ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ರಾಜ್ಯದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ (ಜಾತಿ ಗಣತಿ) ವರದಿ ಜಾರಿಗೊಳಿಸಲು ಆಗ್ರಹಿಸಿ ಜಿಲ್ಲಾ ಅಹಿಂದ ಮುಖಂಡರು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಿದರು.ಈ ಸಂದರ್ಭದಲ್ಲಿ ಅಹಿಂದ ಮುಖಂಡ ಎಸ್.ಎಂ.ಪಾಟೀಲ ಗಣಿಯಾರ ಮಾತನಾಡಿ, ರಾಜ್ಯದ ಎಲ್ಲ ಜಾತಿಗಳ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳನ್ನು ಅಧ್ಯಯನ ನಡೆಸಿ ತಯಾರಿಸಲಾಗಿರುವ ಸಮೀಕ್ಷಾ ವರದಿಯನ್ನು ಜಾರಿಗೊಳಿಸಲು ರಾಜ್ಯ ಸರ್ಕಾರ ವಿಳಂಬ ಮಾಡುವ ಅಗತ್ಯವಿಲ್ಲ. ಸುಮಾರು ₹೧೫೯ ಕೋಟಿ ಖರ್ಚು ಮಾಡಿ ತಯಾರಿಸಿರುವ ಈ ವರದಿಯು ತಕ್ಷಣ ಜಾರಿಯಾಗಬೇಕು. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ವಿಷಯ ಕುರಿತು ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯರವರು ಹೇಳಿರುವುದು ಸ್ವಾಗತಾರ್ಹ ಎಂದರು.ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿ ದಿ. ದೇವರಾಜ ಅರಸು ಅವರು ಹಾವನೂರ ಆಯೋಗ ರಚಿಸಿ ಹಿಂದುಳಿದ ವರ್ಗಗಳ ಆಧ್ಯಯನಕ್ಕೆ ಮುನ್ನುಡಿ ಬರೆದರು. ಅದರಂತೆ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಮೀಸಲಾತಿಯನ್ನು ಶೇ.೭೩ ಕ್ಕೆ ಏರಿಸುವ ಪ್ರಯತ್ನವನ್ನು ಮಾಡಿದರು. ಹೀಗಾಗಿ ಹಿಂದಿನಿಂದಲೂ ಸಾಮಾಜಿಕ ನ್ಯಾಯದ ಪರವಾಗಿರುವ ಕರ್ನಾಟಕ ಈಗ ಜಾತಿ ಗಣತಿ ಅಥವಾ ರಾಜ್ಯದ ಎಲ್ಲ ಜಾತಿಗಳ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸ್ಥಿತಿಗತಿಗಳ ಬಗ್ಗೆ ಅಧ್ಯಯನ ನಡೆಸಿ ಸಮೀಕ್ಷಾ ವರದಿಯನ್ನು ತಯಾರಿಸಿರುವುದು ಇಡೀ ದೇಶಕ್ಕೆ ಮಾದರಿಯಾಗಿದೆ ಎಂದು ಶ್ಲಾಘಿಸಿದರು.ಮುಖಂಡ ಸೋಮನಾಥ ಕಳ್ಳಿಮನಿ ಮಾತನಾಡಿ, ಈ ಜಾತಿ ಗಣತಿಯ ವರದಿ ಜಾರಿಗೆ ಬಂದರೆ ಜಾತಿಗಳ ವಸ್ತು ಸ್ಥಿತಿ ತಿಳಿಯಲಿದೆ. ಸರ್ಕಾರಗಳು ಅದಕ್ಕೆ ಪೂರಕವಾಗಿ ಕಾರ್ಯಕ್ರಮಗಳನ್ನು ರೂಪಿಸಬಹುದು. ರಾಜ್ಯದ ೭ ಕೋಟಿ ಜನಸಂಖ್ಯೆಯ ಅಧ್ಯಯನವಾಗಿರುವುದರಿಂದ ಜಾತಿಗಣತಿಯನ್ನು ಸರ್ಕಾರ ಒಪ್ಪಿಕೊಳ್ಳುವುದರಿಂದ ಎಲ್ಲ ಜಾತಿಗಳಿಗೂ ಒಂದಲ್ಲ ಒಂದು ರೀತಿಯಲ್ಲಿ ಅನುಕೂಲವಾಗಲಿದೆ. ಈ ವರದಿಯನ್ನು ಸಂಗ್ರಹಿಸಿದ ವಿಧಾನವನ್ನು ತಜ್ಞರ ಸಮಿತಿ ಮತ್ತು ಐಐಎಂ ಸಂಸ್ಥೆಗಳು ದೃಢೀಕರಿಸಿವೆ. ಕಾಂಗ್ರೆಸ್ ಪಕ್ಷ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಜಾತಿಗಣತಿ ನಡೆಸುವುದಾಗಿ ವಾಗ್ದಾನ ನೀಡಿತ್ತು. ಕೊಟ್ಟ ಮಾತಿನಂತೆ ನಡೆಯಬೇಕು. ಇದಕ್ಕೆ ಕೆಲವರು ಆಕ್ಷೇಪ ಎತ್ತಿದರೆ ಅದನ್ನು ಒಪ್ಪಬೇಕೋ ಅಥವಾ ಬಿಡಬೇಕೋ ಎನ್ನುವುದು ಸಚಿವ ಸಂಪುಟದ ಸಭೆಯ ಅಧಿಕಾರ. ಆದರೆ ವರದಿಯನ್ನು ಮಂಡಿಸಲೇಬಾರದು ಎಂಬುದು ಸರ್ವಾಧಿಕಾರಿ ಧೋರಣೆಯಾಗುತ್ತದೆ. ಇಂತಹ ಜೊಳ್ಳು ಬೆದರಿಕೆಗೆ ಮಣೆಹಾಕದೆ ಮುಖ್ಯಮಂತ್ರಿಗಳು ವರದಿಯನ್ನು ಒಪ್ಪಿ ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿದರು.ಮುಖಂಡರಾದ ಸಂಜು ವೈ.ಕಂಬಾಗಿ, ಅಕ್ರಮ ಮಾಶ್ಯಾಳಕರ, ಕಾಮೇಶ ಉಕ್ಕಲಿ, ಮಲ್ಲು ಬಿದರಿ, ದಾದಾಪೀರ ಬಡಕಲ್, ಭೀಮನಗೌಡ ಹಳಿಮನಿ, ನಿರ್ಮಲಾ ಹೊಸಮನಿ, ಸಚಿತಾ ವಗ್ಗರ, ಭೀಮು ಉತ್ನಾಳ, ಮಲ್ಲು ಕಾಮನಕೇರಿ, ಭೀರಪ್ಪ ಜುಮನಾಳ ಮುಂತಾದವರು ಹಾಜರಿದ್ದರು.ರಾಜ್ಯದ ಎಲ್ಲ ಜಾತಿಗಳ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳನ್ನು ಅಧ್ಯಯನ ನಡೆಸಿ ತಯಾರಿಸಿರುವ ಸಮೀಕ್ಷಾ ವರದಿಯನ್ನು ಜಾರಿಗೊಳಿಸಲು ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ವಿಳಂಬ ಮಾಡುವ ಅಗತ್ಯವಿಲ್ಲ. ಸುಮಾರು ₹ ೧೫೯ ಕೋಟಿ ಖರ್ಚು ಮಾಡಿ ತಯಾರಿಸಿರುವ ಈ ವರದಿಯು ತಕ್ಷಣವೇ ಜಾರಿಯಾಗಬೇಕು.
ಎಸ್.ಎಂ.ಪಾಟೀಲ ಗಣಿಯಾರ, ಅಹಿಂದ ಮುಖಂಡರು.