ಸಾರಾಂಶ
ಫೆ. 22ರಂದು ಅನ್ನದಾನೀಶ್ವರ ಯಾತ್ರಾ ಮಹೋತ್ಸವ ಜರುಗುತ್ತಿರುವ ಹಿನ್ನೆಲೆಯಲ್ಲಿ ಮುಂಡರಗಿ ಪಟ್ಟಣದ ಅನ್ನದಾನೀಶ್ವರ ಮಠದಲ್ಲಿ 11 ದಿನಗಳ ಕಾಲ ವೆಂಕಟಾಪೂರ ಅಜ್ಜನವರ ಜೀವನ ದರ್ಶನ ಏರ್ಪಡಿಸಲಾಗಿದೆ.
ಮುಂಡರಗಿ: ಜಾತ್ರೆ ಎಂದರೆ ಕೇವಲ ತೇರು ಎಳೆದು ಬೆಂಡು-ಬತ್ತಾಸು ತಿಂದು ಹೋಗುವುದಲ್ಲ. ಅನೇಕ ಪುಣ್ಯ ಪುರುಷರ ಜೀವನದ ಚರಿತ್ರೆಗಳನ್ನು ಕೇಳುವ ಮೂಲಕ ಜ್ಞಾನವೆಂಬ ಜಾತ್ರೆಯನ್ನು ಮಾಡಬೇಕು ಎಂದು ಬಳೂಟಗಿ ಶಿವಕುಮಾರ ದೇವರು ಹೇಳಿದರು.
ಫೆ. 22ರಂದು ಅನ್ನದಾನೀಶ್ವರ ಯಾತ್ರಾ ಮಹೋತ್ಸವ ಜರುಗುತ್ತಿರುವ ಹಿನ್ನೆಲೆಯಲ್ಲಿ ಪಟ್ಟಣದ ಅನ್ನದಾನೀಶ್ವರ ಮಠದಲ್ಲಿ 11 ದಿನಗಳ ಕಾಲ ಏರ್ಪಡಿಸಿರುವ 9ನೇ ಪೀಠಾಧೀಶರಾದ ವೆಂಕಟಾಪೂರ ಅಜ್ಜನವರ ಜೀವನ ದರ್ಶನ ಪ್ರವಚನ ಪ್ರಾರಂಭಿಸಿ ಅವರು ಮಾತನಾಡಿದರು. ದೇಹದಲ್ಲಿ ಏನಾದರೂ ಏರುಪೇರಾದರೆ ಹೇಗೆ ನಾವು ವೈದ್ಯರ ಕಡೆ ಹೋಗಿ ಚಿಕಿತ್ಸೆ ಪಡೆದುಕೊಳ್ಳುತ್ತೇವೆಯೋ ಹಾಗೆ ಜೀವನ ಎಂಬ ಜ್ಞಾನಕ್ಕೆ ಪ್ರವಚನ ಎನ್ನುವ ಚಿಕಿತ್ಸೆ ಅಷ್ಟೇ ಅವಶ್ಯವಾಗಿರುತ್ತದೆ. ಆದ್ದರಿಂದ ಆಗಾಗ್ಗೆ ಇಂತಹ ಶರಣರ, ಪುಣ್ಯ ಪುರುಷರ ತತ್ವಾದರ್ಶದ ಮಾತುಗಳನ್ನು ಕೇಳಬೇಕು. ಮುಂಡರಗಿ ಅನ್ನದಾನೀಶ್ವರ ಸ್ವಾಮೀಜಿ ಅವರು ಯಾತ್ರಾ ಮಹೋತ್ಸವದ ಅಂಗವಾಗಿ ಪ್ರತಿವರ್ಷವೂ ವಿಭಿನ್ನವಾದ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದ್ದು, ಭಕ್ತರು ಆ ಕಾರ್ಯಕ್ರಮಗಳ ಸದುಪಯೋಗ ಮಾಡಿಕೊಳ್ಳಬೇಕು ಎಂದರು.ಪ್ರವಚನ ಕಾರ್ಯಕ್ರಮವನ್ನು ನಾಡೋಜ ಅನ್ನದಾನೀಶ್ವರ ಮಹಾಸ್ವಾಮೀಜಿ ಉದ್ಘಾಟಿಸಿದರು. ನೇತೃತ್ವ ವಹಿಸಿದ್ದ ಹೂವಿನಹಡಗಲಿ ಗವಿಮಠದ ಶಿವಶಾಂತವೀರ ಸ್ವಾಮೀಜಿ ಮಾತನಾಡಿ, ನಾಡಿನ ಮಠಾಧೀಶರದಲ್ಲಿ ಮುಂಡರಗಿ ಶ್ರೀಗಳು ಹಿರಿಯರಾಗಿದ್ದು, ತ್ರಿಕಾಲ ಲಿಂಗಪೂಜಾ ನಿಷ್ಠರಾಗಿದ್ದಾರೆ. ನಮ್ಮಂತಹ ಅನೇಕ ಸ್ವಾಮೀಜಿಯವರಿಗೆ ಮಾರ್ಗದರ್ಶನ ಮಾಡುವ ಮೂಲಕ ನಮ್ಮನ್ನೆಲ್ಲ ಪ್ರೋತ್ಸಾಹಿಸಿ ಬೆಳೆಸುತ್ತಿದ್ದಾರೆ. ಸಾಹಿತ್ಯ ರಚನೆ ಹಾಗೂ ಸಾಹಿತ್ಯ ಪ್ರಕಟಣೆಯಲ್ಲಿ ಮುಂಡರಗಿ ಶ್ರೀಗಳು ಮೇರು ಪರ್ವತವಾಗಿದ್ದಾರೆ. ಪ್ರತಿ ವರ್ಷ ಈ ಯಾತ್ರಾ ಮಹೋತ್ಸವದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದೇ ಒಂದು ಸೌಭಾಗ್ಯವಾಗಿದೆ ಎಂದರು.
ಶ್ರೀಮಠದ ಉತ್ತರಾಧಿಕಾರಿ ಜ. ಡಾ. ಮಲ್ಲಿಕಾರ್ಜುನ ಮಹಾಸ್ವಾಮೀಜಿ, ಚನ್ನಬಸವ ದೇವರು, ಶಿವಾನಂದ ದೇವರು, ಯಾತ್ರಾ ಕಮಿಟಿ ಅಧ್ಯಕ್ಷ ನಾಗೇಶ ಹುಬ್ಬಳ್ಳಿ, ಡಾ. ಬಿ.ಜಿ. ಜವಳಿ, ದೇವೀಂದ್ರಪ್ಪ ರಾಮೇನಹಳ್ಳಿ, ಎಂ.ಜಿ. ಗಚ್ಚಣ್ಣವರ, ಸಂತೋಷ ಹಿರೇಮಠ, ವೀರನಗೌಡ ಗುಡದಪ್ಪನವರ, ಎಂ.ಎಸ್. ಶಿವಶೆಟ್ಟರ, ಮಂಜುನಾಥ ಮುಧೋಳ, ಎ.ಎಂ. ಶಿವಶೆಟ್ಟರ, ಅಜ್ಜಪ್ಪ ಲಿಂಬಿಕಾಯಿ, ವೀರೇಶ ಸಜ್ಜನರ, ರವೀಂದ್ರಗೌಡ ಪಾಟೀಲ, ಕುಮಾರ ಬನ್ನಿಕೊಪ್ಪ, ಹಾಲಯ್ಯ ಹಿರೇಮಠ ಉಪಸ್ಥಿತರಿದ್ದರು. ಎಸ್.ಎಸ್. ಇನಾಮತಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.