ಸಾರಾಂಶ
ವಿಜ್ಞಾನ ಕೇಂದ್ರದಲ್ಲಿ ಒಮ್ಮೆ ಸಂಚರಿಸಿದರೆ ಹಾಗೂ ಇಂತಹ ತರಬೇತಿ ಪಡೆದುಕೊಂಡರೆ ವಿಜ್ಞಾನ ಅತ್ಯಂತ ಸುಲಭ ಎನಿಸುತ್ತದೆ. ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು ಬೆಳೆಸಿಕೊಂಡು ಸುತ್ತಲಿನ ಪರಿಸರ ಹಾಗೂ ಸ್ವಚ್ಛತೆಯ ಬಗ್ಗೆ ಗಮನ ಹರಿಸಿ ಅಧ್ಯಯನ ಮಾಡಬೇಕು.
ಧಾರವಾಡ:
ಪ್ರಾದೇಶಿಕ ವಿಜ್ಞಾನ ಕೇಂದ್ರವು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ ಸಹಯೋಗದಲ್ಲಿ 2024-25ನೇ ಸಾಲಿನಲ್ಲಿ ಗ್ರಾಮೀಣ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸ್ಥಾಪಿಸಿರುವ ಪ್ರಯೋಗಾಧಾರಿತ ತರಬೇತಿ ಹಾಗೂ ರೋಪ್ ಆ್ಯಕ್ಟಿವಿಟಿ ಪಾರ್ಕ್‌ನ್ನು ಶಾಸಕ ಅರವಿಂದ ಬೆಲ್ಲದ ಉದ್ಘಾಟಿಸಿದರು.ಬಳಿಕ ಮಾತನಾಡಿದ ಅವರು, ವಿಜ್ಞಾನ ಕೇಂದ್ರದಲ್ಲಿ ಒಮ್ಮೆ ಸಂಚರಿಸಿದರೆ ಹಾಗೂ ಇಂತಹ ತರಬೇತಿ ಪಡೆದುಕೊಂಡರೆ ವಿಜ್ಞಾನ ಅತ್ಯಂತ ಸುಲಭ ಎನಿಸುತ್ತದೆ. ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು ಬೆಳೆಸಿಕೊಂಡು ಸುತ್ತಲಿನ ಪರಿಸರ ಹಾಗೂ ಸ್ವಚ್ಛತೆಯ ಬಗ್ಗೆ ಗಮನ ಹರಿಸಿ ಅಧ್ಯಯನ ಮಾಡಬೇಕು ಎಂದು ತಿಳಿಸಿದರು.
ಪ್ರಾಧ್ಯಾಪಕ ಡಾ. ಆರ್.ಎಫ್. ಭಜಂತ್ರಿ ಮಾತನಾಡಿ, ವೈಜ್ಞಾನಿಕ ಚಟುವಟಿಕೆಗಳನ್ನು ಮನೆ ಹಾಗೂ ಶಾಲೆಯಲ್ಲಿರುವ ವಸ್ತುಗಳನ್ನು ಬಳಸಿಕೊಂಡೇ ಪ್ರಯೋಗ ಮಾಡಬೇಕು. ವಿಜ್ಞಾನದ ಪರಿಕಲ್ಪನೆಗಳನ್ನು ತಾವು ಅರ್ಥೈಸಿಕೊಂಡು ಸುತ್ತಮುತ್ತಲಿನ ಜನರಿಗೂ ತಿಳಿಸಬೇಕು. ವಿಜ್ಞಾನ ಕಲಿತರೆ ನಮ್ಮಲ್ಲಿರುವ ಮೂಢನಂಬಿಕೆಗಳನ್ನು ಸುಲಭವಾಗಿ ಹೋಗಲಾಡಿಸಬಹುದು ಎಂದರು.ಪ್ರಾಧ್ಯಾಪಕ ಡಾ. ರವೀಂದ್ರ ಕಾಂಬಳೆ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ವಿಜ್ಞಾನದಲ್ಲಿ ಆಸಕ್ತಿ ಹೆಚ್ಚಿದ್ದು, ಇದು ದೇಶದ ಅಭಿವೃದ್ಧಿ, ಸಂಶೋಧನೆ ದೃಷ್ಟಿಯಿಂದ ಉತ್ತಮ ಬೆಳವಣಿಗೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಶಾಲಾ ಹಂತದಿಂದಲೇ ಪ್ರಯೋಗಗಳನ್ನು ಮಾಡಿ ತರಬೇತಿ ಪಡೆದು ಉತ್ತಮ ವಿಜ್ಞಾನಿಗಳಾಗಬೇಕು ಎಂದು ತಿಳಿಸಿದರು.ಅಧ್ಯಕ್ಷತೆ ವಹಿಸಿದ್ದ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ. ವೀರಣ್ಣ ಡಿ. ಬೋಳಿಶೆಟ್ಟಿ, ಶಾಸಕರ ಅನುದಾನದಲ್ಲಿ ವಿಜ್ಞಾನ ಕೇಂದ್ರಕ್ಕೆ ಸಿಸಿ ಕ್ಯಾಮೆರಾ ಅಳವಡಿಕೆ, ರೋಪ್ ಆ್ಯಕ್ಟಿವಿಟಿ ಪಾರ್ಕ್ ಮತ್ತು ಮೇಲ್ಚಾವಣಿ ಅಳವಡಿಸಿದ್ದು, ಮಕ್ಕಳು ಇದರ ಉಪಯೋಗ ಪಡೆಯಲು ತಿಳಿಸಿದರು.
ವಿಶಾಲಾಕ್ಷಿ ಎಸ್.ಜೆ. ನಿರೂಪಿಸಿದರು ಹಾಗೂ ಸಿ.ಎಫ್. ಚಂಡೂರ ವಂದಿಸಿದರು. ವಿಜ್ಞಾನ ಕೇಂದ್ರದ ಸಿಬ್ಬಂದಿ, ಜಿಲ್ಲೆಯ ಗ್ರಾಮೀಣ ಪ್ರೌಢಶಾಲಾ ಶಿಕ್ಷಕರು, ವಿದ್ಯಾರ್ಥಿಗಳಿದ್ದರು.