲ್ಲ. ಹಾಗಾಗಿ ಆ ಮಕ್ಕಳಿಗೂ ಸಹ ಗ್ರಾಮೀಣ ಭಾಗದ ಸಂಕ್ರಾಂತಿ ಹಬ್ಬ ಪರಿಚಯಿಸುವ ದೃಷ್ಟಿಯಿಂದ ರಾಗಿ ಕಣ ನಿರ್ಮಾಣ ಮಾಡಿ ರಂಗೋಲಿಯಿಂದ ಸಿಂಗರಿಸಲಾಗಿದೆ, ಗೋಪೂಜೆ ಸಲ್ಲಿಸಿ ಎತ್ತು ಚಕ್ಕಡಿಗಳನ್ನು ತಂದು ಸಿಂಗಾರ ಮಾಡುವ ಮೂಲಕ ಗ್ರಾಮಾಂತರ ಪ್ರದೇಶದಲ್ಲಿನ ಸಂಕ್ರಾಂತಿ ವಾತಾವರಣವನ್ನು ಶಾಲಾ ಆವರಣದಲ್ಲಿ ಸೃಷ್ಟಿಸಿ ಆಚರಿಸಿದ್ದೇವೆ ಎಂದರು.ಮುಖ್ಯ ಶಿಕ್ಷಕಿ ಮಂಜೂರಾಣಿ ಮಾತನಾಡಿ, ರಾಗಿ ಕಣಕ್ಕೆ, ಗೋವಿಗೆ ಪೂಜೆ ಸಲ್ಲಿಸುವ ಮೂಲಕ ಸಂಕ್ರಾಂತಿ ಹಬ್ಬದ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸುವ ಪ್ರಯತ್ನವನ್ನು ಶಾಲೆ ವತಿಯಿಂದ ಮಾಡಲಾಗಿದ್ದು ಅರ್ಥಪೂರ್ಣವಾಗಿ ಸಂಕ್ರಾಂತಿ ಆಚರಣೆ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಶಾಲೆಯಲ್ಲಿ ಮಕ್ಕಳಿಗೆ ಸಂಸ್ಕೃತಿ, ಪರಂಪರೆ ಬಿಂಬಿಸುವ ಕಾರ್ಯಕ್ರಮಗಳನ್ನು ನಿರಂತರವಾಗಿ ರೂಪಿಸುತ್ತೇವೆ ಎಂದರು.
ಮಹಾದೇವ ವಿದ್ಯಾಸಂಸ್ಥೆಗಳ ಸದಸ್ಯರಾದ ಹರೀಶ್, ಮಯೂರ್, ಲಿಖಿತ್ ರಾಜ್, ಆಡಳಿತ ಅಧಿಕಾರಿ ರಜನಿ, ಶಿಶು ವಿಹಾರ ಸಂಯೋಜಕಿ ತೇಜಸ್ವಿನಿ, ಲೆಕ್ಕಪರಿಶೋಧಕ ಅನಿಲ್, ಹಿರಿಯ ಮುಖಂಡರಾದ ಮುನಿನಾರಾಯಣಪ್ಪ ಸೇರಿದಂತೆ ಹಲವಾರು ಗಣ್ಯರು ಹಾಜರಿದ್ದರು.