ಸಾಧಕ ಮಹಿಳೆಯರು ಆದರ್ಶವಾಗಲಿ: ಮಂಜುಳಾ ಕರಡಿ

| Published : Mar 15 2024, 01:16 AM IST

ಸಾರಾಂಶ

ಮಹಿಳೆಯರಿಗೆ ಸಮಾನತೆ ನೀಡುವ ನಿಟ್ಟಿನಲ್ಲಿ ಅಭಿನವ ಕರಿಬಸವ ಶಿವಾಚಾರ್ಯರು ಇಂದು ಮಹಿಳೆಯರಿಗೆ ಲಘು ರಥೋತ್ಸವ ಮೀಸಲಿಟ್ಟಿದ್ದು ಶ್ಲಾಘನೀಯ ಕಾರ್ಯ.

ಮಹಿಳಾ ಲಘು ರಥೋತ್ಸವ ಕಾರ್ಯಕ್ರಮದ ನಿಮಿತ್ತ ಮಹಿಳಾ ಗೋಷ್ಠಿ

ಕನ್ನಡಪ್ರಭ ವಾರ್ತೆ ಕುಷ್ಟಗಿ

ಮಹಿಳೆಯರಿಗೆ ಸಮಾನತೆ ನೀಡುವ ನಿಟ್ಟಿನಲ್ಲಿ ಅಭಿನವ ಕರಿಬಸವ ಶಿವಾಚಾರ್ಯರು ಇಂದು ಮಹಿಳೆಯರಿಗೆ ಲಘು ರಥೋತ್ಸವ ಮೀಸಲಿಟ್ಟಿದ್ದು ಶ್ಲಾಘನೀಯ ಕಾರ್ಯ ಎಂದು ಬಿಜೆಪಿ ಮುಖಂಡೆ ಮಂಜುಳಾ ಕರಡಿ ಹೇಳಿದರು.

ತಾಲೂಕಿನ ನಿಡಶೇಸಿ ಗ್ರಾಮದಲ್ಲಿ ಲಿಂ. ಚೆನ್ನಬಸವ ಶಿವಯೋಗಿ ಹಾಗೂ ಕರಿಬಸವ ಶಿವಯೋಗಿ ಅವರ ಪುಣ್ಯಾರಾಧನೆ ನಿಮಿತ್ತ ನಡೆದ ಮಹಿಳಾ ಲಘು ರಥೋತ್ಸವ ಕಾರ್ಯಕ್ರಮದ ನಂತರ ನಡೆದ ಮಹಿಳಾ ಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದರು.

ಮಹಿಳೆಯರು ಅಡುಗೆ ಮನೆಗೆ ಮಾತ್ರ ಸೀಮಿತವಲ್ಲ, ರಥ ಎಳೆದು ತೋರಿಸುವ ಶಕ್ತಿಯನ್ನು ಉಳ್ಳವರು ಇದ್ದಾರೆ ಎಂದು ಈ ಮಠದ ಸ್ವಾಮಿಗಳು ಮಹಿಳೆಯರಿಗೆ ಲಘು ರಥೋತ್ಸವಕ್ಕೆ ಅವಕಾಶ ಮಾಡಿಕೊಡುವ ಮೂಲಕ ತೋರಿಸಿಕೊಟ್ಟಿದ್ದಾರೆ ಎಂದರು.

ನಮ್ಮ ಜಿಲ್ಲೆಯ ಕುಣಿಕೇರಿ ಗ್ರಾಮದ ಹುಚ್ಚಮ್ಮ ಚೌದ್ರಿ ತಮ್ಮ ಎರಡು ಎಕರೆ ಭೂಮಿಯನ್ನು ಶಾಲೆಯ ನಿರ್ಮಾಣಕ್ಕಾಗಿ ದಾನವನ್ನಾಗಿ ನೀಡುವ ಮೂಲಕ ಸಾವಿರಾರು ಮಕ್ಕಳ ಶಿಕ್ಷಣವನ್ನು ಪಡೆಯಲು ಕಾರಣಿಕರ್ತರಾಗಿದ್ದಾರೆ, ಸಾಲುಮರದ ತಿಮ್ಮಕ್ಕ ಮಕ್ಕಳು ಇಲ್ಲವೆಂದು ಸಾವಿರಾರು ಗಿಡಗಳನ್ನು ನೆಡುವ ಮೂಲಕ ಸಸಿಗಳನ್ನೆ ತನ್ನ ಮಕ್ಕಳಂತೆ ನೋಡಿಕೊಂಡು ದೊಡ್ಡಮಟ್ಟದಲ್ಲಿ ಹೆಸರನ್ನು ಮಾಡಿದ್ದಾರೆ. ಇಂತಹ ಸಾಧಕ ಮಹಿಳೆಯರನ್ನು ಆದರ್ಶವನ್ನಾಗಿ ಇಟ್ಟುಕೊಂಡು ನಾವು ರಾಜಕೀಯ, ಸಾಮಾಜಿಕ ಹಾಗೂ ಆರ್ಥಿಕವಾಗಿ ಮುಂದೆ ಬರುವಂತಹ ಕೆಲಸ ಮಾಡಬೇಕು ಎಂದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಅನ್ನಪೂರ್ಣ ಪಾಟೀಲ ಮಾತನಾಡಿ, ನಮ್ಮ ದೇಶದಲ್ಲಿ ಮಹಿಳೆಯರು ಎಷ್ಟೇ ಮುಂದುವರೆದರು ಸಹಿತ ಇನ್ನು ಬಾಲ್ಯ ವಿವಾಹಗಳು, ದೌರ್ಜನ್ಯದಂತಹ ಪ್ರಕರಣಗಳು ನಿಂತಿಲ್ಲ. ಆದ್ದರಿಂದ ಎಲ್ಲರಿಗೂ ಕಡ್ಡಾಯವಾಗಿ ಶಿಕ್ಷಣ ಕೊಡಿಸುವ ಮೂಲಕ ದೌರ್ಜನ್ಯಗಳನ್ನು ತಡೆಗಟ್ಟಲು ಮುಂದಾಗಬೇಕು ಎಂದರು.

ಜಿಪಂ ಮಾಜಿ ಸದಸ್ಯೆ ಮಾಲತಿ ನಾಯಕ, ಶರಣಮ್ಮ ಪಾಟೀಲ ಮಾತನಾಡಿದರು. ಕರ್ನಾಟಕ ರಾಜ್ಯೋತ್ಸವ ಪುರಸ್ಕೃತೆ ಹಾಗೂ ಶಾಲೆಗೆ ಭೂಮಿ ದಾನ ನೀಡಿದ ಕೊಪ್ಪಳದ ಕುಣಿಕೇರಿಯ ಹುಚ್ಚಮ್ಮ ಚೌದ್ರಿ ಕಾರ್ಯಕ್ರಮ ಉದ್ಘಾಟನೆ ಮಾಡಿದರು.

ಸನ್ಮಾನ:

ಕುಷ್ಟಗಿ ತಾಲೂಕಿನಲ್ಲಿ ಶಾಲೆ ನಿರ್ಮಾಣಕ್ಕಾಗಿ ಭೂಮಿ ದಾನ ಮಾಡಿದ ಕಾಟಾಪೂರದ ಪ್ರಹ್ಲಾದ್‌ರಾಜ್ ದೇಸಾಯಿ, ತುಮರಿಕೊಪ್ಪದ ಜಾಹ್ನವಿ ಕುಲಕರ್ಣಿ, ಹಿರೇಬನ್ನಿಗೋಳದ ಬಸಮ್ಮ ಮಾಲಗಿತ್ತಿ, ಎಂ. ಗುಡದೂರನ ಸಂಗಮ್ಮ ಸಂಗಪ್ಪ ಜೀರ್, ಎಂ. ಗುಡದೂರನ ಯಲ್ಲಮ್ಮ ಫಕೀರಪ್ಪ ಜೀರ್ ಅವರನ್ನು ಮಠದಿಂದ ಸನ್ಮಾನಿಸಲಾಯಿತು.

ಚನ್ನಬಸವೇಶ್ವರ ಮಹಾಸ್ವಾಮಿಗಳು, ಕುಂದಗೋಳದ ಅಭಿನವ ಬಸವಣ್ಣ ಅಜ್ಜನವರು, ಧಾರವಾಡದ ಶರಪಭೂಷಣ ದೇವರು, ಕಲಬುರಗಿಯ ಶಶಿಕುಮಾರ ದೇವರು ಸಾನಿಧ್ಯ ವಹಿಸಿದ್ದರು. ಈ ಸಂದರ್ಭದಲ್ಲಿ ಲಕ್ಷ್ಮೀದೇವಿ ದೊಡ್ಡನಗೌಡ ಪಾಟೀಲ, ಪ್ರಿಯಾಂಕ ದೊಡ್ಡಬಸವ ಬಯ್ಯಾಪುರ, ಹುಲಿಗೆಮ್ಮ ಹಿರೇಮನಿ, ಶೈಲಜಾ ಬಾಗಲಿ ಸೇರಿದಂತೆ ಸಾವಿರಾರು ಜನ ಮಹಿಳೆಯರು ಭಾಗವಹಿಸಿದ್ದರು.