ಸಾರಾಂಶ
ಅಳ್ನಾವರ:
ಸರ್ಕಾರದಿಂದ ಬರುವ ಸೌಲಭ್ಯಗಳು ನೇರವಾಗಿ ಅರ್ಹ ಫಲಾನುಭವಿಗೆ ಮುಟ್ಟಬೇಕು. ಅದು ಮಧ್ಯವರ್ತಿಗಳ ಪಾಲಾಗಬಾರದು ಎಂದು ತಹಸೀಲ್ದಾರ್ ಬಸವರಾಜ ಬೆಣ್ಣೆಶಿರೂರ ಹೇಳಿದರು.ಪೊಲೀಸ್ ಇಲಾಖೆ ಮತ್ತು ತಾಲೂಕಾಡಳಿತದಿಂದ ಗುರುವಾರ ಆಯೋಜಿಸಿದ್ದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಕುಂದು-ಕೊರತೆ ಸಭೆಯಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ಯಾವ ವ್ಯಕ್ತಿಯೂ ಕೂಡ ಮೂಲಭೂತ ಸೌಕರ್ಯದಿಂದ ವಂಚಿತನಾಗಬಾರದೆಂದು ಸರ್ಕಾರ ಸಮುದಾಯಗಳ ಅಭಿವೃದ್ಧಿಗಾಗಿ ಹಲವಾರು ಯೋಜನೆ ಜಾರಿಗೆ ತರುತ್ತಿದೆ. ಅವುಗಳ ಸರಿಯಾದ ಬಳಕೆಯಾಗಬೇಕು ಹಾಗೂ ಫಲಾನುಭವಿಗಳು ನೇರವಾಗಿ ಕಚೇರಿಗಳಿಗೆ ಬಂದು ಸೌಲಭ್ಯ ಪಡೆಯುವ ಮೂಲಕ ಮಧ್ಯವರ್ತಿಗಳ ಹಾವಳಿ ತಪ್ಪಿಸಬೇಕು ಎಂದರು.
ಈ ವೇಳೆ ಸಭೆಯಲ್ಲಿ ಕಾಶೇನಟ್ಟಿ ಗ್ರಾಮದ ಎಸ್ಸಿ ಓಣಿಯಲ್ಲಿ ರಸ್ತೆ ನಿರ್ಮಾಣ, ಸ್ಮಶಾನದಲ್ಲಿನ ಚಿತಾಗಾರದ ನಿರ್ಮಾಣ, ಜೈಭಾರತ ಕಾಲನಿಗೆ ಸ್ಮಶಾನ ಭೂಮಿಯ ಜತೆಗೆ ಮೂಲಭೂತ ಸೌಕರ್ಯ ಒದಗಿಸುವ ಕುರಿತು, ವಿದ್ಯಾನಗರದಲ್ಲಿ ಸರ್ಕಾರಿ ಶಾಲೆಯ ಪ್ರಾರಂಭಿಸುವ ಹಾಗೂ ಈಗಿರುವ ಅನುದಾನಿತ ಶಾಲೆಗೆ ಶಿಕ್ಷಕರನ್ನು ನೀಡಬೇಕೆಂಬ ವಿಷಯಗಳ ಬಗ್ಗೆ ಸಭೆಯಲ್ಲಿ ಗಮನಾರ್ಹ ಚರ್ಚೆಗಳಾದವು.ಸಭೆಯಲ್ಲಿ ತಾಪಂ ಇಒ ಪ್ರಶಾಂತ ತರುಕಾಣಿ, ಪಿಎಸೈ ಪ್ರವೀಣ ನೇಸರಗಿ, ಪೊಲೀಸ್ ಇಲಾಖೆಯ ಮೀರಾ ಖೋದಾನಪುರ. ಸಮಾಜಕಲ್ಯಾಣ ಇಲಾಖೆ ಅಧಿಕಾರಿ ಗೀತಾ ಕುಂಚನೂರ, ಸಮಾಜದ ಮುಖಂಡರಾದ ಪ್ರವೀಣ ಪವಾರ, ಹನುಮಂತ ಶಿಂಧೆ, ಅಂದಾನೆಪ್ಪಾ ಕಾಳೆ, ಪ್ರಶಾಂತ ಪವಾರ ಇದ್ದರು.ಈ ಬಾರಿ ಮಳೆಗೆ ತಾಲೂಕಿನಲ್ಲಿ 35 ಮನೆಗಳು ಹಾನಿಯಾದ ಬಗ್ಗೆ ಅರ್ಜಿಗಳು ಬಂದಿವೆ. ಸ್ಥಳ ಪರಿಶೀಲಿಸಿ ಅರ್ಹರಿಗೆ 48 ಗಂಟೆಯಲ್ಲಿ ಸೂಕ್ತ ಪರಿಹಾರವನ್ನು ಬಾಂಕ್ ಖಾತೆಯ ಮುಖಾಂತರ ನೀಡಲಾಗುವುದು ಎಂದು ತಹಸೀಲ್ದಾರ್ ಬಸವರಾಜ ಬೆಣ್ಣೆಶಿರೂರ ಹೇಳಿದರು.