ಸಾರಾಂಶ
- ದಸಂಸ ಜಿಲ್ಲಾ ಘಟಕ ಉದ್ಘಾಟನೆ, ಅಂಬೇಡ್ಕರ್ ಜಯಂತಿ - - -
ಕನ್ನಡಪ್ರಭ ವಾರ್ತೆ ದಾವಣಗೆರೆಶೋಷಿತರು, ದಲಿತರಲ್ಲಿ ಗುಲಾಮಗಿರಿಯ ರಕ್ತ ಹರಿಯದೇ, ಸ್ವಾಭಿಮಾನದ ರಕ್ತ ಹರಿಯಬೇಕು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಹೇಳಿದರು.
ನಗರದ ಶ್ರೀ ಜಯದೇವ ವೃತ್ತದ ಬಳಿ ಮಂಗಳವಾರ ದಲಿತ ಸಂರಕ್ಷಣಾ ಸಮಿತಿ ನೂತನ ಜಿಲ್ಲಾ ಘಟಕ ಉದ್ಘಾಟನೆ ಮತ್ತು ಡಾ.ಬಿ.ಆರ್.ಅಂಬೇಡ್ಕರ್‌ರ 134ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಹೇಳಿದಂತೆ ಎಲ್ಲರೂ ಸ್ವಾಭಿಮಾನಿಗಳಾಗಿ, ಸ್ವಾಭಿಮಾನದ ಬಾಳನ್ನು ಬಾಳಬೇಕು. ಶೋಷಿತರು, ದಲಿತರು ಒಳ್ಳೆಯ ಶಿಕ್ಷಣವಂತರಾಗಬೇಕು. ಹೋರಾಟದ ಮೂಲಕ ಹಕ್ಕು, ಸೌಲಭ್ಯಗಳನ್ನು ಪಡೆಯಲು ಕರೆ ನೀಡಿದ್ದಾರೆ. ಪರಿಶಿಷ್ಟ ಜಾತಿಗಳ ಜನರ ಅಭಿವೃದ್ಧಿಗಾಗಿ ಸರ್ಕಾರಗಳು ಸಾಲ, ಸಹಾಯಧನ ಒಳಗೊಂಡಂತೆ ಹತ್ತು ಹಲವಾರು ಸೌಲಭ್ಯಗಳನ್ನು ನೀಡುತ್ತಿವೆ. ಅವುಗಳನ್ನು ಸದ್ಬಳಕೆ ಮಾಡಿಕೊಂಡು, ಮುಖ್ಯವಾಹಿನಿಗೆ ಬರಬೇಕು ಎಂದರು.
ಸಮಾಜ ಕಲ್ಯಾಣ ಇಲಾಖೆ ಒಳಗೊಂಡಂತೆ ಎಲ್ಲ ಇಲಾಖೆ ಅಧಿಕಾರಿಗಳು ಕಾನೂನುಬದ್ಧವಾಗಿ ಶೋಷಿತರು, ದಲಿತರಿಗೆ ಸಿಗಬೇಕಾದ ಸೌಲಭ್ಯಗಳನ್ನು ತಲುಪಿಸಬೇಕು. ವಿಶೇಷವಾಗಿ ತಳ ಸಮುದಾಯದ ಮಹಿಳೆಯರಿಗೆ ಸೌಲಭ್ಯಗಳನ್ನು ತಲುಪಿಸಬೇಕು ಎಂದು ಡಾ.ನಾಗಲಕ್ಷ್ಮೀ ತಿಳಿಸಿದರು.ಸಮಿತಿ ರಾಜ್ಯಾಧ್ಯಕ್ಷ ಜನ್ಮಭೂಮಿ ನಾಗರಾಜ ಮಾತನಾಡಿ, 6 ವರ್ಷಗಳ ಹಿಂದೆ ಪ್ರಾರಂಭವಾದ ದ. ಸಂ.ಸ. ಅನೇಕ ಸಾಮಾಜಿಕ ರಚನಾತ್ಮಕ ಚಟುವಟಿಕೆಗಳನ್ನು ನಡೆಸುತ್ತಿದೆ. ವಿಶೇಷವಾಗಿ ದಲಿತರು, ಶೋಷಿತರು, ಮಹಿಳೆಯರು ಅನ್ಯಾಯ, ಶೋಷಣೆಗೊಳಗಾದಲ್ಲಿ ಅಂಥವರ ಪರವಾಗಿ ನಿಲ್ಲುವ ಕೆಲಸ ಮಾಡುತ್ತಿದೆ ಎಂದರು.
ಮುಖಂಡ ಡಿ.ಹನುಮಂತಪ್ಪ ಮಾತನಾಡಿ, ಜಿಲ್ಲೆಯಲ್ಲಿ ಅನೇಕ ಶೋಷಿತರು, ದಲಿತರಿಗೆ ಶಾಶ್ವತ ಸೂರು, ನಿವೇಶನ ಇತರೆ ಸೌಲಭ್ಯ ವಂಚಿತರಾಗಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ಗುತ್ತಿಗೆದಾರರು ದಿನಗೂಲಿ ನೌಕರರ, ಮಹಿಳಾ ಕಾರ್ಮಿಕರ ಮೇಲೆ ದೈಹಿಕ, ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ನ್ಯಾಯಯುತ ಸೌಲಭ್ಯ ಕೇಳಿದರೆ ಕೆಲಸದಿಂದ ಬಿಡಿಸುತ್ತಾರೆ. ಮಹಿಳಾ ಆಯೋಗ ಇಂತಹ ಸಮಸ್ಯೆಗೆ ಸ್ಪಂದಿಸಿ, ಸೂಕ್ತ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದರು.ಜಿಲ್ಲಾಧ್ಯಕ್ಷ ಎನ್.ಡಿ.ಮೈಲಪ್ಪ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ವಿಭಾಗದ ಅಧ್ಯಕ್ಷೆ ಚನ್ನಮ್ಮ ಆವರಗೆರೆ, ಪಾಲಿಕೆ ಆಯುಕ್ತೆ ಜಿ.ರೇಣುಕಾ, ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆ ಜಿಲ್ಲಾ ಅಧಿಕಾರಿ ಕೆ.ಎಂ. ಗಾಯಿತ್ರಿ, ಮಂಗಳಮ್ಮ ಇತರರು ಇದ್ದರು.
- - --15ಕೆಡಿವಿಜಿ8, 9: ಸಮಾರಂಭದಲ್ಲಿ ರಾಜ್ಯ ಮಹಿಳಾ ಆಯೋಗ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಸಂವಿಧಾನ ಪೀಠಿಕೆ ಓದಿದರು. -15ಕೆಡಿವಿಜಿ10: ಸಮಾರಂಭದಲ್ಲಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಮಾತನಾಡಿದರು.