ಕತ್ತಲೆಯಲ್ಲಿ ಮುಳುಗಿರುವ ಕಾಂಗ್ರೆಸ್‌ ತನ್ನ ಕಚೇರಿಯಲ್ಲಿ ಕಪ್ಪು ಬಾವುಟ ಪ್ರದರ್ಶಿಸಲಿ: ಶಾಸಕ ವಿ. ಸುನೀಲಕುಮಾರ

| Published : Apr 28 2024, 01:23 AM IST

ಕತ್ತಲೆಯಲ್ಲಿ ಮುಳುಗಿರುವ ಕಾಂಗ್ರೆಸ್‌ ತನ್ನ ಕಚೇರಿಯಲ್ಲಿ ಕಪ್ಪು ಬಾವುಟ ಪ್ರದರ್ಶಿಸಲಿ: ಶಾಸಕ ವಿ. ಸುನೀಲಕುಮಾರ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮದಲ್ಲಿ ಕಪ್ಪು ಬಾವುಟ ಪ್ರದರ್ಶಿಸುವ ನೈತಿಕೆತೆ ಕಾಂಗ್ರೆಸ್ಸಿಗಿಲ್ಲ. ತಮ್ಮ ಕಚೇರಿಯ ಕತ್ತಲನ್ನು ಮೊದಲು ದೂರ ಮಾಡಿಕೊಳ್ಳಲಿ ಎಂದು ಕಾರ್ಕಳ ಶಾಸಕ ವಿ. ಸುನೀಲಕುಮಾರ ಹೇಳಿದರು.

ಕನ್ನಡಪ್ರಭ ವಾರ್ತೆ ಶಿರಸಿ

ನರೇಂದ್ರ ಮೋದಿ ಕಾರ್ಯಕ್ರಮದಲ್ಲಿ ಕಪ್ಪು ಬಾವುಟ ಪ್ರದರ್ಶನ ಮಾಡುವುದನ್ನು ಬಿಟ್ಟು ಕತ್ತಲೆಯಲ್ಲಿ ಮುಳುಗಿರುವ ಕಾಂಗ್ರೆಸ್ ತನ್ನ ಕಚೇರಿಯಲ್ಲಿ ಕಪ್ಪು ಬಾವುಟ ಪ್ರದರ್ಶಿಸಲಿ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಕಾರ್ಕಳ ಶಾಸಕ ವಿ. ಸುನೀಲಕುಮಾರ ತಿರುಗೇಟು ನೀಡಿದರು.

ಈ ಕುರಿತು ಮಾಧ್ಯಮದವರ ಜತೆ ಮಾತನಾಡಿದ ಅವರು, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯವನ್ನು ಕತ್ತಲಿಗೆ ತಳ್ಳಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ರೈತರು ವಿದ್ಯುತ್ ಸಂಪರ್ಕ ಪಡೆಯುವುದು ಸುಲಭವಾಗಿತ್ತು. ಆದರೆ, ಇಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ₹೧.೫೦ ಲಕ್ಷ ಪಾವತಿ ಮಾಡಿ ಸಂಪರ್ಕ ಪಡೆಯಬೇಕಾಗಿದೆ. ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮದಲ್ಲಿ ಕಪ್ಪು ಬಾವುಟ ಪ್ರದರ್ಶಿಸುವ ನೈತಿಕೆತೆಯಿಲ್ಲ. ತಮ್ಮ ಕಚೇರಿಯ ಕತ್ತಲನ್ನು ಮೊದಲು ದೂರ ಮಾಡಿಕೊಳ್ಳಲಿ ಎಂದು ಹೇಳಿದರು.

ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಆರು ಬಾರಿ ಶಾಸಕರಾಗಿ, ಶಿಕ್ಷಣ ಸಚಿವರಾಗಿ, ಸಭಾಧ್ಯಕ್ಷರಾಗಿದ್ದವರು. ಅವರು ರಾಜ್ಯ ನಾಯಕರು. ರಾಜಕೀಯ, ಸಾಮಾಜಿಕ ಕ್ಷೇತ್ರದಲ್ಲಿ ಸಾಕಷ್ಟು ಅನುಭವ ಹೊಂದಿದ್ದಾರೆ. ನಮ್ಮ ಅಭ್ಯರ್ಥಿಯಾದ ವಿಶ್ವೇಶ್ವರ ಹೆಗಡೆ ಅವರ ಬಗ್ಗೆ ಕಾಂಗ್ರೆಸ್ ಅಭ್ಯರ್ಥಿ ಬಾಲಿಷ ಹೇಳಿಕೆ ನೀಡುತ್ತಿದ್ದಾರೆ. ಸಮಾಜದಲ್ಲಿ ನಡೆಯುತ್ತಿರುವ ದೌರ್ಜನ್ಯ ಮರೆಮಾಚಲು ಬೇರೆ ಬೇರೆ ರೀತಿಯಲ್ಲಿ ಹೇಳಿಕೆ ನೀಡುತ್ತಿದ್ದಾರೆ. ಅಂಜಲಿ ನಿಂಬಾಳ್ಕರ ತಾನು ಯಾರು, ಎಲ್ಲಿಂದ ಬಂದಿದ್ದೇನೆ ಎಂದು ತಿಳಿದು ಕೊಳ್ಳಲಿ. ಹಿರಿಯ ನಾಯಕರ ಬಗ್ಗೆ ಮಾತನಾಡುವಾಗ ಎಚ್ಚರ ವಹಿಸುವುದು ಒಳಿತು ಎಂದರು.

ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಬಿಜೆಪಿಯ ಗೆಲುವಿನ ಅಂತರ ಹೆಚ್ಚಾಗುತ್ತಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಾತನಾಡುವುದು ನೋಡಿದರೆ ಅಲ್ಪಸಂಖ್ಯಾತರ ಓಲೈಕೆ ಎದ್ದು ಕಾಣುತ್ತಿದೆ. ಮೊಘಲರು ಬಿಟ್ರಿಷರು ಬಂದರೂ ಹಿಂದೂಗಳಿಗೆ ತೊಂದರೆಯಾಗಿಲ್ಲ ಎಂದು ಹೇಳುತ್ತಿದ್ದಾರೆ. ಆದರೆ ಅವರ ಆಳ್ವಿಕೆಯಲ್ಲಿ ಆಗಿರುವ ದ್ವಂಸ ಎಲ್ಲವನ್ನೂ ಗಮನಿಸಿದ್ದೇವೆ. ಅವರಿಗಿಂತ ಹೆಚ್ಚು ಅಪಾಯಕಾರಿ ನಿಲುವು ಕಾಂಗ್ರೆಸ್ ಮಾಡುತ್ತಿದೆ ಎಂದರು.

ಶಿರಸಿಯ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಆಗಮಿಸುವ ಮೊದಲು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ನಮೋ ಯುವ ಆ್ಯಪ್ ಮೂಲಕ ನೋಂದಣಿ ಮಾಡಿಕೊಂಡ ಹೊಸ ಮತದಾರರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದ್ದು, ಮಹಿಳೆಯರಿಗೆ ಕುಳಿತುಕೊಳ್ಳಲು ಪ್ರತ್ಯೇಕ ಆಸನದ ವ್ಯವಸ್ಥೆ ಅಚ್ಚುಕಟ್ಟಾಗಿ ಮಾಡಲಾಗಿದೆ. ಶುದ್ದೀಕರಿಸಿದ ಕುಡಿಯುವ ನೀರಿನ ವ್ಯವಸ್ಥೆ, ಎಲ್.ಇ.ಡಿ ಸ್ಕ್ರೀನ್ ವ್ಯವಸ್ಥೆ ಮಾಡಲಾಗಿದೆ. ಜೀವ ಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ನೇತೃತ್ವದಲ್ಲಿ ಅಚ್ಚುಕಟ್ಟಾದ ವ್ಯವಸ್ಥೆ ನಿರ್ಮಾಣವಾಗಿದೆ. ಅಲ್ಲದೇ, ಸಾರ್ವಜನಿಕರಿಗೆ ನೀರಿನ ವ್ಯವಸ್ಥೆ ಮಾಡಲು ಸಕಲ ವ್ಯವಸ್ಥೆ ಮಾಡಿಕೊಂಡಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ, ರಾಜ್ಯ ವಕ್ತಾರರಾದ ಎಂ.ಜಿ. ಮಹೇಶ, ಹರಿಪ್ರಕಾಶ ಕೋಣೆಮನೆ, ಮಾಜಿ ಜಿಲ್ಲಾಧ್ಯಕ್ಷ ವೆಂಟಕೇಶ ನಾಯಕ, ಪಕ್ಷದ ಮುಖಂಡರಾದ ಜಂ ಚಂದ್ರಶೇಖರ, ಗಿರೀಶ ಪಟೇಲ್, ಚಂದ್ರು ಎಸಳೆ, ಉದ್ಯಮಿ ಶ್ರೀನಿವಾಸ ಹೆಬ್ಬಾರ್, ಜಿಲ್ಲಾ ವಕ್ತಾರ ಸದಾನಂದ ಭಟ್ಟ ಮತ್ತಿತರರು ಇದ್ದರು.