ಸಾರಾಂಶ
ಬಳ್ಳಾರಿ: ಸವಿತಾ ಸಮಾಜವು ಎಲ್ಲ ವರ್ಗದ ಜನರಿಗೂ ತಾರತಮ್ಯವಿಲ್ಲದೆ ಸೇವೆ ನೀಡುತ್ತಿದೆ. ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಈ ಸಮುದಾಯ ಮತ್ತಷ್ಟು ಸದೃಢವಾಗಬೇಕಿದೆ ಎಂದು ಮೇಯರ್ ಬಿ. ಶ್ವೇತಾ ತಿಳಿಸಿದರು.
ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದ ಬಿಡಿಎಎ ಸಭಾಂಗಣದಲ್ಲಿ ಜರುಗಿದ ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಕಡಿಮೆ ಜನಸಂಖ್ಯೆ ಹೊಂದಿರುವ ಸವಿತಾ ಸಮಾಜದವರು ಸಂಘಟಿತರಾದರೆ ಮಾತ್ರ ಸಮುದಾಯ ಮುಖ್ಯವಾಹಿನಿಗೆ ಬರಲು ಸಾಧ್ಯ. ಪ್ರತಿಯೊಬ್ಬರೂ ಮಾಡುವ ಕಸುಬಿನ ಮೇಲೆ ಗೌರವ, ನಿಷ್ಠೆ ಇಟ್ಟುಕೊಂಡಾಗ ಬದುಕಿನಲ್ಲಿ ಉತ್ತುಂಗಕ್ಕೇರಬಹುದು. ಸವಿತಾ ಮಹರ್ಷಿ ಅವರ ಹಾದಿಯಲ್ಲಿ ಸಾಗಿ ಆಚಾರ- ವಿಚಾರ ಮೈಗೂಡಿಸಿಕೊಂಡು ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗಬೇಕು ಎಂದರು.
ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಕೆ.ಬಿ. ಸಿದ್ದಲಿಂಗಪ್ಪ ವಿಶೇಷ ಉಪನ್ಯಾಸ ನೀಡಿದರು. ಕೆ. ಕಲ್ಯಾಣಿ ತಂಡದವರು ವಚನ ಗಾಯನ ಪ್ರಸ್ತುತಪಡಿಸಿದರು.ಉಪಮೇಯರ್ ಬಿ. ಜಾನಕಿ, ಮಾಜಿ ಮೇಯರ್ ಹಾಗೂ ಪಾಲಿಕೆಯ ಸದಸ್ಯೆ ಎಂ. ರಾಜೇಶ್ವರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ. ನಾಗರಾಜ್, ಜಿಲ್ಲಾ ಸವಿತಾ ಸಮಾಜ ಸಂಘದ ಅಧ್ಯಕ್ಷ ಸಣ್ಣಗೊಂಡ್ಲ ರಾಕೇಶ್, ಶರಣಪ್ಪ ಸೇರಿದಂತೆ ಸಮಾಜದ ಮುಖಂಡರು ಉಪಸ್ಥಿತರಿದ್ದರು. ಸವಿತಾ ಮಹರ್ಷಿ ಜಯಂತಿಯ ಅಂಗವಾಗಿ ಏರ್ಪಡಿಸಿದ್ದ ಮೆರವಣಿಗೆಯಲ್ಲಿ ವಿವಿಧ ಸಾಂಸ್ಕೃತಿಕ ಕಲಾತಂಡಗಳು ಭಾಗವಹಿಸಿದ್ದವು.
ಮೇಯರ್ ಬಿ. ಶ್ವೇತಾ ಅವರು ಸವಿತಾ ಮಹರ್ಷಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆಯು ಹೊಸ ಜಿಲ್ಲಾಡಳಿತ ಭವನದಿಂದ ಆರಂಭವಾಗಿ ಇಂದಿರಾ ವೃತ್ತ, ಕೆ.ಸಿ. ರಸ್ತೆ, ಮೀನಾಕ್ಷಿ ವೃತ್ತ, ಹಳೇ ತಾಲೂಕು ಕಚೇರಿ, ಗಡಿಗಿ ಚೆನ್ನಪ್ಪ ವೃತ್ತದ ಮೂಲಕ ಬಿಡಿಎಎ ಫುಟ್‍ಬಾಲ್ ಮೈದಾನದ ವೇದಿಕೆ ಸಭಾಂಗಣಕ್ಕೆ ಅಂತ್ಯಗೊಂಡಿತು.