ಸಾರಾಂಶ
ಕನ್ನಡಪ್ರಭ ವಾರ್ತೆ ಹಾನಗಲ್ಲ
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹಾನಗಲ್ ತಾಲೂಕಿನ ವಿದ್ಯಾರ್ಥಿಗಳು ಸಾಧನೆ ತೋರಬೇಕು. ಈ ನಿಟ್ಟಿನಲ್ಲಿ ಗುರುಗಳು ಬಂದರು ಗುರುವಾರ ಎನ್ನುವ ವಿನೂತನ ಕಾರ್ಯಕ್ರಮ ಆಯೋಜಿಸಲಾಗಿದೆ. ಪರಿಣಿತ ವಿಷಯ ತಜ್ಞರಿಂದ ತಯಾರಿಸಲಾದ ಪ್ರಶ್ನೆ ಪತ್ರಿಕೆಯ ಪುಸ್ತಕಗಳನ್ನು ಶೀಘ್ರದಲ್ಲಿ ವಿದ್ಯಾರ್ಥಿಗಳಿಗೆ ವಿತರಿಸಿ, ಉತ್ತಮ ಮಾರ್ಗದರ್ಶನದ ಮೂಲಕ ಆತ್ಮಸ್ಥೈರ್ಯ ಹೆಚ್ಚಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.ತಾಲೂಕಿನ ಯಳವಟ್ಟಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸ್ನೇಹ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ಶಾಲೆ, ಕಾಲೇಜುಗಳಿಗೆ ಸೌಲಭ್ಯ ಕಲ್ಪಿಸಬೇಕು. ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಬೇಕಿರುವುದು ಸರ್ಕಾರದ ಕರ್ತವ್ಯ. ಆದರ ಏಳೆಂಟು ವರ್ಷಗಳಿಂದ ಅತಿವೃಷ್ಟಿ, ಅನಾವೃಷ್ಟಿ, ಕೊರೋನಾ ಸೇರಿದಂತೆ ಮತ್ತಿತರ ಕಾರಣಗಳಿಂದ ಸರ್ಕಾರದ ಆದಾಯಕ್ಕೆ ಹೊಡೆತ ಬಿದ್ದಿದೆ. ಇಂಥ ಸಂದರ್ಭದಲ್ಲಿ ಅನುದಾನಕ್ಕೆ ಕಾಯ್ದು ಕುಳಿತರೆ ಸಮಯಾವಕಾಶ ಹಿಡಿಯಲಿದೆ. ದಾನಿಗಳು ಮುಂದೆ ಬಂದು ಶಾಲೆಗಳಿಗೆ ಸೌಲಭ್ಯ ಕಲ್ಪಿಸಬೇಕಿದೆ ಎಂದ ಅವರು, ತಾಲೂಕಿನಲ್ಲಿ ಈ ಪ್ರಯೋಗ ಯಶ ಕಂಡಿದೆ. ದಾನಿಗಳು ಸೇರಿಸುವಷ್ಟು ಹಣವನ್ನು ವೈಯಕ್ತಿಕವಾಗಿ ತಾವೂ ಸಹ ನೀಡುತ್ತಿದ್ದು, ಸಾಕಷ್ಟು ಶಾಲೆಗಳು ಇದರಿಂದ ಪ್ರಯೋಜನ ಪಡೆದಿವೆ ಎಂದರು.
ಸಾನ್ನಿಧ್ಯ ವಹಿಸಿದ್ದ ಹೋತನಹಳ್ಳಿಯ ಸಿದ್ದಾರೂಢಮಠದ ಸದ್ಗುರು ಶಂಕರಾನಂದ ಸ್ವಾಮೀಜಿ ಮಾತನಾಡಿ, ಮಕ್ಕಳು ಈ ದೇಶದ ಆಸ್ತಿ. ಶಿಕ್ಷಣಕ್ಕೆ ಮಾತ್ರ ಭವಿಷ್ಯ ರೂಪಿಸುವ ಶಕ್ತಿ ಇದೆ. ಪ್ರತಿಯೊಬ್ಬರೂ ಸಾಮಾಜಿಕ ಜವಾಬ್ದಾರಿ ಮೆರೆದು ಶಾಲೆಗಳನ್ನು ಅಭಿವೃದ್ಧಿ ಪಡಿಸಲು ಆಸಕ್ತಿ ವಹಿಸಬೇಕಿದೆ ಎಂದರು.ಪ್ರಾಚಾರ್ಯ ರಾಘವೇಂದ್ರ ಒ.ಬಿ. ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಸದಸ್ಯರಾದ ಲಕ್ಷ್ಮಣ ವರ್ದಿ, ಬಸವರಾಜ ಬಂಡಿ, ಗೀತಾ ಅಡಗಿಯವರ, ಮೋಹನ ಬಸವಂತಕರ, ಶಬ್ಬೀರ್‌ಅಹ್ಮದ್, ವೀರನಗೌಡ ಪಾಟೀಲ, ಗಿರೀಶ ಕಮಾಟಿ, ವಿಜಯಕುಮಾರ ಹಿರೇಮಠ, ವೆಂಕಟೇಶ ಪೂಜಾರ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.