ವಿದ್ಯಾರ್ಥಿಗಳು ನಾಡು ನುಡಿಯ ಅಭಿಮಾನ ಬೆಳೆಸಿಕೊಳ್ಳಲಿ: ಪುಷ್ಪಲತಾ

| Published : Jul 03 2024, 12:16 AM IST

ಸಾರಾಂಶ

ಜಿಲ್ಲಾದ್ಯಂತ ಕನ್ನಡದಲ್ಲಿ ಸಾಧನೆ‌ ಮಾಡಿದ ವಿದ್ಯಾರ್ಥಿಗಳನ್ನು ಪರಿಷತ್ತು ಅಭಿನಂದಿಸುವ ಕಾರ್ಯಕ್ರಮ‌ ಹಮ್ಮಿಕೊಂಡಿದೆ. ಬೇರೆ ಯಾವ ಜಿಲ್ಲೆಯಲ್ಲೂ ನಡೆಯದ ಕಾರ್ಯಕ್ರಮ ನಮ್ಮ ಜಿಲ್ಲೆಯಲ್ಲಿ‌ ನಡೆಯುತ್ತಿದೆ.

ಭಟ್ಕಳ: ವಿದ್ಯಾರ್ಥಿಗಳು ವಿದ್ಯೆಯ ಜತೆಗೆ ನಾಡು- ನುಡಿ ಅಭಿಮಾನವನ್ನು ಬೆಳೆಸಿಕೊಳ್ಳಬೇಕು. ಕನ್ನಡ ಭಾಷೆ ನಮ್ಮ ತಾಯ್ನುಡಿಯಾಗಿದ್ದು, ನಾಡು ನುಡಿಯ ಕುರಿತು ಅಭಿಮಾನ ಮತ್ತು ಸೇವೆಯನ್ನು ಮಾಡುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ ಎಂದು ಬೀನಾ ವೈದ್ಯ ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಪುಷ್ಪಲತಾ ಎಂ.ಎಸ್. ತಿಳಿಸಿದರು.

ಶಿರಾಲಿಯ ಜನತಾ ವಿದ್ಯಾಲಯದಲ್ಲಿ ಕಸಾಪ ಜಿಲ್ಲಾ, ತಾಲೂಕು ಘಟಕದ ಸಹಯೋಗದಲ್ಲಿ ನಡೆದ ಎಸ್‌ಎಸ್ಎಲ್‌ಸಿಯಲ್ಲಿ ಕನ್ನಡ ಭಾಷೆಯಲ್ಲಿ ಪ್ರತಿಶತ 100 ಅಂಕ ಗಳಿಸಿದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ಕನ್ನಡದಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಪುರಸ್ಕರಿಸುತ್ತಿರುವುದು ಅಭಿನಂದನಾರ್ಹ. ಪರಿಷತ್ತಿನ ಕನ್ನಡಪರ ಕಾರ್ಯಕ್ರಮಗಳಿಗೆ ಸಹಕಾರ ಸದಾ ನೀಡುವುದಾಗಿ ನುಡಿದರು.

ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ಮಾತನಾಡಿ, ಜಿಲ್ಲಾದ್ಯಂತ ಕನ್ನಡದಲ್ಲಿ ಸಾಧನೆ‌ ಮಾಡಿದ ವಿದ್ಯಾರ್ಥಿಗಳನ್ನು ಪರಿಷತ್ತು ಅಭಿನಂದಿಸುವ ಕಾರ್ಯಕ್ರಮ‌ ಹಮ್ಮಿಕೊಂಡಿದೆ. ಬೇರೆ ಯಾವ ಜಿಲ್ಲೆಯಲ್ಲೂ ನಡೆಯದ ಕಾರ್ಯಕ್ರಮ ನಮ್ಮ ಜಿಲ್ಲೆಯಲ್ಲಿ‌ ನಡೆಯುತ್ತಿದೆ. ಅನುದಾನದ ಕೊರತೆಯಿದ್ದರೂ ಮುಂದೆಯೂ ಕಾರ್ಯಕ್ರಮ ತಪ್ಪದೇ ನಡೆಯಲಿದೆ ಎಂದರು.

ಕಸಾಪ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ ಮಾತನಾಡಿ, ಕನ್ನಡದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳು, ಜತೆಗೆ ಸಾಧನೆಗೆ ಬೆಂಬಲವಾಗಿ ನಿಂತ ಶಿಕ್ಷಕರನ್ನು ಅಭಿನಂದಿಸುತ್ತಿರುವುದು ಪರಿಷತ್ತಿಗೆ ಅತ್ಯಂತ ಸಂತಸ ಕೊಡುವ ಸಂಗತಿ ಎಂದರು.

ಕಾರ್ಯಕ್ರಮದಲ್ಲಿ ಪ್ರಥಮ ಭಾಷೆ ಮತ್ತು ದ್ವಿತೀಯ ಭಾಷೆ ಕನ್ನಡದಲ್ಲಿ ಪ್ರತಿಶತ ನೂರು ಅಂಕಗಳನ್ನು ಗಳಿಸಿದ 58 ವಿದ್ಯಾರ್ಥಿಗಳನ್ನು ಹಾಗೂ ವಿದ್ಯಾರ್ಥಿಗಳ ಸಾಧನೆಗೆ ಕಾರಣರಾದ ಶಿಕ್ಷಕರನ್ನು ಗೌರವಿಸಲಾಯಿತು. ಸ್ಪಂದನ ಸಂಸ್ಥೆಯ ಅಧ್ಯಕ್ಷ ರಾಘವೇಂದ್ರ ನಾಯ್ಕ ವಿದ್ಯಾರ್ಥಿಗಳಿಗೆ ಪ್ರಶಂಸನಾ ಪತ್ರ, ಬಹುಮಾನ‌ ವಿತರಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಡಿ. ಮೊಗೇರ್, ಸಾಹಿತಿ ಮಾನಸುತ ಶಂಭು ಹೆಗಡೆ ಕಸಾಪ ಗೌರವ ಕಾರ್ಯದರ್ಶಿ ಪಿ.ಆರ್. ನಾಯ್ಕ, ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಮೋಹನ ನಾಯ್ಕ ಮಾತನಾಡಿದರು.

ಸಾಹಿತಿ ನಾರಾಯಣ ಯಾಜಿ ಶಿರಾಲಿ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ್ ನಾಯಕ ಮಾಧ್ಯಮಿಕ ಶಾಲಾ ಸಂಘದ ಅಧ್ಯಕ್ಷ ಶಬ್ಬೀರ್ ದಫೇದಾರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಉಲ್ಲಾಸ್ ನಾಯ್ಕ, ಹೊನ್ನಾವರ ಕಸಾಪ ತಾಲೂಕಾಧ್ಯಕ್ಷ ಎಸ್.ಎಚ್. ಗೌಡ, ಜನತಾ ವಿದ್ಯಾಲಯದ ಪ್ರಾಂಶುಪಾಲ ಅಮೃತ ರಾಮರಾಥ ಮುಂತಾದವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ರಾಷ್ಟ್ರೀಯ ಮಟ್ಟದ ಏಶಿಯನ್ ಸ್ಪೆಸಿಫಿಕ್ ಎಕ್ಸ್‌ಲೆನ್ಸ್‌ ಅವಾರ್ಡ್‌ನಿಂದ ಪುರಸ್ಕೃತ ಬೀನಾ ವೈದ್ಯ ಶಿಕ್ಷಣ ಸಂಸ್ಥೆಯ ಆಡಳಿತ ನಿರ್ದೇಶಕಿ ಪುಷ್ಪಲತಾ ಎಂ.ಎಸ್., ಸ್ಪಂದನ ಸಂಸ್ಥೆಯ ಅಧ್ಯಕ್ಷ ರಾಘವೇಂದ್ರ ನಾಯ್ಕ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮೋಹನ್ ನಾಯ್ಕ ಅವರನ್ನು ಸನ್ಮಾನಿಸಲಾಯಿತು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧ್ಯಕ್ಷ ಶ್ರೀಧರ್ ಶೇಟ್ ಸ್ವಾಗತಿಸಿದರು. ಶಿಕ್ಷಕ ಪರಮೇಶ್ವರ ನಾಯ್ಕ ಮತ್ತು ನಾರಾಯಣ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.