ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಆಹಾರ ಪದಾರ್ಥಗಳಲ್ಲಿ ಔಷಧೀಯ ಗುಣಗಳನ್ನು ಪಡೆಯಬೇಕೇ ವಿನಃ ಔಷಧಿಯೇ ಆಹಾರ ಆಗಬಾರದು ಎಂದು ಆಹಾರ ತಜ್ಞೆ ಜಿ.ಎಂ. ಸುನಿತಾ ತಿಳಿಸಿದರು.ನಗರದ ನೇಗಿಲಯೋಗಿ ಮಹಿಳೆಯರ ಕ್ಷೇಮಾಭಿವೃದ್ಧಿ ಸಂಘವು ಮಹಿಳಾ ದಿನಾಚರಣೆಯ ಪ್ರಯುಕ್ತ ಆಯೋಜಿಸಿದ್ದ ರಾಗಿಯಿಂದ ತಯಾರಿಸುವ ಅಡುಗೆ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ಆರೋಗ್ಯವನ್ನು ಮೂಲೆಗೆ ದೂಡಿ ಸಂಪಾದನೆಗಾಗಿ ಓಡುತ್ತಿದ್ದೇವೆ. ಆರೋಗ್ಯವೇ ಭಾಗ್ಯವಾಗಬೇಕು, ಉತ್ತಮ ಆರೋಗ್ಯವಿದ್ದರೇ ನಾವು ದೊಡ್ಡ ಸಾಧನೆಗಳಿಗೆ ಪ್ರಯತ್ನಿಸಬಹುದು. ನಿಮ್ಮ- ನಿಮ್ಮ ಆರೋಗ್ಯಕ್ಕಾಗಿ ಒಂದು ಗಂಟೆಯ ಕಾಲ ಸಮಯ ಮೀಸಲಿಡಿ ಎಂದು ಸಲಹೆ ನೀಡಿದರು.
ಬಾಯಿ ಚಪಲಕ್ಕಾಗಿ ಜಂಕ್ ಫುಡ್ ಗಳಾದ ಪಿಜ್ಜಾ, ಬರ್ಗರ್ ಇತ್ಯಾದಿ ತಿನಿಸುಗಳನ್ನು ತ್ಯಜಿಸಿ ಪ್ರೋಟೀನ್ ದೊರೆಯುವಂತಹ ಮೊಳಕೆ ಕಾಳು, ಸೊಪ್ಪುಗಳನ್ನು ಹೆಚ್ಚೆಚ್ಚು ಬಳಸಿ. ಇಂದು ಅತ್ಯಂತ ವಿಟಮಿನ್ ಯುಕ್ತ ಆಹಾರ ಪದಾರ್ಥವಾದ ರಾಗಿ ಸಹಾಯದಿಂದ ಅಡುಗೆ ಸ್ಪರ್ಧೆ ನಡೆಯುತ್ತಿರುವುದು ಬಹಳ ಸಂತಸ ತಂದಿದೆ. ಉತ್ತಮ ಆರೋಗ್ಯಕ್ಕಾಗಿ ಮೊದಲು ಮನೆಯ ಮಹಿಳೆ ಬದಲಾಗಬೇಕು. ಆಗ ಸಂಪೂರ್ಣ ಮನೆಯ ಜೀವನ ಶೈಲಿ ಬದಲಾಯಿಸಲು ಸಾಧ್ಯ ಎಂದು ಅವರು ಹೇಳಿದರು.ನೇಗಿಲಯೋಗಿ ಮಹಿಳೆಯರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷೆ ಜೆ. ಶೋಭ ರಮೇಶ್ ಮಾತನಾಡಿ, ರಾಗಿಯ ತಿನಿಸುಗಳು ಅಂದಾಕ್ಷಣ ನಮ್ಮಲ್ಲಿ ಉತ್ಸಾಹವೇ ಇರುವುದಿಲ್ಲ. ಇಂತಹ ಸಂದರ್ಭದಲ್ಲಿ ಇಂದು 20 ಹೆಚ್ಚು ಸ್ಪರ್ಧಿಗಳು ಬಹಳ ಸಡಗರದಿಂದ ಭಾಗವಹಿಸುತ್ತಿರುವುದು ಬಹಳ ವಿಶೇಷ.ನಮ್ಮ ಸಂಸ್ಥೆಯು ಪ್ರೋತ್ಸಾಹ ನೀಡುವ ಸಲುವಾಗಿ ಇಂತಹ ಹಲವು ಕಾರ್ಯಕ್ರಮ ಮಾಡತ್ತಲೇ ಇರುತ್ತದೆ ಎಂದರು.
ಸ್ಪರ್ಧೆಯಲ್ಲಿ ಪಾಲ್ಗೊಂಡ ಮಹಿಳೆಯರು ಬಹಳ ಹುರುಪಿನಿಂದ ರಾಗಿ ಹಾಲು, ರಾಗಿಯಿಂದ ತಯಾರಿಸಿದ ನೀರು ದೋಸೆ, ರಾಗಿ ಪೂರಿ, ಉಪ್ಪಿಟ್ಟು, ತಂಬಿಟ್ಟು, ವಡೆ ಹೀಗೆ ಹತ್ತು ಹಲವು ಅಡುಗೆ ತಯಾರಿ ಮಾಡಿ ಗಮನ ಸೆಳೆದರು. ನಂತರ ತೋರಣ ಕಟ್ಟುವ ಸ್ಪರ್ಧೆ ಹಾಗೂ ಇತರೆ ಆಟದ ಸ್ಪರ್ಧೆಗಳನ್ನು ಆಯೋಜಿಸಿದ್ದು, ಮಹಿಳೆಯರು ಭಾಗವಹಿಸಿ ಸಂಭ್ರಮಿಸಿದರು. ತೀರ್ಪುಗಾರರಾಗಿ ಆಹಾರ ತಜ್ಞೆ ಜಿ.ಎಂ. ಸುನಿತಾ ಹಾಗೂ ಸಂಗೀತ ವಿದ್ವಾನ್ ರಘು ಭಾಗವಹಿಸಿದ್ದರು. ಮಾ.29 ರಂದು ಸಂಸ್ಥೆಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಚರಣೆ ಕಾರ್ಯಕ್ರಮ ನಡೆಯಲಿದ್ದು, ಅಂದು ವಿಜೇತರಿಗೆ ಬಹುಮಾನ ಹಾಗೂ ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೂ ಪ್ರಮಾಣ ಪತ್ರ ವಿತರಿಸಲಾಗುತ್ತದೆ.ಸಂಸ್ಥೆಯ ಕಾರ್ಯದರ್ಶಿ ಬಿ.ಪಿ. ಉಷಾರಾಣಿ, ಖಜಾಂಚಿ ಅನಿತಾ ಹೇಮಂತ್ ಹಾಗೂ ಪದಾಧಿಕಾರಿಗಳು ಇದ್ದರು.