ಸಾರಾಂಶ
ಸಂಸ್ಕೃತ ಅತ್ಯಂತ ಮಧುರ ಹಾಗೂ ಕಲಿಕೆಗೆ ಸರಳ ಭಾಷೆಯಾಗಿದೆ.
ಕನ್ನಡಪ್ರಭ ವಾರ್ತೆ ಗುಳೇದಗುಡ್ಡ
ಸಂಸ್ಕೃತ ಅತ್ಯಂತ ಮಧುರ ಹಾಗೂ ಕಲಿಕೆಗೆ ಸರಳ ಭಾಷೆಯಾಗಿದೆ. ಸಂಸ್ಕೃತ ಭಾಷೆಗೆ ತನ್ನದೇ ಆದ ಇತಿಹಾಸ ಹಾಗೂ ವೈಶಿಷ್ಟತೆ ಇದೆ. ಸಂಸ್ಕೃತ ಪ್ರತಿಯೊಬ್ಬರ ಆಡು ಭಾಷೆಯಾಗಬೇಕು. ಆ ನಿಟ್ಟಿನಲ್ಲಿ ನಾವೆಲ್ಲ ಸಂಸ್ಕೃತ ಭಾಷೆಯನ್ನು ಬೆಳೆಸುವ ಕೆಲಸ ಮಾಡಬೇಕು ಎಂದು ಶ್ರೀ ಗುರುಬಸವ ದೇವರು ಹೇಳಿದರು.ಅವರು ಸೋಮವಾರ ಗುಳೇದಗುಡ್ಡ ಪಟ್ಟಣದ ಶ್ರೀ ಜಗದ್ಗುರು ಗುರುಸಿದ್ದೇಶ್ವರ ಬ್ರಹನ್ಮಠದಲ್ಲಿ ಶ್ರೀ ಜ. ಗುರುಸಿದ್ಧ ಪಟ್ಟಧಾರ್ಯ ಮಹಾಸ್ವಾಮಿಗಳವರ 38ನೇ ವಾರ್ಷಿಕ ಪುಣ್ಯಾರಾಧನೆಯ ಶರಣ ಸಂಗಮ ಸಮಾರಂಭದ ಪ್ರಯುಕ್ತ ಹಮ್ಮಿಕೊಂಡಿದ್ದ 8 ದಿನಗಳ ಸಂಸ್ಕೃತ ಸಂಭಾಷಣಾ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಮಾತನಾಡಿ, ಸಂಸ್ಕೃತ ದೇವ ಭಾಷೆ ಎನಿಸಿಕೊಂಡಿದೆ. ಸಂಸ್ಕೃತ ಮಾತನಾಡುವುದರಿಂದ ಭಾಷಾ ಉಚ್ಚಾರ ಶುದ್ಧವಾಗುತ್ತದೆ. ನಮ್ಮ ಮಾತೃ ಭಾಷೆಯೊಂದಿಗೆ ಎಲ್ಲ ಭಾಷೆಗಳನ್ನು ಕೂಡ ಪ್ರೀತಿಸಬೇಕು. ಅದರೊಟ್ಟಿಗೆ ನಮ್ಮ ಅನಾದಿಕಾಲದ ಪ್ರಾಚೀನ ದೇವ ಭಾಷೆ ಎನಿಸಿಕೊಂಡ ಸಂಸ್ಕೃತ ಭಾಷೆಯನ್ನು ಇನ್ನಷ್ಟು ಉತ್ತುಂಗಕ್ಕೆ ಬೆಳೆಸುವ ಕೆಲಸ ಮಾಡುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದರು.
ಶರಣ ಸಂಗಮ ಸಮಾರಂಭದ ಸ್ವಾಗತ ಸಮಿತಿ ಅಧ್ಯಕ್ಷ ಸಂಗನಬಸಪ್ಪ ಚಿಂದಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯ ಶಿಕ್ಷಕಿ ನಾಗವೇಣಿ ತಿಪ್ಪಾ, ಸಂಸ್ಕೃತ ಪಾಠಶಾಲೆ ಮುಖ್ಯ ಶಿಕ್ಷಕರಾದ ಸುನಂದಾ ರಾಸನಕರ, ಬಸವರಾಜ ಯಂಡಿಗೇರಿ, ಗೀತಾ ಬಂಕಾಪುರ, ಎಂ.ಎಸ್. ತಾಂಡೂರ, ದೀಪಾ ಉಂಕಿ, ಮಂಜುಳಾ ತಿಪ್ಪಾ, ದ್ರಾಕ್ಷಾಯಿಣಿ ಗೊಬ್ಬಿ, ಗೌರಮ್ಮ ಕಲಬುರ್ಗಿ , ಶಶಿಕಲಾ ಭಾವಿ, ಗಿರೀಜಾ ಕಲ್ಯಾಣಿ, ಅನಸೂಯಾ ಅಲದಿ, ಸೇರಿದಂತೆ ಇತರರು ಉಪಸ್ಥಿತರಿದ್ದರು.