ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರು ವೀರಶೈವ ಸಮಾಜದವರು ಒಳಪಂಗಡಗಳ ವ್ಯತ್ಯಾಸ ಬದಿಗಿರಿಸಿ ಎಲ್ಲರೂ ಒಗ್ಗಟ್ಟಾಗಿ ಸಮಾಜ ಕಟ್ಟುವ ಕೆಲಸ ಮಾಡೋಣ. ಒಗ್ಗಟ್ಟಾಗಿದ್ದರೆ ಸಮಾಜದ ಏಳಿಗೆ ಸಾಧ್ಯ. ಸಮಾಜದ ಹಿರಿಯರ ಸಲಹೆ, ಸಹಕಾರ, ಮಾರ್ಗದರ್ಶನ ಪಡೆದು ಕೆಲಸ ಮಾಡುತ್ತೇನೆ ಎಂದು ಅಖಿಲ ಭಾರತ ವೀರಶೈವ ಮಹಾ ಸಭಾದ ನೂತನ ಜಿಲ್ಲಾಧ್ಯಕ್ಷ,ತಜ್ಞ ವೈದ್ಯರೂ ಆದ ಡಾ.ಎಸ್.ಪರಮೇಶ್ ಹೇಳಿದರು.ನಗರದ ಸ್ನೇಹ ಸಂಗಮ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಬುಧವಾರ ಅಖಿಲ ಭಾರತ ವೀರಶೈವ ಮಹಾ ಸಭಾದ ನೂತನ ಪದಾಧಿಕಾರಿಗಳಿಗೆ ಪ್ರಮಾಣ ಪತ್ರ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಅವರು, ಸಮಾಜದ ಏಳಿಗೆಗಾಗಿ ಹಿರಿಯರು ಸ್ಥಾಪನೆ ಮಾಡಿರುವ ಅಖಿಲ ಭಾರತ ವೀರಶೈವ ಮಹಾ ಸಭಾದ ಆಶಯಗಳಿಗೆ ಧಕ್ಕೆಯಾಗದಂತೆ ಸಮಾಜ ಸೇವಾ ಕಾರ್ಯ ಮಾಡಲು ಸಂಕಲ್ಪ ಮಾಡೋಣ ಎಂದು ತಿಳಿಸಿದರು.ಒಂದೊಂದು ಕುಟುಂಬದಲ್ಲೂ ಒಂದೊಂದು ಪದ್ದತಿ, ಆಚರಣೆ ಇರುತ್ತದೆ. ಅದು ಅವರ ಕುಟುಂಬದ ಪದ್ದತಿಯಾಗಿರಬೇಕು ಹೊರತು ವೀರಶೈವ ಸಮಾಜದಲ್ಲಿ ಪ್ರತ್ಯೇಕತೆಗೆ ಕಾರಣವಾಗಬಾರದು, ಸಮಾಜದ ಸಂಘಟನೆಗೆ, ಪ್ರಗತಿಗೆ ನಾವೆಲ್ಲಾ ಒಂದಾಗಿದ್ದರೆ ಶಕ್ತಿವಂತ ಸಮಾಜ ಸಾಧ್ಯವಾಗುತ್ತದೆ ಎಂದರು.ತಮ್ಮನ್ನು ಸಭಾದ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿದಕ್ಕೆ ಕೃತಜ್ಞತೆ ಸಲ್ಲಿಸಿದ ಡಾ.ಪರಮೇಶ್ ಅವರು, ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗುವ ಹಾಗೂ ಸಮಾಜ ಪರವಾದ ಕೆಲಸಗಳನ್ನು ಎಲ್ಲರೂ ಸೇರಿ ಮಾಡೋಣ ಎಂದು ಹೇಳಿದರು.ಸಮಾಜದ ಮುಖಂಡರಾದ ಟಿ.ಕೆ.ನಂಜುಂಡಪ್ಪ ಮಾತನಾಡಿ, ವೀರಶೈವ ಸಮಾಜದ ಆಶಯಗಳು, ಅಗತ್ಯತೆಗಳಿಗೆ ಸಭಾದ ಪದಾಧಿಕಾರಿಗಳು ಕಾಲಕಾಲಕ್ಕೆ ಸ್ಪಂದಿಸಿ ಕೆಲಸ ಮಾಡಬೇಕು, ಯಾವುದೇ ಸಮಸ್ಯೆಯನ್ನು ಕುಳಿತು ಬಗೆಹರಿಸಿಕೊಳ್ಳುವ ಮನಸ್ಥಿತಿ ಬೆಳೆಸಿಕೊಳ್ಳಬೇಕು ಎಂದು ಸಲಹೆ ಮಾಡಿ, ನೂತನ ಪದಾಧಿಕಾರಿಗಳಿಗೆ ಶುಭ ಕೋರಿದರು.ಮುಖಂಡ ಕೋರಿ ಮಂಜುನಾಥ್ ಮಾತನಾಡಿ, ನಮ್ಮಲ್ಲಿನ ಒಳಪಂಗಡಗಳ ವ್ಯತ್ಯಾಸಗಳು ಅನೇಕ ಬಾರಿ ಸಮಾಜದ ಪ್ರಗತಿಗೆ ಸಂಘಟನೆಗೆ ಹಿನ್ನಡೆಯಾಗುತ್ತವೆ. ಎಲ್ಲರೂ ಒಂದಾಗಿ ಹೋದರೆ ಸಾಮಾಜಿಕವಾಗಿ, ಸರ್ಕಾರದ ಮಟ್ಟದಲ್ಲಿ ವೀರಶೈವ ಸಮಾಜ ಶಕ್ತಿಯುತವಾಗುತ್ತದೆ. ಕೆಲವೊಮ್ಮೆ ಚುನಾವಣೆಗಳೇ ಸಮಾಜದ ಸಂಘಟನೆಗೆ ಮಾರಕವಾಗುವುದೇನೊ ಎನಿಸುತ್ತದೆ. ಚುನಾವಣೆಯಲ್ಲಿ ಅಭ್ಯರ್ಥಿಗಳ ಪರವಾಗಿ ಗುಂಪುಗಳು ಹುಟ್ಟಿಕೊಂಡು ಅವು ಸಮಾಜದಲ್ಲಿ ಗುಂಪು ಸೃಷ್ಟಿಯಾಗಲು ಕಾರಣವಾಗುತ್ತವೆ, ಎಲ್ಲರೂ ಸೇರಿ ಅವಿರೋಧ ಆಯ್ಕೆ ಮಾಡುವ ಸಂಪ್ರದಾಯ ಇರಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.ಮುಖಂಡ ಸಾಗರನಹಳ್ಳಿ ನಟರಾಜ್ ಮಾತನಾಡಿ, ವೀರಶೈವ ಸಮಾಜ ದೊಡ್ಡ ಸಮಾಜ. ಸಮಾಜದ ಅನೇಕ ಹಿರಿಯರು ಸಮಾಜದ ಒಳಿತಿಗೆ ಕೊಡುಗೆ ನೀಡಿದ್ದಾರೆ. ಸಮಾಜದ ಎಲ್ಲರೂ ಒಟ್ಟಾಗಿ ಬಾಳಬೇಕು ಎಂಬ ಅವರ ಆಶಯ ಈಡೆರಿಸಲು ನಾವೆಲ್ಲಾ ಬದ್ಧರಾಗಬೇಕು, ಕನಿಷ್ಠ ಮನೆಗೊಬ್ಬರಾದರೂ ಅಖಿಲ ಭಾರತ ಮಹಾ ಸಭಾದ ಸದಸ್ಯತ್ವ ಪಡೆಯಬೇಕು ಎಂದು ಮನವಿ ಮಾಡಿದರು.ಮಾಜಿ ಸಚಿವ ಸೊಗಡು ಶಿವಣ್ಣ, ಸ್ನೇಹ ಸಂಗಮ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಿ.ಎಸ್.ಮಂಜುನಾಥ್, ತಿಪಟೂರು ರಾಜಶೇಖರ್, ಕೆ.ಜಿ.ವೈ.ಸ್ವಾಮಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ ಸೇರಿದಂತೆ ತಾಲ್ಲೂಕು ಅಧ್ಯಕ್ಷರು, ಪದಾಧಿಕಾರಿಗಳು, ಸಮಾಜದ ಮುಖಂಡರು ಸಮಾರಂಭದಲ್ಲಿ ಭಾಗಿಯಾಗಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))