ಕೃಷಿ ಸ್ವಾವಲಂಬನೆಗೆ ವಿಜ್ಞಾನ, ತಂತ್ರಜ್ಞಾನ ಹೆಚ್ಚು ಬಳಕೆಯಾಗಲಿ

| Published : Jun 28 2024, 12:46 AM IST

ಕೃಷಿ ಸ್ವಾವಲಂಬನೆಗೆ ವಿಜ್ಞಾನ, ತಂತ್ರಜ್ಞಾನ ಹೆಚ್ಚು ಬಳಕೆಯಾಗಲಿ
Share this Article
  • FB
  • TW
  • Linkdin
  • Email

ಸಾರಾಂಶ

ಪದವೀಧರರು ಸರ್ಕಾರಿ ಕೆಲಸ ಬಯಸದೇ ಸ್ವಯಂ ಉದ್ಯೋಗಿಯಾಗಿ ಇತರರಿಗೆ ಉದ್ಯೋಗ ನೀಡಬೇಕು. ಪದವಿ ಪಡೆದ ನಂತರ ಪ್ರಮಾಣ ಪತ್ರ ಹಿಡಿದು ಅಲ್ಲಿಲ್ಲಿ ಕೆಲಸಕ್ಕಾಗಿ ಅಲೆಯುವುದನ್ನು ಬಿಟ್ಟು ನಿಮ್ಮಲ್ಲಿಯ ತಾಂತ್ರಿಕ ಜ್ಞಾನ ಉಪಯೋಗಿಸಿ ಕೃಷಿ ಅಭಿವೃದ್ಧಿಪಡಿಸಬೇಕು.

ಧಾರವಾಡ:

ಭಾರತವು ಕೃಷಿ ಕ್ಷೇತ್ರದಲ್ಲಿ ಅಕ್ಕಿ ಮತ್ತು ಗೋದಿ ಬೆಳೆಯ ಪ್ರಮುಖ ಉತ್ಪಾದಕನಾಗಿ ಸ್ವಾವಲಂಬನೆ ಸಾಧಿಸಿ ಗಮನಾರ್ಹ ಪ್ರಗತಿ ಸಾಧಿಸಿದರೂ, ಪ್ರಮುಖ ಸಮಸ್ಯೆಗಳು ಇನ್ನೂ ಕೃಷಿ ಕ್ಷೇತ್ರವನ್ನು ಕಾಡುತ್ತಿವೆ. ಇವುಗಳ ಪರಿಹಾರಕ್ಕಾಗಿ ವಿಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನದ ಹೆಚ್ಚಿನ ಬಳಕೆ ಅಗತ್ಯವಾಗಿದೆ. ಕೃಷಿ ವಿಜ್ಞಾನಿಗಳು ಇವುಗಳತ್ತ ಗಮನ ಹರಿಸಬೇಕೆಂದು ನವದೆಹಲಿಯ ಕೃಷಿ ವಿಜ್ಞಾನಿಗಳ ನೇಮಕಾತಿ ಮಂಡಳಿ ಅಧ್ಯಕ್ಷ ಡಾ. ಸಂಜಯ ಕುಮಾರ ಸಲಹೆ ನೀಡಿದರು.

ಇಲ್ಲಿಯ ಕೃಷಿ ವಿಶ್ವವಿದ್ಯಾಲಯದಲ್ಲಿ ಗುರುವಾರ 37ನೇ ಘಟಿಕೋತ್ಸವ ಭಾಷಣ ಮಾಡಿದರು.

ಭಾರತ ಕೆಲವು ಮಸಾಲೆ ಪದಾರ್ಥಗಳ, ಔಷಧೀಯ ಸಸ್ಯಗಳ, ಪ್ರಮುಖ ತೈಲಗಳ ಮತ್ತು ಅಲಂಕಾರಿಕ ಪುಷ್ಪಗಳ ಕೊರತೆ ಅನುಭವಿಸುತ್ತಿದ್ದು ಅವುಗಳನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿದೆ. ತರಕಾರಿ ಮತ್ತು ಪುಷ್ಪ ಬೀಜಗಳಿಗೂ ಕೂಡಾ ವಿದೇಶಗಳನ್ನು ಅವಲಂಬಿಸಿದೆ. ಬೇಳೆಕಾಳುಗಳ ಉತ್ಪಾದನೆಯಲ್ಲಿ ಜಗತ್ತಿನಲ್ಲಿಯೇ ಅತಿ ದೊಡ್ಡ ಉತ್ಪಾದಕ ಎನಿಸಿರುವ ಭಾರತ ಅವುಗಳನ್ನು ಕೂಡಾ ಪರದೇಶಗಳಿಂದ ಆಮದು ಮಾಡಿಕೊಳ್ಳುವ ಪರಿಸ್ಥಿತಿ ಇದೆ. 2050ರಲ್ಲಿ ಭಾರತದ ಜನಸಂಖ್ಯೆ 170 ಕೋಟಿ ತಲುಪುವ ನಿರೀಕ್ಷೆ ಇದ್ದು, ಕೃಷಿ ಉತ್ಪನ್ನಗಳ ಬೇಡಿಕೆಯಲ್ಲಿ ಶೇ.70ರಷ್ಟು ಹೆಚ್ಚಳ ಉಂಟಾಗುವ ಸಂಭವ ಇದೆ ಎಂದರು.

ಈ ಎಲ್ಲ ಸಮಸ್ಯೆಗಳ ಪರಿಹಾರಕ್ಕಾಗಿ ಬಹುಪ್ರಕಾರಗಳ ಉಪಾಯ ಅಗತ್ಯವಿದೆ. ಸದ್ಯ ಆಮದು ಮಾಡಿಕೊಳ್ಳುತ್ತಿರುವ ಕೃಷಿ ಪದಾರ್ಥಗಳ ಉತ್ಪನ್ನವನ್ನು ದೇಶದಲ್ಲಿಯೇ ಹೆಚ್ಚಿಸಲು ಕ್ರಮಕೈಗೊಳ್ಳಬೇಕು. ಇದಕ್ಕಾಗಿ ಸಂಶೋಧನೆ ಮತ್ತು ಅಭಿವೃದ್ಧಿ ಕೆಲಸ ತೀವ್ರವಾಗಬೇಕು. ತಂತ್ರಜ್ಞಾನದ ಹೊರತಾಗಿಯೂ ಕೆಲವು ಕ್ರಮಗಳನ್ನು ಜಾರಿಗೊಳಿಸವುದು ಅಗತ್ಯ ಎಂದ ಡಾ. ಸಂಜಯಕುಮಾರ, ಭೂ ವಿಭಜನೆ ತಡೆಯುವುದು, ಕೀಟಗಳ ಬಾಧೆ ನಿವಾರಣೆ, ಹವಾಮಾನ ವೈಪರೀತ್ಯ ನಿರ್ವಹಣೆ, ಜಲ ಮತ್ತು ನೆಲ ನಿರ್ವಹಣೆ ಇವುಗಳ ಬಗ್ಗೆ ಲಕ್ಷ್ಯ ವಹಿಸಬೇಕು ಎಂಬ ಸಲಹೆ ನೀಡಿದರು.

ಸರ್ಕಾರಿ ನೌಕರಿ ನೆಚ್ಚಬೇಡಿ:

ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಮಾತನಾಡಿ, ಪದವೀಧರರು ಸರ್ಕಾರಿ ಕೆಲಸ ಬಯಸದೇ ಸ್ವಯಂ ಉದ್ಯೋಗಿಯಾಗಿ ಇತರರಿಗೆ ಉದ್ಯೋಗ ನೀಡಬೇಕು. ಪದವಿ ಪಡೆದ ನಂತರ ಪ್ರಮಾಣ ಪತ್ರ ಹಿಡಿದು ಅಲ್ಲಿಲ್ಲಿ ಕೆಲಸಕ್ಕಾಗಿ ಅಲೆಯುವುದನ್ನು ಬಿಟ್ಟು ನಿಮ್ಮಲ್ಲಿಯ ತಾಂತ್ರಿಕ ಜ್ಞಾನ ಉಪಯೋಗಿಸಿ ಕೃಷಿ ಅಭಿವೃದ್ಧಿಪಡಿಸಲು ಕರೆ ನೀಡಿದರು. ರಾಜ್ಯ ಸರ್ಕಾರ ಸದ್ಯ ಕೃಷಿ ಕ್ಷೇತ್ರದಲ್ಲಿ ತರುತ್ತಿರುವ ಹೊಸ ಬದಲಾವಣೆಗಳನ್ನು ಸಚಿವರು ತಿಳಿಸಿದರು.

ಕಡಿಮೆ ಭೂಮಿ, ಉತ್ಪಾದನೆ ಹೆಚ್ಚಲಿ:

ಕೃಷಿ ಪದವಿಗಳಲ್ಲಿ ಚಿನ್ನದ ಪದಕ ಪಡೆದ ವಿದ್ಯಾರ್ಥಿಗಳು ಹಾಗೂ ಪಿಎಚ್‌.ಡಿ ಅಭ್ಯರ್ಥಿಗಳಿಗೆ ಪದವಿ ಪ್ರದಾನ ಮಾಡಿದ ರಾಜ್ಯಪಾಲ ಥಾವರ್‌ಚಂದ ಗೆಹಲೋತ್‌, ಭಾರತದಲ್ಲಿ ಜನಸಂಖ್ಯೆ ಹೆಚ್ಚಿದಂತೆ ಕೃಷಿಗೆ ಒಳಪಡುವ ಸಾಗುವಳಿ ಭೂಮಿ ಪ್ರಮಾಣ ಕಡಿಮೆಯಾಗುತ್ತಿದೆ. ಜನಸಂಖ್ಯೆ ಹೆಚ್ಚಳದಿಂದ ಕೃಷಿ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಇಂತಹ ಸಂದರ್ಭದಲ್ಲಿ ಕಡಿಮೆ ಭೂಮಿಯಲ್ಲಿ ಹೆಚ್ಚು ಉತ್ಪಾದನೆ ಮಾಡುವ ಸವಾಲು ರೈತರ ಮುಂದಿದೆ. ಇದಕ್ಕೆ ಪರಿಹಾರವೆಂದರೆ ಜಾಣತನದಿಂದ ಮಣ್ಣು ಹಾಗೂ ನೀರಿನ ನಿರ್ವಹಣೆ ಮಾಡಿ ಸಾಗುವಳಿ ಮಾಡಬೇಕು. ಅತಿಯಾದ ರಾಸಾನಿಯಕನಿಂದ ಈಗಾಗಲೇ ಮಣ್ಣು ಗುಣಮಟ್ಟ ಕಳೆದುಕೊಂಡಿದ್ದು, ಜೈವಿಕ ಸಾಗುವಳಿ ಈ ಸಮಸ್ಯೆಗೆ ಪ್ರಮುಖ ಪರಿಹಾರ. ಈಗಾಗಲೇ ಮಧ್ಯ ಪ್ರದೇಶದಲ್ಲಿ ಈ ಪ್ರಯೋಗ ಯಶಸ್ವಿಯಾಗಿದ್ದು ರೈತರು ಕಡಿಮೆ ಖರ್ಚಿನಲ್ಲಿ ಹೆಚ್ಚು ಉತ್ಪನ್ನ ತೆಗೆಯುವಲ್ಲಿ ಸಫಲರಾಗಿದ್ದಾರೆ. ಈ ನಿಟ್ಟಿನಲ್ಲಿ ದೇಶದ ರೈತರು ಚಿಂತನೆ ಮಾಡಬೇಕು ಎಂದು ಕರೆ ನೀಡಿದರು.

ಕೃಷಿ ವಿವಿ ಕುಲಪತಿ ಡಾ. ಪಿ.ಎಲ್‌. ಪಾಟೀಲ ಕೃಷಿ ವಿವಿ ಕಾರ್ಯಚಟುವಟಿಕೆಗಳ ಕುರಿತು ಮಾತನಾಡಿದರು. ಇಸ್ರೋ ಅಧ್ಯಕ್ಷ ಡಾ. ಎಸ್‌. ಸೋಮನಾಥ ಅವರ ಅನುಪಸ್ಥಿತಿಯಲ್ಲಿ ಗೌರವ ಡಾಕ್ಟರೇಟ್‌ ಪ್ರದಾನ ಮಾಡಲಾಯಿತು.37ನೇ ಘಟಿಕೋತ್ಸವದಲ್ಲಿ ವಿವಿಧ ಸ್ನಾತಕ ವಿಷಯಗಳಲ್ಲಿ ಕೃಷಿ 420, ಕೃಷಿ ಮಾರುಕಟ್ಟೆ ಮತ್ತು ಸಹಕಾರ 69, ಅರಣ್ಯ 67, ಸಮುದಾಯ ವಿಜ್ಞಾನ ೪೨, ಬಿ.ಟೆಕ್ (ಆಹಾರ ತಾಂತ್ರಿಕತೆ)-29 ಹೀಗೆ ಒಟ್ಟು 627 (499 ಹಾಜರಾತಿ ಹಾಗೂ 128 ಗೈರು ಹಾಜರಾತಿ) ಅಭ್ಯರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ವಿವಿಧ ವಿಷಯಗಳಲ್ಲಿ ಒಟ್ಟು 67 ಪಿಎಚ್‌ಡಿ ಪದವಿ ಸಹ ಪ್ರದಾನ ಮಾಡಲಾಯಿತು. ಸ್ನಾತಕೋತ್ತರ ಪದವಿಗಳನ್ನು ಕೃಷಿಯಲ್ಲಿ 186, ಅರಣ್ಯ 25, ಸಮುದಾಯ ವಿಜ್ಞಾನ 18 ಮತ್ತು ಎಂಬಿಎ (ಕೃಷಿ ವ್ಯವಹಾರ ಹಾಗೂ ನಿರ್ವಹಣೆ)–ಎಂಟು ಹೀಗೆ ಒಟ್ಟು 306 ಅಭ್ಯರ್ಥಿಗಳಿಗೆ ಸ್ನಾತಕೋತ್ತರ ಪದವಿ ಪ್ರದಾನ ಮಾಡಲಾಯಿತು. ಇದರೊಂದಿಗೆ ವಿವಿಧ ವಿಷಯಗಳಲ್ಲಿ ಡಾಕ್ಟರ್ ಆಫ್ ಫಿಲಾಸಫಿ ಪದವಿಯನ್ನು 69 ಅಭ್ಯರ್ಥಿಗಳಿಗೆ ನೀಡಲಾಯಿತು. ಇದಲ್ಲದೇ, 46 ಕೃಷಿ ವಿಶ್ವವಿದ್ಯಾಲಯ ಚಿನ್ನದ ಪದಕಗಳು, ಹತ್ತು ಇತರೆ ಚಿನ್ನದ ಪದಕಗಳು ಹಾಗೂ 9 ನಗದು ಬಹುಮಾನಗಳನ್ನು ಪ್ರತಿಭಾನ್ವಿತ ಅರ್ಹ ಅಭ್ಯರ್ಥಿಗಳಿಗೆ ರಾಜ್ಯಪಾಲಕರು ಪ್ರದಾನ ಮಾಡಿದರು. ಕೃಷಿ ಬಿಎಸ್ಸಿಯಲ್ಲಿ ಹುಬ್ಬಳ್ಳಿ ಮೂಲದ ಶ್ರಿಯಾ ಕುರಿ ಎಂಬುವರು ಅತೀ ಹೆಚ್ಚು ಮೂರು ಚಿನ್ನದ ಪದಕ ಪಡೆದು ಚಿನ್ನದ ಹುಡುಗಿಯಾಗಿ ಹೊರಹೊಮ್ಮಿದರು. ಸಂಶೋಧನೆಯಲ್ಲಿ ಆಸಕ್ತಿ

ಕೃಷಿ ವಿವಿ 37ನೇ ಘಟಿಕೋತ್ಸವದಲ್ಲಿ ಮೂರು ಚಿನ್ನದ ಪದಕ ಪಡೆದ ಹುಬ್ಬಳ್ಳಿ ಮೂಲದ ಶ್ರಿಯಾ ಕರಿ ಕೃಷಿ ಸಂಶೋಧನೆಯಲ್ಲಿ ಸಾಧನೆ ಮಾಡುವ ಆಶಯ ವ್ಯಕ್ತಪಡಿಸಿದ್ದಾರೆ. ಸದ್ಯ ಹರಿಯಾಣಾದಲ್ಲಿ ಅರ್ಥಶಾಸ್ತ್ರ ವಿಷಯದಲ್ಲಿ ಎಂಎಸ್ಸಿ ಮಾಡುತ್ತಿದ್ದು, ಕೃಷಿ ಅರ್ಥಶಾಸ್ತ್ರ ಸಂಶೋಧನೆಯಲ್ಲಿ ಕಾರ್ಯ ಮಾಡಿ ರೈತರು ಆರ್ಥಿಕವಾಗಿ ಸಬಲರಾಗಲು ಸಹಕಾರಿಯಾಗುವೆ.