ಸಾರಾಂಶ
ಸಜ್ಜನ ಗಾಣಿಗ ಸಮಾಜ ಹುಬ್ಬಳ್ಳಿ ಘಟಕದ ವತಿಯಿಂದ ಇಲ್ಲಿನ ಮೂರುಸಾವಿರಮಠ ಶಾಲಾ ಆವರಣದಲ್ಲಿರುವ ಡಾ. ಮೂಜಗಂ ಸಭಾಭವನದಲ್ಲಿ ಪ್ರತಿಭಾ ಪುರಸ್ಕಾರ ಸಮಾರಂಭ ನಡೆಯಿತು.
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಸಮಾಜ ಬಾಂಧವರು ಸಮುದಾಯ ಮಕ್ಕಳನ್ನು ಪ್ರೋತ್ಸಾಹಿಸುವ, ಸಹಾಯ ಮಾಡುವ ಮೂಲಕ ಕಲಿಕೆಗೆ ಪ್ರೋತ್ಸಾಹಿಸುವ ಕಾರ್ಯವಾಗಲಿ ಎಂದು ಮೂರುಸಾವಿರ ಮಠದ ಜ. ಗುರುಸಿದ್ಧ ರಾಜಯೋಗೀಂದ್ರ ಶ್ರೀಗಳು ಹೇಳಿದರು.ಸಜ್ಜನ ಗಾಣಿಗ ಸಮಾಜ ಹುಬ್ಬಳ್ಳಿ ಘಟಕದ ವತಿಯಿಂದ ಇಲ್ಲಿನ ಮೂರುಸಾವಿರಮಠ ಶಾಲಾ ಆವರಣದಲ್ಲಿರುವ ಡಾ. ಮೂಜಗಂ ಸಭಾಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 2023-24ನೇ ಸಾಲಿನ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ತೇರ್ಗಡೆಯಾದ ಸಮಾಜದ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಅರಳುವ ಹೂವು. ಸಮಾಜಕ್ಕೆ ತಮ್ಮ ಪ್ರತಿಭೆಯ ಸುಗಂಧವನ್ನು ಬೀರಬೇಕು. ಆ ಮುಖಾಂತರ ಇಡೀ ಸಮಾಜದ ಕಂಪು ಹೆಚ್ಚಿಸಬೇಕು. ಮಕ್ಕಳು ಸಮಾಜದಿಂದ ಪಡೆದಿದ್ದನ್ನು ಮರಳಿಸುವ ಮನೋಭಾವ ಬೆಳೆಸಿಕೊಂಡಾಗ ಮಾತ್ರ ಸಮಾಜ ಉನ್ನತಿಯತ್ತ ಸಾಗಲು ಸಾಧ್ಯವಾಗಲಿದೆ. ಪ್ರತಿಭಾ ಪುರಸ್ಕಾರದಲ್ಲಿ ಮಕ್ಕಳಿಗೆ ಕೊಡಮಾಡುವ ನಗದು ಪುರಸ್ಕಾರವನ್ನು ಮುಂದಿನ ದಿನಗಳಲ್ಲಿ ಅದನ್ನು ಸಮಾಜಕ್ಕೆ ದುಪ್ಪಟ್ಟಾಗಿ ನೀಡುವ ಮನೋಭಾವ ಬೆಳೆಸಿಕೊಳ್ಳಬೇಕು. ಮಕ್ಕಳ ಭವಿಷ್ಯದ ಜೀವನ ಉತ್ತಮವಾಗಿರಲಿ ಎಂದು ಹಾರೈಸಿದರು.ಅತಿಥಿಗಳಾಗಿ ಆಗಮಿಸಿದ್ದ ಡಾ. ಅಶೋಕ ಕಾಮತ, ನರರೋಗ ತಜ್ಞ ಡಾ. ಕ್ರಾಂತಿಕಿರಣ, ನಿವೃತ್ತ ಶಿಕ್ಷಕ ಅಶೋಕ ಎಂ. ಸಜ್ಜನ ಮಾತನಾಡಿದರು. ಸಂಘದ ಅಧ್ಯಕ್ಷ ವಿರೂಪಾಕ್ಷಪ್ಪ ಹರ್ಲಾಪೂರ ಅಧ್ಯಕ್ಷತೆ ವಹಿಸಿದ್ದರು. ರಾಜಶೇಖರ ಜಿಗಳೂರ, ರವಿ ಸಜ್ಜನ, ಸಾವಿತ್ರಿ ಹರ್ಲಾಪೂರ, ಸುಮಂಗಲಾ ಕೋಗನೂರ, ಡಾ. ಅರುಣ ಉಗರಗೋಳ, ಸೋಮಶೇಖರ ಸಜ್ಜನರ, ಡಾ. ಕಳಕಪ್ಪ ಸಜ್ಜನರ ಸೇರಿದಂತೆ ಸಮಾಜದ ಮುಖಂಡರು, ವಿದ್ಯಾರ್ಥಿಗಳು, ಮಹಿಳೆಯರು ಮೊದಲಾದವರು ಪಾಲ್ಗೊಂಡಿದ್ದರು.