ತಮ್ಮ ಕಾಲದಲ್ಲೇ ಮುಡಾ ಹಗರಣವಾಗಿರುವುದನ್ನು ಬಿಜೆಪಿ ಒಪ್ಪಿಕೊಳ್ಳಲಿ: ಸಚಿವ ಸಂತೋಷ್ ಲಾಡ್

| Published : Jul 30 2024, 12:35 AM IST

ತಮ್ಮ ಕಾಲದಲ್ಲೇ ಮುಡಾ ಹಗರಣವಾಗಿರುವುದನ್ನು ಬಿಜೆಪಿ ಒಪ್ಪಿಕೊಳ್ಳಲಿ: ಸಚಿವ ಸಂತೋಷ್ ಲಾಡ್
Share this Article
  • FB
  • TW
  • Linkdin
  • Email

ಸಾರಾಂಶ

ನಮ್ಮ ಕಾಲದಲ್ಲಿ ನಾವು ಹಗರಣ ಮಾಡಿದ್ದೇವೆ ಎಂದು ಬಿಜೆಪಿಯವರು ಲಿಖಿತ ರೂಪದಲ್ಲಿ ಕೊಡಲಿ. ಕಾನೂನು ಬಾಹಿರವಾಗಿ ನಿವೇಶನ ಹಂಚಿದ್ದೇವೆ. ಅದಕ್ಕಾಗಿ ತನಿಖೆ ಮಾಡಬೇಕಿದೆ ಎಂದು ಬರೆದು ಕೊಡಲಿ ಎಂದು ಸಚಿವ ಸಂತೋಷ ಲಾಡ್ ಹೇಳಿದರು.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಮುಡಾದಲ್ಲಿ ಹಗರಣ ತಮ್ಮ ಕಾಲದಲ್ಲಿಯೇ ಆಗಿದೆ ಎಂದು ಬಿಜೆಪಿ ಮೊದಲು ಒಪ್ಪಿಕೊಳ್ಳಲಿ. ಬೇಕಿದ್ದರೆ ಆನಂತರ ಪಾದಯಾತ್ರೆ ಪ್ರತಿಭಟನೆ ನಡೆಸಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಹೇಳಿದರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ಮತ್ತು ಜೆಡಿಎಸ್ ಪಾದಯಾತ್ರೆ ಮಾಡಲು ಏನು ಕಾರಣ? ವಾಲ್ಮೀಕಿ ಮತ್ತು ಮುಡಾ ಹಗರಣದ ಕುರಿತು ಸರ್ಕಾರ ಸಕಾರಾತ್ಮಕ ನಿರ್ಧಾರ ಕೈಗೊಂಡಿದೆ. ನಾಗೇಂದ್ರ ಈಗಾಗಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಒಂದೆಡೆ ಸಿಐಡಿ ತನಿಖೆ ನಡೆಯುತ್ತಿದೆ. ಇ.ಡಿ. ಮತ್ತು ಸಿಬಿಐ ಸಹ ಪ್ರವೇಶಿಸಿವೆ. ಸರ್ಕಾರಿ ಮತ್ತು ಬ್ಯಾಂಕ್ ಅಧಿಕಾರಗಳ ವಿರುದ್ಧ ತನಿಖೆ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಏಕೆ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.

ಲಿಖಿತ ರೂಪದಲ್ಲಿ ನೀಡಲಿ:

ಮುಡಾ ಹಗರಣ ಕುರಿತು ಸದನದಲ್ಲಿ ಮಾತನಾಡಲು 7 ಗಂಟೆ ಅವಕಾಶ ಮಾಡಿಕೊಡಲಾಗಿತ್ತು. ಬಿಜೆಪಿ ಕಾಲದಲ್ಲೇ ಮುಡಾದಲ್ಲಿ ಹಗರಣವಾಗಿದೆ. ನಮ್ಮ ಕಾಲದಲ್ಲಿ ನಾವು ಹಗರಣ ಮಾಡಿದ್ದೇವೆ ಎಂದು ಬಿಜೆಪಿಯವರು ಲಿಖಿತ ರೂಪದಲ್ಲಿ ಕೊಡಲಿ. ಕಾನೂನು ಬಾಹಿರವಾಗಿ ನಿವೇಶನ ಹಂಚಿದ್ದೇವೆ. ಅದಕ್ಕಾಗಿ ತನಿಖೆ ಮಾಡಬೇಕಿದೆ ಎಂದು ಬರೆದು ಕೊಡಲಿ. ಜನರನ್ನು ಮೂರ್ಖರನ್ನಾಗಿ ಮಾಡಿದ್ದೇವೆ ಎಂದು ಮೊದಲು ಒಪ್ಪಿಕೊಳ್ಳಲಿ. ನೀವೇ ಸೈಟ್ ಕೊಟ್ಟು ಹಗರಣ ಮಾಡಿ, ಪಾದಯಾತ್ರೆ ಮಾಡುವುದು ಯಾವ ಧರ್ಮ? ಈ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಏಕೆ ರಾಜೀನಾಮೆ ನೀಡಬೇಕು ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯ ಅವರು ಗ್ಯಾರಂಟಿಗಳಿಗಾಗಿ ₹60 ಸಾವಿರ ಕೋಟಿ ಅನುದಾನ ನೀಡಿದ್ದಾರೆ. ಹಿಂದುಳಿದ ನಾಯಕರೊಬ್ಬರು ಈ ರೀತಿ ಬೆಳೆಯುತ್ತಿರುವುದನ್ನು ಬಿಜೆಪಿಯವರಿಗೆ ನೋಡಲು ಆಗುತ್ತಿಲ್ಲ, ಸಿದ್ದರಾಮಯ್ಯ ಅವರ ಪ್ರಚಾರ (ಪಬ್ಲಿಸಿಟಿ) ತಡೆದುಕೊಳ್ಳಲು ಆಗುತ್ತಿಲ್ಲ.

ಇಡಿ ದಾಳಿಯಿಂದ ಬಿಜೆಪಿಗೆ ಲಾಭ:

ಇ.ಡಿ. ದಾಳಿ ರಾಜಕೀಯ ಪ್ರೇರಿತವಾಗಿದೆ. ಇಲ್ಲಿ ವರೆಗೆ 3 ಸಾವಿರ ದಾಳಿ ನಡೆದಿವೆ. 2014ರಿಂದ ಇಲ್ಲಿಯ ವರೆಗೆ ಆದ ದಾಳಿಗಳಲ್ಲಿ ಶೇ.76 ಪ್ರಕರಣ ಮುಚ್ಚಿ ಹೋಗಿವೆ. ಕೇವಲ ಶೇ.24 ಪ್ರಕರಣ ಮಾತ್ರ ನಡೆಯುತ್ತಿವೆ. 3 ಸಾವಿರ ಪ್ರಕರಣಗಳ ಪೈಕಿ ಶೇ. 95 ಕೇಸ್ ವಿಪಕ್ಷದವರ ಮೇಲಿವೆ. ಇಡಿ ದಾಳಿಗೆ ತುತ್ತಾದವರೆಲ್ಲರೂ ಈಗ ಬಿಜೆಪಿಯಲ್ಲಿದ್ದಾರೆ. ವಾಷಿಂಗ್ ಪೌಡರ್ ನಿರ್ಮಾ ಆದ ಮೇಲೆ ಬಿಜೆಪಿ ಸೇರುತ್ತಿದ್ದಾರೆ. ಇಡಿ ದಾಳಿಯಿಂದ ಬಿಜೆಪಿಗೆ ಲಾಭವಿದೆ. ನಮ್ಮ ಪ್ರಣಾಳಿಕೆಯನ್ನೇ ಕಾಪಿ ಮಾಡಿ ಈಗ ಜಾರಿ ಮಾಡುತ್ತಿದ್ದಾರೆ. ಇದರ ಬಗ್ಗೆ ಯಾರು ಮಾತನಾಡುತ್ತಿಲ್ಲ ಎಂದರು.

ಪ್ರವಾಹದಿಂದ ರಾಜ್ಯದಲ್ಲಿ ಅಪಾರ ಹಾನಿಯಾಗಿದೆ. ಆದರೆ, ಅನುದಾನ ಕೊಡುವಲ್ಲಿ ಕೇಂದ್ರ ಸರ್ಕಾರದಿಂದ ತಾರತಮ್ಯ ಆಗುತ್ತಿದೆ. ಈಚೆಗೆ ಬಜೆಟ್‌ನಲ್ಲಿ ಎರಡು ರಾಜ್ಯಗಳಿಗೆ ₹50 ಸಾವಿರ ಕೋಟಿ ಅನುದಾನ ಕೊಡಲಾಗಿದೆ. ಸುಪ್ರೀಂಕೋರ್ಟ್‌ಗೆ ಹೋಗಿದ್ದಕ್ಕಾಗಿ ಕಳೆದ ಬಾರಿ ನಮಗೆ ಅನುದಾನ ಸಿಕ್ಕಿತು. ಟ್ವೀಟ್‌ ಮಾಡಿದರೆ ಗ್ರೇಟ್‌ ಆಗ್ತಾರಾ?:

ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಯಾವುದೇ ಪಾಲು ಸರಿಯಾಗಿ ಬರುತ್ತಿಲ್ಲ. ಉತ್ತರ ಭಾರತದ ರಾಜ್ಯಗಳಿಗೆ ಹೆಚ್ಚು ಅನುದಾನ ಹೋಗುತ್ತಿದೆ. ಹಿಂದುಗಳ ತಲಾ ಆದಾಯ ಕಡಿಮೆಯಾಗಿದೆ. ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಆದರೆ, ನಮ್ಮ ರಾಜ್ಯದಲ್ಲಿ ರೈತರ ಆತ್ಮಹತ್ಯೆ ಹೆಚ್ಚಾಗಿವೆ ಎಂದು ಗೂಬೆ ಕೂರಿಸುತ್ತಿದ್ದಾರೆ. ಕರ್ನಾಟಕ ಭಾರತ ದೇಶದಲ್ಲಿಲ್ಲವೇ? ರೈತರ ಆತ್ಮಹತ್ಯೆ ಬಗ್ಗೆ ಪ್ರಹ್ಲಾದ ಜೋಶಿ ಟ್ವೀಟ್ ಮಾಡಿದರೆ ಗ್ರೇಟ್ ಆಗಿ ಬಿಡುತ್ತಾರಾ? ನೆರೆ ಪೀಡಿತ ಪ್ರದೇಶಗಳಿಗೆ ನಾನು ಭೇಟಿ ಕೊಡುತ್ತೇನೆ. ಜನರಿಗೆ ಅಗತ್ಯ ನೆರವು ನೀಡುತ್ತೇವೆ ಎಂದರು.ವಿಶೇಷ ಅರ್ಥ ಕಲ್ಪಿಸಬೇಕಿಲ್ಲ

ಸಿಎಂ ಮತ್ತು ಡಿಸಿಎಂ ದೆಹಲಿಗೆ ಏಕೆ ಹೋಗುತ್ತಿದ್ದಾರೆ ಎಂಬುದು ಗೊತ್ತಿಲ್ಲ. ಹೈಕಮಾಂಡ್ ಜತೆ ಚರ್ಚಿಸಲು ಹೋಗಿರಬಹುದು. ನಿಗಮ ಮಂಡಳಿ ಮತ್ತು ಮುಂಬರುವ ಚುನಾವಣೆ ದೃಷ್ಟಿಯಿಂದಲೂ ಹೋಗುತ್ತಿರಬಹುದು. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅವಶ್ಯಕತೆಯಿಲ್ಲ.

ಸಂತೋಷ ಲಾಡ್‌, ಜಿಲ್ಲಾ ಉಸ್ತುವಾರಿ ಸಚಿವ