ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವ ಬೆಳಿಸಿಕೊಳ್ಳಲಿ: ಡಿಡಿಪಿಐ ಮಂಜುನಾಥ್

| Published : Mar 01 2025, 01:07 AM IST

ಸಾರಾಂಶ

ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವ ಬೆಳಿಸಿಕೊಂಡು, ವಿಜ್ಞಾನದ ಅಧ್ಯಯನದಲ್ಲಿ ತೊಡಗಿಕೊಳ್ಳಬೇಕು. ಹೊಸ ಅನ್ವೇಷಣೆಗಳನ್ನು ಮಾಡಬೇಕು ಎಂದು ಡಿಡಿಪಿಐ ಮಂಜುನಾಥ್ ಹೇಳಿದರು.

ಅಬ್ಬಲಗೆರೆ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯಲ್ಲಿ ಡಿಡಿಪಿಐ ಮಂಜುನಾಥ್ ಕರೆ

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವ ಬೆಳಿಸಿಕೊಂಡು, ವಿಜ್ಞಾನದ ಅಧ್ಯಯನದಲ್ಲಿ ತೊಡಗಿಕೊಳ್ಳಬೇಕು. ಹೊಸ ಅನ್ವೇಷಣೆಗಳನ್ನು ಮಾಡಬೇಕು ಎಂದು ಡಿಡಿಪಿಐ ಮಂಜುನಾಥ್ ಹೇಳಿದರು.ತಾಲೂಕಿನ ಅಬ್ಬಲಗೆರೆ ಸರ್ಕಾರಿ ಪ್ರೌಢಶಾಲೆಯಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ, ಭಾರತೀಯ ವಿಜ್ಞಾನ ಸಂಸ್ಥೆ ಆವರಣ ಬೆಂಗಳೂರು ಹಾಗೂ ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ಶುಕ್ರವಾರ ಏರ್ಪಡಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವೈಜ್ಞಾನಿಕ ಮನೋಭಾವ, ಉತ್ತಮ ಕೌಶಲ್ಯ, ಹೊಸ ಕಲಿಕಾ ಅಭ್ಯಾಸ ಮತ್ತು ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ಅನೇಕ ಚಟುವಟಿಕೆಗಳನ್ನು ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ಕೈಗೊಳ್ಳುತ್ತಿದೆ ಎಂದರು.

ವಿಜ್ಞಾನಿಯಾದ ಸಿ.ವಿ.ರಾಮನ್ ಅವರ ರಾಮನ್ ಪರಿಣಾಮದ ಸಂಸ್ಮರಾಣರ್ಥವಾಗಿ ದೇಶದೆಲ್ಲೆಡೆ ಇಂದು ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಆಚರಣೆ ಮಾಡಲಾಗುತ್ತಿದೆ. ವಿಜ್ಞಾನದ ವಿದ್ಯಾರ್ಥಿಗಳು ಅಂತಹ ಮಹಾನೀಯರ ಆಲೋಚನೆಗಳು, ಚಿಂತನೆಗಳನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಅನಾದಿ ಕಾಲದಿಂದಲೂ ಈ ಸಮಾಜದಲ್ಲಿ ಮೂಢನಂಬಿಕೆ ಆಚರಣೆಯಲ್ಲಿದ್ದು, ಇಂದಿಗೂ ಅದು ಮುಂದುವರೆದಿದೆ. ಅಂತಹ ಮೂಢನಂಬಿಕೆಯನ್ನು ನಮ್ಮ ವೈಜ್ಞಾನಿಕ ಆಲೋಚನೆಗಳಿಂದ ತೊಡೆದು ಹಾಕಿ ದೇಶವನ್ನು ಇನ್ನಷ್ಟು ಉನ್ನತ ಮಟ್ಟಕ್ಕೆ ಕೊಂಡೊಯ್ಯಬೇಕು ಎಂದು ಕರೆ ನೀಡಿದರು.ವಿಜ್ಞಾನದ ವಿದ್ಯಾರ್ಥಿಗಳಿಗೆ ವೈಜ್ಞಾನಿಕ ಚಿಂತನೆ ಅತ್ಯವಶ್ಯಕ. ಇಂತಹ ಚಿಂತನೆಗಳಿಲ್ಲದೆ ವಿಜ್ಞಾನಿಯಾಗಲು ಸಾಧ್ಯವಿಲ್ಲ. ಪ್ರಶ್ನಿಸುವ ಮನೋಭಾವವನ್ನು ಬೆಳಸಿಕೊಳ್ಳಬೇಕು. ಈ ದಿಸೆಯಲ್ಲಿ ವಿದ್ಯಾರ್ಥಿಗಳು ವೈಜ್ಞಾನಿಕ ಚಿಂತನೆಯಲ್ಲಿ ಸಂಪೂರ್ಣ ತೊಡಗಿಸಿಕೊಂಡು ಈ ದೇಶಕ್ಕೆ ಕೊಡುಗೆ ನೀಡಬೇಕು ಎಂದರು.ಹೊಳೆಹೊನ್ನೂರಿನ ವಿವೇಕಾನಂದ ಪಿಯು ಕಾಲೇಜಿನ ಪ್ರಾಂಶುಪಾಲ ಎಸ್.ರಂಗನಾಥಯ್ಯ ಮಾತನಾಡಿ, ವಿದ್ಯಾರ್ಥಿಗಳು ವೈಜ್ಞಾನಿಕ ಚಿಂತನೆಯನ್ನು ಒಬ್ಬರಿಗೊಬ್ಬರು ಹಂಚಿಕೊಳ್ಳಬೇಕು. ಅದರಿಂದ ನಿಮ್ಮ ಜ್ಞಾನವೂ ವಿಸ್ತಾರಗೊಳ್ಳುತ್ತದೆ. ಜೊತೆಗೆ ಇನ್ನೊಬ್ಬರನ್ನು ಚಿಂತನೆಗೆ ಒಳಪಡಿಸಿದಂತಾಗುತ್ತದೆ ಎಂದು ಹೇಳಿದರು.

ಸಮಾಜದಲ್ಲಿ ಮೇಲು-ಕೀಳು, ಜಾತಿ, ಧರ್ಮ ಎಂಬ ಅನೇಕ ಕಟ್ಟಳೆಗಳಿವೆ. ಆದರೆ ಪ್ರಕೃತಿಯು ಎಲ್ಲರನ್ನೂ ಸಮಾನತೆಯಿಂದ ನೋಡುತ್ತದೆ. ಸಮಾನ ಸವಲತ್ತುಗಳನ್ನು ಬಳಸಿಕೊಳ್ಳೋಣ ಎಂದರು. ರಾಮಕೃಷ್ಣ ಆಶ್ರಮದ ವಿನಯಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿ, ಸ್ವಾಮಿ ವಿವೇಕಾನಂದರು ಚಿಕ್ಕ ವಯಸ್ಸಿನಲ್ಲೇ ಧೈರ್ಯವಂತ ಮತ್ತು ಎಲ್ಲವನ್ನು ಪ್ರಶ್ನಿಸುವ ಹುಡುಗನಾಗಿದ್ದರು. ವಿಜ್ಞಾನಿಗಳು ಮತ್ತು ವಿದ್ಯಾರ್ಥಿಗಳ ಮೊದಲ ಲಕ್ಷಣ ಧೀರತನ ಮತ್ತು ಪ್ರಶ್ನೆ ಮಾಡುವ ಗುಣವಾಗಿದೆ. ನಾವೆಲ್ಲ ಸತ್ಯಕ್ಕಾಗಿ ಬದುಕಬೇಕು. ಮಾತು, ಕೃತಿ, ಆಲೋಚನೆ ಒಂದೇ ಆಗಿರಬೇಕು ಎಂದರು.

ಮುಗ್ಧ ಮಕ್ಕಳೇ ನಿಜವಾದ ವಿಜ್ಞಾನಿಗಳು. ಮಕ್ಕಳು ಎಲ್ಲವನ್ನೂ ಪ್ರಶ್ನಿಸುತ್ತಾ ತಿಳಿದುಕೊಳ್ಳುತ್ತಾರೆ. ಹಾಗೆಯೇ ನಾವೂ ಕೂಡ ವ್ಯವಸ್ಥೆಯ ಬಗ್ಗೆ ಪ್ರಶ್ನಿಸಿ, ಇಲ್ಲಿರುವ ಸಮಸ್ಯೆಗಳನ್ನು ಪರಿಹರಿಸುವ ಪ್ರಯತ್ನ ಮಾಡಬೇಕು. ದೇಶದಲ್ಲಿ ಹಲವಾರು ಸಮಸ್ಯೆಗಳಿಗೆ, ಮುಖ್ಯ ಕಾರಣ ವಿದ್ಯಾವಂತರೇ ಆಗಿದ್ದಾರೆ. ಯಾಕೆಂದರೆ ಇವರು ಪ್ರಶ್ನೆ ಮಾಡುವುದಿಲ್ಲ. ಪ್ರಶ್ನೆ ಮಾಡದೇ ಸಮಸ್ಯೆಗಳು ಹೆಚ್ಚಿವೆ. ಆದ್ದರಿಂದ ನಾವೆಲ್ಲ ಧೈರ್ಯವಾಗಿ ಪ್ರಶ್ನಿಸಿ, ಪರಿಹರಿಸುವ ಗುಣ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.ಜಿ.ಪಂ ಮೌಲ್ಯಮಾಪನಾಧಿಕಾರಿ ಸೈಯದ್ ರೆಹಮತ್ ಪ್ಯಾರಿ ಮಾತನಾಡಿ, ಎಲ್ಲ ಮಕ್ಕಳಲ್ಲಿ ಒಂದೊಂದು ವಿಶೇಷ ಪ್ರತಿಭೆ ಮತ್ತು ಕೌಶಲ್ಯ ಅಡಗಿದೆ. ಶಾಲೆಯಲ್ಲಿ ಇಂದು ಮಕ್ಕಳು ಏರ್ಪಡಿಸಿರುವ ವೈಜ್ಞಾನಿಕ ವಸ್ತುಪ್ರದರ್ಶನ ಅದ್ಭುತವಾಗಿದೆ. ಸರ್ಕಾರಿ ಶಾಲಾ ಮಕ್ಕಳಲ್ಲಿ ಇಷ್ಟೊಂದು ಪ್ರತಿಭೆ ಅಡಗಿರುವುದು ಸಂತಸದ ವಿಷಯ. ಈ ಮಕ್ಕಳಿಗೆ ಬೆನ್ನು ತಟ್ಟಿ ಪ್ರೋತ್ಸಾಹ ನೀಡಬೇಕು ಎಂದ ಅವರು, ವಿದ್ಯಾರ್ಥಿಗಳು ವೈಜ್ಞಾನಿಕವಾಗಿ ಚಿಂತಿಸಿ, ಧೈರ್ಯ ಮತ್ತು ಸ್ಥೈರ್ಯದಿಂದ ಮುಂದೆ ಬರಬೇಕು. ವಿದ್ಯಾರ್ಥಿಗಳು ವಿಜ್ಞಾನ ಕ್ಷೇತ್ರದಲ್ಲೂ ಉತ್ತಮ ಕೊಡುಗೆ ನೀಡಬೇಕು ಎಂದರು.ಗ್ರಾ.ಪಂ. ಅಧ್ಯಕ್ಷೆ ಭಾಗ್ಯ ಬಿ.ಹೊಸಟ್ಟಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ರಾಷ್ಟ್ರೀಯ ವಿಜ್ಞಾನ ದಿನದ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ವಿಜ್ಞಾನ ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು.

ಇದೇ ವೇಳೆ ಸಿ.ವಿ.ರಾಮನ್ ಕುರಿತು ಏರ್ಪಡಿಸಲಾಗಿದ್ದ ಭಾಷಣ ಸ್ಪರ್ಧೆ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.ವಿಜ್ಞಾನ ವಿಷಯ ಪರಿವೀಕ್ಷಕ ಅಸುಂತ ಸಿಕ್ವೇರಾ, ಪಿಡಿಒ ರಾಜಪ್ಪ, ಮುಖ್ಯ ಶಿಕ್ಷಕರಾದ ಮುರಳೀಧರ್, ದೈಹಿಕ ಶಿಕ್ಷಣ ಅಧಿಕಾರಿ ಪ್ರಕಾಶ್, ಎನ್‌ಆರ್‌ಡಿಎಂಎಸ್ ಯೋಜನಾ ಸಂಯೋಜಕ ಶಂಕರ್, ಸಹ ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು.