ಮೀಸಲಿಟ್ಟ ಅನುದಾನ ಸಮರ್ಪಕವಾಗಿ ಬಳಕೆಯಾಗಲಿ: ನರೇಂದ್ರಸ್ವಾಮಿ

| Published : Nov 17 2024, 01:18 AM IST

ಮೀಸಲಿಟ್ಟ ಅನುದಾನ ಸಮರ್ಪಕವಾಗಿ ಬಳಕೆಯಾಗಲಿ: ನರೇಂದ್ರಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಬಾಗಲಕೋಟೆ ಜಿಲ್ಲೆಗೆ ಸಂಬಂಧಿಸಿದಂತೆ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಅಭಿವೃದ್ಧಿಗಾಗಿ ಹಮ್ಮಿಕೊಳ್ಳಲಾದ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಡೆಯಿತು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಶೋಷಿತ ವರ್ಗಗಳ ಅಭಿವೃದ್ಧಿಗೆ ಸರ್ಕಾರ ಮೀಸಲಿಟ್ಟ ಅನುದಾನ ಸಮರ್ಪಕವಾಗಿ ಬಳಕೆಯಾಗಬೇಕು ಎಂದು ಕರ್ನಾಟಕ ವಿಧಾನ ಮಂಡಳದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿ ಅಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದರು.

ಜಿಲ್ಲಾ ಪಂಚಾಯಿತಿ ನೂತನ ಸಭಾಭವನದಲ್ಲಿ ಬಾಗಲಕೋಟೆ ಜಿಲ್ಲೆಗೆ ಸಂಬಂಧಿಸಿದಂತೆ ಅನುಸೂಚಿತ ಜಾತಿ ಮತ್ತು ಪಂಗಡಗಳ ಅಭಿವೃದ್ಧಿಗಾಗಿ ಹಮ್ಮಿಕೊಳ್ಳಲಾದ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶೋಷಿತ ವರ್ಗಗಳಿಗೆ ವಿವಿಧ ಇಲಾಖೆಗಳಲ್ಲಿ ಮೀಸಲಿಟ್ಟ ಅನುದಾನ ಬಳಕೆ ಆಗಬೇಕು. ಲೋಪವಾದಲ್ಲಿ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಕಳೆದ 2013ರಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಪ್ರತ್ಯೇಕ ಕಾಯ್ದೆ ಜಾರಿಗೊಳಿಸಲಾಗಿದೆ. ಸಾಮಾಜಿಕ ಅಸಮಾನತೆ ಎಂಬುದು ಸಮಾಜಕ್ಕೆ ಅಂಟಿದ ಪಿಡುಗಾಗಿದೆ. ಇದನ್ನು ಹೋಗಲಾಡಿಸಲು ಕಲ್ಯಾಣ ಕಾರ್ಯಕ್ರಮ ಅನುಷ್ಠಾನ ಮಾಡಬೇಕಿದೆ. ಶೋಷಿತ ವರ್ಗದವರ ಅಭಿವೃದ್ಧಿಗೆ ಯಾವ ರೀತಿ ಯೋಜನೆ ನಿರ್ಮಿಸಿ ಅವರನ್ನು ಮೇಲೆತ್ತುವ ಕೆಲಸವನ್ನು ಅಧಿಕಾರಿ ವರ್ಗದವರು ಮಾಡಬೇಕಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ತಮ್ಮ ಕಾರ್ಯಕ್ಷಮತೆ ಹೆಚ್ಚಿಸಿಕೊಳ್ಳುವ ಮೂಲಕ ಸಮುದಾಯಗಳ ಬಲವರ್ಧನೆಗೆ ಮುಂದಾಗಬೇಕು ಎಂದು ತಿಳಿಸಿದರು.

ಸಮಾಜಕ್ಕೆ ಮಾರಕವಾಗಿರುವ ದೇವದಾಸಿ ಪದ್ಧತಿ ನಿರ್ಮೂಲನೆಗೆ ಸರ್ಕಾರ ಅನೇಕ ಯೋಜನೆ ಜಾರಿಗೆ ತಂದಿದೆ. ದೇವದಾಸಿ ಪುನರ್ವಸತಿ ಯೋಜನೆಯಡಿ 4 ಸಾವಿರ ದೇವದಾಸಿ ಮಹಿಳೆಯರಿಗೆ ಇನ್ನು ಸೂರು ದೊರೆಯದಿರುವ ಮಾಹಿತಿ ತಿಳಿಸಿದ ಅಧ್ಯಕ್ಷರು ಅಸಮಾಧಾನ ವ್ಯಕ್ತಪಡಿಸಿ ಆದ್ಯತೆ ಮೇರೆಗೆ ಪ್ರತಿಯೊಬ್ಬರಿಗೂ ಇನ್ನು ಎರಡು ತಿಂಗಳಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಸೂರು ಕಲ್ಪಸಲು ಕ್ರಮಕೈಗೊಳ್ಳಬೇಕು. ಸಾಮಾಜಿಕ ಜವಾಬ್ದಾರಿ ಸರ್ಕಾರದ ಬದ್ಧತೆಯಿಂದ ಕೆಲಸ ನಿರ್ವಹಿಸಬೇಕು. ಇಲ್ಲದಿದ್ದರೆ ಕಾನೂನು ರೀತಿಯಲ್ಲಿ ಕ್ರಮವಹಿಸಲಾಗುವುದೆಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡುವುದರ ಜೊತೆಗೆ ಎರಡು ತಿಂಗಳು ಬಿಟ್ಟು ಜಿಲ್ಲೆಗೆ ಬರುವುದಾಗಿ ತಿಳಿಸಿದರು.

ಕೇಂದ್ರ ಹಾಗೂ ರಾಜ್ಯ ಪುರಷ್ಕೃತ ಯೋಜನೆಯಾದ ಜಲಜೀವನ ಮಿಷನ್‌ ಯೋಜನೆಯಡಿ ಗ್ರಾಮೀಣ ಭಾಗದ ಪ್ರತಿಯೊಂದು ಮನೆಗಳಿಗೆ ನಲ್ಲಿ ಸಂಪರ್ಕ ನೀಡಬೇಕಾಗಿದೆ. ಜಿಲ್ಲೆಯಲ್ಲಿ 4 ಹಂತದಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ ಆದರೆ ಕಾಮಗಾರಿ ಗುಣಮಟ್ಟವಾಗಿರುವ ಬಗ್ಗೆ ಪರಿಶೀಲನೆ ನಡೆದಿದೆಯೇ, ಕಾಮಗಾರಿಯಲ್ಲಿ ಗುಣಮಟ್ಟದ ಪೈಪ್ ಹಾಕಿದ್ದಾರೆ ಕೇಳಿದರು. ಅಲ್ಲದೇ ವಿವಿಧ ರೀತಿಯ ಪೈಪ್‌ಗಳ ದರವನ್ನು ತಿಳಿಯದ ಅಭಿಯಂತರರು ಕಾಮಗಾರಿ ಗುಣಮಟ್ಟ ಪರಿಶೀಲಿಸಲು ಸಾಧ್ಯವೇ ಎಂದು ಪ್ರಶ್ನಿಸಿದರು. ಈ ಯೋಜನೆ 30 ವರ್ಷದ್ದಾಗಿದ್ದು, ಕಳಪೆ ಗುಣಮಟ್ಟದ ಪೈಪಲೈನ್ ಹಾಕಿದ್ದರೆ ಬಾಳಿಕೆ ಬರುತ್ತದೆ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.

ಪ್ಯಾಕೆಜ್ ಟೆಂಡರ್ ಸಿಸ್ಟಮ್ ಆಗದಂತೆ ನೋಡಿಕೊಳ್ಳಲು ಕೆಬಿಜೆಎನ್ಎಲ್‌ಗೆ ತಿಳಿಸಿದರು. ವಿವಿಧ ಕಾಮಗಾರಿಗಳನ್ನು ಒಂದೇ ಟೆಂಡರ್‌ನಲ್ಲಿ ಕರೆದರೆ ಎಸ್ಸಿ, ಎಸ್ಟಿ ಸಮುದಾಯಕ್ಕೆ ನೀಡಬೇಕಾದ ಟೆಂಡರ್ ಕೈತಪ್ಪಿಹೋಗುತ್ತಿವೆ. ಹಾಗಾಗದಂತೆ ಜಿಲ್ಲಾಡಳಿತ ನಿಗಾವಹಿಸಲು ತಿಳಿಸಿದರು. ಉದ್ಯೋಗ ಖಾತ್ರಿ ಯೋಜನೆಯಡಿ ಶಾಲೆಗೆ ಸಂಬಂದಿಸಿದ ಕೌಂಪೌಂಡ್, ಆಟದ ಮೈದಾನ, ಬಿಡಿ ಊಟದ ಕೋಣೆ ನಿರ್ಮಾಣ ಮಾಡಲಾಗುತ್ತಿದೆ. ಸ್ವಚ್ಛಭಾರತ ಮಿಷಯ ಯೋಜನೆಯಡಿ ಪರಿಶಿಷ್ಟ ಜಾತಿ ಹಾಗೂ ಪಂಗಡ ಕುಟುಂಬಗಳಿಗೆ ವೈಯಕ್ತಿಕ ಶೌಚಾಲಯ ಹಾಗೂ ಜಾಗ ಇಲ್ಲದವರಿಗೆ ಸಮುದಾಯ ಶೌಚಾಲಯ ನಿರ್ಮಿಸಿಕೊಡಲಾಗಿದೆ ಎಂದು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಸಭೆಗೆ ತಿಳಿಸಿದರು.

ಸಭೆಯಲ್ಲಿ ಸಮಿತಿ ಅಧೀನಕಾರ್ಯದರ್ಶಿ ಸೀನು, ಸದ್ಯಸರಾದ ಶಾಂತಾರಾಮ ಬುದ್ನಿ ಸಿದ್ದಿ, ಕೃಷ್ಣಾ ನಾಯ್ಕ.ಕೆ, ಡಾ.ಎಂ.ಚಂದ್ರಪ್ಪ, ಎನ್.ರವಿಕುಮಾರ, ದುರ್ಯೋದನ ಐಹೊಳೆ, ಬಸವರಾಜ ಮತ್ತಿಮುಡ, ರಾಜೇಂದ್ರ ರಾಜಣ್ಣ, ಜಿಲ್ಲಾಧಿಕಾರಿ ಜಾನಕಿ ಕೆ.ಎಂ, ಜಿ.ಪಂ ಸಿಇಓ ಶಶಿಧರ ಕುರೇರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ, ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ, ಜಿ.ಪಂ ಉಪಕಾರ್ಯದರ್ಶಿ ಎನ್.ವಾಯ್.ಬಸರಿಗಿಡದ, ಉಪವಿಭಾಗಾಧಿಕಾರಿಗಳಾದ ಸಂತೋಷ ಜಗಲಾಸರ, ಶ್ವೇತಾ ಬೀಡಿಕರ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಸದಾಶಿವ ಬಡಿಗೇರ ಹಾಗೂ ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.