ಸಾರಾಂಶ
ಶಿವಕುಮಾರ ಕುಷ್ಟಗಿ
ಕನ್ನಡಪ್ರಭ ವಾರ್ತೆ ಗದಗಜಿಲ್ಲೆಯಲ್ಲಿ ಮರಳು ದಂಧೆಗೆ ಎಷ್ಟೊಂದು ಪ್ರಭಾವ, ತನ್ನ ಕೆಟ್ಟ ವ್ಯವಸ್ಥೆಯನ್ನು ವಿಸ್ತರಿಸಿಕೊಂಡಿದೆ ಎಂದರೆ ಆ ಗ್ರಾಮದಲ್ಲಿ ಶವ ಸಂಸ್ಕಾರಕ್ಕಾಗಿ ಮೀಸಲಿಟ್ಟಿರುವ (ಸರ್ಕಾರಿ ಜಮೀನು) ಸ್ಮಶಾನವನ್ನೇ ಅಗೆದು ಮರಳು-ಮಣ್ಣು ಲೂಟಿ ಮಾಡಿದ್ದಾರೆ.
ಲಕ್ಷ್ಮೇಶ್ವರ ತಾಲೂಕಿನ ಪುಟಗಾಂ ಬಡ್ನಿ ಎನ್ನುವ ಪುಟ್ಟ ಗ್ರಾಮಕ್ಕೆ ಹೊಂದಿಕೊಂಡೇ ದೊಡ್ಡ ಹಳ್ಳ ಹರಿದಿದೆ. ಈ ಹಳ್ಳಕ್ಕೆ ಹೊಂದಿಕೊಂಡೇ ಇರುವ ಜಮೀನೊಂದನ್ನು ಸರ್ಕಾರ ಗ್ರಾಮದ ಸರ್ವ ಜನಾಂಗಕ್ಕೂ ಅಂತ್ಯ ಸಂಸ್ಕಾರಕ್ಕಾಗಿ ನೀಡಿದೆ. ಯಾವಾಗ (ಸರ್ಕಾರಿ ಜಮೀನು) ಸ್ಮಶಾನದಲ್ಲಿ ಗುಣಮಟ್ಟದ ಮರಳು ಇದೆ ಎನ್ನುವುದು ಖಚಿತವಾಯಿತೋ ಅಲ್ಲಿಂದ ನಿರಂತರವಾಗಿ ಮರಳು ಲೂಟಿ ಶುರುವಾಯಿತು. ಈಗ ಸ್ಮಶಾನವೇ ಮಾಯವಾಗಿದೆ.ಸ್ಮಶಾನದಲ್ಲಿ ರಾತ್ರೋರಾತ್ರಿ ಅಕ್ರಮ ಮರಳು ದಂಧೆ ನಡೆಯುತ್ತಿದ್ದರಿಂದ ಈ ಹಿಂದೆ ಶವ ಸಂಸ್ಕಾರ ಮಾಡಿದ ಮೂಳೆಗಳು ಸೇರಿದಂತೆ ಅಸ್ಥಿಪಂಜರ ಭಾಗಗಳು ಹೊರ ಬರುತ್ತಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಲ್ಲದೇ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ, ಅಕ್ರಮ ತಡೆಗಟ್ಟುವಂತೆ ವಿನಂತಿಸಿದ್ದರು. ಅಕ್ರಮ ಮಾತ್ರ ನಿಲ್ಲಲೇ ಇಲ್ಲ.
ಮನವಿಯಿಂದ ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಗ್ರಾಮಸ್ಥರೇ ಸ್ಮಶಾನಕ್ಕೆ ಓರ್ವ ಕಾವಲುಗಾರರನ್ನು ನೇಮಿಸಿ ಕಾವಲು ಕಾಯಲು ಪ್ರಾರಂಭಿಸಿದರು. ಅಕ್ರಮ ಮರಳು ದಂಧೆಕೋರರು ಕಾವಲುಗಾರನಿಗೆ ಮದ್ಯ ಕುಡಿಸಿ ಅವನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ಮರಳು ಲೂಟಿ ಮಾಡಿದ್ದರು. ಇಂದಿಗೂ ಆ ವ್ಯಕ್ತಿ ಕೋಮಾದಲ್ಲಿದ್ದಾನೆ.ದೊಡ್ಡ ಹಳ್ಳವೇ ಮೂಲ: ಲಕ್ಷ್ಮೇಶ್ವರ ತಾಲೂಕು ವ್ಯಾಪ್ತಿಗೆ ಒಳಪಡುವ ಪುಟಗಾಂ ಬಡ್ನಿ, ನಾದಿಗಟ್ಟಿ, ಬಟ್ಟೂರ, ಹುಲ್ಲೂರು, ಮಲ್ಲಾಪೂರ, ಬೂದಿಹಾಳ, ಕೊಕ್ಕರಗುಂದಿ, ನಾಗರಮಡವು ಈ ಗ್ರಾಮಗಳ ವ್ಯಾಪ್ತಿಯ ಸರ್ವೇ ನಂಬರ್‌ಗಳ ಪಕ್ಕದಲ್ಲಿಯೇ ಈ ದೊಡ್ಡ ಹಳ್ಳಕ್ಕೆ ಮಿಂಪು ಮಿಶ್ರಿತ ಗುಡ್ಡ ಮತ್ತು ಹೊಲಗಳಿಂದಲೇ ನೀರು ಹರಿದು ಬರುವ ಹಿನ್ನೆಲೆಯಲ್ಲಿ ಅತ್ಯುತ್ತಮ ಗುಣಮಟ್ಟದ ದಪ್ಪನೆಯೇ (ಪ್ಲಾಸ್ಟರ್ ಉಸುಕು) ಮರಳು ಇಲ್ಲಿ ಲಭ್ಯವಾಗುತ್ತಿದ್ದು, ಇದನ್ನೆಲ್ಲಾ ಲೂಟಿ ಮಾಡಿದ್ದಾರೆ. ಹಳ್ಳಗಳ ಪಕ್ಕದಲ್ಲಿನ ಪಟ್ಟಾ ಜಮೀನುಗಳಲ್ಲಿ ಮರಳು ಗಣಿಗಾರಿಕೆಗೆ ಅನುಮತಿ ಪಡೆದು, ಅಕ್ರಮವಾಗಿ ಹಳ್ಳದಲ್ಲಿನ ಬೆಲೆ ಬಾಳುವ ಮರಳು ಸಾಗಾಟ ಮಾಡಲಾಗುತ್ತದೆ. ಕಾರಣ ಈ ಮರಳಿಗೆ ಯಾವುದೇ ರಾಯಲ್ಟಿ ಕಟ್ಟಬೇಕಾಗಿಲ್ಲ. ಸೂರ್ಯ ಉದಯಿಸುವುದರೊಳಗಾಗಿ ಯಾವುದೇ ಹಣ ಹೂಡಿಕೆ ಮಾಡದೇ ಲಕ್ಷಾಂತರ ದುಡಿವ ಈ ಕಾರ್ಯಕ್ಕೆ ಎಲ್ಲ ಪಕ್ಷಗಳ ನಾಯಕರು ಮೈಚಳಿ ಬಿಟ್ಟು ನಿಂತಿದ್ದು, ಅದಕ್ಕಾಗಿ ಈ ಮರಳು ದಂಧೆ ವ್ಯಾಪಕವಾಗಿ ಮತ್ತು ಎಲ್ಲರಿಗೂ ಗೊತ್ತಿದ್ದರೂ ವ್ಯವಸ್ಥಿತವಾಗಿಯೇ ನಡೆಯುತ್ತಿದೆ.ಕೃಪಾಪೋಷಿತ:ಲಕ್ಷ್ಮೇಶ್ವರ ಪೊಲೀಸ್ ಠಾಣೆ ಸುಟ್ಟು ಹಾಕಲು ಇದೇ ಅಕ್ರಮ ಮರಳು ದಂಧೆ ಕಾರಣ. ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಮರಳು ದಂಧೆ ಒಂದಲ್ಲ ಒಂದು ರೀತಿಯಲ್ಲಿ ಸರ್ಕಾರದ ಕೃಪಾಪೋಷಿತವಾಗಿಯೇ ನಡೆಯುತ್ತಿದೆ. ಇದಕ್ಕೆ ಪೊಲೀಸ್ ಇಲಾಖೆಯ ಹಿರಿ, ಕಿರಿಯ ಅಧಿಕಾರಿಗಳ ದೊಡ್ಡ ಆಶೀರ್ವಾದ ಇದೆ ಎನ್ನುವುದು ಜಿಲ್ಲೆಯಲ್ಲಿ ಬಹಿರಂಗ ಸತ್ಯ.