ಸಿದ್ದು ಸಿಎಂ ಕುರ್ಚಿ ಇಳಿದು ಹೊಸ ಜನಾದೇಶ ಪಡೆಯಲಿ

| Published : Oct 16 2024, 12:34 AM IST / Updated: Oct 16 2024, 12:35 AM IST

ಸಿದ್ದು ಸಿಎಂ ಕುರ್ಚಿ ಇಳಿದು ಹೊಸ ಜನಾದೇಶ ಪಡೆಯಲಿ
Share this Article
  • FB
  • TW
  • Linkdin
  • Email

ಸಾರಾಂಶ

ದಾವಣಗೆರೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಮಾತನಾಡಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ತೆರಿಗೆ ಹಣ ನೀಡುವಲ್ಲಿ ಕೇಂದ್ರ ಅನ್ಯಾಯ ಮಾಡಿದೆ ಎಂದು ಬೊಬ್ಬೆ ಹೊಡೆಯುವ ಸಿಎಂ ಸಿದ್ದರಾಮಯ್ಯ ಜೆಜೆಎಂ, ಅಮೃತ್ ಯೋಜನೆ, ಸ್ಮಾರ್ಟ್‌ ಸಿಟಿ, ಪ್ರಧಾನ ಮಂತ್ರಿ ಆವಾಸ್‌, ಕೇಂದ್ರದಿಂದ ನೀರಾವರಿ ಯೋಜನೆಗಳಿಗೆ ರಾಜ್ಯಕ್ಕೆ ಬಿಡುಗಡೆಯಾದ ಅನುದಾನದ ಬಗ್ಗೆ ಶ್ವೇತಪತ್ರ ಹೊರಡಿಸಲಿ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಒತ್ತಾಯಿಸಿದ್ದಾರೆ.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ಸಿನ ಲೂಟಿಕೋರರು ರಾಜ್ಯದ ಅನುದಾನ ಲೂಟಿ ಮಾಡಿದ್ದು, ಸಂಪನ್ಮೂಲ ಸೋರಿಕೆಯನ್ನೂ ತಡೆಯಲಿಲ್ಲ. ಸ್ವಯಂ ಘೋಷಿತ ಆರ್ಥಿಕ ತಜ್ಞ, ಅಹಿಂದ ನಾಯಕನೆಂದು ತಮ್ಮನ್ನು ತಾವು ಕರೆದುಕೊಳ್ಳುವ ಸಿಎಂ ಸಿದ್ದರಾಮಯ್ಯ ಕೇಂದ್ರದ ವಿರುದ್ಧ ಜನರನ್ನು ಎತ್ತಿ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ನಿಮಗೆ ಸಾಮರ್ಥ್ಯವಿದ್ದರೆ ಕುರ್ಚಿ ಬಿಟ್ಟು ಕೆಳಗಿಳಿದು, ಹೊಸದಾಗಿ ಜನಾದೇಶ ಪಡೆಯಿರಿ ನೋಡೋಣ ಎಂದು ಸವಾಲು ಹಾಕಿದರು.

ವಾಲ್ಮೀಕಿ ನಿಗಮ, ಮುಡಾ ಹಗರಣ, ಭ್ರಷ್ಟಾಚಾರದ ಆರೋಪದ ಹಿನ್ನೆಲೆ ಜನರ ಗಮನ ಬೇರೆಡೆ ಸೆಳೆಯಲು ಜಾತಿಗಣತಿ ವಿಚಾರ ತೇಲಿ ಬಿಟ್ಟಿದ್ದಾರೆ. ಜಾತಿ ಗಣತಿಗೆ ನಮ್ಮ ವಿರೋಧವಿಲ್ಲ. ಆದರೆ, ಅವೈಜ್ಞಾನಿಕ ಗಣತಿಗೆ ನಮ್ಮ ವಿರೋಧವಿದೆ. ನಮ್ಮ ಯಾರ ಮನೆಗೂ ಬಂದು ಗಣತಿಯನ್ನೇ ಮಾಡಿಲ್ಲ. ಇಂತಹ ಗಣತಿಯನ್ನು ಹೇಗೆ ಒಪ್ಪಲು ಸಾಧ್ಯ? ಕಾಂತರಾಜ್ ಆಯೋಗದ ವರದಿ ಸ್ವೀಕರಿಸಿದಾಗಲೇ ಯಾಕೆ ಅಂಗೀಕರಿಸಲಿಲ್ಲ? ಈಗ ನಿಮ್ಮ ಕುರ್ಚಿ ಬುಡಕ್ಕೆ ಆರೋಪಗಳು ಬಂದಾಗ ಜಾತಿ ಗಣತಿ ನೆನಪಾಯಿತೆ ಎಂದು ಅವರು ಪ್ರಶ್ನಿಸಿದರು.

ಸಿಎಂ ಸಿದ್ದರಾಮಯ್ಯನವರೆ ನಿಮ್ಮ ಮೇಲೆ ಆರೋಪಗಳನ್ನು ಮರೆ ಮಾಚಲು ಕೇಂದ್ರದ ವಿರುದ್ಧ ತೆರಿಗೆ ಹಣ ಕೊಟ್ಟಿಲ್ಲವೆಂದು ಸುಳ್ಳು ಆರೋಪ ಮಾಡಿ, ಜನರನ್ನು ಪ್ರಚೋದಿಸುವುದು, ಕೇಂದ್ರದ ವಿರುದ್ಧ ಸಂಘರ್ಷ ಮಾಡುವುದನ್ನು ಮೊದಲು ಬಿಡಿ. ತೆರಿಗೆ ಪಾಲಿನ ಹಣ ನೀಡಿಲ್ಲವೆಂದು ಹೇಳುವ ಮೊದಲು ಕೇಂದ್ರದಿಂದ ವಿವಿಧ ಯೋಜನೆಗಳಡಿ ಬಂದ ಅನುದಾನದ ಬಗ್ಗೆಯೂ ನೀವು ನಾಡಿನ ಜನತೆಗೆ ತಿಳಿಸಬೇಕಲ್ಲವೇ? ಬಂದ ಅನುದಾನದ ಬಗ್ಗೆಯೂ ಮೊದಲು ಮಾತನಾಡಿ. ಹಿಂದೆ ಬಿಜೆಪಿ ಸರ್ಕಾರ ಅಭಿವೃದ್ಧಿಗೆ ನೀಡಿದ ಅನುದಾನವನ್ನೇ ಬೇರೆಯದ್ದಕ್ಕೆ ಬಳಕೆ ಮಾಡಿದ ಆಡಳಿತ ನಿಮ್ಮದು ಎಂದು ಅವರು ಟೀಕಿಸಿದರು.

ಹುಬ್ಬಳ್ಳಿ ಘಟನೆ ಕುರಿತಂತೆ ಎನ್‌ಐಎ ತನಿಖೆ ನಡೆಸಿದ್ದ ಪ್ರಕರಣಗಳನ್ನು ಹೇಗೆ ನೀವು ವಾಪಾಸ್ಸು ಪಡೆಯುತ್ತೀರಿ? ಪೊಲೀಸ್ ಠಾಣೆಗೆ ಬೆಂಕಿ ಹಚ್ಚಲು, ವಾಹನಗಳನ್ನು ಜಖಂ ಮಾಡಿ, ಪೊಲೀಸ್ ಅಧಿಕಾರಿ, ಸಿಬ್ಬಂದಿ ಮೇಲೆಯೇ ದಾಳಿ ಮಾಡಿದ್ದ ಮತಾಂಧ ಗಲಭೆಕೋರರ ರಕ್ಷಣೆಗೆ ಕಾಂಗ್ರೆಸ್ ಸರ್ಕಾರವೇ ಟೊಂಕ ಕಟ್ಟಿ ನಿಂತಿದೆ ಎಂದರು.

ಪಿಎಫ್‌ಐ, ಕೆಎಫ್‌ಡಿ ಸಂಘಟನೆಗಳ ಮೇಲಿನ ಕೇಸ್‌ಗಳನ್ನು ದಾಖಲಿಸಿದ್ದು, ಅವುಗಳಲ್ಲಿದ್ದವರು ನಿಮ್ಮ ಬ್ರದರ್ಸ್‌ಗಳಾ? ಮತಾಂಧ ದಾಳಿಕೋರರ ಮೇಲಿನ ಕೇಸ್ ಹಿಂಪಡೆಯುವ ಕಾಂಗ್ರೆಸ್ ಸರ್ಕಾರ ವಿದ್ಯಾರ್ಥಿಗಳ ಮೇಲಿನ ಕೇಸ್ ಹಿಂಪಡೆದಿಲ್ಲ. ಇದೇ ಧೋರಣೆ ಮುಂದುವರಿದರೆ ಹಿಂದು ಸಂಘಟನೆಗಳ ಕಾರ್ಯಕರ್ತರ ಹಂತಕರ ಮೇಲಿನ ಕೇಸ್‌ಗಳನ್ನೂ ಕಾಂಗ್ರೆಸ್‌ ಸರ್ಕಾರ ಹಿಂಪಡೆದರೆ ಅಚ್ಚರಿಪಡಬೇಕಿಲ್ಲ ಎಂದರು.

ನಾವೇನಾದರೂ ನಮ್ಮ ಮೇಲಿನ ಕೇಸ್ ಹಿಂಪಡೆಯುವಂತೆ ಮನವಿ ಮಾಡಿದ್ದೆವಾ? ಅರ್ಜಿ ಕೊಟ್ಟಿದ್ದೆವಾ? ನಿಮ್ಮ ಸರ್ಕಾರದ ವಿರುದ್ಧ ರಾಜ್ಯದ ಜನತೆ ರೊಚ್ಚಿಗೆದ್ದು, ಬೀದಿಗಿಳಿದು ಹೋರಾಡುವ ದಿನಗಳೂ ಇನ್ನು ದೂರವಿಲ್ಲ, ಶೀಘ್ರವೇ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂದು ರೇಣುಕಾಚಾರ್ಯ ಭವಿಷ್ಯ ನುಡಿದರು.

ಈ ವೇಳೆ ಬಿಜೆಪಿ ಮುಖಂಡರಾದ ಮಾಡಾಳ ಮಲ್ಲಿಕಾರ್ಜುನ, ಬಿ.ಜಿ.ಅಜಯಕುಮಾರ, ಲೋಕಿಕೆರೆ ನಾಗರಾಜ, ವಾಟರ್ ಮಂಜುನಾಥ, ಎನ್.ಎಚ್.ಹಾಲೇಶ, ಸುಣಗೆರೆ ಕುಮಾರ, ಮಲ್ಲಿಕಾರ್ಜುನ ಇತರರು ಇದ್ದರು.

ಅಸಮರ್ಥ ಗೃಹಮಂತ್ರಿ ಡಾ.ಜಿ.ಪರಮೇಶ್ವರ, ಹುಬ್ಬಳ್ಳಿ ಕೇಸ್‌ಗಳನ್ನು ಹಿಂಪಡೆಯುವ ಸಿಎಂ ಸಿದ್ದರಾಮಯ್ಯ, ಮತಾಂಧ ಗಲಭೆಕೋರರರನ್ನು ತಮ್ಮ ಬ್ರದರ್ಸ್‌ ಎನ್ನುವ ಡಿಸಿಎಂ ಡಿ.ಕೆ.ಶಿವಕುಮಾರಂತಹವರಿಗೆ ಜನರೇ ಪಾಠ ಕಲಿಸಲಿದ್ದಾರೆ

-ರೇಣುಕಾಚಾರ್ಯ, ಮಾಜಿ ಸಚಿವ

ಪ್ರಿಯಾಂಕ್‌ ನಿನ್ನ ಬಟ್ಟೆ ನೀನೇ ಹರಿದ್ಕೊಳ್ಳಬೇಡ: ದಾವಣಗೆರೆ: ಅಲ್ಲಪ್ಪಾ ಪ್ರಿಯಾಂಕ್‌ ಖರ್ಗೆ ನಿನ್ನ ಬಟ್ಟೆ ನೀನೇ ಹರಿದುಕೊಳ್ಳಬೇಡ. ಅಂಗಿ ಹರಿದುಕೊಳ್ಳುವಂತೆ ಬಿಜೆಪಿಯಾಗಲೀ, ನಾವು ಯಾರಾದರಾಗಲೀ ನಿನಗೆ ಧಮಕಿಯನ್ನೂ ಹಾಕಿಲ್ಲ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಲೇವಡಿ ಮಾಡಿದ್ದಾರೆ.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೂಪರ್ ಸಿಎಂ ಎಂಬಂತೆ ವರ್ತಿಸುವ ಸಚಿವ ಪ್ರಿಯಾಂಕ ಖರ್ಗೆ ಅವದಿಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಇದೆಯೋ, ಸತ್ತಿದೆಯೋ ಗೊತ್ತಾಗುತ್ತಿಲ್ಲ ಎಂದರು.

ನೀನು ತಪ್ಪು ಮಾಡಿಲ್ಲವೆಂದರೆ ನಿಮ್ಮ ಸಹೋದರ ರಾಹುಲ್ ಖರ್ಗೆ ಏರೋ ಸ್ಪೇಸ್‌ಗೆ ಎಂದು ಪಡೆದ 5 ಎಕರೆ ಭೂಮಿ ವಾಪಾಸ್ಸು ಕೊಟ್ಟಿದ್ದು ಯಾಕೆ? ಯಾವುದೇ ಸಮಯದಲ್ಲಿ ಇಡಿ, ಲೋಕಾಯುಕ್ತ ಸೇರಿದಂತೆ ತನಿಖಾ ಸಂಸ್ಥೆಗಳಿಂದ ಕ್ಷಿಪ್ರ ತನಿಖೆ ಆಗಬಹುದೆಂಬ ಭೀತಿ ಖರ್ಗೆ ಮತ್ತು ಪುತ್ರರಿಗೆ ಕಾಡುತ್ತಿದೆ. ದಲಿತರ ಹೆಸರು ಹೇಳಿಕೊಂಡು ನಿಮ್ಮ ಸಹೋದರ 5 ಎಕರೆ ಪಡೆದಿದ್ದು ತಪ್ಪಲ್ಲವೇ ಎಂದು ರೇಣುಕಾಚಾರ್ಯ ಪ್ರಶ್ನಿಸಿದರು.