ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಮುಡಾ ಅಕ್ರಮ ನಿವೇಶನ ಸಂಬಂಧ ನಿಸ್ಪಕ್ಷಪಾತ ತನಿಖೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲೇಬೇಕು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ಮಾಜಿ ಸಚಿವ ಎನ್. ಮಹೇಶ್ ಆಗ್ರಹಿಸಿದರು.ನಗರದ ಬಿಜೆಪಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಡಾ ನಿವೇಶನ ಹಂಚಿಕೆಯಲ್ಲಿ ನಡೆದಿರುವ ಹಗರಣ ಸಂಬಂಧ 14 ನಿವೇಶನಗಳ ಬಗ್ಗೆ ಬಿಜೆಪಿ 3 ತಿಂಗಳ ಹಿಂದೆ ಪ್ರಶ್ನಿಸಿದ್ದಕ್ಕೆ 62 ಕೋಟಿ ನೀಡಿ ವಾಪಾಸ್ ಕೊಡುತ್ತೇವೆ ಎಂದು ಮುಖ್ಯಮಂತ್ರಿ ಹೇಳಿದ್ದರು ಎಂದರು.
ಆದರೆ, ಲೋಕಾಯುಕ್ತ ತನಿಖೆ ಬಿರುಸುಗೊಂಡಿರುವ ಜೊತೆಗೆ ಇಡಿಯಲ್ಲಿ ಪ್ರಕರಣ ದಾಖಲಾಗಿದೆ. ಈ ಎಲ್ಲಾ ಬೆಳವಣಿಗೆಯಿಂದ ತಮಗೆ ಕಾನೂನು ಸಂಕಷ್ಟು ಬಿಗಿಯಾಗುವುದನ್ನು ಅರಿತು, ಮುಡಾಗೆ 14 ನಿವೇಶನಗಳನ್ನು ಹಿಂತಿರುಗಿಸಿದ್ದೀರಿ. ನಿವೇಶನ ವಾಪಾಸ್ ಪಡೆಯುವ ಬಗ್ಗೆ ಸಿಎಂ ಪತ್ನಿ ಪಾರ್ವತಿ ಅವರು ಮುಡಾಗೆ ಪತ್ರ ಬರೆದ 24 ಗಂಟೆಯಲ್ಲಿ ನಿವೇಶನಗಳನ್ನು ರದ್ದು ಪಡಿಸಲಾಗಿದೆ. ಇದರಲ್ಲಿ ಕನಿಷ್ಠ ಕಾನೂನು ನಿಯಮ ಪಾಲನೆಯಾಗಿಲ್ಲ ಎಂದು ಅವರು ಆರೋಪಿಸಿದರು.ಸಿದ್ದರಾಮಯ್ಯ ಅವರು ಯಾವುದೇ ಪ್ರಭಾವ ಬೀರದಿದ್ದರೂ ಅವರ ಸ್ಥಾನ ಮತ್ತು ಅಧಿಕಾರದಿಂದ ಎಲ್ಲವೂ ನಡೆದು ಹೋಗುತ್ತದೆ. ಸಿಎಂ ಪತ್ನಿ ನಿವೇಶನಗಳನ್ನು ವಾಪಾಸ್ ನೀಡುವುದಾಗಿ ಹೇಳಿದಾಕ್ಷಣ ತುರ್ತಾಗಿ ಅಧಿಕಾರಿಗಳು ಪಡೆದಿದ್ದೇಕೆ. ಪ್ರಕರಣ ತನಿಖೆಯಲ್ಲಿರುವಾಗ ಹೀಗೆ ಪಡೆಯಲು ಸಾಧ್ಯವಾ? ಸಿದ್ದರಾಮಯ್ಯ ಅವರು ಎಲ್ಲಿಯವರೆಗೆ ಸಿಎಂ ಆಗಿ ಇರುತ್ತಾರೋ ಅಲ್ಲಿಯವರೆಗೆ ನಿಸ್ಪಕ್ಷಪಾತ ತನಿಖೆ ಸಾಧ್ಯವಿಲ್ಲ ಎಂದು ಅವರು ದೂರಿದರು.
ಸಿದ್ದರಾಮಯ್ಯ ಆತ್ಮಸಾಕ್ಷಿಗೆ ಅನುಗುಣವಾಗಿ ಸೈಟ್ ವಾಪಸ್ ಕೊಟ್ಟಿದ್ದೇವೆ ಅಂತಿದ್ದಾರೆ. ಆತ್ಮಸಾಕ್ಷಿಯನ್ನು ವಿಚಾರಣೆ ಮಾಡಲು ಕಾನೂನಿನಲ್ಲಿ ಅವಕಾಶ ಇದೆಯೇ? ಆತ್ಮಸಾಕ್ಷಿಯನ್ನು ಸಾಕ್ಷ್ಯ ಅಂತ ಪರಿಗಣಿಸಲು ಸಾಧ್ಯವೇ? ಕೇಡುಗಾಲಕ್ಕೆ ಒಂದೇ ದಿನದಲ್ಲಿ ಮುಡಾ ಅಧಿಕಾರಿಗಳು ಸೈಟ್ ವಾಪಸ್ ಪಡೆದಿದ್ದಾರೆ. ತಪ್ಪು ಮಾಡಿಲ್ಲ ಎಂದ ಮೇಲೆ ಸೈಟ್ ಯಾಕೆ ವಾಪಸ್ ನೀಡಿದಿರಿ ಎಂದು ಅವರು ಪ್ರಶ್ನಿಸಿದರು.ನಿಮ್ಮ 40 ವರ್ಷಗಳ ನಿಷ್ಕಳಂಕ ರಾಜಕಾರಣದಲ್ಲಿ ಕಪ್ಪು ಚುಕ್ಕೆ ಎದ್ದು ಕಾಣುತ್ತಿದೆ. ಈ ಪ್ರಕರಣದಲ್ಲಿ ಸಿಬಿಐ ತನಿಖೆ ಮಾಡಬಹುದೆಂಬ ಮುಂದಾಲೋಚನೆಯಿಂದ ಸಿಬಿಐಗೆ ಇದ್ದ ಮುಕ್ತ ಅನುಮತಿಯನ್ನು ರದ್ದು ಪಡಿಸಿದ್ದೀರಿ. ಮುಂದಿನ ದಿನಗಳಲ್ಲಿ ನಿಮ್ಮ ಈ ನಿರ್ಧಾರ ಸರಿಯೇ ಎಂಬುದನ್ನು ಕಾನೂನು ಪಂಡಿತರು ತಿಳಿಸುತ್ತಾರೆ. ಸಂವಿಧಾನ, ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುವ ನೀವು ದಸರಾ ಉತ್ಸವದ ಒಳಗೆ ರಾಜೀನಾಮೆ ನೀಡಿ ತನಿಖೆಗೆ ಸಹಕರಿಸಿ. ಇದರಿಂದ ನಿಮ್ಮ ಗೌರವ ಉಳಿಯುತ್ತದೆ ಎಂದರು.
ಶಾಸಕ ಟಿ.ಎಸ್. ಶ್ರೀವತ್ಸ, ಬಿಜೆಪಿ ನಗರಾಧ್ಯಕ್ಷ ಎಲ್. ನಾಗೇಂದ್ರ, ಜಿಲ್ಲಾಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ, ಮುಖಂಡರಾದ ಪರಮಾನಂದ, ಕೇಬಲ್ ಮಹೇಶ್, ಮಹೇಶ್ ರಾಜೇ ಅರಸ್, ಕಿರಣ್, ರಾಕೇಶ್ ಇದ್ದರು.ಯತ್ನಾಳ್ ವಿರುದ್ಧ ಕ್ರಮಕ್ಕೆ ಒತ್ತಾಯ:
ಪಕ್ಷದ ನಾಯಕರ ವಿರುದ್ಧ ಹೇಳಿಕೆ ನೀಡುತ್ತಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಪಕ್ಷದ ವರಿಷ್ಠರಿಗೆ ರಾಜ್ಯ ಬಿಜೆಪಿ ಉಪಾಧ್ಯಕ್ಷ ಹಾಗೂ ಮಾಜಿ ಸಚಿವ ಎನ್. ಮಹೇಶ್ ಒತ್ತಾಯಿಸಿದರು.ಯತ್ನಾಳ್ ಅವರ ಹೇಳಿಕೆ ಪಕ್ಷದ ಸಂಘಟನಾತ್ಮಕ ಪ್ರಕ್ರಿಯೆಗೆ ಧಕ್ಕೆಯಾಗಲಿದೆ. ಯತ್ನಾಳ್ ಹೇಳಿಕೆ ವಿಚಿತ್ರ, ವಿಪರ್ಯಾಸ ಹಾಗೂ ದುರಂತದಿಂದ ಕೂಡಿದೆ. ಪಕ್ಷದ ಸದಸ್ಯತ್ವ ಅಭಿಯಾನ ನಡೆಯುವ ವೇಳೆಯಲ್ಲಿ ಯತ್ನಾಳ್ ಪದೇ ಪದೇ ಮಾತನಾಡಬಾರದು. ಏನೇ ಭಿನ್ನಾಭಿಪ್ರಾಯವಿದ್ದರೂ ಹೈಕಮಾಂಡ್ ಜೊತೆಗೆ ಮಾತನಾಡಿ ಬಗೆಹರಿಸಿಕೊಳ್ಳಲಿ ಎಂದು ತಿಳಿಸಿದರು.
ಇದೇ ರೀತಿ ಯತ್ನಾಳ್ ವರ್ತನೆ ಮುಂದುವರಿದರೆ ಪಕ್ಷದ ವರಿಷ್ಠರು ಕ್ರಮ ತೆಗೆದುಕೊಳ್ಳಬೇಕು. ಇದು ಯತ್ನಾಳ್ ರೀತಿ ವರ್ತಿಸುವ ಎಲ್ಲರಿಗೂ ಅನ್ವಯವಾಗಲಿದೆ. ನಾನು ರಾಜ್ಯದ ಉಪಾಧ್ಯಕ್ಷನಾಗಿ ಅವರ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ ವರಿಷ್ಠರಿಗೆ ಒತ್ತಾಯಿಸುತ್ತೇನೆ ಎಂದರು.