ಸಿದ್ದರಾಮಯ್ಯ ಬಹಿರಂಗ ಕ್ಷಮೆ ಕೇಳಲಿ: ಜೋಶಿ

| Published : Jan 07 2024, 01:30 AM IST

ಸಾರಾಂಶ

ಮಾಧ್ಯಮಗಳೊಂದಿಗೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು, ಶ್ರೀಕಾಂತ್ ಪೂಜಾರಿ ಮೇಲೆ 16 ಕೇಸ್ ಇವೆ ಎಂದು ಯಾವ ಆಧಾರದ ಮೇಲೆ ಹೇಳಿದೀರಿ ಎಂದು ಸಿಎಂಗೆ ಪ್ರಶಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ನಿಮ್ಮದೇನು ಸರ್ವಾಧಿಕಾರ ಏನ್ರೀ‌..? ಶ್ರೀಕಾಂತ ಪೂಜಾರಿ ಮೇಲೆ 16 ಕೇಸ್‌ ಇವೆ ಅಂತ ಯಾವ ಆಧಾರದ ಮೇಲೆ ಹೇಳಿದ್ರಿ.. ಅವರ ಮೇಲೆ ಯಾವ ಕೇಸ್‌ ಇಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶ್ರೀಕಾಂತ್ ಪೂಜಾರಿ ಮೇಲೆ 16 ಕೇಸ್ ಇವೆ ಎಂದು ಯಾವ ಆಧಾರದ ಮೇಲೆ ಹೇಳಿದೀರಿ? ನಿಮ್ಮದು ಸರ್ಕಾರ ಏನ್ರಿ ಸಿದ್ದರಾಮಯ್ಯ ಅವರೇ ಎಂದು ಖಾರವಾಗಿ ಪ್ರಶ್ನಿಸಿದರು.

ನನಗೆ ಕಾನೂನು ಜ್ಞಾನ ಇಲ್ವಾ ಎಂದು ಪ್ರಶ್ನಿಸುತ್ತೀರಿ. ಆದರೆ ನಿಮಗೆ ಕಾನೂನಿನ ಜ್ಞಾನ ಇಲ್ವಾ? ಶ್ರೀಕಾಂತ ಮೇಲೆ ಯಾವ ಕೇಸ್‌ ಇಲ್ಲ. ನಿಮಗೆ ಕಾನೂನು ತಜ್ಞರು ಇದ್ದಾರೋ ಇಲ್ವಾ? ಕೇಸ್‌ ಇವೆಯೋ ಇಲ್ವೋ? ಕೇಸ್‌ಗಳಿದ್ದರೂ ಅವು ಈಗ ಏನಾಗಿವೆ ಎಂಬುದನ್ನು ಪರಿಶೀಲಿಸಿದ ನಂತರವೇ ಹೇಳಿಕೆ ಕೊಡಬೇಕಲ್ವೇ? ಎಂದು ಪ್ರಶ್ನಿಸಿದರು. ಶ್ರೀಕಾಂತ ಪೂಜಾರಿಯನ್ನು ಕ್ರಿಮಿನಲ್‌ ಎಂದಿದ್ದೀರಿ. ಇದೀಗ ಅವರ ಮೇಲೆ ಕೇಸ್‌ಗಳಿಲ್ಲ. ಹೀಗಾಗಿ, ಬಹಿರಂಗವಾಗಿ ಕ್ಷಮೆ ಕೇಳಿ ಎಂದು ಆಗ್ರಹಿಸಿದರು.

22ರಂದು ರಾಮಮಂದಿರದ ಉದ್ಘಾಟನೆಗೆ ಯಾರೂ ಬರಬಾರದು ಎಂಬ ದೃಷ್ಟಿಯಿಂದ ರಾಮನ ಭಕ್ತರನ್ನು ಬಂಧಿಸಿತ್ತು. ಬೇರೆ ಯಾರನ್ನಾದರೂ ಅರೆಸ್ಟ್‌ ಮಾಡಿದರೆ ನಾವು ಹೋರಾಟ ಮಾಡುತ್ತೇವೆ ಎಂದು ಹೇಳಿದ್ದೇವು.

ಒಂದು ಕೋಮಿನ ಮತಕ್ಕಾಗಿ ಈ ರೀತಿ ಮಾಡುತ್ತಿದ್ದಾರೆ. ರಾಮಮಂದಿರದ ಸಂಭ್ರಮದಿಂದ ಜನರು ದೂರ ಉಳಿಯಬೇಕೆಂದು ಭಯ ಹುಟ್ಟಿಸುವ ಕೆಲಸ ಮಾಡುತ್ತಿದ್ದಾರೆ. ನಾವು ರಾಜಕೀಯ ಲಾಭಕ್ಕಾಗಿ ಮಾಡುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ. ಆದರೆ, ಶ್ರೀಕಾಂತ ಪೂಜಾರಿಯನ್ನು ಬಂಧಿಸಿರುವುದು ರಾಜ್ಯದ ಹಿತಕ್ಕಾಗಿಯೇ? ರಾಜಕಾರಣ ಮಾಡುತ್ತಿರುವುದು ಕಾಂಗ್ರೆಸ್‌ ಎಂದು ಹರಿಹಾಯ್ದರು.

ಸಿದ್ದರಾಮಯ್ಯ ಹಾಗೂ ಯತೀಂದ್ರ ತುಷ್ಟೀಕರಣ ರಾಜಕಾರಣ ಮಾಡುತ್ತಿದ್ದಾರೆ. ದೇಶದಲ್ಲಿ ಹಿಂದೂಗಳ ಬಹುಸಂಖ್ಯಾತರಿದ್ದಾರೆ. ಇದೇ ಪರಿಸ್ಥಿತಿ ಮುಂದುವರಿದರೆ ದೇಶದಲ್ಲಿ ಅಧಿಕೃತವಾಗಿ ಕಾಂಗ್ರೆಸ್‌ ವಿರೋಧ ಪಕ್ಷವಾಗಿಯೂ ಇರಲ್ಲ ಎಂದರು.

ಕರ ಸೇವಕರ ಬಂಧನ ಪ್ರಕರಣ, ಹೋರಾಟದ ಹಿಂದೆ ತಮ್ಮ ಕೈವಾಡವಿದೆ ಎಂದು ಆರೋಪಿಸಿದ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಹೇಳಿಕೆಗೆ, ಇಂತಹ ಕ್ಷುಲ್ಲಕ ಹೇಳಿಕೆಗಳಿಗೆ ನಾನು ಉತ್ತರ ಕೊಡಲ್ಲ ಎಂದರು.

ರಾಮಮಂದಿರ ಆಗುತ್ತಿದೆ ಎಂಬ ಹೊಟ್ಟೆ ಕಿಚ್ಚಿನಿಂದ ಹುಚ್ಚು ಹುಚ್ಚಾಗಿ ಯಾರನ್ನೋ ಅರೆಸ್ಟ್‌ ಮಾಡಿದ್ದಾರೆ. ಇನ್ನು ಹಲವರನ್ನು ಅರೆಸ್ಟ್‌ ಮಾಡಲು ಮುಂದಾಗಿದ್ದರು. ಆದರೆ, ಏನೋ ಮಾಡಲು ಹೋಗಿ ಕಾಂಗ್ರೆಸ್‌ ಕೈ ಸುಟ್ಟುಕೊಂಡಿದೆ ಎಂದರು.

ಶ್ರೀಕಾಂತ್‌ ಪೂಜಾರಿಗೆ ಈಗ ಜಾಮೀನಾಗಿದೆ. ಹೀಗಾಗಿ, ಮುಂದೆ ಹೋರಾಟ ಮಾಡಬೇಕಾ? ಅಥವಾ ಬಿಡಬೇಕಾ ಎಂಬುದನ್ನು ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದರು.

ಬಾಂಬ್‌ ಬೆದರಿಕೆ ಖಂಡನೀಯ:

ಮ್ಯೂಸಿಯಂಗಳಿಗೆ ಬಾಂಬ್ ಬೆದರಿಕೆ ಹಾಕಿರುವುದು ಖಂಡನೀಯ. ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಬಗ್ಗೆ ಸಮಗ್ರ ತನಿಖೆ ಮಾಡಬೇಕು. ಮೇಲ್ ಹಾಕಿದವರು ಯಾವ ಜಾತಿಯವರು ಅಂತ ನೋಡಬಾರದು. ಯಾರೇ ಮಾಡಿದರೂ ಕಠಿಣ ಕ್ರಮ ಕೈಗೊಳ್ಳಬೇಕು ಎಂದರು.