ಜಾನಪದ ಕಲೆಗಳೊಂದಿಗೆ ವಿಜ್ಞಾನವೂ ಮೇಳೈಸಲಿ

| Published : Feb 11 2024, 01:51 AM IST

ಸಾರಾಂಶ

ರಾಮನಗರ: ಜಾನಪದ ಸತ್ಯ, ಚರಿತ್ರೆಯನ್ನು ಹೊಂದಿದ್ದು, ಅದು ಜನರ ಸಂಸ್ಕೃತಿಗೆ ಹಿಡಿದ ಕೈಗನ್ನಡಿಯಾಗಿದೆ. ಜಾನಪದ ಕಲೆಗಳೊಂದಿಗೆ ವಿಜ್ಞಾನವೂ ಮೇಳೈಸಬೇಕಿದೆ ಎಂದು ನಿವೃತ್ತ ಐಎಎಸ್ ಅಧಿಕಾರಿ, ಸಂಸ್ಕೃತಿ ಚಿಂತಕ ಐ.ಎಂ.ವಿಠ್ಠಲಮೂರ್ತಿ ಹೇಳಿದರು.

ರಾಮನಗರ: ಜಾನಪದ ಸತ್ಯ, ಚರಿತ್ರೆಯನ್ನು ಹೊಂದಿದ್ದು, ಅದು ಜನರ ಸಂಸ್ಕೃತಿಗೆ ಹಿಡಿದ ಕೈಗನ್ನಡಿಯಾಗಿದೆ. ಜಾನಪದ ಕಲೆಗಳೊಂದಿಗೆ ವಿಜ್ಞಾನವೂ ಮೇಳೈಸಬೇಕಿದೆ ಎಂದು ನಿವೃತ್ತ ಐಎಎಸ್ ಅಧಿಕಾರಿ, ಸಂಸ್ಕೃತಿ ಚಿಂತಕ ಐ.ಎಂ.ವಿಠ್ಠಲಮೂರ್ತಿ ಹೇಳಿದರು.

ನಗರದ ಜಾನಪದ ಲೋಕದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಕರ್ನಾಟಕದ ಜಾನಪದ ಪರಿಷತ್ತು ಆಯೋಜಿಸಿರುವ ಎರಡು ದಿನಗಳ ಸುವರ್ಣ ಕರ್ನಾಟಕ ಜಾನಪದ ಲೋಕೋತ್ಸವ -2024ಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜಾನಪದದಲ್ಲಿ ವಿಜ್ಞಾನವೂ ಅಡಗಿದೆ. ಇದನ್ನು ಅರಿತು ಪರಿಸರ ಮತ್ತು ಜಲ ಸಂರಕ್ಷಣೆ ಕುರಿತು ವೈಜ್ಞಾನಿಕ ಸಂಶೋಧನೆ ಮಾಡಿದರೆ ಹೊಸತನ್ನು ಸೃಷ್ಟಿಸಲು ಸಹಕಾರಿಯಾಗುತ್ತದೆ. ಹಳೆಯ ಕಲಾವಿದರು ಹೊಸ ಕಲಾವಿದರಿಗೆ ಮಾರ್ಗದರ್ಶಕರಾಗಬೇಕು. ಜೊತೆಗೆ ವಿಜ್ಞಾನವೂ ಮೇಳೈಸಬೇಕು ಎಂದು ತಿಳಿಸಿದರು.

ಜಾನಪದ ಲೋಕದ ನಿರ್ಮಾತೃ ಎಚ್.ಎಲ್.ನಾಗೇಗೌಡರು ಜಾನಪದ ಕಲೆ, ಕಲಾವಿದರು ಹಾಗೂ ಲೇಖಕರ ಬಗ್ಗೆ ಅದ್ಭುತವಾದ ಪ್ರೀತಿ ಹೊಂದಿದ್ದವರು. ಹಲವಾರು ವರ್ಷಗಳ ಪರಿಶ್ರಮ, ಹಲವು ಸಂಘಟನೆಗಳ ಶಕ್ತಿಯಿಂದ ಜಾನಪದ ಲೋಕ ನಿರ್ಮಾಣಗೊಂಡಿತು. ಅವರ ಜೊತನೆಗಿನ ಒಡನಾಟ ಅವಿಸ್ಮರಣೀಯ ಎಂದರು.

ಒಬ್ಬ ಮನುಷ್ಯ ಜೀವಿತಾವಧಿಯಲ್ಲಿ ಮಾಡಲು ಸಾಧ್ಯವಾಗುವುದಕ್ಕಿಂತ ಹತ್ತು ಪಟ್ಟು ಹೆಚ್ಚು ಕೆಲಸವನ್ನು ನಾಗೇಗೌಡರು ಮಾಡಿ ಹೋಗಿದ್ದಾರೆ. ಅವರಿಗೆ ಸಹನೆ, ತಾಳ್ಮೆ ಇತ್ತು. ಕಲಾವಿದರ ಮೇಲೆ ಪ್ರೀತಿ, ಕಲೆಗಳ ಬಗ್ಗೆ ಗೌರವ ಇತ್ತು. ನಾಡಿನ ಬಗ್ಗೆ ಹೆಮ್ಮೆ ಇತ್ತು. ಅಂತಹ ನಾಗೇಗೌಡರು ನಮಗೆಲ್ಲ ಮಾರ್ಗದರ್ಶಕರಾಗಿದ್ದರು ಎಂದು ಗುಣಗಾನ ಮಾಡಿದರು.

ಕಲಾವಿದರನ್ನು ರಸ್ತೆಗಿಳಿಸಿ ಮೆರವಣಿಗೆ ಮಾಡಿಸಿದರೆ ಅಥವಾ ಗೌರವಿಸಿದರೆ ಸಾಲದು. ಹೊಸ ಕಲಾವಿದರು ಮೂಡಿ ಬರಬೇಕಾದರೆ ಹಿರಿಯ ಕಲಾವಿದರ ಜೀವನಕ್ಕೆ ಆರ್ಥಿಕ ಭದ್ರತೆ ಒದಗಿಸಬೇಕಿತ್ತು. ಈ ಕಾರಣಕ್ಕಾಗಿಯೇ ಜಾನಪದ ಜಾತ್ರೆ ಕಾರ್ಯಕ್ರಮ ಪರಿಚಯಿಸಿದೆವು. ಆ ಮೂಲಕ ಕಲಾವಿದರಿಗೆ ಗೌರವ ಧನವೂ ಸಿಗುವಂತೆ ಮಾಡಿದೆವು. ಆಗಿನ ಕಲಾವಿದರ ಕಾಲಲ್ಲಿ ಶಕ್ತಿ ಇರಲಿಲ್ಲ, ಹುಮ್ಮಸ್ಸು ಇರುತ್ತಿತ್ತು. ಈಗಿನ ಕಲಾವಿದರಲ್ಲಿ ಶಕ್ತಿ, ಹುಮ್ಮಸ್ಸು, ಹಣ ಎಲ್ಲವೂ ಇದೆ. ಈ ಕಾರಣದಿಂದಲೇ ಇಂದು ಯುವಜನರು ಜಾನಪದ ಕಲೆಗಳತ್ತ ಆಸಕ್ತರಾಗಲು ಸಾಧ್ಯ ಎಂದು ವಿಠ್ಠಲ ಮೂರ್ತಿ ಹೇಳಿದರು.

ಭಾತೃತ್ವತ ಸೃಷ್ಟಿಸುವ ಜಾನಪದದ ಅವಶ್ಯವಿದೆ:

ಕರ್ನಾಟಕ ಜಾನಪದ ಪರಿಷತ್ತು ಅಧ್ಯಕ್ಷ ಪ್ರೊ.ಹಿ.ಶಿ.ರಾಮಚಂದ್ರೇಗೌಡ ಮಾತನಾಡಿ, ಜಾಗತಿಕ ಸಂದರ್ಭದಲ್ಲಿ ಪ್ರತಿಯೊಬ್ಬ ಮನುಷ್ಯ ತಾನು ಎಂಬುದಾಗಿ ಬೇರೆ ಬೇರೆ ಆಗುತ್ತಿದ್ದೇನೆ. ಆ ಮೂಲಕ ಸಾಮೂಹಿಕ, ಸಮುದಾಯ ಎಂಬ ಪ್ರಜ್ಞೆ ಕಳೆದು ಹೋಗುತ್ತಿದೆ. ಇಂತಹ ಸಂದರ್ಭದಲ್ಲಿ ಜಾನಪದವನ್ನು ಪುನರುಜ್ಜೀವನಗೊಳಿಸುವುದು ಮುಖ್ಯ. ಜಾನಪದ ಎಲ್ಲರನ್ನು ಒಗ್ಗೂಡಿಸುವ ಕೆಲಸ ಮಾಡಿದರೆ, ‍ವಿಜ್ಞಾನ ವ್ಯಕ್ತಿ ವ್ಯಕ್ತಿಗಳನ್ನು ಒಡೆಯುತ್ತದೆ. ಇವತ್ತಿನ ಜಾಗತಿಕ ವಾತಾವರಣದಲ್ಲಿ ನೆಮ್ಮದಿ, ಭಾತೃತ್ವ ಸೃಷ್ಟಿಸುವ ಜಾನಪದದ ಅವಶ್ಯಕತೆ ಇದೆ. ಸೃಜಲ ಶೀಲತೆಯನ್ನು ಟಿವಿ ಮಾಧ್ಯಮಗಳಿಗೆ ಬಿಟ್ಟುಕೊಂಡು ಖಾಲಿ ಆಗುತ್ತಿದ್ದೇವೆ. ಆ ಖಾಲಿತನ ತುಂಬಿಸಿಕೊಳ್ಳಲು ಜಾನಪದ ಮಾತ್ರ ಆಶ್ರಯವಾಗಿ ಉಳಿದಿದೆ. ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿ ಎಲ್ಲವನ್ನೂ ಜಾನಪದ ಒಳಗೊಂಡಿದೆ. ಮನುಷ್ಯರನ್ನು ಒಂದುಗೂಡಿಸುವ ಕೆಲಸ ಮಾಡಲು ಜಾನಪದ ಸಂಸ್ಕೃತಿ ಪರ್ಯಾಯವಾಗಿದೆ. ಅದಕ್ಕೆ ಬೇಕಾದ ವೇದಿಕೆಯನ್ನು ನಾಗೇಗೌಡರು ಹಾಕಿ ಕೊಟ್ಟಿದ್ದಾರೆ. ಸಂಭ್ರಮದ ಜಾನಪದವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಹೇಳಿದರು.

ಗುರುಗಳ ಸ್ಥಾನದಲ್ಲಿದ್ದ ಕಲಾವಿದರು ಇಂದು ಬೇರೆಯವರ ಹಂಗಿಗೆ ಒಳಗಾಗಿದ್ದಾರೆ. ಆ ದಿನಗಳಲ್ಲಿಯೇ ನಾಗೇಗೌಡರು ಗುರುಗಳನ್ನು ಗುರುತಿಸಿ ಮುನ್ನಲೆಗೆ ತರುವ ಕೆಲಸ ಮಾಡಿದರು. ಜಾನಪದ ಕಲೆ , ಕಲಾವಿದರನ್ನು ಉಳಿಸಿ ಬೆಳೆಸಲು ಜಾನಪದ ಸಂಸ್ಥೆ ಕಟ್ಟಿದರು. ಗೌಡರು ಕಟ್ಟುವ ಕ್ರಿಯೆ ಮತ್ತು ಸೃಜನ ಶೀಲತೆಯನ್ನು ಬಿಟ್ಟು ಹೋಗಿದ್ದಾರೆ ಎಂದು ಬಣ್ಣಿಸಿದರು.

ಪದ್ಮಶ್ರೀ ಪುರಸ್ಕೃತ ಸೋಮಣ್ಣ, ಜಿಲ್ಲಾಧಿಕಾರಿ ಅವಿನಾಶ್, ಪರಿಷತ್ತಿನ ಟ್ರಸ್ಟಿ ಆದಿತ್ಯ ನಂಜರಾಜ, ಕಾರ್ಯಾಧ್ಯಕ್ಷ ಪ್ರೊ.ಹಿ.ಚಿ.ಬೋರಲಿಂಗಯ್ಯ, ಚುಂಚನಗಿರಿ ಶಾಖಾ ಮಠಾಧೀಶ ಶ್ರೀ ಅನ್ನದಾನೇಶ್ವರನಾಥ ಸ್ವಾಮೀಜಿ ಉಪಸ್ಥಿತರಿದ್ದರು.

ಕೋಟ್ ............

ನಿಜವಾದ ಗುರುಗಳನ್ನು ಕಂಡುಕೊಳ್ಳಲು ಒಡಕು ಮೂಡಿಸುವ ಶಿಕ್ಷಣದಿಂದ ಸಾಧ್ಯವಿಲ್ಲ. ಅದೇನಿದ್ದರು ಒಂದು ಗೂಡಿಸುವ ಶಿಕ್ಷಣದಿಂದ ಮಾತ್ರ ಸಾಧ್ಯ. ಈಗಿನ ಪಠ್ಯ ಶಿಕ್ಷಣ ಉದ್ಯೋಗಕ್ಕೆ ಸೀಮಿತವಾಗಿದೆ. ಇದರಿಂದ ನಮ್ಮ ಮಕ್ಕಳು ದೊಡ್ಡ ಕೂಲಿಗಳು ಆಗುತ್ತಾರೆ. ಇಲ್ಲವೆ, ಉನ್ನತ ಹುದ್ದೆ ಅಲಂಕರಿಸಬಹುದು. ದೇಶ ಕಟ್ಟುವ ವಿಚಾರ ಬಂದಾಗ ಈ ಪಠ್ಯದ ಶಿಕ್ಷಣ ಅನುಕೂಲಕ್ಕೆ ಬರಲ್ಲ. ಅದಕ್ಕೆ ಜೀವನ ಶಿಕ್ಷಣ ಅಗತ್ಯ‌.

-ಪ್ರೊ.ಹಿ.ಶಿ.ರಾಮಚಂದ್ರೇಗೌಡ, ಅಧ್ಯಕ್ಷರು, ಕರ್ನಾಟಕ ಜಾನಪದ ಪರಿಷತ್ತುಕೋಟ್ ..............

ಮನುಷ್ಯ ಸ್ವತಂತ್ರವಾಗಿ ಜೀವಿಸುವುದನ್ನು ಕಲಿಯಬೇಕು. ಯಾರು ತಮ್ಮ ಜೀವನ ತಾವು ಮಾಡಿಕೊಂಡರೆ ವಿಧಾನಸೌಧದ ಅಗತ್ಯವೇ ಇರುವುದಿಲ್ಲ. ರಾಜಕೀಯ ಮಾಡಲು, ಶಿಫಾರಸ್ಸು ಮಾಡಲು ವಿದಾನಸೌಧಕ್ಕೆ ಹೋಗಬೇಕಾಗುತ್ತದೆ. ಶಾಸಕರು, ಸಂಸದರ ಪಕ್ಕ ನಿಂತರೆ ಕಿರೀಟ ಬರುತ್ತದೆ, ಮುಖ್ಯಮಂತ್ರಿಗಳು ಬೆನ್ನು ಉಜ್ಜಿದರೆ ಏನೊ ಸಿಗುತ್ತದೆ ಎಂಬ ಭಾವನೆ ಇದ್ದರೆ ಅದು ಲಾಭಕ್ಕಿಂತ ನಷ್ಟವೇ ಹೆಚ್ಚು ಎಂಬುದು ಜನರಿಗೆ ಗೊತ್ತಿಲ್ಲ.

- ವಿಠ್ಠಲ ಮೂರ್ತಿ, ನಿವೃತ್ತ ಐಎಎಸ್ ಅಧಿಕಾರಿ

10ಕೆಆರ್ ಎಂಎನ್ 1.ಜೆಪಿಜಿ

ರಾಮನಗರದ ಜಾನಪದ ಲೋಕದಲ್ಲಿ ಸುವರ್ಣ ಕರ್ನಾಟಕ ಜಾನಪದ ಲೋಕೋತ್ಸವ -2024ಕ್ಕೆ ನಿವೃತ್ತ ಐಎಎಸ್ ಅಧಿಕಾರಿ ವಿಠ್ಠಲ ಮೂರ್ತಿ ರಾಗಿ ಕಲ್ಲು ಬೀಸುವ ಮೂಲಕ ಚಾಲನೆ ನೀಡಿದರು.