ಹತ್ಯೆ ಮಾಡಿದ ಯುವಕನ ಹಿನ್ನೆಲೆಯ ತನಿಖೆ ನಡೆಯಲಿ: ಮುರುಗೇಶ ನಿರಾಣಿ

| Published : Apr 29 2024, 01:32 AM IST

ಹತ್ಯೆ ಮಾಡಿದ ಯುವಕನ ಹಿನ್ನೆಲೆಯ ತನಿಖೆ ನಡೆಯಲಿ: ಮುರುಗೇಶ ನಿರಾಣಿ
Share this Article
  • FB
  • TW
  • Linkdin
  • Email

ಸಾರಾಂಶ

ಯುವಕ ಸ್ವಯಂಪ್ರೇರಿತವಾಗಿ ಹತ್ಯೆ ಮಾಡಿಲ್ಲ. ಯಾರೋ ಪ್ರೇರಣೆ ನೀಡಿದಂತೆ ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಪೊಲೀಸರು ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸಿ ಆರೋಪಿಗೆ ಉಗ್ರವಾದ ಶಿಕ್ಷೆಗೆ ಗುರಿಪಡಿಸುವಂತೆ ಮಾಜಿ ಸಚಿವ ನಿರಾಣಿ ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ನೇಹಾ ಹತ್ಯೆ ದೇಶವೇ ಬೆಚ್ಚಿ ಬೀಳಿಸಿದೆ. ತಾಯಿಯ ಮುಂದೆಯೇ ಮಗಳ ಹತ್ಯೆ ಮಾಡುತ್ತಾನೆಂದರೆ ಹೇಗೆ?. ಪೊಲೀಸರು ಕೊಲೆ ಮಾಡಿದ ಯುವಕನ ಹಿನ್ನೆಲೆ ಕುರಿತು ಸೂಕ್ತ ತನಿಖೆ ನಡೆಸಲಿ ಎಂದು ಮಾಜಿ ಸಚಿವ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಮುರುಗೇಶ ನಿರಾಣಿ ಹೇಳಿದರು.

ಅವರು ಇಲ್ಲಿನ ನೇಹಾಳ ನಿವಾಸಕ್ಕೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಯುವಕ ಸ್ವಯಂಪ್ರೇರಿತವಾಗಿ ಹತ್ಯೆ ಮಾಡಿಲ್ಲ. ಯಾರೋ ಪ್ರೇರಣೆ ನೀಡಿದಂತೆ ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಪೊಲೀಸರು ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸಿ ಆರೋಪಿಗೆ ಉಗ್ರವಾದ ಶಿಕ್ಷೆಗೆ ಗುರಿಪಡಿಸುವಂತೆ ಒತ್ತಾಯಿಸಿದರು. ಈ ಹತ್ಯೆ ಖಂಡಿಸಿ ನಮ್ಮ ಪಕ್ಷದ ಹಲವು ನಾಯಕರು ನೇಹಾ ನಿವಾಸಕ್ಕೆ ತೆರಳಿ ಕುಟುಂಬಸ್ಥರಿಗೆ ಸಾಂತ್ವನ ಹೇಳುವ ಕಾರ್ಯ ಮಾಡಿದ್ದಾರೆ ಎಂದರು.

ಕೇಂದ್ರದ ಗೃಹ ಸಚಿವ ಅಮಿತ್ ಶಾ ಮೇ 1ರಂದು ಹುಬ್ಬಳ್ಳಿಗೆ ಆಗಮಿಸುತ್ತಿದ್ದು, ಅಂದು ಮೃತ ನೇಹಾಳ ನಿವಾಸಕ್ಕೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಲಿದ್ದಾರೆ. ಮುಂದೆ ಎಲ್ಲಿಯೂ ಇಂತಹ ಘಟನೆ ನಡೆಯದಂತೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲು ಒತ್ತಾಯಿಸಲಾಗುವುದು ಎಂದರು.

ನೇಹಾ ವಿಷಯದಲ್ಲಿ ಬಿಜೆಪಿ ರಾಜಕಾರಣ ಮಾಡುತ್ತಿದೆ ಎಂಬ ಕಾಂಗ್ರೆಸ್ಸಿನವರ ಹೇಳಿಕೆಗೆ ಉತ್ತರಿಸಿದ ನಿರಾಣಿ, ಇಂತಹ ಪದ ಕಾಂಗ್ರೆಸ್ಸಿನವರ ಬಾಯಲ್ಲಿ ಎಂದಿಗೂ ಬರಬಾರದು. ಹತ್ಯೆಯಾದ ಕುಟುಂಬಕ್ಕೆ ಎಲ್ಲ ಪಕ್ಷಗಳ ಮುಖಂಡರು, ಸಮಾಜ ಬಾಂಧವರು ಮನೆಗೆ ತೆರಳಿ ಕುಟುಂಬದವರಿಗೆ ಸಾಂತ್ವನ ಹೇಳುವುದು ಸಾಮಾನ್ಯ. ಇದನ್ನೇ ಬಿಜೆಪಿ ರಾಜಕಾರಣ ಮಾಡಿಕೊಂಡಿದೆ ಎಂದರೆ ಹೇಗೆ ಎಂದು ಪ್ರಶ್ನಿಸಿದರು.

ಈ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದೆ. ಪೊಲೀಸ್ ಅಧಿಕಾರಿಗಳು ಯಾವುದೇ ಪಕ್ಷಕ್ಕೆ ಸೀಮಿತವಾಗಿರುವುದಿಲ್ಲ ಪಕ್ಷಾತೀತವಾಗಿರುತ್ತಾರೆ. ತಪ್ಪು ಮಾಡಿದವರಿಗೆ ಶಿಕ್ಷೆ ಕೊಡಿಸಲು ಪ್ರಾಮಾಣಿಕ ಕೆಲಸ ಮಾಡುತ್ತಾರೆ. ಹಾಗಾಗಿ ಆದಷ್ಟು ಬೇಗ ಆರೋಪಿಗೆ ಉಗ್ರವಾದ ಶಿಕ್ಷೆ ಕೊಡಿಸಲು ಪೊಲೀಸರು, ಸರ್ಕಾರ ಆದ್ಯತೆ ನೀಡಲಿ. ಒಂದು ವೇಳೆ ಶಿಕ್ಷೆ ಕೊಡಿಸುವಲ್ಲಿ ವಿಫಲವಾದಲ್ಲಿ ನಾವು ಮತ್ತೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಹಮ್ಮಿಕೊಳ್ಳುತ್ತೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.