ಹಾವೇರಿ ನಗರದ ಜಿ.ಎಚ್. ಕಾಲೇಜಿನಲ್ಲಿ ಬುಧವಾರ ಶಾಲಾ ಶಿಕ್ಷಣ ಇಲಾಖೆಯಿಂದ ಜಿಲ್ಲೆಯ ಪ್ರೌಢಶಾಲೆ ಮುಖ್ಯ ಶಿಕ್ಷಕರಿಗೆ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣಾ ಕಾರ್ಯಾಗಾರ ಆಯೋಜಿಸಲಾಗಿತ್ತು.
ಹಾವೇರಿ: ಪ್ರತಿಯೊಬ್ಬ ವಿದ್ಯಾರ್ಥಿಯ ಜೀವನದಲ್ಲಿ ಎಸ್‌ಎಸ್‌ಎಲ್‌ಸಿ ಪ್ರಮುಖ ಘಟ್ಟವಾಗಿದ್ದು, ಈ ಹಂತದಲ್ಲಿ ಉತ್ತಮವಾಗಿ ಅಧ್ಯಯನ ಮಾಡಿದರೆ ಜೀವನದಲ್ಲಿ ಸಾಧನೆ ಮಾಡಬಹುದು. ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಜತೆಗೆ ಅವರಲ್ಲಿ ಆತ್ಮವಿಶ್ವಾಸ, ದೂರದೃಷ್ಟಿ ಬೆಳೆಸುವ ಕೆಲಸವನ್ನು ಶಿಕ್ಷಕರು ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಹೇಳಿದರು.
ನಗರದ ಜಿ.ಎಚ್. ಕಾಲೇಜಿನಲ್ಲಿ ಬುಧವಾರ ಶಾಲಾ ಶಿಕ್ಷಣ ಇಲಾಖೆಯಿಂದ ಜಿಲ್ಲೆಯ ಪ್ರೌಢಶಾಲೆ ಮುಖ್ಯ ಶಿಕ್ಷಕರಿಗೆ ಆಯೋಜಿಸಿದ್ದ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣಾ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಉತ್ತೀರ್ಣ ಅಂಕವನ್ನು 35ರಿಂದ 33ಕ್ಕೆ ಇಳಿಸಲಾಗಿದೆ. ಜಗತ್ತು ಮೇಲ್ಮುಖವಾಗಿ ತೆರಳುತ್ತಿದ್ದರೆ, ನಾವು ಕೆಳಮುಖಕ್ಕೆ ಇಳಿಯುತ್ತಿದ್ದೇವೆ. ಹಾವೇರಿ ಮಾನವ ಸೂಚ್ಯಂಕ ಅಭಿವೃದ್ಧಿಯಲ್ಲಿ 25ನೇ ಸ್ಥಾನದಲ್ಲಿ ಇದ್ದೇವೆ. ಶಿಕ್ಷಣ, ಆರೋಗ್ಯದಲ್ಲೂ ಹಿಂದೆ ಇದ್ದೇವೆ. ಫಲಿತಾಂಶದಲ್ಲಿ ಮತ್ತಷ್ಟು ಸುಧಾರಣೆ ಆಗಬೇಕು ಎಂದರು.ಶಾಲಾ ಶಿಕ್ಷಣ ಇಲಾಖೆ ಧಾರವಾಡದ ಅಪರ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಮಾತನಾಡಿ, ಹಾವೇರಿ ಜಿಲ್ಲೆ ಶಿಕ್ಷಣ ಕ್ಷೇತ್ರ ಸೇರಿದಂತೆ ವಿವಿಧ ರಂಗಗಳಲ್ಲಿ ವಿಶೇಷ ಪಾತ್ರ ವಹಿಸಿದೆ. ಈ ಬಾರಿ ಶೈಕ್ಷಣಿಕ ವರ್ಷದ ಆರಂಭದಲ್ಲಿಯೇ ಕಲಿಕೆಯಲ್ಲಿ ನಿಧಾನಗತಿ ವಿದ್ಯಾರ್ಥಿಗಳನ್ನು ನಮ್ಮ ಶಿಕ್ಷಕರು ಗುರುತಿಸಿ, ವಿಶೇಷ ತರಗತಿ ಮಾಡುತ್ತಿದ್ದಾರೆ. ಈ ಬಾರಿ ಶೇ. 100ರಷ್ಟು ಫಲಿತಾಂಶ ನೀಡುವ ಉದ್ದೇಶದೊಂದಿಗೆ 29 ಅಂಶಗಳ ಕಾರ್ಯಕ್ರಮ ಹಾಕಿಕೊಂಡು ವಿದ್ಯಾರ್ಥಿಗಳ ಅಭಿವೃದ್ಧಿಯ ಗುರಿ ಹೊಂದಲಾಗಿದೆ. ಸರ್ಕಾರದ ಮಿಷನ್ ಶೇ. 40ರಷ್ಟು ಫಲಿತಾಂಶ ಹೊಂದುವುದು ಮುಖ್ಯ ಗುರಿಯಾಗಿದೆ. ಇದಕ್ಕೆ ಅನುಗುಣವಾಗಿ ತರಬೇತಿ ನೀಡಲಾಗುತ್ತಿದೆ. ಪ್ರತಿ ಪಾಠಕ್ಕೆ ಸಂಬಂಧಿಸಿದಂತೆ ಶಿಕ್ಷಕರಿಗೆ ಪ್ರಶ್ನೆಗಳ ನೀಲನಕ್ಷೆ ನೀಡಲಾಗಿದ್ದು, ಎಲ್ಲ ಮಕ್ಕಳು ಪಾಸಾಗುವಂತೆ ತರಬೇತಿ ನೀಡಿ ಶೇಕಡಾ ನೂರರಷ್ಟು ಫಲಿತಾಂಶ ಪಡೆಯುವ ನಿಟ್ಟಿನಲ್ಲಿ ತಯಾರಿ ಮಾಡಲಾಗುತ್ತಿದೆ ಎಂದರು.ಧಾರವಾಡ ಅಪರ ಆಯುಕ್ತ ಕಚೇರಿ ನಿರ್ದೇಶಕ ಈಶ್ವರ ನಾಯಕ, ಗಿರೀಶ ಪದಕಿ, ನಿಜಲಿಂಗಪ್ಪ ಬಸೇಗಣ್ಣಿ, ಝಡ್.ಎಂ. ಖಾಜಿ ಇದ್ದರು. ಡಿಡಿಪಿಐ ಮೋಹನ ದಂಡಿನ ಸ್ವಾಗತಿಸಿದರು. ಶಿಕ್ಷಕ ನಾಗರಾಜ ನಡುವಿನಮಠ ಕಾರ್ಯಕ್ರಮ ನಿರೂಪಿಸಿದರು.
ವಿನಾಯಕ ಪ್ರೌಢಶಾಲೆ ಬಂದ್‌ಗೆ ಸೂಚನೆ: ಹಿರೇಕೆರೂರು ತಾಲೂಕಿನ ಖಾಸಗಿ ಶಾಲೆ ವಿನಾಯಕ ಶಿಕ್ಷಣ ಸಂಸ್ಥೆಯಲ್ಲಿ ಡಮ್ಮಿ ಮಕ್ಕಳನ್ನು ದಾಖಲು ಮಾಡಿಕೊಂಡಿದ್ದಾರೆ. ಶಾಲೆಯಲ್ಲಿ ಮೂಲ ಸೌಕರ್ಯಗಳೇ ಇಲ್ಲ. ಹಾಗಾಗಿ ಅತ್ಯಂತ ಕಡಿಮೆ ಫಲಿತಾಂಶ ಬಂದಿದೆ. ಅನುದಾನಿತ ಸಂಸ್ಥೆ ಮಾರುತಿ ಪ್ರೌಢಶಾಲೆಯಲ್ಲಿ ಫಲಿತಾಂಶ ಕಡಿಮೆ ಆಗಿದೆ. 28 ಮಕ್ಕಳಿಗೆ ಇಬ್ಬರೇ ಶಿಕ್ಷಕರು ಇದ್ದಾರೆ. ಹೀಗೆ ಅತ್ಯಂತ ಕಡಿಮೆ ಫಲಿತಾಂಶ ಪಡೆದ ಅಲ್ಲಿನ ಐದು ಶಾಲೆಗಳ ವಿರುದ್ಧ ಬಿಇಒ ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು. ತಕ್ಷಣ ಸ್ಪಂದಿಸಿದ ಜಿಪಂ ಸಿಇಒ ರುಚಿ ಬಿಂದಲ್, ಕೂಡಲೇ ಶಾಲೆ ಬಂದ್‌ಗೆ ನೋಟಿಸ್ ಕೊಡಿ, ಅಂಥ ಅಶಿಸ್ತನ್ನು ಸಹಿಸಲ್ಲ. ಇದು ಎಲ್ಲರಿಗೂ ಅನ್ವಯಿಸುತ್ತದೆ ಎಂದು ಎಚ್ಚರಿಸಿದರು.ಟಾಪ್ ಟೆನ್ ಒಳಗೆ ಬರಬೇಕು: ಶಾಲಾ ಮುಖ್ಯ ಶಿಕ್ಷಕರು ಆಡಳಿತದ ಜವಾಬ್ದಾರಿ ಜತೆಗೆ ಎಲ್ಲ ಶಿಕ್ಷಕರೊಂದಿಗೆ ಟೀಂ ವರ್ಕ್ ಮಾಡಿದರೆ ಉತ್ತಮ ಫಲಿತಾಂಶ ಸಾಧಿಸಬಹುದು. ನಾನು ಕೂಡ ಸರ್ಕಾರಿ ಶಾಲೆಯಲ್ಲಿ ಓದಿದ್ದೇನೆ. ಸರ್ಕಾರಿ ಶಾಲೆಯ ಶಿಕ್ಷಕರು ಮೆರಿಟ್ ಮೇಲೆ ಆಯ್ಕೆಯಾಗಿ ಬಂದಿರುತ್ತಾರೆ. ಪರೀಕ್ಷೆಗೆ ಮಕ್ಕಳನ್ನು ಹೇಗೆ ಸಿದ್ಧಗೊಳಿಸಬೇಕು ಎಂಬುದು ಗೊತ್ತಿರುತ್ತದೆ. ಸರ್ಕಾರದ ಕಾರ್ಯಕ್ರಮಗಳ ಜತೆಗೆ ತಮ್ಮದೇ ಮಾರ್ಗದಲ್ಲಿ ಮಕ್ಕಳನ್ನು ಪರೀಕ್ಷೆಗೆ ಸಿದ್ಧಗೊಳಿಸಬೇಕು. ಈ ಬಾರಿ ಹಾವೇರಿ ಜಿಲ್ಲೆ ಟಾಪ್ ಟೆನ್ ಒಳಗೆ ಬರಬೇಕು ಎಂದು ಹಾವೇರಿ ಎಸ್‌ಪಿ ಯಶೋದಾ ವಂಟಗೋಡಿ ಹೇಳಿದರು.ಫಲಿತಾಂಶ ಸುಧಾರಿಸೋಣ: ನಾನು ಶಾಲೆಗಳಿಗೆ ಭೇಟಿ ನೀಡಿದಾಗ ಶಿಕ್ಷಕರು ಕೇವಲ ಬುದ್ಧಿವಂತ ಮಕ್ಕಳನ್ನೇ ಪರಿಚಯಿಸುತ್ತಾರೆ. ಕಲಿಕೆಯಲ್ಲಿ ಹಿಂದಿರುವ ಮಕ್ಕಳನ್ನೂ ಮುನ್ನೆಲೆಗೆ ತಂದು ಅವರ ಬಗ್ಗೆಯೂ ಗಮನಹರಿಸಬೇಕು. ಯಾವೊಬ್ಬ ವಿದ್ಯಾರ್ಥಿಯೂ ದಡ್ಡರಲ್ಲ, ನಾವು ಹಾಗೆ ಬಿಂಬಿಸುತ್ತಿದ್ದೇವೆ, ಅವರಿಗೆ ಪ್ರೇರೇಪಣೆ ನೀಡಬೇಕು. ಶಾಲೆಯಿಂದ ದೂರ ಉಳಿದಿರುವ ಮಕ್ಕಳನ್ನು ಶಾಲೆಗೆ ಕೆರೆ ತರುವ ಪ್ರಯತ್ನ ಮಾಡಬೇಕು. ಎಲ್ಲರೂ ಜವಾಬ್ದಾರಿ ತೆರೆದುಕೊಂಡು ಈ ಬಾರಿ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಿಸೋಣ. ಏನಾದರೂ ಸಮಸ್ಯೆ ಇದ್ದರೆ ಸಂಬಂಧಪಟ್ಟವರು ಕೂಡಲೇ ಗಮನಕ್ಕೆ ತರಬೇಕು ಎಂದು ಹಾವೇರಿ ಜಿಪಂ ಸಿಇಒ ರುಚಿ ಬಿಂದಲ್ ಹೇಳಿದರು. ಶೇ. 100 ಫಲಿತಾಂಶ ಪಡೆಯೋಣ: ಜಿಲ್ಲೆಯ ಶಿಕ್ಷಕರು 45 ದಿನ ಮದುವೆ, ಪ್ರವಾಸ ಎಲ್ಲ ತ್ಯಾಗ ಮಾಡಿ ಮಕ್ಕಳಿಗಾಗಿ ಮೀಸಲು ಇಡಬೇಕು. ಈ ಬಾರಿ ಶೇ. 100ರಷ್ಟು ಫಲಿತಾಂಶ ಮಾಡಿದವರಿಗೆ ಸನ್ಮಾನ ಮಾಡುತ್ತೇನೆ. ಕಳೆದ ವರ್ಷ 35 ಶಾಲೆ ಮಾತ್ರ ಶೇ. 100ರಷ್ಟು ಪಡೆದಿದ್ದರು. ಈ ಬಾರಿ ಕನಿಷ್ಠ 100 ಶಾಲೆಗಳು ಶೇಕಡಾ ನೂರಷ್ಟು ಫಲಿತಾಂಶ ಪಡೆಯಬೇಕು ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಹೇಳಿದರು.