ಶ್ರೀನಿವಾಸ್ ರಿಗೆ ತಾಕತ್ತಿದ್ದರೆ ನಮ್ಮ ಶಾಸಕರನ್ನು ಮುಟ್ಟಲಿ

| Published : May 25 2024, 12:51 AM IST

ಶ್ರೀನಿವಾಸ್ ರಿಗೆ ತಾಕತ್ತಿದ್ದರೆ ನಮ್ಮ ಶಾಸಕರನ್ನು ಮುಟ್ಟಲಿ
Share this Article
  • FB
  • TW
  • Linkdin
  • Email

ಸಾರಾಂಶ

ಶಾಸಕ ಎಂ.ಟಿ.ಕೃಷ್ಣಪ್ಪನವರು ಹುಟ್ಟು ಹೋರಾಟಗಾರರು. ತುಮಕೂರು ಜಿಲ್ಲೆಗೆ ಅನ್ಯಾಯವಾಗುತ್ತಿರುವುದನ್ನು ಕಂಡು ಸುಮ್ಮನಿರುವವರಲ್ಲ. ಹೋರಾಟವೇ ಅವರ ಜೀವಾಳವಾಗಿದೆ. ಗುಬ್ಬಿಗೆ ಹೆಚ್ಚು ಅನ್ಯಾಯವಾಗುತ್ತಿರುವುದನ್ನೂ ಕಂಡು ಕಾಣದಂತಿರುವ ಶಾಸಕ ಶ್ರೀನಿವಾಸ್ ರವರ ನಡೆ ಖಂಡನೀಯವಾದುದು ಎಂದು ಶಾಸಕ ಎಂ.ಟಿ.ಕೃಷ್ಣಪ್ಪನವರು ಹೇಳಿದ್ದಾರೆ. ಅದರಲ್ಲಿ ತಪ್ಪೇನಿದೆ? ವಾಸ್ತವವಾಗಿ ಗುಬ್ಬಿ ಶಾಸಕರೇ ಮುಂದೆ ನಿಂತು ತಮ್ಮ ತಾಲೂಕಿಗೆ ಆಗಿರುವ ಅನ್ಯಾಯವನ್ನು ಖಂಡಿಸಬೇಕಿತ್ತು.

ಕನ್ನಡಪ್ರಭ ವಾರ್ತೆ ತುರುವೇಕೆರೆ

ಮಾಗಡಿಗೆ ಹೇಮಾವತಿ ನೀರು ಹರಿಸುವ ಎಕ್ಸ್‌ಪ್ರೆಸ್ ಕೆನಾಲ್ ಅನ್ನು ವಿರೋಧಿಸಿ ಹೋರಾಟದ ಕಿಚ್ಚು ಹಚ್ಚಿರುವ ತುರುವೇಕೆರೆ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಟಿ.ಕೃಷ್ಣಪ್ಪನವರ ಕುರಿತು ಗುಬ್ಬಿ ಶಾಸಕ ಶ್ರೀನಿವಾಸ್ ರವರು ಆಡಿರುವ ಮಾತುಗಳನ್ನು ತಾಲೂಕು ಜೆಡಿಎಸ್ ಘಟಕ ಖಂಡಿಸಿದೆ. ಈ ಕುರಿತು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ತಾಲೂಕು ಜೆಡಿಎಸ್ ಅಧ್ಯಕ್ಷ ಸಾದರಹಳ್ಳಿ ದೊಡ್ಡೇಗೌಡರು, ಶಾಸಕ ಶ್ರೀನಿವಾಸ್ ರವರೇ ನಿಮಗೆ ತಾಕತ್ತು, ಧಮ್ಮು ಇದ್ದಲ್ಲಿ ಶಾಸಕ ಎಂ.ಟಿ.ಕೃಷ್ಣಪ್ಪನವರನ್ನು ಮುಟ್ಟಿ ನೋಡೋಣ. ಆಗ ಪರಿಸ್ಥಿತಿ ಯಾವ ಮಟ್ಟಕ್ಕೆ ತಲುಪುತ್ತದೆ ಎಂಬುದನ್ನು ನೀವೇ ನೋಡಿ ಎಂದು ಎಚ್ಚರಿಕೆ ನೀಡಿದ್ದಾರೆ. ಶಾಸಕ ಎಂ.ಟಿ.ಕೃಷ್ಣಪ್ಪನವರು ಹುಟ್ಟು ಹೋರಾಟಗಾರರು. ತುಮಕೂರು ಜಿಲ್ಲೆಗೆ ಅನ್ಯಾಯವಾಗುತ್ತಿರುವುದನ್ನು ಕಂಡು ಸುಮ್ಮನಿರುವವರಲ್ಲ. ಹೋರಾಟವೇ ಅವರ ಜೀವಾಳವಾಗಿದೆ. ಗುಬ್ಬಿಗೆ ಹೆಚ್ಚು ಅನ್ಯಾಯವಾಗುತ್ತಿರುವುದನ್ನೂ ಕಂಡು ಕಾಣದಂತಿರುವ ಶಾಸಕ ಶ್ರೀನಿವಾಸ್ ರವರ ನಡೆ ಖಂಡನೀಯವಾದುದು ಎಂದು ಶಾಸಕ ಎಂ.ಟಿ.ಕೃಷ್ಣಪ್ಪನವರು ಹೇಳಿದ್ದಾರೆ. ಅದರಲ್ಲಿ ತಪ್ಪೇನಿದೆ? ವಾಸ್ತವವಾಗಿ ಗುಬ್ಬಿ ಶಾಸಕರೇ ಮುಂದೆ ನಿಂತು ತಮ್ಮ ತಾಲೂಕಿಗೆ ಆಗಿರುವ ಅನ್ಯಾಯವನ್ನು ಖಂಡಿಸಬೇಕಿತ್ತು. ಆದರೆ ಅಧಿಕಾರದ ಲಾಲಸೆಯಿಂದ ಸುಮ್ಮನಿರುವುದು ಸರಿಯಲ್ಲ ಎಂದು ಆಕ್ರೋಶಗೊಂಡರು. ರೈತರ ಹಿತ ಕಾಯಬೇಕಾಗಿದ್ದ ಶಾಸಕ ಶ್ರೀನಿವಾಸ್ ರವರು ಕೆನಾಲ್ ನಿರ್ಮಾಣದ ವಿರುದ್ಧ ಧ್ವನಿಯೆತ್ತಬೇಕಿತ್ತು. ಆದರೆ ಮೌನ ವಹಿಸಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ ಎಂದು ಸಾದರಹಳ್ಳಿ ದೊಡ್ಡೇಗೌಡ ಶಂಕೆ ವ್ಯಕ್ತಪಡಿಸಿದ್ದಾರೆ.ದಿನಾಂಕ ನಿಗದಿ ಮಾಡಿ: ತಾಲೂಕು ಜೆಡಿಎಸ್ ನ ವಕ್ತಾರ ವೆಂಕಟಾಪುರ ಯೋಗೀಶ್ ಮಾತನಾಡಿ, ಶಾಸಕ ಶ್ರೀನಿವಾಸ್ ರವರೇ ತುರುವೇಕೆರೆ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಟಿ.ಕೃಷ್ಣಪ್ಪನವರ ಕೊರಳಪಟ್ಟಿ ಹಿಡಿದು ಕೇಳುತ್ತೇನೆಂದು ಲಘುವಾಗಿ ಮಾತನಾಡಿದ್ದೀರಿ, ಅಲ್ಲದೇ ತಾಕತ್ತಿದ್ದರೆ ಗುಬ್ಬಿಗೆ ಬರಲಿ ಎಂದೂ ಪಂಥಾಹ್ವಾನ ನೀಡಿದ್ದೀರಿ. ಇವೆಲ್ಲಾ ಸವಾಲುಗಳನ್ನು ಸ್ವೀಕರಿಸಲು ತಾಲೂಕು ಜೆಡಿಎಸ್ ಕಾರ್ಯಕರ್ತರು ಶಾಸಕ ಎಂ.ಟಿ.ಕೃಷ್ಣಪ್ಪನವರೊಂದಿಗೆ ಸದಾ ಸಿದ್ಧರಿದ್ದೇವೆ. ಶ್ರೀನಿವಾಸ್ ರವರು ದಿನಾಂಕವನ್ನು ನಿಗದಿಪಡಿಸಿದರೆ ಸಾವಿರಾರು ಜೆಡಿಎಸ್ ಕಾರ್ಯಕರ್ತರೊಂದಿಗೆ ಗುಬ್ಬಿಗೆ ಬರುತ್ತೇವೆ. ಆಗ ಯಾರು ಯಾರ ಕೊರಳಪಟ್ಟಿಯನ್ನು ಹಿಡಿಯತ್ತಾರೆ ಎಂಬುದನ್ನು ನೋಡುವಿರಿ ಎಂದು ಕಿಡಿಕಾರಿದರು.ಶಾಸಕ ಎಂ.ಟಿ.ಕೃಷ್ಣಪ್ಪನವರು ರಾಜಕೀಯಕ್ಕೆ ಬರುವ ಮುನ್ನಾ ದಿನಗಳಲ್ಲಿ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾಗಿ ಸೇವೆ ಮಾಡಿರುವವರು. ಅಂದಿನ ಮುಖ್ಯಮಂತ್ರಿ ಬಂಗಾರಪ್ಪ ಮತ್ತು ವೀರಪ್ಪ ಮೊಯ್ಲಿಯಂಥವರಿಗೇ ಸವಾಲು ಹಾಕಿ ಸರ್ಕಾರಿ ನೌಕರರಿಗೆ ನ್ಯಾಯ ದೊರಕಿಸಿಕೊಟ್ಟವರು. ಅವರ ಉಸಿರೇ ಹೋರಾಟ. ಇಂದೂ ಸಹ ಜಿಲ್ಲೆಗೆ ಆಗುತ್ತಿರುವ ಅನ್ಯಾಯವನ್ನು ಸಹಿಸದೇ ಹೋರಾಟಕ್ಕೆ ಧುಮುಕಿದವರು. ಜಿಲ್ಲೆಗೆ ಅನ್ಯಾಯವಾಗುತ್ತಿದ್ದರೂ ಸಹ ಗುಬ್ಬಿ ಶಾಸಕ ಶ್ರೀನಿವಾಸ್ ರವರು ಒಂದೇ ಒಂದು ಹೇಳಿಕೆ ನೀಡದೇ ಇರುವುದು ಎಂತಹವರನ್ನೂ ಕೆರಳಿಸುತ್ತದೆ. ಸಹಜವಾಗಿ ನಿಮ್ಮ ಇಬ್ಬಂದಿತನವನ್ನು ಶಾಸಕ ಎಂ.ಟಿ.ಕೃಷ್ಣಪ್ಪನವರು ಖಂಡಿಸಿದ್ದಾರೆ. ಆದರೆ ಕೃಷ್ಣಪ್ಪನವರನ್ನು ವೈಯಕ್ತಿಕವಾಗಿ ಟೀಕೆ ಮಾಡಿ ಕೊರಳಪಟ್ಟಿ ಹಿಡಿಯುತ್ತೇನೆಂದು ಹೇಳಿರುವುದು ಎಷ್ಟು ಸರಿ ಎಂದು ವೆಂಕಟಾಪುರ ಯೋಗೀಶ್ ಪ್ರಶ್ನಿಸಿದ್ದಾರೆ.ಅಂದಿಲ್ಲ: ಶಾಸಕ ಎಂ.ಟಿ.ಕೃಷ್ಣಪ್ಪನವರು ಗುಬ್ಬಿ ಶಾಸಕ ಶ್ರೀನಿವಾಸ್ ರವರನ್ನು ವೈಯಕ್ತಿಕವಾಗಿ ಟೀಕೆ ಮಾಡಿಲ್ಲ. ಹೋರಾಟಕ್ಕೆ ಬಾರದಿರುವ ಕಾರಣ ಯಾರೋ ಶ್ರೀನಿವಾಸ್ ರನ್ನು ಕಳ್ಳ ಎಂದು ಹೇಳಿದ್ದಾರೆ. ವಿಷಯ ಅರಿಯದೇ ಶಾಸಕ ಎಂ.ಟಿ.ಕೃಷ್ಣಪ್ಪನವರನ್ನು ಕುರಿತು ಲಘುವಾಗಿ ಮಾತನಾಡಿರುವುದು ಖಂಡನೀಯ. ಕೃಷ್ಣಪ್ಪನವರ ಬಗ್ಗೆ ಮಾತನಾಡುವ ಮೊದಲು ಹತ್ತಾರು ಬಾರಿ ಯೋಚಿಸಬೇಕೆಂದು ವೆಂಕಟಾಪುರ ಯೋಗೀಶ್ ಕಿವಿಮಾತು ಹೇಳಿದ್ದಾರೆ. ಜೆಡಿಎಸ್ ಮುಖಂಡ ಟೌನ್ ಬ್ಯಾಂಕ್ ಅಧ್ಯಕ್ಷ ಎಚ್.ಆರ್.ರಾಮೇಗೌಡ ,ಜೆಡಿಎಸ್ ಮುಖಂಡರಾದ ಬಡಾವಣೆ ಶಿವಣ್ಣ, ಕಣತೂರು ತಿಮ್ಮೇಗೌಡ ಉಪಸ್ಥಿತರಿದ್ದರು.