ಸಾರಾಂಶ
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಬಿಜೆಪಿಯವರಂತೆ ಕಾಂಗ್ರೆಸ್ ಸರ್ಕಾರವೂ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಮುಂದುವರಿಯುವ ಯಾವುದೇ ನೈತಿಕತೆ ಉಳಿಸಿಕೊಂಡಿಲ್ಲ. ಈ ಕೂಡಲೇ ಅವರು ರಾಜೀನಾಮೆ ನೀಡಬೇಕು ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯಾಧ್ಯಕ್ಷ ರವಿ ಕೃಷ್ಣಾ ರೆಡ್ಡಿ ಆಗ್ರಹಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮೂಡಾ) ಸಾವಿರಾರು ಕೋಟಿ ಮೊತ್ತದ ಅವ್ಯವಹಾರ ನಡೆದಿದೆ. ಭ್ರಷ್ಟಾಚಾರದ ನೇರ ಆರೋಪಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗುರಿಯಾಗಿದ್ದು, ಕೂಡಲೇ ರಾಜೀನಾಮೆ ನೀಡಬೇಕು. ಜತೆಗೆ ಹಗರಣದ ಸಮಗ್ರ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಆಗ್ರಹಿಸಿ ಜು. 10ರಂದು ಮೈಸೂರಿನ ಮೂಡಾ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.
ಮೂಡಾ ವತಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರಿಗೆ ಮೈಸೂರಿನ ಪ್ರತಿಷ್ಠಿತ ಬಡಾವಣೆಯಲ್ಲಿ ಸುಮಾರು ₹30-40 ಕೋಟಿ ಬೆಲೆಬಾಳುವ ನಿವೇಶನಗಳನ್ನು ಅಕ್ರಮವಾಗಿ ಮಂಜೂರು ಮಾಡಲಾಗಿದೆ. ಈ ವಿಚಾರದಲ್ಲಿ ಮುಖ್ಯಮಂತ್ರಿಗಳು ತಮ್ಮ ಪ್ರಭಾವವನ್ನು ಸ್ವಂತ ಕುಟುಂಬದ ಲಾಭಕ್ಕೆ ಬಳಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.ಅದರಂತೆ ಮೂಡಾದಲ್ಲಿ ನಡೆದಿರುವ ಸಾವಿರಾರು ಕೋಟಿ ರುಪಾಯಿ ಹಗರಣವು ಸಂಪೂರ್ಣವಾಗಿ ನಿಯಮಬಾಹಿರ, ಜನಪ್ರತಿನಿಗಳ ಮತ್ತು ಅಧಿಕಾರಿಗಳ ಪಿತೂರಿ ಹಾಗೂ ಸಂಚಿನಿಂದ ಕೂಡಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದರು.
ಮೂಡಾ ಹಗರಣದ ವಿಚಾರವಾಗಿಯೂ ಬಿಜೆಪಿ ಮತ್ತು ಜೆಡಿಎಸ್ ಪಕ್ಷದವರು ಸದನದ ಒಳಗಾಗಲಿ ಅಥವಾ ಹೊರಗಾಗಲಿ ಗಂಭೀರ ಹೋರಾಟ ಮಾಡುವುದಿಲ್ಲ ಎನ್ನುವುದು ರಾಜ್ಯದ ಜನರಿಗೆ ಖಾತ್ರಿಯಾಗಿದೆ. ಆದ್ದರಿಂದ ಸ್ವತಃ ನಾವೇ ಭ್ರಷ್ಟಾಚಾರದ ತನಿಖೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದರು.ಸರ್ಕಾರ ಈ ನಿಟ್ಟಿನಲ್ಲಿ ಮೂಡಾ ಭ್ರಷ್ಟ ಅಧಿಕಾರಿಗಳ ಮೇಲೆ ಕೂಡಲೇ ಕ್ರಮ ಕೈಗೊಳ್ಳಬೇಕು. ಜತೆಗೆ ಕಳೆದ 10 ವರ್ಷದಲ್ಲಿ ಮೂಡಾ ಹಂಚಿಕೆ ಮಾಡಿರುವ ಎಲ್ಲ ನಿವೇಶನಗಳ ಮಂಜೂರಾತಿಯನ್ನು ರದ್ದು ಮಾಡಿ, ಕೂಡಲೇ ರಾಜ್ಯ ಉಚ್ಚ ನ್ಯಾಯಾಲಯದ ನೇತೃತ್ವದಲ್ಲಿ ಸಿಬಿಐ ಮೂಲಕ ಸಮಗ್ರ ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಪಕ್ಷದ ರಾಜ್ಯ ಕಾರ್ಯದರ್ಶಿ ಎನ್. ಮೂರ್ತಿ, ರಾಜ್ಯ ಸಂಘಟನಾ ಕಾರ್ಯದರ್ಶಿ ಚಂದ್ರಶೇಖರ ಮಠದ, ಬಸಪ್ಪ ಕುಂಬಾರ, ಚಂದ್ರಕಾಂತ ಹಂಜಗಿ ಸೇರಿದಂತೆ ಹಲವರಿದ್ದರು.ರಾಜ್ಯದಲ್ಲಿರುವುದು ಫಿಪ್ಟಿ-ಫಿಪ್ಟಿ ಸರ್ಕಾರ
ಈಗ ರಾಜ್ಯದಲ್ಲಿರುವುದು ಸಿದ್ದರಾಮಯ್ಯ ನೇತೃತ್ವದ 50 ಪರ್ಸೆಂಟ್ ಸರ್ಕಾರ. ಬಿಜೆಪಿಯಂತೆ ಭ್ರಷ್ಟಾಚಾರ ನಡೆಸುತ್ತಿರುವ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮುಂದುವರಿಯಲು ಯಾವುದೇ ನೈತಿಕತೆಯಿಲ್ಲ. ಹಿಂದೆ ಅನ್ಯಪಕ್ಷದ ಮುಖ್ಯಮಂತ್ರಿಗಳು ನಡೆಸಿದಂತೆ ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ಸಿದ್ದರಾಮಯ್ಯ ಮುಳುಗಿದ್ದಾರೆ. ಅವರಿಗೆ ವಿರೋಧ ಪಕ್ಷಗಳೂ ಬಾಹ್ಯ ಬೆಂಬಲ ನೀಡುತ್ತಿವೆ. ಭ್ರಷ್ಟಾಚಾರ ಮಾಡಿದರೆ ಹೇಗೆ ತಪ್ಪಿಸಿಕೊಳ್ಳಬೇಕು ಎಂಬುದನ್ನು ತಮ್ಮ 30-40 ವರ್ಷಗಳ ರಾಜಕೀಯವನ್ನು ಸಿದ್ದರಾಮಯ್ಯ ಬಳಸಿಕೊಳ್ಳುತ್ತ ಕಾನೂನು ಒಳಸುಳಿ ಬಳಸಿಕೊಂಡು ಭ್ರಷ್ಟಾಚಾರ ಮಾಡುತ್ತಿದ್ದಾರೆ ಎಂದು ರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯಾಧ್ಯಕ್ಷ ರವಿ ಕೃಷ್ಣಾರೆಡ್ಡಿ ಆರೋಪಿಸಿದರು.