ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಅರಸೀಕೆರೆ ನಗರಸಭೆಯಲ್ಲಿ ಈ ಹಿಂದೆ ಯಾವುದೇ ಅಭಿವೃದ್ಧಿ ಕೆಲಸಗಳೇ ಆಗಿಲ್ಲ ಎಂದು ಆರೋಪ ಮಾಡುತ್ತಿರುವ ಹಾಲಿ ಅಧ್ಯಕ್ಷರಾದ ಸಮೀವುಲ್ಲಾ ಬುರ್ಖಾ ಹಾಕಿಕೊಂಡು ನಗರವನ್ನೆಲ್ಲಾ ಸುತ್ತಾಡಿ ನೋಡಲಿ. ನಾನು ನನ್ನ ಅವಧಿಯಲ್ಲಿ ಕೆಲಸ ಮಾಡಿಲ್ಲ ಎಂದು ಸಮೀವುಲ್ಲಾ ಮಸೀದಿಯಲ್ಲಿ ಪ್ರಮಾಣ ಮಾಡಲಿ ಎಂದು ಅರಸೀಕೆರೆ ನಗರಸಭೆ ಮಾಜಿ ಅಧ್ಯಕ್ಷ ಗಿರೀಶ್ ಸವಾಲು ಹಾಕಿದರು. ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ಕೆಲ ದಿನಗಳ ಹಿಂದೆ ನಡೆದ ನಗರಸಭೆ ಅಧ್ಯಕ್ಷರ ಚುನಾವಣೆಯಲ್ಲಿ ಸಮೀವುಲ್ಲಾ ಸದಸ್ಯರನ್ನು ಹಿಡಿದಿಟ್ಟುಕೊಂಡು ಕುತಂತ್ರ ರಾಜಕಾರಣ ಮಾಡುವ ಮೂಲಕ ಅಧ್ಯಕ್ಷರಾಗಿದ್ದಾರೆ. ಅವರ ಅಧಿಕಾರದ ಅವಧಿಯಲ್ಲಿ ತಾಲೂಕಿಗೆ ಕೊಡುಗೆ ಶೂನ್ಯ. ಈ ಹಿಂದೆ ಪರಿಶಿಷ್ಟ ಪಂಗಡದ ವ್ಯಕ್ತಿ ನಗರಸಭೆ ಅಧ್ಯಕ್ಷನಾದ ಕಾರಣ ಅದನ್ನು ಸಹಿಸಿಕೊಳ್ಳದೆ ಷಡ್ಯಂತ್ರ ರಾಜಕೀಯ ಮಾಡಿದ್ದಾರೆ. ಪರಿಶಿಷ್ಟ ಪಂಗಡದ ವ್ಯಕ್ತಿ ನಗರಸಭೆ ಅಧ್ಯಕ್ಷನಾದ ಎಂಬ ಕಾರಣಕ್ಕೆ ತನ್ನ ಅಧಿಕಾರದ ಹತ್ತು ತಿಂಗಳ ಅವಧಿಯುದ್ದಕ್ಕೂ ಇನ್ನಿಲ್ಲದ ಕಿರುಕುಳ ನೀಡಿ ಸಾಕಷ್ಟು ತೊಂದರೆ ನೀಡಿದ್ದಾರೆ. ಇದರ ಪರಿಣಾಮವಾಗಿ ತಾನು ಇಂದಿಗೂ ಕೋರ್ಟ್ ಅಲೆಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಮಿವುಲ್ಲಾ ವಿರುದ್ಧ ಕಿಡಿಕಾರಿದರು.ಈ ಹಿಂದಿನ ೩೦ ತಿಂಗಳಲ್ಲಿ ಯಾವುದೇ ಅಭಿವೃದ್ಧಿ ಆಗಿಲ್ಲ ಎಂದು ಮಹಿಳಾ ಸದಸ್ಯೆಯೊಬ್ಬರ ಮೂಲಕ ಹೇಳಿಸಿದ್ದಾರೆ. ಆದರೆ ನಾನು ಆ ತಾಯಿಗೆ ಹೇಳ ಬಯಸುತ್ತೇನೆ, ಪರಿಶಿಷ್ಟ ವರ್ಗದ ನನಗೆ ಅಧಿಕಾರ ನಡೆಸಲು ಇನ್ನಿಲ್ಲದ ಕಿರುಕುಳ ನೀಡಿದರು. ಸಮುದಾಯದ ಸಂಸ್ಥೆಯೊಂದರ ಜಾಗದ ಸಂಬಂಧ ನಾನು ಹೈಕೋರ್ಟ್‌ಗೆ ಅಲೆಯುವಂತೆ ಮಾಡಿದ್ದೀರಿ. ನನ್ನ ಅವಧಿಯಲ್ಲಿ ಪೌರಕಾರ್ಮಿಕರ ನಿವೇಶನಕ್ಕಾಗಿ ಎರಡೂವರೆ ಎಕರೆ ಜಾಗ ಕೊಡಿಸಿದ್ದೇನೆ. ಬಸವರಾಜ ಬೊಮ್ಮಾಯಿ ಅವರು ಸಿಎಂ ಆಗಿದ್ದಾಗ ನಗರೋತ್ಥಾನ ಯೋಜನೆಯಡಿ ೩೦ ಕೋಟಿ ರು. ತಂದಿದ್ದು, ಕೆಲಸ ನಡೆಯುತ್ತಿದೆ. ನಗರಕ್ಕೆ ಕುಡಿಯುವ ನೀರು ಶುದ್ಧೀಕರಿಸುವ ಫಿಲ್ಟರ್ ರೆಡಿ ಮಾಡಿಸಿದ್ದು ನಾನು, ಪಂಪ್‌ಹೌಸ್ ನಿರ್ವಹಣೆಯಲ್ಲಿ ಆಗುತ್ತಿದ್ದ ದುಂದುವೆಚ್ಚ ತಡೆಗಟ್ಟಿದ್ದೇನೆ ಎಂದು ತಮ್ಮ ಸಾಧನೆ ಹೇಳಿಕೊಂಡರು. ನಾನು ಮಾಡಿರುವ ಅಭಿವೃದ್ಧಿಯನ್ನು ಪರಿಶೀಲಿಸಲು ಸಮೀವುಲ್ಲಾ ಬುರ್ಖಾ ಹಾಕಿಕೊಂಡು ನಗರದಲ್ಲಿ ಸುತ್ತಾಡಲಿ. ಆಗ ಜನರಿಂದ ಯಾವ ಅಭಿಪ್ರಾಯ ವ್ಯಕ್ತವಾಗಲಿದೆ ಎಂಬುದು ಅವರಿಗೆ ತಿಳಿಯಲಿದೆ ಎಂದು ಹೇಳಿದರು.
ಅಧ್ಯಕ್ಷರ ಮೂಲಕ ಇ-ಸ್ವತ್ತು: ನಗರಸಭೆಯ ಅಧಿಕಾರ ಹಿಡಿದಿರುವ ಸಮೀವುಲ್ಲಾ ಇಲ್ಲ ಸಲ್ಲದ ಸೂಚನೆಯನ್ನು ಅಧಿಕಾರಿಗಳಿಗೆ ನೀಡುತ್ತಿದ್ದಾರೆ. ಜನರು ಇ-ಸ್ವತ್ತು ದಾಖಲೆಯನ್ನು ಅಧ್ಯಕ್ಷರ ಮೂಲಕವೇ ಪಡೆಯಬೇಕು ಎಂಬುದಾಗಿ ಹೇಳುತ್ತಿರುವುದು ಸರಿಯಲ್ಲ. ಇದರ ವಿರುದ್ಧ ಹೋರಾಟ ನಡೆಸಲಾಗುವುದು. ನಗರಸಭೆ ಆಯುಕ್ತರಿಗೆ ಮಾತ್ರ ಇ- ಸ್ವತ್ತು ನೀಡಲು ಅಧಿಕಾರವಿದ್ದು, ಅಧ್ಯಕ್ಷರು ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡು ಜನರ ಶೋಷಣೆಗೆ ಇಳಿದಿದ್ದಾರೆ ಎಂದು ಆರೋಪಿಸಿದರು.ಶಾಸಕರು ಕಳೆದ ೧೪ ತಿಂಗಳ ಅವಧಿಯಲ್ಲಿ ನಗರಸಭೆಗೆ ಏನು ಅನುದಾನ ತಂದಿದ್ದಾರೆ ಎಂಬುದರ ಬಗ್ಗೆ ತಾಕತ್ತಿದ್ದರೆ ಶ್ವೇತಪತ್ರ ಹೊರಡಿಸಲಿ ಎಂದು ಗಿರೀಶ್ ಸವಾಲು ಹಾಕಿದರು.
ಪತ್ರಿಕಾಗೋಷ್ಠಿಯಲ್ಲಿ ಹರ್ಷವರ್ಧನ್, ರಮೇಶ್ ಇತರರು ಉಪಸ್ಥಿತರಿದ್ದರು.