ವಿದ್ಯಾರ್ಥಿಗಳಿಗೆ ಕ್ರೀಡೆ ಜೀವನದ ಅವಿಭಾಜ್ಯ ಅಂಗವಾಗಲಿ

| Published : Sep 23 2025, 01:03 AM IST

ವಿದ್ಯಾರ್ಥಿಗಳಿಗೆ ಕ್ರೀಡೆ ಜೀವನದ ಅವಿಭಾಜ್ಯ ಅಂಗವಾಗಲಿ
Share this Article
  • FB
  • TW
  • Linkdin
  • Email

ಸಾರಾಂಶ

ವಿದ್ಯಾರ್ಥಿಗಳಿಗೆ ಕ್ರೀಡೆ ಜೀವನದ ಅವಿಭಾಜ್ಯ ಅಂಗವಾಗಬೇಕು. ಜಾಣ್ಮೆಯಿಂದಲೇ ಆಟೋಟಗಳಲ್ಲಿ ಪಾಲ್ಗೊಂಡು ಅಂದುಕೊಂಡಿರುವ ಗುರಿ ತಲುಪಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರುದ್ರಪ್ಪ ಹೇಳಿದರು.

ಚಿಕ್ಕಮಗಳೂರು: ವಿದ್ಯಾರ್ಥಿಗಳಿಗೆ ಕ್ರೀಡೆ ಜೀವನದ ಅವಿಭಾಜ್ಯ ಅಂಗವಾಗಬೇಕು. ಜಾಣ್ಮೆಯಿಂದಲೇ ಆಟೋಟಗಳಲ್ಲಿ ಪಾಲ್ಗೊಂಡು ಅಂದುಕೊಂಡಿರುವ ಗುರಿ ತಲುಪಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರುದ್ರಪ್ಪ ಹೇಳಿದರು.ತಾಲೂಕಿನ ಕೆ.ಆರ್.ಪೇಟೆ ಗ್ರಾಮದ ಎಂಇಎಸ್ ಪ್ರೌಢಶಾಲಾ ಆವರಣದಲ್ಲಿ ಸೋಮವಾರ ಜಿಲ್ಲಾಡಳಿತ, ಗ್ರಾಮ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಹಿರಿಯ ಪ್ರಾಥಮಿಕ ಶಾಲೆಯ ತಾಲೂಕುಮಟ್ಟದ ಕ್ರೀಡಾಕೂಟದಲ್ಲಿ ಅವರು ಮಾತನಾಡಿದರು.ದೈನಂದಿನ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿದರೆ ದೈಹಿಕ ಶರೀರವು ಆರೋಗ್ಯದಿಂದ ಕೂಡಿರುತ್ತದೆ. ಹೀಗಾಗಿ ಮಕ್ಕಳು ಶಾಲೆಗಳಲ್ಲಿ ನಡೆಯುವ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರತಿಭೆ ಅನಾವರಣಗೊಳಿಸಬೇಕು. ಜೊತೆಗೆ ದೈಹಿಕ ಶಿಕ್ಷಕರ ತರಬೇತಿಯಿಂದ ಉನ್ನತಿ ಹೊಂದಬೇಕು ಎಂದರು.ಅನೇಕ ಹೋಬಳಿಗಳಿಂದ ಆಯ್ಕೆಯಾದ ವಿದ್ಯಾರ್ಥಿಗಳು ತಾಕೂಕು ಮಟ್ಟದಲ್ಲಿ ಭಾಗವಹಿಸಿದ್ದಿರಿ. ಇಲ್ಲಿಂದ ಆಯ್ಕೆಯಾದ ಮಕ್ಕಳು ಜಿಲ್ಲಾಮಟ್ಟದಿಂದ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ತಮ್ಮ ಕ್ರೀಡಾ ಪ್ರತಿಭೆಯನ್ನು ಪ್ರದರ್ಶಿಸಬಹುದು. ಹಾಗಾಗಿ ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮದ ಅಗತ್ಯವಿದೆ ಎಂದು ಹೇಳಿದರು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಎಂಇಎಸ್ ಸಂಸ್ಥೆಯ ಉಪಾಧ್ಯಕ್ಷೆ ರಾಧಾ ಸುಂದ್ರೇಶ್, ಶಿಕ್ಷಣವು ಸಮಾಜದ ಅರಿವು, ತಿಳುವಳಿಕೆಯನ್ನು ಮೂಡಿಸುವ ಸಾಧನ. ಕ್ರೀಡಾಲೋಕ ಅಡಗಿರುವ ಪ್ರತಿಭೆಯನ್ನು ಹೊರಹಾಕುವ ಸಾಧನ. ಹೀಗಾಗಿ ಸೋಲು, ಗೆಲುವಿಗೆ ಬಗ್ಗೆ ತಲೆಕೆಡಿಸಿಕೊಳ್ಳದೇ ಭಾಗವಹಿಸುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು ಎಂದರು.ಎಂಇಎಸ್‌ ಗೌರವ ಕಾರ್ಯದರ್ಶಿ ಡಾ. ಡಿ.ಎಲ್.ವಿಜಯ್‌ಕುಮಾರ್ ಮಾತನಾಡಿ, ಒಲಂಪಿಕ್ಸ್‌ನ ಬೃಹತ್ ಕ್ರೀಡಾ ಜಗತ್ತಿಗೆ ಕಾಲಿಡಲು ವಲಯ ಹಾಗೂ ತಾಲೂಕುಮಟ್ಟದ ಕ್ರೀಡಾಕೂಟಗಳು ಸಹಕಾರಿ. ಹೀಗಾಗಿ ವಿದ್ಯಾರ್ಥಿಗಳು ಶ್ರದ್ಧೆ, ಪರಿಶ್ರಮದಿಂದ ಸದ್ಗುಣಗಳನ್ನು ಅಳವಡಿಸಿಕೊಂಡು ಶಿಸ್ತಿನಿಂದ ಕ್ರೀಡಾ ಕ್ಷೇತ್ರದಲ್ಲಿ ತಲ್ಲೀನರಾಗಿರಬೇಕು ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೆ.ಆರ್.ಪೇಟೆ ಗ್ರಾ.ಪಂ.ಅಧ್ಯಕ್ಷೆ ಮಮತ ರಮೇಶ್, ಗ್ರಾಮದ ವಿಶಾಲವಾದ ಆವರಣ ಹಾಗೂ ಪ್ರಕೃತಿ ಮಡಿಲಿನಲ್ಲಿ ಸ್ಪರ್ಧೆ ಆಯೋಜಿಸುತ್ತಿರುವ ಮಕ್ಕಳಿಗೆ ಉತ್ಸಾಹ, ಉಲ್ಲಾಸ ತಂದಿದ್ದು ಪ್ರತಿಯೊಬ್ಬರೂ ಶಿಸ್ತಿನಿಂದ ಆಟವಾಡಬೇಕು, ತೀರ್ಪುಗಾರರ ಆದೇಶವನ್ನು ಪಾಲಿಸಬೇಕು ಎಂದು ಸಲಹೆ ನೀಡಿದರು.ಕಾರ್ಯಕ್ರಮದಲ್ಲಿ ಎಂಇಎಸ್‌ ಅಧ್ಯಕ್ಷ ಕೇಶವಮೂರ್ತಿ, ಸಹ ಕಾರ್ಯದರ್ಶಿ ಎಸ್.ನಾರಾಯಣ ಭಟ್, ಬಿಇಒ ಕಚೇರಿ ಸಂಯೋಜಕ ಕೃಷ್ಣಮೂರ್ತಿರಾಜ್ ಅರಸ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಕಿರಣ್‌ಕುಮಾರ್, ಕಾರ್ಯದರ್ಶಿ ಪರಮೇಶ್, ತಾಲೂಕು ಅಧ್ಯಕ್ಷ ಅಜ್ಜಯ್ಯ, ಕಾರ್ಯದರ್ಶಿ ರವಿ, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಲೋಬೋ ಉಪಸ್ಥಿತರಿದ್ದರು.