ಸಾರಾಂಶ
ಕನ್ನಡಪ್ರಭ ವಾರ್ತೆ ರಾಮದುರ್ಗ
ಸರ್ಕಾರಿ ಶಾಲೆಗಳಲ್ಲಿ ಅಧ್ಯಯನ ಮಾಡುವ ಮಕ್ಕಳಿಗೆ ಸರ್ಕಾರ ಪಠ್ಯಪುಸ್ತಕ, ಸಮವಸ್ತ್ರ ಸೇರಿದಂತೆ ಎಲ್ಲ ಸೌಲಭ್ಯ ಒದಗಿಸುತ್ತಿದ್ದು ಖಾಸಗಿ ಶಾಲೆಗಳೊಂದಿಗೆ ಪೈಪೋಟಿ ಮಾಡುವಂತ ಶಿಕ್ಷಣ ನೀಡಲು ಸರ್ಕಾರಿ ಶಾಲೆಗಳ ಶಿಕ್ಷಕರು ಶ್ರಮಿಸಬೇಕು. ಈ ಮೂಲಕ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಮುಂದಾಗಬೇಕು ಎಂದು ಸರ್ಕಾರದ ಮುಖ್ಯಸಚೇತಕ ಅಶೋಕ ಪಟ್ಟಣ ಹೇಳಿದರು.ರಾಮದುರ್ಗದ ವಿದ್ಯಾಚೇತನ ಆವರಣದಲ್ಲಿ ₹1.20 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಗುರು ಭವನವನ್ನು ಶನಿವಾರ ಉದ್ಘಾಟಿಸಿ, ಎಲ್ಲ ಶಾಲೆಗಳ ಮಕ್ಕಳಿಗೆ ಶಾಸಕರು ಸ್ವಂತ ಖರ್ಚಿನಿಂದ ಉಚಿತವಾಗಿ ನೋಟ್‌ಬುಕ್, ಶಾಲಾಬ್ಯಾಗ್ ವಿತರಿಸಿ ಮಾತನಾಡಿದ ಅವರು, ಬಹುತೇಕ ಶಿಕ್ಷಕರು ಶಾಲೆಗಳಲ್ಲಿ ಪಾಠ ಮಾಡುವುದಕ್ಕಿಂತ ರಾಜಕಾರಣ ಮಾಡುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು. ಸರ್ಕಾರಿ ಶಾಲೆಗಳಿಗೆ ಬಡವರ ಮಕ್ಕಳು ಓದಲು ಬರುತ್ತಾರೆ. ಅವರಿಗೆ ಉತ್ತಮ ಶಿಕ್ಷಣ ನೀಡಿ ಮಾದರಿ ವ್ಯಕ್ತಿಗಳನ್ನಾಗಿ ಮಾಡಬೇಕು. ಶಿಕ್ಷಕರು ಮನಪೂರ್ವಕ ನೀಡಿರುವ ದೇಣಿಗೆಯಿಂದ ನಿರ್ಮಾಣವಾಗಿರುವ ಗುರು ಭವನದಲ್ಲಿ ಮಕ್ಕಳ ಭವಿಷ್ಯಕ್ಕೆ ಪೂರಕವಾಗುವ ಚಟುವಟಿಕೆ ನಡೆಸುವ ಮೂಲಕ ಸದ್ಬಳಕೆ ಮಾಡಿಕೊಳ್ಳಬೇಕು. ಖಾಸಗಿ ವ್ಯಕ್ತಿಗಳ ಕಾರ್ಯಕ್ರಮಕ್ಕೆ ಬಾಡಿಗೆ ನೀಡದೇ ಕೇವಲ ಶೈಕ್ಷಣಿಕ ಕಾರ್ಯಕ್ರಮ ಮಾತ್ರ ನೀಡಬೇಕು ಎಂದು ಸಲಹೆ ನೀಡಿದರು.ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಲೀಲಾವತಿ ಹಿರೇಮಠ ಮಾತನಾಡಿ, ಬೆಳಗಾವಿ ಜಿಲ್ಲೆಯ ಕಿತ್ತೂರ ಮತ್ತು ರಾಮದುರ್ಗದ ಗುರುಭವನ ಉದ್ಘಾಟನೆಯಾಗಿದ್ದು ಜಿಲ್ಲೆಯ ಬಹುತೇಕ ವಲಯಗಳಲ್ಲಿ ಗುರುಭವನ ಕಾಮಗಾರಿ ಪ್ರಾರಂಭವಾಗಿವೆ. ಆದರೆ ಬೆಳಗಾವಿ ಮತ್ತು ಖಾನಾಪೂರದಲ್ಲಿ ಗುರುಭವನ ನಿರ್ಮಾಣ ಮಾಡಬೇಕಾಗಿದ್ದು ನಮ್ಮ ಜವಾಬ್ದಾರಿ ಹೆಚ್ಚಿದೆ ಎಂದರು.ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಟಿ.ಬಳಿಗಾರ ಮಾತನಾಡಿ, ಗುರುಭವನ ನಿರ್ಮಾಣಕ್ಕೆ ಶಾಲೆಯ ಮಕ್ಕಳ ಪ್ರಭಾವ, ಇಚ್ಛಾಶಕ್ತಿ ಮತ್ತು ಕ್ಷೇತ್ರದ ಶಾಸಕರ ಆಶೀರ್ವಾದದಿಂದ ಕಡಿಮೆ ಅವಧಿಯಲ್ಲಿ ಗುರುಭವನ ನಿರ್ಮಾಣ ಸಾಧ್ಯವಾಗಿದೆ. ಮಕ್ಕಳ ಶೈಕ್ಷಣಿಕ ಚಟುವಟಿಕೆಗೆ ಪ್ರೋತ್ಸಾಹ ನೀಡುವ ಮಕ್ಕಳ ಭವನವಾಗಿ ಕಾರ್ಯಮಾಡುವುದಾಗಿ ಹೇಳಿದರು.ಹೆಸರಿಗಾಗಿ ಕೆಲಸ ಮಾಡದೆ ಒಳ್ಳೆಯ ಕೆಲಸ ಮಾಡಿದರೆ ಹೆಸರು ತಾನಾಗಿಯೇ ಬರುತ್ತದೆ. ಅಧಿಕಾರಿಗಳ ಭ್ರಷ್ಟಾಚಾರ ಮುಕ್ತ ಆಡಳಿತ ನಡೆಸಲು ರಾಜಕಾರಣಿಗಳ ಸಹಕಾರ ಮುಖ್ಯವಾಗಿದ್ದು ನಾನು ಪ್ರಾಮಾಣಿಕ ಅಧಿಕಾರಿಯಾಗಿ ಯಾರಿಂದಲು ಹಣ ಪಡೆಯದೇ ನೌಕರಿ ಮಾಡಲು ಮುಖ್ಯಕಾರಣ ಕ್ಷೇತ್ರದ ಶಾಸಕರು ಎಂದರು.ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷೆ ಲಕ್ಷ್ಮೀ ಕಡಕೋಳ, ಉಪಾಧ್ಯಕ್ಷೆ ಸರಿತಾ ದೂತ, ಸದಸ್ಯ ನಾಗರಾಜ ಕಟ್ಟಿಮನಿ, ಡಿವೈಪಿಸಿ ಬಸವರಾಜ ಮಿಲಾನಟ್ಟಿ ಸೇರಿದಂತೆ ಶಿಕ್ಷಕಕರ ಸಂಘದ ಜಿಲ್ಲಾ ಮತ್ತು ತಾಲೂಕು ಘಟಕದ ಪದಾಧಿಕಾರಿಗಳಿದ್ದರು. ಕ್ಷೇತ್ರಸಮನ್ವಯಾಧಿಕಾರಿ ಜೆ. ಸಿ. ಶೀಲವಂತ ಸ್ವಾಗತಿಸಿದರು. ಬಿಸಿಯೂಟದ ಸಹಾಯಕ ನಿರ್ದೇಶಕ ರಾಜಶೇಖರ ಹಿರೇಮಠ ನಿರೂಪಿಸಿದರು.ಇಸಿಓ ಆನಂಧತೀರ್ಥ ಜೋಶಿ ವಂದಿಸಿದರು.