ಕಾರ್ಯಾಂಗದ ಘನತೆಯನ್ನು ಎತ್ತಿಹಿಡಿಯುವಲ್ಲಿ ನೌಕರರ ಪಾತ್ರ ಪ್ರಮುಖವಾದುದ್ದಾಗಿದೆ. ಸರ್ಕಾರಿ ನೌಕರರ ಪ್ರಾಮಾಣಿಕ ಸೇವೆಯಿಂದ ರಾಜ್ಯದ ಆರ್ಥಿಕ ಅಭಿವೃದ್ಧಿಯಲ್ಲಿ ಪ್ರಮುಖ ಪಾಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಶಿವಮೊಗ್ಗ: ಕಾರ್ಯಾಂಗದ ಘನತೆಯನ್ನು ಎತ್ತಿಹಿಡಿಯುವಲ್ಲಿ ನೌಕರರ ಪಾತ್ರ ಪ್ರಮುಖವಾದುದ್ದಾಗಿದೆ. ಸರ್ಕಾರಿ ನೌಕರರ ಪ್ರಾಮಾಣಿಕ ಸೇವೆಯಿಂದ ರಾಜ್ಯದ ಆರ್ಥಿಕ ಅಭಿವೃದ್ಧಿಯಲ್ಲಿ ಪ್ರಮುಖ ಪಾಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ನಗರದ ನೆಹರೂ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮತ್ತು ರಾಜ್ಯ ಸರ್ಕಾರಿ ನೌಕರರ ಸಂಘಗಳ ಸಹಯೋಗದಲ್ಲಿ ಏರ್ಪಡಿಸಿದ್ದ ರಾಜ್ಯ ಸರ್ಕಾರಿ ನೌಕರರ ಜಿಲ್ಲಾಮಟ್ಟದ ಕ್ರೀಡಾಕೂಟವನ್ನು ಚೆಂಡು ಎಸೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಸರ್ಕಾರಿ ನೌಕರರ ನೆಮ್ಮದಿ ಬದುಕಿಗೆ ಆಸರೆಯಾಗಬೇಕಾದುದು ನಮ್ಮೆಲ್ಲರ ಕರ್ತವ್ಯವೂ ಹೌದು. ದೇಶದಲ್ಲಿ ಮುಂದೆ ನೆಡಯಲಿರುವ ಓಲಂಪಿಕ್, ಪ್ಯಾರಾ ಓಲಂಪಿಕ್‌ ಕ್ರೀಡಾಕೂಟದಲ್ಲಿ ಸರ್ಕಾರಿ ನೌಕಕರು ಭಾಗವಹಿಸುವಂತಾಗಬೇಕು ಎಂದು ಆಶಿಸಿದರು.

ದಿನನಿತ್ಯ ಒಂದಿಲ್ಲೊಂದು ಒತ್ತಡದಲ್ಲಿ ಕಾರ್ಯನಿರ್ವಹಿಸುವ ನೌಕರರು ತಮ್ಮ ಬದುಕಿನ ಅಮೂಲ್ಯ ಸಮಯವನ್ನು ಕೆಲಸದಲ್ಲಿಯೇ ಕಳೆದು ಹೋಗುತ್ತದೆ. ಕುಟುಂಬಕ್ಕಾಗಲೀ, ತಮ್ಮ ಆರೋಗ್ಯಕ್ಕಾಗಲೀ ಸಮಯ ಕೊಡುವುದು ನಿರೀಕ್ಷಿಸಿದಂತೆ ಸಾಧ್ಯವಾಗುವುದಿಲ್ಲ. ಇಂತಹ ಕ್ರೀಡಾಕೂಟಗಳು ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ಪ್ರತಿಭಾವಂತ ನೌಕರರಿಗೆ ಮಾನಸಿಕ ನೆಮ್ಮದಿ, ಉಲ್ಲಾಸ ದೊರೆಯುವುದಲ್ಲದೇ ದೈಹಿಕ ಚೈತನ್ಯ ಹೆಚ್ಚಿ, ಕಾರ್ಯದಲ್ಲಿ ನವೋಲ್ಲಾಸ ಹೆಚ್ಚಲಿದೆ ಎಂದು ಹೇಳಿದರು.

ನೌಕರರು ಅನೇಕ ಸಂದರ್ಭಗಳಲ್ಲಿ ತಮ್ಮ ಕಚೇರಿಯ ಮೇಲಾಧಿಕಾರಿಗಳ, ಸ್ಥಳೀಯ ಜನಪ್ರತಿನಿಧಿಗಳ ಒತ್ತಡ, ಇಂತಹ ಸಮಸ್ಯೆ-ಸವಾಲುಗಳಲ್ಲಿಯೇ ದಿನದ ಕಡತಗಳನ್ನು ನಿರ್ವಹಿಸುತ್ತಾರೆ. ಆದಾಗ್ಯೂ ನೌಕರರು ಯಾವುದೇ ಆತಂಕಗಳಿಗೆ ಒಳಗಾಗದಂತೆ ಹಾಗೂ ನೌಕರರ ಸಮಸ್ಯೆಗಳಿಗೆ ತಾವು ಸದಾ ಸಹಕಾರ ನೀಡುವುದಾಗಿ ಅವರು ತಿಳಿಸಿದರು.

ವಿಧಾನ ಪರಿಷತ್‌ ಸದಸ್ಯ ಡಿ.ಎಸ್.ಅರುಣ್‌ ಮಾತನಾಡಿ, ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಇಳಿಮುಖವಾಗಿದ್ದರೂ ಇಂದಿನ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿರುವ ನೌಕರರ ಕ್ರೀಡಾಪಟುಗಳ ಸಂಖ್ಯೆಯಲ್ಲಿ ಹಾಗೂ ಅವರ ಉತ್ಸಾಹದಲ್ಲಿ ಯಾವುದೇ ಕೊರತೆ ಕಾಣುತ್ತಿಲ್ಲ ಎಂದರು.

ಶಾಸಕ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ಎಲ್ಲರಲ್ಲಿಯೂ ಕ್ರೀಡಾ ಮನೋಭಾವ ಮುಖ್ಯವಾಗಿದೆ. ಖೇಲೋ ಇಂಡಿಯ ಕಲ್ಪನೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಅದ್ಭುತ ಕಲ್ಪನೆಯಾಗಿದೆ. ಇದರಿಂದಾಗಿ ರಾಷ್ಟ್ರದಲ್ಲಿ ಅನೇಕ ಪ್ರತಿಭಾವಂತ ಕ್ರೀಡಾಪಟುಗಳು ಸೃಜಿಸಲು ಕಾರಣವಾಗಿದೆ. ಕ್ರೀಡಾಕೂಟಗಳು ಕ್ರೀಡಾಸಕ್ತರ ಪ್ರತಿಭೆಯ ಅನಾವರಣಕ್ಕೆ ಉತ್ತಮ ಅವಕಾಶವಾಗಿರಲಿವೆ ಎಂದರು.

ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಮಾತನಾಡಿ, ಕ್ರೀಡೆ ಮನೋರಂಜನೆಗೆ ಮಾತ್ರವಲ್ಲ, ಪ್ರತಿಭೆಯ ಅನಾವರಣಕ್ಕೆ, ಪರಿಪಕ್ವತೆಗೆ ಸಹಕಾರಿಯಾಗಿದೆ. ಅಂತೆಯೇ ಕ್ರೀಡಾಕೂಟದಲ್ಲಿ ಭಾಗವಹಿಸುವ ಪ್ರತಿಯೊಬ್ಬರೂ ಕ್ರೀಡಾ ಸ್ಫೂರ್ತಿಯಿಂದಲೇ, ಅದರ ಘನತೆಯನ್ನು ಎತ್ತಿಹಿಡಿಯುವುದಕ್ಕಾಗಿ ಭಾಗವಹಿಸಬೇಕು. ಇವೆಲ್ಲವೂ ತಮ್ಮ ವೃತ್ತಿ ಬದುಕಿನಲ್ಲಿ ಉತ್ಸಾಹ, ಉಲ್ಲಾಸ ಹೊಮ್ಮಿಸುವಲ್ಲಿ ಸಹಾಯಕವಾಗಲಿದೆ ಎಂದರು.

ರಾಜ್ಯ ಮಟ್ಟದ ನೌಕರರ ಕ್ರೀಡಾಕೂಟವು 2026ರ ಫೆಬ್ರವರಿ ಎರಡನೇ ವಾರದಲ್ಲಿ ಬೆಂಗಳೂರು ಅಥವಾ ಮೈಸೂರಿನಲ್ಲಿ ಆಯೋಜಿಸಲಾಗುತ್ತಿದ್ದು, ವಿಜೇತ ಕ್ರೀಡಾಪಟುಗಳು ಭಾಗವಹಿಸುವಂತೆ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಕರ್ನಾಟಕ ರಾಜ್ಯ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿ, ರಾಜ್ಯ ಕೈಮಗ್ಗ ಮತ್ತು ಮೂಲಸೌಕರ್ಯ ಮಂಡಳಿ ಅಧ್ಯಕ್ಷ ಚೇತನ್‌.ಕೆ ಗೌಡ, ಅಪರ ಜಿಲ್ಲಾಧಿಕಾರಿ ಅಭಿಷೇಕ್‌, ಉಪವಿಭಾಗಾಧಿಕಾರಿ ಸತ್ಯನಾರಾಯಣ, ನೌಕರರ ಸಂಘದ ಜಿಲ್ಲಾಧ್ಯಕ್ಷ ಆರ್.ಮೋಹನ್‌ಕುಮಾರ್‌, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರೇಖ್ಯಾನಾಯ್ಕ್, ಆರ್.ಪಾಪಣ್ಣ, ಸಿದ್ಧಬಸಪ್ಪ, ದಿನೇಶ್ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕುಗಳ ನೌಕರರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಇದ್ದರು.